ಗಿರೀಶ್ ಲಿಂಗಣ್ಣ ಲೇಖನ | ಯೋಧನ ಬೆನ್ನಿಗೆ ಬಾಹ್ಯಾಕಾಶ ಕಾವಲು: ಜಿ-ಸ್ಯಾಟ್-7ಬಿ ಕಥನ
ಲಡಾನ್ನ ತೀವ್ರ ಗಾಳಿಯ ಹೊಡೆತದ ಪ್ರದೇಶದಲ್ಲಿ ಕರ್ತವ್ಯಕ್ಕಾಗಿ ನಿಯೋಜನೆಗೊಂಡಿರುವ ಓರ್ವ ಯೋಧನನ್ನೊಮ್ಮೆ ಕಲ್ಪಿಸಿಕೊಳ್ಳಿ. ಆತ ಮತ್ತು ಆತನ ಸನಿಹದ ಪಟ್ಟಣದ ನಡುವೆ ಬರೀ ಬಂಡೆಕಲ್ಲುಗಳು, ಮಂಜುಗಡ್ಡೆಗಳೇ ತುಂಬಿವೆ. ಆತನಿಗೆ ಎಲ್ಲರಿಂದ ಪ್ರತ್ಯೇಕತೆ ಮತ್ತು ಸುರಕ್ಷತೆಯ ನಡುವೆ ಇರುವ ವ್ಯತ್ಯಾಸವೆಂದರೆ, ತನ್ನ ಮೇಲಧಿಕಾರಿಗಳ ಜೊತೆ ಏರ್ಪಡುವ ಸಂವಹನ. 2028ರ ಮಧ್ಯದ ವೇಳೆಗೆ,

ಲಡಾನ್ನ ತೀವ್ರ ಗಾಳಿಯ ಹೊಡೆತದ ಪ್ರದೇಶದಲ್ಲಿ ಕರ್ತವ್ಯಕ್ಕಾಗಿ ನಿಯೋಜನೆಗೊಂಡಿರುವ ಓರ್ವ ಯೋಧನನ್ನೊಮ್ಮೆ ಕಲ್ಪಿಸಿಕೊಳ್ಳಿ. ಆತ ಮತ್ತು ಆತನ ಸನಿಹದ ಪಟ್ಟಣದ ನಡುವೆ ಬರೀ ಬಂಡೆಕಲ್ಲುಗಳು, ಮಂಜುಗಡ್ಡೆಗಳೇ ತುಂಬಿವೆ. ಆತನಿಗೆ ಎಲ್ಲರಿಂದ ಪ್ರತ್ಯೇಕತೆ ಮತ್ತು ಸುರಕ್ಷತೆಯ ನಡುವೆ ಇರುವ ವ್ಯತ್ಯಾಸವೆಂದರೆ, ತನ್ನ ಮೇಲಧಿಕಾರಿಗಳ ಜೊತೆ ಏರ್ಪಡುವ ಸಂವಹನ. 2028ರ ಮಧ್ಯದ ವೇಳೆಗೆ, ಈ ಸಂವಹನ ಲಿಂಕ್ ಭಾರತೀಯ ಸೇನೆಯದ್ದೇ ಆದ ಉಪಗ್ರಹ ಒಂದರಿಂದ ಏರ್ಪಡುವ ಸಾಧ್ಯತೆಗಳಿವೆ.ಕೇಳಲು ವಿಚಿತ್ರ ಎನಿಸಿದರೂ, ಭಾರತೀಯ ಸೇನೆಯ ಬಳಿ ಇಂದು ಅಂತಹ ಯಾವುದೇ ಉಪಗ್ರಹ ಲಭ್ಯವಿಲ್ಲ. ಭಾರತೀಯ ವಾಯುಪಡೆ ಮತ್ತು ನೌಕಾಪಡೆಗಳು ತಲಾ ಒಂದು ಉಪಗ್ರಹವನ್ನು ಹೊಂದಿವೆ. ಭಾರತೀಯ ಸೇನೆ ವಾಯುಪಡೆಯ ಉಪಗ್ರಹವಾದ ಜಿಸ್ಯಾಟ್-7ಎ ಅನ್ನೇ ಹಂಚಿಕೊಳ್ಳುತ್ತಿತ್ತು. ಇದನ್ನು ಹಲವು ಕುಟುಂಬಗಳು ನೆರೆಮನೆಯ ಒಂದೇ ನಳ್ಳಿಯಿಂದ ನೀರು ಪಡೆಯುವುದಕ್ಕೆ ಹೋಲಿಸಬಹುದು. ಈ ರೀತಿಯ ವ್ಯವಸ್ಥೆಯೂ ಕಾರ್ಯಾಚರಿಸುತ್ತದೆ. ಆದರೆ, ಅದಕ್ಕಾಗಿ ಸಾಕಷ್ಟು ರಾಜಿ ಮಾಡಿಕೊಳ್ಳಬೇಕಾಗುತ್ತದೆ. ನಳ್ಳಿಯ ಮಾಲೀಕನ ಅವಶ್ಯಕತೆಗಳಿಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ಮರುಭೂಮಿಗಳು, ಅರಣ್ಯ ಪ್ರದೇಶಗಳು, ಮತ್ತು ಭೂಮಿಯಲ್ಲೇ ಅತ್ಯಂತ ಎತ್ತರವಾದ ಪರ್ವತ ಶ್ರೇಣಿಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಚದುರಿ ಹೋಗಿರುವ ಭಾರತೀಯ ಸೇನೆಯ ಯೋಧರ ಪಾಲಿಗೆ ಈ ವ್ಯವಸ್ಥೆ ಸಾಕಾಗುವುದಿಲ್ಲ ಎನ್ನುವ ಭಾವನೆ ಮೊದಲಿನಿಂದಲೂ ಇದೆ.ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಅಕ್ಟೋಬರ್ 19, ಸೋಮವಾರದಂದು, ಇಸ್ರೋ ಭಾರತೀಯ ಸೇನೆಯ ಸ್ವಂತದ್ದಾದ, ಮೊದಲ ಸಂವಹನ ಉಪಗ್ರಹವನ್ನು 2028ರ ಮಧ್ಯ ಭಾಗದಲ್ಲಿ ಉಡಾವಣೆಗೊಳಿಸಲಿದೆ ಎಂದಿದ್ದಾರೆ. ಜಿಸ್ಯಾಟ್-7ಬಿ ಹೆಸರಿನ ಈ ಉಪಗ್ರಹ, ಮೂಲತಃ ನವೆಂಬರ್ 2027ರಲ್ಲಿ ಉಡಾವಣೆಗೊಳ್ಳಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳು ಈ ಉಡಾವಣೆಯನ್ನು ಆರು ತಿಂಗಳ ಕಾಲ ಮುಂದೂಡಿವೆ. ಇದರ ಕಾರ್ಯಗಳು ಮಾರ್ಚ್ 2023ರಲ್ಲಿ ಆರಂಭಗೊಂಡಿದ್ದು, ರಕ್ಷಣಾ ಸಚಿವಾಲಯ ಇಸ್ರೋದ ವಾಣಿಜ್ಯಿಕ ಅಂಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಅಥವಾ ಎನ್ಎಸ್ಐಎಲ್ ಜೊತೆಗೆ 3,000 ಕೋಟಿ ರೂಪಾಯಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಎನ್ಎಸ್ಐಎಲ್ ಎನ್ನುವುದು ಒಂದು ವಾಣಿಜ್ಯಿಕ ಕಂಪನಿಯಾಗಿದ್ದು, ಇದರ ಮೂಲಕ ಇಸ್ರೋ ತನಗೆ ಪಾವತಿಸುವ ಗ್ರಾಹಕರಿಗೆ ಉಪಗ್ರಹಗಳನ್ನು ನಿರ್ಮಿಸುತ್ತದೆ. ಈ ಒಪ್ಪಂದ ಭಾರತೀಯ ಸೇನೆ ಹಲವಾರು ವರ್ಷಗಳಿಂದ ಪ್ರಸ್ತಾಪಿಸುತ್ತಲೇ ಬಂದಿದ್ದ ಅವಶ್ಯಕತೆಗೆ ಉತ್ತರ ನೀಡಿದಂತಾಗಿದೆ.