ನೀವು ಜೆನ್ ಜೀಗಳೇ ಅಲ್ಲ: ಸಿಜೆಪಿ ನಾಯಕರಾದ ಸೌರಭ್, ಅಶುತೋಶ್ಗೆ ದೆಹಲಿ ಹೈಕೋರ್ಟ್
ನವದೆಹಲಿ: ನ್ಯಾಯಾಂಗ ಬಂಧನದಲ್ಲಿರುವ ಕಾಕ್ರೋಚ್ ಜನತಾ ಪಕ್ಷದ(ಸಿಜೆಪಿ) ನಾಯಕರಾದ ಸೌರಭ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ನೀವು ಜೆನ್ ಝೀಗಳೇ ಅಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.ಪ್ರತಿಭಟನೆಗಾಗಿ ಜಂತರ್ ಮಂತರ್ಗೆ ಅತಿಕ್ರಮ ಪ್ರವೇಶಕ್ಕೆ ಯತ್ನ ಆರೋಪದಡಿ ಬಂಧನಕ್ಕೊಳಗಾಗಿರುವ ಸೌರಭ್, ಅಶುತೋಷ್ ತಮ್ಮ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಪ್ರಶ್ನಿಸಿ ಸಲ್ಲಿಸಿದ್ದ

ನವದೆಹಲಿ: ನ್ಯಾಯಾಂಗ ಬಂಧನದಲ್ಲಿರುವ ಕಾಕ್ರೋಚ್ ಜನತಾ ಪಕ್ಷದ(ಸಿಜೆಪಿ) ನಾಯಕರಾದ ಸೌರಭ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ನೀವು ಜೆನ್ ಝೀಗಳೇ ಅಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.ಪ್ರತಿಭಟನೆಗಾಗಿ ಜಂತರ್ ಮಂತರ್ಗೆ ಅತಿಕ್ರಮ ಪ್ರವೇಶಕ್ಕೆ ಯತ್ನ ಆರೋಪದಡಿ ಬಂಧನಕ್ಕೊಳಗಾಗಿರುವ ಸೌರಭ್, ಅಶುತೋಷ್ ತಮ್ಮ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಈ ರೀತಿ ಹೇಳಿದೆ. ಅರ್ಜಿದಾರರ ಪರ ಹಾಜರಿದ್ದ ವಕೀಲ ಅಭಿಕ್ ಚಿಮ್ನಿ, ದಾಸ್ಗೆ 27 ಮತ್ತು ರಂಕಾಗೆ 32 ವರ್ಷ ಎಂದು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು ‘ಜೆನ್ ಝೀ ಅಂದರೇನು? ನೀವು ಜೆನ್ ಝೀಗಳೇ ಅಲ್ಲ’ ಎಂದಿದ್ದಾರೆ. ನ್ಯಾಯಮೂರ್ತಿ ಸುಬ್ರಹ್ಮಣ್ಯಂ ಅವರ ಏಕಸದಸ್ಯ ಪೀಠ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಜಂತರ ಮಂತರ್ಗೆ ಬೀಗ ಹಾಕಿರುವ ಗೇಟ್ಗಳನ್ನು ಹತ್ತಿ ಒಳಪ್ರವೇಶಿಸಲು ಯತ್ನಿಸಿದ್ದ ದಾಸ್ ಮತ್ತು ರಂಕಾ ಅವರನ್ನು ಅಕ್ಟೋಬರ್ 13ರಂದು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಹಿಂದೆ ಅಧಿಕೃತ ಪ್ರತಿಭಟನಾ ಸ್ಥಳವಾಗಿದ್ದ ಜಂತರ್ ಮಂತರ್ ಅನ್ನು ಬಳಿಕ ಡಿನೋಟಿಫೈ ಮಾಡಲಾಗಿತ್ತು.ಈ ಇಬ್ಬರಿಗೂ ಮೊದಲು ಐದು ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದ ಹೆಚ್ಚುವರಿ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್, ಬಳಿಕ ಅದನ್ನು ಮತ್ತೆರಡು ದಿನ ವಿಸ್ತರಿಸಿದ್ದರು. ಅಕ್ಟೋಬರ್ 13ರಂದು ವಶಕ್ಕೆ ಪಡೆಯುವುದಕ್ಕೂ ಮುನ್ನ, ದಾಸ್ ಮತ್ತು ರಂಕಾ, ಮತ್ತಿತರ ಪ್ರತಿಭಟನಾಕಾರರು, ರಾಷ್ಟ್ರಧ್ವಜವನ್ನು ಪ್ರದರ್ಶಿಸಿ, ಮುಖ್ಯ ಚುನಾವಣಾ ಆಯಕ್ತರ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಪೊಲೀಸರ ಪ್ರಕಾರ, ಪ್ರತಿಭಟನಾಕಾರರು, ಡಿನೋಟಿಫೈ ಆಗಿರುವ ಜಂತರ್ ಮಂತರ್ಗೆ ಅತಿಕ್ರಮ ಪ್ರವೇಶ ಮಾಡಿದ್ದರು. ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಮಾಡಿದ್ದರು.