ಬೀದರ್| ರಾಮಲೀಲಾ ಉತ್ಸವಕ್ಕೆ ಮನಸೋತ ಜನ; 46 ಅಡಿ ರಾವಣನ ಪ್ರತಿಕೃತಿ ದಹನ
ಬೀದರ್: ಶ್ರೀ ರಾಮಲೀಲಾ ಉತ್ಸವ ಸಮಿತಿಯ ವತಿಯಿಂದ ನಗರದ ಸಾಯಿ ಶಾಲೆ ಮೈದಾನದಲ್ಲಿ ವಿಜಯದಶಮಿ ಅಂಗವಾಗಿ ಬುಧವಾರ ರಾತ್ರಿ ಏರ್ಪಡಿಸಿದ್ದ ರಾಮಲೀಲಾ ಹಾಗೂ ರಾವಣ ದಹನ ಕಾರ್ಯಕ್ರಮ ಜನರ ಮನಸೂರೆಗೊಳಿಸಿತು.ತೆರೆದ ವೇದಿಕೆಯಲ್ಲಿ ಝಗಮಗಿಸುವ ವಿದ್ಯುತ್ ದೀಪಗಳ ಬೆಳಕಿನಲ್ಲಿ ಶ್ರೀರಾಮನ ಕುರಿತ ನೃತ್ಯರೂಪಕಗಳು ಗಮನ ಸೆಳೆದವು. ಜಿಲ್ಲೆಯ ವಿವಿಧ ಕಲಾ ತಂಡಗಳು, ನೃತ್ಯ ಶಾಲೆಯ ವಿದ್ಯಾರ

ಬೀದರ್: ಶ್ರೀ ರಾಮಲೀಲಾ ಉತ್ಸವ ಸಮಿತಿಯ ವತಿಯಿಂದ ನಗರದ ಸಾಯಿ ಶಾಲೆ ಮೈದಾನದಲ್ಲಿ ವಿಜಯದಶಮಿ ಅಂಗವಾಗಿ ಬುಧವಾರ ರಾತ್ರಿ ಏರ್ಪಡಿಸಿದ್ದ ರಾಮಲೀಲಾ ಹಾಗೂ ರಾವಣ ದಹನ ಕಾರ್ಯಕ್ರಮ ಜನರ ಮನಸೂರೆಗೊಳಿಸಿತು.ತೆರೆದ ವೇದಿಕೆಯಲ್ಲಿ ಝಗಮಗಿಸುವ ವಿದ್ಯುತ್ ದೀಪಗಳ ಬೆಳಕಿನಲ್ಲಿ ಶ್ರೀರಾಮನ ಕುರಿತ ನೃತ್ಯರೂಪಕಗಳು ಗಮನ ಸೆಳೆದವು. ಜಿಲ್ಲೆಯ ವಿವಿಧ ಕಲಾ ತಂಡಗಳು, ನೃತ್ಯ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿನಿಯರು ಸಮೂಹ ನೃತ್ಯ, ಏಕವ್ಯಕ್ತಿ ನೃತ್ಯ ಪ್ರಸ್ತುತಪಡಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಚಪ್ಪಾಳೆ ಗಿಟ್ಟಿಸಿದರು.ಕನ್ನಡ, ಹಿಂದಿ ಹಾಗೂ ಮರಾಠಿ ಜನಪದ ಗೀತೆಗಳಿಗೂ ಹೆಜ್ಜೆ ಹಾಕಿದರು. ಶ್ರೀರಾಮಚಂದ್ರನು ರಾವಣನನ್ನು ಸಂಹರಿಸುವ ನೃತ್ಯ ರೂಪಕ ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು. ಅಂಬಾ ಭವಾನಿ ನೃತ್ಯ ರೂಪಕವೂ ರಂಜಿಸಿತು. ರಾಮಲೀಲಾ ಉತ್ಸವ ನಡೆಸಿಕೊಟ್ಟ ಕಲಾವಿದರು ಅಲಂಕರಿಸಿದ ತೆರೆದ ವಾಹನದಲ್ಲಿ ಬಂದರು. ಅವರಿಗೆ ಭವ್ಯ ಸ್ವಾಗತ ನೀಡಲಾಯಿತು.ಬಳಿಕ 46 ಅಡಿ ಎತ್ತರದ ರಾವಣನ ಪ್ರತಿಕೃತಿ ಹಾಗೂ ಅದರ ಮೇಲೆ ಅಂಟಿಸಿದ್ದ ಜಿರಳೆ ಚಿತ್ರ ದಹಿಸಲಾಯಿತು. ಪಟಾಕಿಗಳನ್ನು ಸಿಡಿಸಿ, ಜೈಶ್ರೀರಾಮ್, ಜೈಶ್ರೀರಾಮ್ ಎಂದು ಘೋಷಣೆಗಳನ್ನು ಹಾಕಿದರು.