ನಕಲಿ ವಿಡಿಯೊ, ಮಾಹಿತಿ ಹಂಚಿಕೊಂಡರೆ ಕಾನೂನು ಕ್ರಮ: ನಟ ಟೈಗರ್ ಶ್ರಾಫ್ ತಂಡ
ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನಡೆಸಿದ ಗುಂಡಿನ ದಾಳಿಯಿಂದ ಗಾಯಗೊಂಡಿರುವ ಬಾಲಿವುಡ್ ನಟ ಟೈಗರ್ ಶ್ರಾಫ್ ಚೇತರಿಸಿಕೊಳ್ಳುತ್ತಿದ್ದಾರೆ.ಈ ನಡುವೆ ಅವರ ಬಗ್ಗೆ ಹಲವು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಈ ಕುರಿತು ಟೈಗರ್ ಶ್ರಾಫ್ ಅವರ ತಂಡ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಎಐ ರೂಪಿತ ಅಥವಾ ಸುಳ್ಳು ಮಾಹಿತಿ ಇರುವ ಸುದ್ದಿಗಳನ್ನು ಹಂಚಿಕೊಳ

ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನಡೆಸಿದ ಗುಂಡಿನ ದಾಳಿಯಿಂದ ಗಾಯಗೊಂಡಿರುವ ಬಾಲಿವುಡ್ ನಟ ಟೈಗರ್ ಶ್ರಾಫ್ ಚೇತರಿಸಿಕೊಳ್ಳುತ್ತಿದ್ದಾರೆ.ಈ ನಡುವೆ ಅವರ ಬಗ್ಗೆ ಹಲವು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಈ ಕುರಿತು ಟೈಗರ್ ಶ್ರಾಫ್ ಅವರ ತಂಡ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಎಐ ರೂಪಿತ ಅಥವಾ ಸುಳ್ಳು ಮಾಹಿತಿ ಇರುವ ಸುದ್ದಿಗಳನ್ನು ಹಂಚಿಕೊಳ್ಳದಂತೆ ಮನವಿ ಮಾಡಿದೆ. ಅಲ್ಲದೆ, ನಕಲಿ ವಿಚಾರಗಳನ್ನು ಹಂಚಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟೈಗರ್ ಶ್ರಾಫ್ ತಂಡ, ‘ದಾಳಿ ಕುರಿತಂತೆ ಟೈಗರ್ ಶ್ರಾಫ್ ಅವರು ಅಧಿಕೃತವಾಗಿ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಯಾವುದೇ ವಿಡಿಯೊವನ್ನೂ ಹಂಚಿಕೊಂಡಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊ ನಕಲಿಯಾಗಿದೆ. ಯಾವುದೇ ವಿಡಿಯೊ ಅಥವಾ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಸತ್ಯಾಸತ್ಯತೆಯನ್ನು ಪರಿಶೀಲಿಸಿಕೊಳ್ಳಿ’ ಎಂದು ಹೇಳಿದೆ. ‘ಒಂದು ವೇಳೆ ಯಾವೊಬ್ಬ ವ್ಯಕ್ತಿ ಅಥವಾ ಸಾಮಾಜಿಕ ಜಾಲತಾಣಗಳ ಪುಟ ಟೈಗರ್ ಶ್ರಾಫ್ ಕುರಿತಾದ ನಕಲಿ, ಎಐ ವಿಡಿಯೊ, ಮಾಹಿತಿಯನ್ನು ಹಂಚಿಕೊಂಡರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದೂ ಎಚ್ಚರಿಸಿದ್ದಾರೆ.ಅ.18ರಂದು ಸಂಜೆ ಮುಂಬೈನ ಜುಹುದಲ್ಲಿ ಟೈಗರ್ ಶ್ರಾಫ್ ಕಾರಿನಲ್ಲಿ ತೆರಳುತ್ತಿದ್ದಾಗ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಇದರಿಂದ ಗಾಯಗೊಂಡಿದ್ದ ಟೈಗರ್ ಶ್ರಾಫ್ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಕೃತ್ಯದ ಹೊಣೆಯನ್ನು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೊತ್ತುಕೊಂಡಿತ್ತು. ನಟ ಸಲ್ಮಾನ್ ಖಾನ್ ಜತೆ ನಿಕಟ ಸಂಪರ್ಕ ಹೊಂದಿರುವ ಕಾರಣ ದಾಳಿ ಮಾಡಿದ್ದೇವೆ ಎಂದು ಆರೋಪಿಗಳು ಹೇಳಿರುವ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಸದ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು, ಹಲವರನ್ನು ಬಂಧಿಸಿ, ವಿಚಾರಣೆಯನ್ನು ಚುರುಕುಗೊಳಿಸಿದ್ದಾರೆ. View this post on Instagram