ನಾಲ್ಕೈದು ತಿಂಗಳಲ್ಲಿ ದೇಶದಲ್ಲಿ ಪ್ರಮುಖ ರಾಜಕೀಯ ವಿಪ್ಲವ: ರಾಜ್ ಠಾಕ್ರೆ
ದೇಶದಾದ್ಯಂತ ಒಂದಿಲ್ಲೊಂದು ಪ್ರತಿಭಟನೆಯ ಕೂಗು ಕೇಳಿಬರುತ್ತಿದೆ. ರಾಷ್ಟ್ರೀಯ ಪರೀಕ್ಷೆಗಳ ಅಕ್ರಮದ ವಿರುದ್ಧ ಹೋರಾಟದ ಬೆನ್ನಲ್ಲೇ ಎಸ್ಐಆರ್ ಸಂಬಂಧ ಚುನಾವಣಾ ಆಯೋಗದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಆರೋಪ ಕುರಿತಂತೆ ಪ್ರತಿಭಟನೆಗಳು ನಡೆಯುತ್ತಿವೆ. ಈ ನಡುವೆ ಬೇರೆ ಬೇರೆ ರಾಜಕೀಯ ಲೆಕ್ಕಾಚಾರಗಳೂ ಕೇಳಿಬರುತ್ತಿವೆ.ಈ ನಡುವೆ, ಮುಂದಿನ ನಾಲ್ಕೈದು ತಿಂಗಳಲ್ಲಿ ದೇಶದಲ್ಲಿ ಪ

ದೇಶದಾದ್ಯಂತ ಒಂದಿಲ್ಲೊಂದು ಪ್ರತಿಭಟನೆಯ ಕೂಗು ಕೇಳಿಬರುತ್ತಿದೆ. ರಾಷ್ಟ್ರೀಯ ಪರೀಕ್ಷೆಗಳ ಅಕ್ರಮದ ವಿರುದ್ಧ ಹೋರಾಟದ ಬೆನ್ನಲ್ಲೇ ಎಸ್ಐಆರ್ ಸಂಬಂಧ ಚುನಾವಣಾ ಆಯೋಗದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಆರೋಪ ಕುರಿತಂತೆ ಪ್ರತಿಭಟನೆಗಳು ನಡೆಯುತ್ತಿವೆ. ಈ ನಡುವೆ ಬೇರೆ ಬೇರೆ ರಾಜಕೀಯ ಲೆಕ್ಕಾಚಾರಗಳೂ ಕೇಳಿಬರುತ್ತಿವೆ.ಈ ನಡುವೆ, ಮುಂದಿನ ನಾಲ್ಕೈದು ತಿಂಗಳಲ್ಲಿ ದೇಶದಲ್ಲಿ ಪ್ರಮುಖ ರಾಜಕೀಯ ವಿಪ್ಲವ ಸಂಭವಿಸಲಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ(ಎಂಎನ್ಎಸ್) ಸಂಸ್ಥಾಪಕ ರಾಜ್ ಠಾಕ್ರೆ ಅಂದಾಜಿಸಿದ್ದಾರೆ. ಸ್ವಲ್ಪ ಸಮಯದವರೆಗೆ ದೇಶದಲ್ಲಿ ಪ್ರಧಾನ ಮಂತ್ರಿಯೇ ಇರದಿರುವ ಸ್ಥಿತಿ ಬಂದರೂ ಆಶ್ಚರ್ಯಪಡಬೇಕಿಲ್ಲ ಎಂದಿದ್ದಾರೆ.ಸ್ವಲ್ಪ ಸಮಯದವರೆಗೆ ದೇಶದಲ್ಲಿ ಪ್ರಧಾನಿಯೇ ಇಲ್ಲದ ಸ್ಥಿತಿ ಬರಬಹುದು. ಏನಾಗುತ್ತದೋ ನೋಡೋಣ ಎಂದು ಮುಂಬೈ ಪ್ರೆಸ್ಕ್ಲಬ್ನಲ್ಲಿ ಪತ್ರಕರ್ತರ ಜೊತೆಗಿನ ಸಂವಾದದಲ್ಲಿ ಹೇಳಿದ್ದಾರೆ. 'ಮುಂದಿನ ನಾಲ್ಕೈದು ತಿಂಗಳಲ್ಲಿ ರಾಜಕೀಯದಲ್ಲಿ ದೊಡ್ಡದ್ದೇನೊ ಸಂಭವಿಸಲಿದೆ ಎಂದು ನಾನು ಹಲವರಿಗೆ ಹೇಳಿದ್ದೆ. ಒಂದು ದೊಡ್ಡ ಘಟನೆ ನಡೆಯುವುದು ಖಚಿತ’ಎಂದು ಠಾಕ್ರೆ ಹೇಳಿದ್ದಾರೆ.2027ರ ಏಪ್ರಿಲ್ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ನೀಡಿದ್ದ ಹೇಳಿಕೆ ಕುರಿತಾದ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಬದಲಾವಣೆಗಳು ನಡೆಯುತ್ತಲೇ ಇರುತ್ತವೆ... ನಾವು 'ಹಾಫ್-ಪ್ಯಾಂಟ್' ಹಂತದಿಂದ 'ಫುಲ್-ಪ್ಯಾಂಟ್' ಹಂತಕ್ಕೆ ಬಂದಿದ್ದೇವೆ ಎಂದು