ಈ ಉಪಗ್ರಹ ನಿಜಕ್ಕೂ ಏನು ಮಾಡಲಿದೆ? ಅಂದಾಜು ಐದು ಟನ್ ಅಥವಾ 5,000 ಕೆಜಿ ತೂಕ ಹೊಂದಿರುವ ಈ ಉಪಗ್ರಹ, ಭಾರತ ಇಲ್ಲಿಯ ತನಕ ನಿರ್ಮಿಸಿರುವ ಅತ್ಯಂತ ತೂಕದ ಸಂವಹನ ಉಪಗ್ರಹವಾಗಿರಲಿದೆ. ಇದು ಜಿಯೋಸ್ಟೇಷನರಿ (ಭೂಸ್ಥಿರ) ಕಕ್ಷೆಯಲ್ಲಿ ಅಳವಡಿಕೆಯಾಗಲಿದೆ. ಭೂ ಸ್ಥಿರ ಕಕ್ಷೆ ಎಂದರೆ, ಉಪಗ್ರಹ ಭೂಮಿಯ ಪರಿಭ್ರಮಣೆಯ ವೇಗದಲ್ಲೇ ಭೂಮಿಯ ಸುತ್ತಲೂ ಚಲಿಸಲಿದೆ. ಅಂದರೆ, ಭೂಮಿಯಿಂದ ನೋಡಿದಾಗ ಈ ಉಪಗ್ರಹ ಒಂದು ಸ್ವಲ್ಪವೂ ಚಲನೆ ಇಲ್ಲದೆ, ಒಂದೇ ಸ್ಥಳದಲ್ಲಿ ಸ್ಥಿರವಾಗಿ ನಿಂತಿರುವಂತೆ ಕಾಣುತ್ತದೆ. ನಮ್ಮ ಉಪಖಂಡದ ಮೇಲೆ, ಎತ್ತರದ ಕಂಬವೊಂದಕ್ಕೆ ಅಳವಡಿಸಿದ ದೀಪದಂತೆ ಇದು ತೋರಲಿದೆ. ಅಷ್ಟೊಂದು ಎತ್ತರದಿಂದ, ರೇಡಿಯೋ ಸಂಕೇತವನ್ನು ಒಂದು ಕಣಿವೆಯಿಂದ ಇನ್ನೊಂದು ಕಣಿವೆಗೆ ಸುಲಭವಾಗಿ ತಲುಪಿಸಬಹುದು. ಸಾಮಾನ್ಯವಾದ ವ್ಯವಸ್ಥೆಯಲ್ಲಿ ಇಂತಹ ಸಂವಹನಕ್ಕೆ ಪರ್ವತಗಳ ಅಡ್ಡಲಾಗುತ್ತವೆ. ಇದು ಸೈನಿಕರು, ತುಕಡಿಗಳು, ಆಯುಧ ವ್ಯವಸ್ಥೆಗಳು, ಏರ್ಕ್ರಾಫ್ಟ್ಗಳು, ಮತ್ತು ಇತರ ಅವಶ್ಯಕ ಉಪಕರಣಗಳನ್ನು ಸಂಪರ್ಕಿಸಿ, ಕಮಾಂಡರ್ಗಳಿಗೆ ಆದೇಶ ನೀಡಲು, ವಿವಿಧ ಪಡೆಗಳ ನಡುವೆ ಸಮನ್ವಯ ರೂಪಿಸಲು, ದೈನಂದಿನ ಕರ್ತವ್ಯಗಳು ಮತ್ತು ಯುದ್ಧರಂಗದ ಕಾರ್ಯಾಚರಣೆಗಳು ಎರಡನ್ನೂ ನಿರಂತರವಾಗಿ, ಯಾವುದೇ ಅಡಚಣೆ ಇಲ್ಲದೆ, ಎಂತಹ ದುರ್ಗಮ ಪ್ರದೇಶದಲ್ಲಾದರೂ ನಿರ್ವಹಿಸಲು ನೆರವಾಗುತ್ತದೆ.