ನವಮಿಯಲಿ ಆರದ ದೀಪ, ಎತ್ತರಕ್ಕೆ ಬೆಳೆದು ನಿಂತ ಸಸಿ – ಉ.ಕರ್ನಾಟಕದ ದಸರಾದ ಸಮೃದ್ಧಿಯ ಆಚರಣೆ
ಹಿಂದೂ ಸನಾತನ ಪರಂಪರೆಯಲ್ಲಿ ಶರನ್ನವರಾತ್ರಿ ಅಥವಾ ದಸರಾ ಹಬ್ಬಕ್ಕೆ ವಿಶೇಷವಾದ ಪಾವಿತ್ರ್ಯವಿದೆ. ಒಂಬತ್ತು ದಿನಗಳ ಕಾಲ ಆದಿಶಕ್ತಿ ಜಗನ್ಮಾತೆಯ ವಿವಿಧ ರೂಪಗಳನ್ನು ಭಕ್ತಿಯಿಂದ ಆರಾಧಿಸುವ ಈ ಸಂಭ್ರಮದ ಮೊದಲ ಮೆಟ್ಟಿಲೇ ಘಟಸ್ಥಾಪನೆ. ಅಶ್ವಿಜ ಶುಕ್ಲ ಪಾಡ್ಯಮಿಯ ದಿನದಂದು ಶುಭ ಮುಹೂರ್ತದಲ್ಲಿ ನೆರವೇರಿಸುವ ಈ ಆಚರಣೆಯು ನವರಾತ್ರಿಯ ವ್ರತ ಹಾಗೂ ಪೂಜೆಯ ಅಧಿಕೃತ ಆರಂಭವನ್ನು ಸೂ

ಹಿಂದೂ ಸನಾತನ ಪರಂಪರೆಯಲ್ಲಿ ಶರನ್ನವರಾತ್ರಿ ಅಥವಾ ದಸರಾ ಹಬ್ಬಕ್ಕೆ ವಿಶೇಷವಾದ ಪಾವಿತ್ರ್ಯವಿದೆ. ಒಂಬತ್ತು ದಿನಗಳ ಕಾಲ ಆದಿಶಕ್ತಿ ಜಗನ್ಮಾತೆಯ ವಿವಿಧ ರೂಪಗಳನ್ನು ಭಕ್ತಿಯಿಂದ ಆರಾಧಿಸುವ ಈ ಸಂಭ್ರಮದ ಮೊದಲ ಮೆಟ್ಟಿಲೇ ಘಟಸ್ಥಾಪನೆ. ಅಶ್ವಿಜ ಶುಕ್ಲ ಪಾಡ್ಯಮಿಯ ದಿನದಂದು ಶುಭ ಮುಹೂರ್ತದಲ್ಲಿ ನೆರವೇರಿಸುವ ಈ ಆಚರಣೆಯು ನವರಾತ್ರಿಯ ವ್ರತ ಹಾಗೂ ಪೂಜೆಯ ಅಧಿಕೃತ ಆರಂಭವನ್ನು ಸೂಚಿಸುತ್ತದೆ. ಇದೇ ರೀತಿ ಉತ್ತರ ಕರ್ನಾಟಕ ಭಾಗದಲ್ಲಿ ನವರಾತ್ರಿಯ ಸಂದರ್ಭದಲ್ಲಿ ದೇವರ ಮನೆಯಲ್ಲಿ ಸಸಿ ನೆಡುವ ಅಥವಾ ಬೆಳೆಸುವ ಆಚರಣೆಯನ್ನು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಮಾಡಲಾಗುತ್ತದೆ. ಇದನ್ನು ಗ್ರಾಮೀಣ ಭಾಗದಲ್ಲಿ ಪ್ರೀತಿಯಿಂದ ‘ಸಸಿ ಹಾಕುವುದು’ ಅಥವಾ ‘ಘಟಸ್ಥಾಪನೆಯ ಸಸಿ’ ಎಂದು ಕರೆಯುತ್ತಾರೆ. ಇದು ಕೇವಲ ಪೂಜೆಯಷ್ಟೇ ಅಲ್ಲದೆ, ಭೂಮಿತಾಯಿ ಮತ್ತು ಕೃಷಿ ಸಂಸ್ಕೃತಿಯ ಮೇಲಿನ ಅವಿನಾಭಾವ ಪ್ರೀತಿಯನ್ನು ಸಾರುವ ಸುಂದರ ಸಂಪ್ರದಾಯ. ಘಟಸ್ಥಾಪನೆಯ ದಿನದಂದು ಎಲೆಯೊಂದನ್ನು ಹಾಕಿ, ಅದರ ಮೇಲೆ ರಂಗೋಲಿ ಹಾಕಿ ಸಿದ್ಧಮಾಡಿಕೊಳ್ಳುತ್ತಾರೆ. ಅನಂತರ ಹೊಲದಿಂದ ತಂದ ಫಲವತ್ತಾದ ಕಪ್ಪು ಮಣ್ಣು ಅಥವಾ ನದಿಯ ಶುದ್ಧ ಮಣ್ಣನ್ನು ಅದರ ಮೇಲೆ ಹರಡಲಾಗುತ್ತದೆ. ಈ ಮಣ್ಣಿನಲ್ಲಿ ಏಕದಳ ಧಾನ್ಯಗಳನ್ನು ಅಥವಾ ನವಧಾನ್ಯಗಳನ್ನು ನೆನೆಸಿ ಬಿತ್ತುತ್ತಾರೆ. ನಂತರ ಹಗುರವಾಗಿ ನೀರು ಚಿಮುಕಿಸಿ, ಅದರ ಮಧ್ಯದಲ್ಲಿ ಕಲಶವನ್ನು ಪ್ರತಿಷ್ಠಾಪಿಸುತ್ತಾರೆ. ಆನಂತರ ನವರಾತ್ರಿಯ ಒಂಬತ್ತೂ ದಿನಗಳ ಕಾಲ ಸ್ನಾನ ಮಾಡಿ ಮಡಿ ಬಟ್ಟೆಟ್ಟು, ಭಕ್ತಿಯಿಂದ ಆ ಸಸಿಗಳಿಗೆ ಬೆರಳುಗಳಿಂದ ನೀರನ್ನು ಪ್ರೋಕ್ಷಣೆ ಮಾಡುತ್ತಾರೆ. ದಿನ ಕಳೆದಂತೆ ಬೀಜಗಳು ಮೊಳಕೆಯೊಡೆದು ದಿನೇದಿನೇ ಎತ್ತರಕ್ಕೆ ಹಚ್ಚಹಸಿರಾಗಿ ಬೆಳೆಯುತ್ತವೆ. ಇದನ್ನು ಸಾಕ್ಷಾತ್ ಅನ್ನಪೂರ್ಣೇಶ್ವರಿ ಮತ್ತು ಪ್ರಕೃತಿಯ ರೂಪವೆಂದೇ ಭಾವಿಸಲಾಗುತ್ತದೆ. ರೈತಾಪಿ ವರ್ಗದಲ್ಲಿ ಈ ಸಸಿ ಎಷ್ಟು ದಟ್ಟವಾಗಿ, ಎತ್ತರವಾಗಿ ಮತ್ತು ಹಸಿರಾಗಿ ಬೆಳೆಯುತ್ತದೆಯೋ, ಆ ವರ್ಷ ಹಿಂಗಾರು ಬೆಳೆ ಅಷ್ಟೇ ಹುಲುಸಾಗಿ ಬರುತ್ತದೆ ಮತ್ತು ಮನೆಗೆ ಸಮೃದ್ಧಿ ತರುತ್ತದೆ ಎಂಬ ಬಲವಾದ ನಂಬಿಕೆಯಿದೆ. ಸಸಿ ಚೆನ್ನಾಗಿ ಬಂದರೆ ‘ಲಕ್ಷ್ಮಿ ಒಲಿದಿದ್ದಾಳೆ’ ಎಂದು ನಂಬುತ್ತಾರೆ. ಬಿತ್ತಿದ ಬೀಜ ಮೊಳಕೆಯೊಡೆದು ಜೀವ ತಳೆಯುವ ಪ್ರಕ್ರಿಯೆಯೇ ದೈವಿಕ ಶಕ್ತಿ. ಭೂಮಿ ಮತ್ತು ಬೀಜದ ಸಂಗಮವನ್ನು ನವರಾತ್ರಿಯ ದುರ್ಗಾಶಕ್ತಿಯ ಜಾಗೃತಿಗೆ ಹೋಲಿಸಲಾಗುತ್ತದೆ. ವಿಜಯದಶಮಿ ದಿನ ಪೂಜೆ ಮುಗಿದ ನಂತರ, ಆ ಸುಂದರವಾಗಿ ಬೆಳೆದ ಹಸಿರು ಸಸಿಯ ಮೇಲೆ ಬನ್ನಿ ಎಲೆ ಇಟ್ಟು ನಮಸ್ಕರಿಸುತ್ತಾರೆ. ಉತ್ತರ ಕರ್ನಾಟಕದ ಜನಜೀವನದಲ್ಲಿ ಮಣ್ಣು, ಬೆಳೆ ಮತ್ತು ಹಬ್ಬಗಳು ಹೇಗೆ ಒಂದಕ್ಕೊಂದು ಬೆಸೆದುಕೊಂಡಿವೆ ಎಂಬುದಕ್ಕೆ ಈ ಸಸಿ ನೆಡುವ ಸಂಪ್ರದಾಯವೇ ಅತ್ಯುತ್ತಮ ಸಾಕ್ಷಿ.