ಹೇಳಿದ್ದಾರೆ. ನಾಗ್ಪುರದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಠಾಕ್ರೆ ಈ ರೀತಿ ಹೇಳಿದ್ದಾರೆ. ಫ್ರಾನ್ಸ್ ಅಥವಾ ಅಲ್ಬೇನಿಯಾದಲ್ಲಿ ಈಗ ನಡೆಯುತ್ತಿರುವುದನ್ನು ನೋಡಿ. ಹಿಂದೆ ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ ಏನಾಯಿತು ಎಂಬುದನ್ನೂ ಗಮನಿಸಿದ್ದೀರಿ. ಸರ್ಕಾರ ಬದಲಾವಣೆಯಿಂದ ಪರಿಸ್ಥಿತಿ ಬದಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಹಾಗೆ ಎಂದೂ ನಡೆದಿಲ್ಲ; ಈಗಲೂ ಹಾಗೆ ಆಗುವುದಿಲ್ಲ ಎಂದು ಭಾಗವತ್ ಹೇಳಿದ್ದರು.ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಎಸ್ಐಆರ್ ಅಕ್ರಮ ಆರೋಪದಲ್ಲಿ ಸಿಇಸಿ ವಿರುದ್ಧ ಭುಗಿಲೆದ್ದಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಠಾಕ್ರೆ, ಇಡೀ ದೇಶ ಬೀದಿಗಿಳಿದು ಹೋರಾಟ ನಡೆಸಿದರೂ ನನಗೆ ಅಚ್ಚರಿಯಾಗುವುದಿಲ್ಲ. ಏಕೆಂದರೆ, ವಿವಿಧ ಸಮಸ್ಯೆಗಳ ಕುರಿತಂತೆ ಜನ ಕೋಪಗೊಂಡಿದ್ದಾರೆ. ತಮ್ಮ ಅಸಮಾಧಾನ ಹೊರಹಾಕಲು ಅವಕಾಶ ಹುಡುಕುತ್ತಿದ್ದಾರೆ ಎಂದರು.ಇಟಲಿ ಮತ್ತು ಫ್ರಾನ್ಸ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಪ್ರತಿಭಟನೆಗಳು ಭಾರಿ ಅಸಮಾಧಾನದಿಂದ ಹುಟ್ಟಿವೆ. ಹನುಮಂತ ಲಂಕೆ ಸುಟ್ಟಿದ್ದಕ್ಕೂ ಕಾರಣ ಇತ್ತು ಎಂದಿದ್ದಾರೆ.‘ಸಮಾಜದ ಪ್ರತಿಯೊಂದು ವರ್ಗಕ್ಕೂ ಅದರದ್ದೇ ಆದ ಸಮಸ್ಯೆ ಇದೆ. ಶಾಲೆ ಮತ್ತು ಕಾಲೇಜುಗಳ ಶುಲ್ಕ ಏರಿಕೆ ಸಮಸ್ಯೆ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಜನಜೀವನದ ಮೇಲೆ ಹಣದುಬ್ಬರದ ಪರಿಣಾಮ ಬೀರಿದೆ. ಭದ್ರತಾ ಸಮಸ್ಯೆಯಿಂದ ಜನ ತತ್ತರಿಸುತ್ತಿದ್ದಾರೆ. ಈ ಸಮಸ್ಯೆಗಳ ಕುರಿತಾದ ಕೋಪ ಕ್ರಮೇಣ ಹೊರಬರುತ್ತದೆ’ ಎಂದಿದ್ದಾರೆ.ಮತಪತ್ರದ ಮೂಲಕ ಚುನಾವಣೆಗೆ ಒತ್ತಾಯಿಸಿದ ರಾಜ್ ಠಾಕ್ರೆ, ಇಡೀ ಜಗತ್ತು ಚುನಾವಣೆಗೆ ಮತಪತ್ರ ಬಳಸುತ್ತಿದೆ. ದಕ್ಷಿಣ ಆಫ್ರಿಕಾದ ಕೆಲ ದೇಶಗಳು ಮತ್ತು ಕೆಲ ಇತರೆ ರಾಷ್ಟ್ರಗಳು ಮಾತ್ರ ಇವಿಎಂ ಬಳಸುತ್ತಿವೆ. ಭಾರತವೂ ಈ ಸಾಲಿಗೆ ಸೇರುತ್ತೆ. ಪಾಕಿಸ್ತಾನ ,ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾ ಸೇರಿ ನೆರೆಯ ರಾಷ್ಟ್ರಗಳೂ ಚುನಾವಣೆಗೆ ಮತಪತ್ರ ಬಳಸುತ್ತಿವೆ ಎಂದಿದ್ದಾರೆ.