ಈ ವ್ಯವಸ್ಥೆಯ ನೈಜ ಪರೀಕ್ಷೆ ಎದುರಾಗುವುದು ಯುದ್ಧದಲ್ಲಿ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಯುದ್ಧ ನಡೆಯುವಾಗ, ಶತ್ರು ಮೊದಲಿಗೆ ಎದುರಾಳಿಯ ಭೂ ಸಂವಹನ ತಂತಿಗಳನ್ನು ಕತ್ತರಿಸುತ್ತಾನೆ. ಇದಕ್ಕಾಗಿ ಟವರ್ಗಳ ಮೇಲೆ ದಾಳಿ ನಡೆಸಲಾಗುತ್ತದೆ, ಕೇಬಲ್ಗಳನ್ನು ಕತ್ತರಿಸಲಾಗುತ್ತದೆ. ಆದರೆ, ಎತ್ತರದ ಬಾಹ್ಯಾಕಾಶದಲ್ಲಿರುವ ಉಪಗ್ರಹ ಭೂಮಿಯಲ್ಲಿರುವ ಎಲ್ಲವೂ ಮೌನವಾದಾಗಲೂ ನಿರಂತರ ಸಂವಹನ ನಡೆಯುವಂತೆ ನೋಡಿಕೊಳ್ಳುತ್ತದೆ.ಆದರೆ, ಇಲ್ಲಿ ಗಮನಾರ್ಹ ಸಂಗತಿಯೊಂದಿದೆ. ಅದುವೇ ಚೀನಾ! ಬೀಜಿಂಗ್ ಈಗಾಗಲೇ ತನ್ನ ಬಾಹ್ಯಾಕಾಶ ಸಾಮರ್ಥ್ಯಗಳನ್ನು ಕ್ಷಿಪ್ರವಾಗಿ ವಿಸ್ತರಿಸುತ್ತಿದ್ದು, ಈಗಾಗಲೇ ಜಾಮರ್ಗಳನ್ನು ಹೊಂದಿದೆ. ಈ ಜಾಮರ್ಗಳು ಉಪಗ್ರಹದ ಫ್ರೀಕ್ವೆನ್ಸಿಗೆ ವಿಪರೀತ ಇಲೆಕ್ಟ್ರಾನಿಕ್ ನಾಯ್ಸ್ ಅನ್ನು ಕಳುಹಿಸುತ್ತವೆ. ಇದು ಒಂದು ರೀತಿ ಬೇರೆಯವರ ಧ್ವನಿಯನ್ನು ತಗ್ಗಿಸುವ ಸಲುವಾಗಿ, ಅವರತ್ತ ವಿಪರೀತ ಧ್ವನಿ ಎತ್ತಿ ಕೂಗಿಕೊಳ್ಳುವಂತಿರುತ್ತದೆ. ಚೀನಾ ಈಗಾಗಲೇ ಉಪಗ್ರಹಗಳನ್ನು ನಿಷ್ಕ್ರಿಯಗೊಳಿಸುವ, ಅಥವಾ ಸಂಪೂರ್ಣವಾಗಿ ನಾಶಗೊಳಿಸುವಂತಹ ಆಯುಧಗಳನ್ನು ಅಭಿವೃದ್ಧಿ ಪಡಿಸುತ್ತಿದೆ ಎನ್ನಲಾಗಿದೆ. ಇದರಿಂದ ಭಾರತ ಕಲಿಯಬೇಕಾದ ಪಾಠವೆಂದರೆ, ಉಪಗ್ರಹವನ್ನು ನಿರ್ಮಿಸುವುದು ಕೇವಲ ಅರ್ಧ ಕೆಲಸವಾಗಿದ್ದು, ಅವುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಇನ್ನರ್ಧ ಕೆಲಸ.