ಅಮೆರಿಕ-ಪಾಕಿಸ್ತಾನ ಸಂಬಂಧ ಎಂದಿಗೂ ಭಾರತದ ಹಿತಾಸಕ್ತಿಗೆ ಧಕ್ಕೆ ತರಲ್ಲ: ರುಬಿಯೊ ಸ್ಪಷ್ಟನೆ
ನವದೆಹಲಿ: ಅಮೆರಿಕ-ಪಾಕಿಸ್ತಾನ ಸಂಬಂಧವು ಎಂದಿಗೂ ಭಾರತದ ಹಿತಾಸಕ್ತಿಗೆ ಧಕ್ಕೆ ತರುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ (Marco Rubio) ಹೇಳಿದ್ದಾರೆ. ಪಾಕಿಸ್ತಾನ ಮತ್ತು ಚೀನಾದೊಂದಿಗೆ ಅಮೆರಿಕ ಬೆಳೆಸಿಕೊಳ್ಳುತ್ತಿರುವ ಬಾಂಧವ್ಯದ ಕುರಿತು ಭಾರತದಲ್ಲಿ ವ್ಯಕ್ತವಾಗಿದ್ದ ಕಳವಳಕ್ಕೆ ರೂಬಿಯೊ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ದೇಶದೊಂದಿಗಿನ

ನವದೆಹಲಿ: ಅಮೆರಿಕ-ಪಾಕಿಸ್ತಾನ ಸಂಬಂಧವು ಎಂದಿಗೂ ಭಾರತದ ಹಿತಾಸಕ್ತಿಗೆ ಧಕ್ಕೆ ತರುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ (Marco Rubio) ಹೇಳಿದ್ದಾರೆ. ಪಾಕಿಸ್ತಾನ ಮತ್ತು ಚೀನಾದೊಂದಿಗೆ ಅಮೆರಿಕ ಬೆಳೆಸಿಕೊಳ್ಳುತ್ತಿರುವ ಬಾಂಧವ್ಯದ ಕುರಿತು ಭಾರತದಲ್ಲಿ ವ್ಯಕ್ತವಾಗಿದ್ದ ಕಳವಳಕ್ಕೆ ರೂಬಿಯೊ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ದೇಶದೊಂದಿಗಿನ ಅಮೆರಿಕದ ಸಂಬಂಧವು ಭಾರತದ ಹಿತಾಸಕ್ತಿಗೆ ಧಕ್ಕೆ ತರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 1970ರ ದಶಕದ ನಿಕ್ಸನ್-ಕಿಸಿಂಜರ್ ಯುಗಕ್ಕೆ ಡೊನಾಲ್ಡ್ ಟ್ರಂಪ್ ಅವರನ್ನು ಹೋಲಿಸುವುದು ಸರಿಯಲ್ಲ. ಏಕೆಂದರೆ ಅಂದಿನಿಂದ ಜಾಗತಿಕ ವ್ಯವಸ್ಥೆ ಬದಲಾಗಿದೆ. ರಿಚರ್ಡ್ ನಿಕ್ಸನ್ ಅವರ ಅಧ್ಯಕ್ಷೀಯ ಅವಧಿಯಲ್ಲಿ, ಹೆನ್ರಿ ಕಿಸಿಂಜರ್ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದಾಗ, ದಕ್ಷಿಣ ಏಷ್ಯಾದ ಕುರಿತಾದ ಅಮೆರಿಕದ ನೀತಿಯು ಜನರಲ್ ಯಾಹ್ಯಾ ಖಾನ್ ನೇತೃತ್ವದ ಪಾಕಿಸ್ತಾನದ ಮಿಲಿಟರಿ ಆಡಳಿತದ ಕಡೆಗೆ ಸ್ಪಷ್ಟವಾಗಿ ವಾಲಿಕೊಂಡಿತ್ತು ಎಂದು ರುಬಿಯೊ ತಿಳಿಸಿದ್ದಾರೆ. ನಾನು 1970ರ ದಶಕವನ್ನು ಉದಾಹರಣೆಯಾಗಿ ಬಳಸುವುದಿಲ್ಲ. ಏಕೆಂದರೆ ಅಂದಿನ ಜಗತ್ತು ಈಗಿನ ಜಗತ್ತಿಗಿಂತ ಸಂಪೂರ್ಣ ಭಿನ್ನವಾಗಿದೆ. ಆಗ ಶೀತಲ ಸಮರವಿತ್ತು. ಈಗ ಅಸ್ತಿತ್ವದಲ್ಲಿಲ್ಲದ ಇನ್ನೂ ಅನೇಕ ರೀತಿಯ ಸನ್ನಿವೇಶಗಳಿವೆ ಎಂದು ಮಾತನಾಡಿದ್ದಾರೆ. ನಾನು ಭಾರತಕ್ಕೆ ಭೇಟಿ ನೀಡಿರುವುದು, ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳುವ ನಮ್ಮ ಬದ್ಧತೆ, ನಾವು ನಡೆಸಿದ ಎಲ್ಲಾ ಮಾತುಕತೆಗಳು ಮತ್ತು ನಾವು ಒಟ್ಟಾಗಿ ಮಾಡುತ್ತಿರುವ ಕೆಲಸಗಳು ಇದಕ್ಕೆ ಸಾಕ್ಷಿಯಾಗಿವೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಪಾಕಿಸ್ತಾನದೊಂದಿಗೆ ನಮಗೆ ಸಂಬಂಧವಿದೆ. ನಾವು ಅಂತಹ ಸಂಬಂಧವನ್ನು ಹೊಂದಿರಬೇಕಾದ ಅಗತ್ಯವೂ ಇದೆ. ಸಂಘರ್ಷಕ್ಕೆ ದಾರಿ ಮಾಡಿಕೊಡಬಲ್ಲಂತಹ ಕ್ರಮಗಳನ್ನು ತಡೆಯಲು ನಾವು ಸಹಾಯ ಮಾಡಬಹುದಾದರೆ, ನಮ್ಮ ಪ್ರಭಾವವನ್ನು ಸಕಾರಾತ್ಮಕ ರೀತಿಯಲ್ಲಿ ಬಳಸಿಕೊಳ್ಳಬಹುದಾದರೆ, ಅದು ಒಂದು ಒಳ್ಳೆಯ ಬೆಳವಣಿಗೆಯಾಗಬಹುದು ಎಂದಿದ್ದಾರೆ.