ಶ್ರೀ ರಾಮಲೀಲಾ ಉತ್ಸವ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಈಶ್ವರ ಸಿಂಗ್ ಠಾಕೂರ್ ಮಾತನಾಡಿ, 2006ನೇ ಇಸ್ವಿಯಿಂದ ರಾಮಲೀಲಾ ಉತ್ಸವ ಹಾಗೂ ರಾವಣ ದಹನ ಕಾರ್ಯಕ್ರಮ ಮಾಡಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಕಾರ್ಯಕ್ರಮ ದೊಡ್ಡದಾಗುತ್ತಿದೆ. ಜನ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುತ್ತಿರುವುದು ಖುಷಿಯ ಸಂಗತಿ ಎಂದರು.ನಮ್ಮ ಭಾರತೀಯ ಪರಂಪರೆ, ಸಂಸ್ಕೃತಿ ಕುರಿತು ಯುವಜನರಿಗೆ ತಿಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಅಧರ್ಮದ ವಿರುದ್ಧ ಧರ್ಮದ ಜಯದ ಸಂಕೇತ ಈ ಹಬ್ಬ. ಅದರ ಪ್ರತೀಕವಾಗಿ ರಾವಣನ ಪ್ರತಿಕೃತಿ ದಹಿಸಲಾಗುತ್ತಿದೆ ಎಂದು ಹೇಳಿದರು.ಪ್ರಮುಖರಾದ ಮಹೇಶ್ವರ ಸ್ವಾಮಿ, ಚಂದ್ರಶೇಖರ ಗಾದಾ, ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಮಾಜಿಸಚಿವ ಬಂಡೆಪ್ಪ ಕಾಶೆಂಪುರ್, ಗುರುನಾಥ ಕೊಳ್ಳೂರು, ರಘುನಾಥರಾವ್ ಮಲ್ಕಾಪುರೆ, ಚಂದ್ರಶೇಖರ ಪಾಟೀಲ, ಸೋಮನಾಥ ಪಾಟೀಲ, ಬಾಬುವಾಲಿ, ರಮೇಶ ಪಾಟೀಲ ಸೋಲಪೂರ, ರಮೇಶ ಪಾಟೀಲ, ರಮೇಶ ಗೋಯಲ್, ಬಾಬುರಾವ್ ಮಲ್ಕಾಪುರ, ಸರ್ದಾರ್ ಬಲಬೀರ್ ಸಿಂಗ್, ಗೀತಾ ಪಂಡಿತ್ ಚಿದ್ರಿ, ಶಂಕರರಾವ್, ಅಶೋಕ ರೆಜಂತಲ್, ಸರ್ದಾರ್ ಮನಪ್ರೀತ್ ಸಿಂಗ್, ಶಿವಾನಂದ ಪಾಟೀಲ, ರಾಜೇಂದ್ರ ಶರ್ಮಾ, ದಿಗಂಬರ್ ಪೋಲಾ, ಡಾ. ರಜನೀಶ ವಾಲಿ ಹಾಗೂ 43 ಸಮುದಾಯಗಳ ಪ್ರಮುಖರು ಉಪಸ್ಥಿತರಿದ್ದರು.ಸ್ನೇಹಾ ಶರ್ಮಾ, ಚಂಚಲ್ ರೆಡ್ಡಿ, ಶ್ರಾವಣಿ ಹಾಗೂ ಪಲ್ಲವಿ ಪಾಂಚಾಳ ಅವರನ್ನು ಸನ್ಮಾನಿಸಲಾಯಿತು.ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದದ್ದರಿಂದ ಸಾಯಿ ಶಾಲೆ ಎದುರಿನ ಮುಖ್ಯರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಿ ಅನ್ಯ ಮಾರ್ಗಗಳ ಮೂಲಕ ಓಡಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವೇದಿಕೆಗೆ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಹೆಸರಿಡಲಾಗಿತ್ತು.