ಶಿವಮೊಗ್ಗ ದಸರಾ ಜಂಬೂಸವಾರಿ ಅವಘಡ | ಆನೆಗೆ ಆರೈಕೆಯ ಅಗತ್ಯವಿತ್ತು: ನಟಿ ರಮ್ಯಾ
ಬೆಂಗಳೂರು: ಶಿವಮೊಗ್ಗದಲ್ಲಿ ದಸರಾ ಜಂಬೂ ಸವಾರಿ ನಡೆಯುವಾಗ ಅಂಬಾರಿ ಹೊತ್ತಿದ್ದ ‘ಸೋಮಣ್ಣ’ ಆನೆ ಬೆದರಿ ದಿಕ್ಕಾಪಾಲಾಗಿ ಓಡಿದ ಘಟನೆ ಹಾಗೂ ಸುಪ್ರೀಂ ಕೋರ್ಟ್ ಆದೇಶವಿದ್ದರೂ ರಾತ್ರಿಯಿಡೀ ಪಟಾಕಿ ಸಿಡಿಸಿ, ಧ್ವನಿ ವರ್ಧಕ ಬಳಸಿದ್ದರ ಬಗ್ಗೆ ನಟಿ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಶಿವಮೊಗ್ಗ ನಗರದಲ್ಲಿ ಅದ್ದೂರಿಯಾಗಿ ಸಾಗುತ್ತಿದ್ದ ಜಂಬೂಸವಾರಿಯಲ್ಲಿ ಮೊದಲ

ಬೆಂಗಳೂರು: ಶಿವಮೊಗ್ಗದಲ್ಲಿ ದಸರಾ ಜಂಬೂ ಸವಾರಿ ನಡೆಯುವಾಗ ಅಂಬಾರಿ ಹೊತ್ತಿದ್ದ ‘ಸೋಮಣ್ಣ’ ಆನೆ ಬೆದರಿ ದಿಕ್ಕಾಪಾಲಾಗಿ ಓಡಿದ ಘಟನೆ ಹಾಗೂ ಸುಪ್ರೀಂ ಕೋರ್ಟ್ ಆದೇಶವಿದ್ದರೂ ರಾತ್ರಿಯಿಡೀ ಪಟಾಕಿ ಸಿಡಿಸಿ, ಧ್ವನಿ ವರ್ಧಕ ಬಳಸಿದ್ದರ ಬಗ್ಗೆ ನಟಿ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಶಿವಮೊಗ್ಗ ನಗರದಲ್ಲಿ ಅದ್ದೂರಿಯಾಗಿ ಸಾಗುತ್ತಿದ್ದ ಜಂಬೂಸವಾರಿಯಲ್ಲಿ ಮೊದಲ ಬಾರಿ ಅಂಬಾರಿ ಹೊತ್ತಿದ್ದ ‘ಸೋಮಣ್ಣ’ ಆನೆ (36) ಬೆದರಿ ದಿಕ್ಕಾಪಾಲಾಗಿ ಓಡಿದ್ದರಿಂದ, 450 ಕೆ.ಜಿ. ತೂಕದ ಬೆಳ್ಳಿ ಅಂಬಾರಿ ನೆಲಕ್ಕುರುಳಿ ಹಾನಿಗೀಡಾಯಿತು. ಜೊತೆಗೆ ಎರಡು ಕಾರು ಹಾಗೂ ಮೂರು ಬೈಕ್ಗಳೂ ಜಖಂಗೊಂಡಿವೆ.ಅರಣ್ಯ ಇಲಾಖೆ ಸಿಬ್ಬಂದಿ ಆನೆಯನ್ನು ನಿಯಂತ್ರಣಕ್ಕೆ ತರಲು ಸಾಕಷ್ಟು ಸಮಯ ಹರಸಾಹಸಪಟ್ಟರು. ಕೊನೆಗೆ ಪಶುವೈದ್ಯರಾದ ಆನಂದ್ ಹಾಗೂ ಮುರಳಿಮನೋಹರ್ ಅವರ ತಂಡ ಅರಿವಳಿಕೆ ಚುಚ್ಚುಮದ್ದು (ಟ್ರಾಂಕ್ವಿಲೈಜರ್) ನೀಡಿ ಪ್ರಜ್ಞೆ ತಪ್ಪಿಸಿತು. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ನಟಿ ರಮ್ಯಾ, ಶಿವಮೊಗ್ಗದಲ್ಲಿ ಮೆರವಣಿಗೆಗಾಗಿ ಕೆಲವು ದಿನಗಳ ಹಿಂದಷ್ಟೇ ಶಿಬಿರದಿಂದ 'ಸೋಮಣ್ಣ' ಎಂಬ ಆನೆಯನ್ನು ಕರೆತರಲಾಗಿತ್ತು. ಅದು ಜನನಿಬಿಡ ಕಿರಿದಾದ ರಸ್ತೆಗಳಲ್ಲಿ ಸಾಗುವಾಗ ಭಯಗೊಂಡು ದಿಕ್ಕಾಪಾಲಾಗಿ ಓಡಿದೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಇಲ್ಲದಿದ್ದರೆ ಆನೆಯನ್ನೇ ಹೊಣೆಗಾರನನ್ನಾಗಿ ಮಾಡಿ ಶಿಕ್ಷಿಸಲಾಗುತ್ತಿತ್ತು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.This is Somanna, an elephant brought from a camp a few days ago for a procession in Shivamogga. He was led through narrow streets packed with people. Frightened and anxious, he ran amok. Thankfully no one was hurt, or he would have been the one punished.You can clearly see… pic.twitter.com/kNDdNdgPNS— Ramya/Divya