ಜಿಸ್ಯಾಟ್-7ಬಿ ಉಪಗ್ರಹ ಭಾರತದ ದೊಡ್ಡ ಯೋಜನೆಯ ಒಂದು ಭಾಗವಾಗಿದೆ. ಭಾರತೀಯ ನೌಕಾ ಸೇನೆ ಕಳೆದ ನವೆಂಬರ್ ತಿಂಗಳಲ್ಲಿ ತನ್ನ ನೂತನ ಉಪಗ್ರಹವಾದ ಜಿಸ್ಯಾಟ್-7ಆರ್ ಅನ್ನು ಪಡೆದುಕೊಂಡಿತು. ಇಸ್ರೋ ಹಳೆಯದಾಗಿರುವ ರುಕ್ಮಿಣಿ ಉಪಗ್ರಹದ ಬದಲು ಕಾರ್ಯಾಚರಿಸಲು ಇದನ್ನು ಉಡಾವಣೆಗೊಳಿಸಿತು. ಸಂಪೂರ್ಣವಾಗಿ ಭಾರತದಲ್ಲೇ ನಿರ್ಮಾಣಗೊಂಡಿರುವ ಈ ಉಪಗ್ರಹ, ಯುದ್ಧನೌಕೆಗಳು, ಸಬ್ಮರೀನ್ಗಳು, ಏರ್ಕ್ರಾಫ್ಟ್ಗಳು, ಮತ್ತು ತೀರ ಆಧಾರಿತ ನಿಯಂತ್ರಣ ಕೇಂದ್ರಗಳು ಪರಸ್ಪರ ಸುರಕ್ಷಿತವಾಗಿ ಸಂವಹನ ನಡೆಸಲು ಅವಕಾಶ ಮಾಡಿಕೊಡುತ್ತದೆ. ಕಳೆದ ವಾರವಷ್ಟೇ ರಕ್ಷಣಾ ಸಚಿವಾಲಯ ಎನ್ಎಸ್ಐಎಲ್ ಜೊತೆ ಭಾರತೀಯ ವಾಯುಪಡೆಗೆ ನೂತನ ಜಿಸ್ಯಾಟ್-7ಸಿ ಉಪಗ್ರಹ ನಿರ್ಮಾಣಕ್ಕೆ ಒಪ್ಪಂದ ಮಾಡಿಕೊಂಡಿದೆ. ಇದೂ ಸಂಪೂರ್ಣವಾಗಿ ಭಾರತೀಯ ನಿರ್ಮಾಣದ್ದಾಗಿದ್ದು, ಏರ್ಕ್ರಾಫ್ಟ್ಗಳು ಮತ್ತು ಭೂ ವ್ಯವಸ್ಥೆಗಳು ನಿರಂತರ ಸಂಪರ್ಕದಲ್ಲಿರುವಂತೆ ಮಾಡುತ್ತದೆ. ಸರಳವಾಗಿ ಹೇಳುವುದಾದರೆ, ಸೇನೆಯ ಪ್ರತಿಯೊಂದು ವಿಭಾಗವೂ ಸದ್ಯದಲ್ಲೇ ಬಾಹ್ಯಾಕಾಶದಲ್ಲಿ ತನ್ನ ಸ್ವಂತ ಧ್ವನಿಯನ್ನು ಹೊಂದಲಿದೆ.ಮಾತನಾಡುವುದು ಒಂದು ವಿಚಾರವಾದರೆ, ಕಣ್ಗಾವಲು ನಡೆಸುವುದು ಇನ್ನೊಂದು ಅಂಶ. ಈ ಸಂವಹನ ಉಪಗ್ರಹಗಳ ಜೊತೆಗೆ, ಭಾರತ ಬಾಹ್ಯಾಕಾಶದಿಂದ ನಮ್ಮ ಭೂಮಿಯನ್ನು ಒಂದು ಕ್ಷಣವೂ ಕಣ್ಣು ಮುಚ್ಚದಂತೆ ನೋಡುವ ಕಣ್ಗಾವಲು ಉಪಗ್ರಹಗಳ ನಿರ್ಮಾಣಕ್ಕೂ ಸಜ್ಜಾಗುತ್ತಿದೆ. ಭದ್ರತಾ ನಿರ್ಧಾರಗಳಿಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳಿಗೆ ಸಲಹೆ ನೀಡುವ ಉನ್ನತ ಸಮಿತಿಯಾದ ಭದ್ರತಾ ಸಂಸದೀಯ ಸಮಿತಿ ಬಾಹ್ಯಾಕಾಶ ಆಧಾರಿತ ಕಣ್ಗಾವಲು ಯೋಜನೆಯ ಮೂರನೇ ಹಂತಕ್ಕೆ ಅಕ್ಟೋಬರ್ 2024ರಲ್ಲಿ ಅನುಮೋದನೆ ನೀಡಿತು. 26,968 ಕೋಟಿ ರೂಪಾಯಿ ಮೌಲ್ಯದ ಈ ಯೋಜನೆ ಮುಂದಿನ ಮೂರು ವರ್ಷಗಳಲ್ಲಿ 52 ಉಪಗ್ರಹಗಳನ್ನು ಕಕ್ಷೆಗೆ ಅಳವಡಿಸಲಿದೆ. ಇದನ್ನು ಸೇನೆಯ ಮೂರೂ ವಿಭಾಗಗಳನ್ನೂ ಜೊತೆಯಾಗಿ ಕಾರ್ಯಾಚರಿಸಲು ನೆರವಾಗುವ ಕಚೇರಿಯಾದ ಹೆಡ್ ಕ್ವಾರ್ಟರ್ಸ್ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ನ ಡಿಫೆನ್ಸ್ ಸ್ಪೇಸ್ ಏಜೆನ್ಸಿ ನಿರ್ವಹಿಸಲಿದೆ. ಇವುಗಳ ಪೈಕಿ 21 ಉಪಗ್ರಹಗಳನ್ನು ಇಸ್ರೋ ನಿರ್ಮಿಸಿ ಉಡಾವಣೆಗೊಳಿಸಿದರೆ, ಇನ್ನುಳಿದ 31 ಉಪಗ್ರಹಗಳನ್ನು ಭಾರತೀಯ ಖಾಸಗಿ ಕಂಪನಿಗಳು ಪೂರೈಸಲಿವೆ.ಇವೆಲ್ಲವೂ ಸಮಾನ ನಿಯಮಾವಳಿಗಳ ಆಧಾರದಲ್ಲಿ ಕಾರ್ಯಾಚರಿಸಲಿವೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ, ಕೋಲ್ಕತ್ತಾದಲ್ಲಿ ನಡೆದ ಕಂಬೈನ್ಡ್ ಕಮಾಂಡರ್ಸ್ ಕಾನ್ಫರೆನ್ಸ್ ನಲ್ಲಿ ಸಶಸ್ತ್ರ ಪಡೆಗಳು ಜಂಟಿ ಮಿಲಿಟರಿ ಬಾಹ್ಯಾಕಾಶ ಡಾಕ್ಟ್ರಿನ್ ಬಿಡುಗಡೆಗೊಳಿಸಿದ್ದವು. ಈ ನಿಯಮಾವಳಿ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯು ಸೇನೆಗಳು ಜೊತೆಯಾಗಿ ಬಾಹ್ಯಾಕಾಶವನ್ನು ಬಳಸಬೇಕು ಎಂದು ವಿವರಿಸುತ್ತದೆ. ಭಾರತದ ಉಪಗ್ರಹಗಳನ್ನು ರಕ್ಷಿಸಲು ಮತ್ತು ನಮ್ಮ ವಾತಾವರಣದಾಚೆಗಿನ ಅಪಾಯಗಳನ್ನು ಎದುರಿಸಲು ರಾಷ್ಟ್ರೀಯ ಮಿಲಿಟರಿ ಬಾಹ್ಯಾಕಾಶ ನೀತಿಯನ್ನು ರೂಪಿಸಲಾಗುತ್ತಿದೆ.ಲಡಾಖ್ನ ತಣ್ಣನೆಯ ಅಂಚಿನಲ್ಲಿ ನಿಂತು ಕಾಯುತ್ತಿರುವ ಯೋಧನಿಗೆ ಇಂತಹ ಪ್ರತಿಯೊಂದು ನೀತಿ ಮತ್ತು ಯೋಜನೆಯೂ ತಾನು ಕರೆ ಮಾಡಿದಾಗ ಇನ್ನೊಬ್ಬರು ಕೇಳಿಸಿಕೊಳ್ಳುತ್ತಾರೆ ಎನ್ನುವ ಭರವಸೆ ನೀಡಲಿದೆ.(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)