ಜಿಎಸ್ಟಿ: ನವೆಂಬರ್ 1ರಿಂದ ಬದಲಾವಣೆ ಜಾರಿ ?
ನವದೆಹಲಿ: ಇ–ವಾಣಿಜ್ಯ ವೇದಿಕೆ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುವ ಸಣ್ಣ ವರ್ತಕರಿಗೆ ಜಿಎಸ್ಟಿ ನೋಂದಣಿ ಪ್ರಕ್ರಿಯೆಯನ್ನು ಸರಳವಾಗಿಸುವ ಕ್ರಮವು ನವೆಂಬರ್ 1ರಿಂದ ಜಾರಿಗೆ ಬರುವ ನಿರೀಕ್ಷೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಇದಲ್ಲದೆ, ಜಿಎಸ್ಟಿ ನೋಂದಣಿಗೆ ಏಕರೂಪದ ದಾಖಲೆಗಳ ಸ್ವೀಕೃತಿ ವ್ಯವಸ್ಥೆ ಹಾಗೂ ₹10 ಸಾವಿರಕ್ಕಿಂತ ಹೆಚ್ಚಿನ ಮೊತ್ತಕ್ಕೆ ಮಾತ್ರ ನ

ನವದೆಹಲಿ: ಇ–ವಾಣಿಜ್ಯ ವೇದಿಕೆ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುವ ಸಣ್ಣ ವರ್ತಕರಿಗೆ ಜಿಎಸ್ಟಿ ನೋಂದಣಿ ಪ್ರಕ್ರಿಯೆಯನ್ನು ಸರಳವಾಗಿಸುವ ಕ್ರಮವು ನವೆಂಬರ್ 1ರಿಂದ ಜಾರಿಗೆ ಬರುವ ನಿರೀಕ್ಷೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಇದಲ್ಲದೆ, ಜಿಎಸ್ಟಿ ನೋಂದಣಿಗೆ ಏಕರೂಪದ ದಾಖಲೆಗಳ ಸ್ವೀಕೃತಿ ವ್ಯವಸ್ಥೆ ಹಾಗೂ ₹10 ಸಾವಿರಕ್ಕಿಂತ ಹೆಚ್ಚಿನ ಮೊತ್ತಕ್ಕೆ ಮಾತ್ರ ನೋಟಿಸ್ ಕಳುಹಿಸುವ ವ್ಯವಸ್ಥೆ ಕೂಡ ಅಂದಿನಿಂದ ಜಾರಿಗೆ ಬರುವ ಸಾಧ್ಯತೆ ಇದೆ.ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೆ ತರುವ ಪ್ರಸ್ತಾವಕ್ಕೆ ಜಿಎಸ್ಟಿ ಮಂಡಳಿಯು ಅಕ್ಟೋಬರ್ 8ರಂದು ನಡೆದ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಜಿಎಸ್ಟಿ ನೋಂದಣಿ, ವಿವರ ಸಲ್ಲಿಸುವಿಕೆ, ಪಾವತಿಸಿದ ತೆರಿಗೆ ಮೊತ್ತವನ್ನು ಮರಳಿ ಪಡೆಯುವುದು ಹಾಗೂ ನ್ಯಾಯನಿರ್ಣಯಕ್ಕೆ ಸಂಬಂಧಿಸಿದಂತೆ ಹಲವು ಬದಲಾವಣೆಗಳಿಗೆ ಒಪ್ಪಿಗೆ ನೀಡಲಾಗಿದೆ.ಆಡಳಿತಾತ್ಮಕ ಪ್ರಕ್ರಿಯೆಯ ಮೂಲಕವೇ ಜಾರಿಗೆ ತರಬಹುದಾದ ಕೆಲವು ಬದಲಾವಣೆಗಳನ್ನು ನವೆಂಬರ್ 1ರಿಂದ ಹಂತ ಹಂತವಾಗಿ ಅನುಷ್ಠಾನಕ್ಕೆ ತರಲಾಗುತ್ತದೆ. ಜಿಎಸ್ಟಿ ಕಾನೂನಿಗೆ ತಿದ್ದುಪಡಿ ತಂದ ನಂತರವೇ ಜಾರಿಗೆ ತರಬಹುದಾದ ಬದಲಾವಣೆಗಳು 2027ರ ಏಪ್ರಿಲ್ 1ರಿಂದ ಅನ್ವಯವಾಗಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಸಂಬಂಧಪಟ್ಟ ಬದಲಾವಣೆಗಳ ಕುರಿತಾದ ಅಧಿಸೂಚನೆಗಳು ಹಾಗೂ ಸುತ್ತೋಲೆಗಳಿಗೆ ಕಾನೂನು ಇಲಾಖೆಯು ಈಗಾಗಲೇ ಒಪ್ಪಿಗೆ ನೀಡಿದೆ ಎಂದು ಗೊತ್ತಾಗಿದೆ. ಅಧಿಸೂಚನೆಗಳು, ಸುತ್ತೋಲೆಗಳು ಶುಕ್ರವಾರ ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.