Spandana (@divyaspandana) October 21, 2026 ಈ ಘಟನೆಗೂ ಮುನ್ನ ಸೋಮಣ್ಣ ಕುಂಟುತ್ತಲೇ ದಸರಾದಲ್ಲಿ ಪಾಲ್ಗೊಂಡಿದ್ದ ವಿಡಿಯೊವನ್ನು ರಮ್ಯಾ ಹಂಚಿಕೊಂಡಿದ್ದಾರೆ. ಸೋಮಣ್ಣ ಕಾಲಿನ ನೋವಿನಿಂದ ಕುಂಟುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಅದಕ್ಕೆ ತಕ್ಷಣದ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದ್ದು, ಚಿಕಿತ್ಸೆ ನೀಡಲು ಕರೆದೊಯ್ಯಲು ಲಾರಿ ವ್ಯವಸ್ಥೆ ಮಾಡಲು ಸಾಧ್ಯವಿರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ಸೋಮಣ್ಣನಿಗೆ ತಕ್ಷಣವೇ ಸೂಕ್ತ ಚಿಕಿತ್ಸೆಕೊಡಿಸುವಂತೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಲಾಗಿದೆ. ಪ್ರಾಣಿಗಳ ಹಿತದೃಷ್ಟಿಯಿಂದ, ಇಂತಹ ಮೆರವಣಿಗೆಗಳಿಗೆ ಶಿಬಿರದ ಆನೆಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.ಪಟಾಕಿ ಸದ್ದು; ಆಕ್ಷೇಪಇನ್ನು ರಾತ್ರಿ ಸುಮಾರು 3 ಗಂಟೆಯಾಗಿದ್ದರೂ 'ಫನ್ ವರ್ಲ್ಡ್'ನಲ್ಲಿ ಪಟಾಕಿ ಸಿಡಿಸುತ್ತಾ ಮತ್ತು ಜೋರು ಧ್ವನಿಯಲ್ಲಿ ಸಂಗೀತ ಹಾಕಲಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ರಾತ್ರಿ 10 ರಿಂದ ಬೆಳಿಗ್ಗೆ 6ರವರೆಗೆ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೇ, ವಿಶೇಷ ಅನುಮತಿ ಇದ್ದರೂ ಸಹ ಮಧ್ಯರಾತ್ರಿಯ ನಂತರ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಹೀಗಿದ್ದರೂ ಇದಕ್ಕೆ ಬ್ರೇಕ್ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.It's almost 3am, and Fun World is still bursting crackers and blasting music. The Supreme Court has prohibited bursting crackers between 10pm and 6am, and loudspeakers can't run past midnight even with special permission. I understand occasions call for some flexibility, but not… pic.twitter.com/wYBA4ToJz6— Ramya/Divya Spandana (@divyaspandana) October 21, 2026 ಸಂಭ್ರಮಾಚರಣೆಗಳಿಗೆ ಸ್ವಲ್ಪ ವಿನಾಯಿತಿ ನೀಡಬಹುದಾದರೂ, ಈ ಮಧ್ಯರಾತ್ರಿಯಲ್ಲಿ ಇದು ಸರಿಯಲ್ಲ. ಹತ್ತಿರದಲ್ಲೇ ಆಸ್ಪತ್ರೆಗಳಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿರಿಯ ನಾಗರಿಕರು ಮತ್ತು ಮಕ್ಕಳು ವಾಸಿಸುತ್ತಿದ್ದಾರೆ. ಈ ರೀತಿಯ ಚಟುವಟಿಕೆಗಳಿಂದ ನಿವಾಸಿಗಳಿಗೆ ತೊಂದರೆ ಆಗುತ್ತದೆ ಎಂದೂ ನಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಶಿವಮೊಗ್ಗ ದಸರಾ ಜಂಬೂಸವಾರಿ: ಓಡಿದ ಆನೆ, ಅಂಬಾರಿ ನೆಲಕ್ಕೆ