ಸೀಲ್ಡ್ ಚೀಲದಲ್ಲಿ ಕಳಪೆ ಗೊಬ್ಬರ: ಮಾರಾಟಗಾರ ಹೊಣೆಯಲ್ಲ ಎಂದ ಹೈಕೋರ್ಟ್
ಬೆಂಗಳೂರು: ‘ಹೊಲಿದ (ಸೀಲ್ಡ್) ಚೀಲಗಳ ಒಳಗಿನ ಗೊಬ್ಬರದ ಗುಣಮಟ್ಟ ಕಳಪೆಯಾಗಿದ್ದರೆ ಅದರ ಮಾರಾಟಗಾರನನ್ನು (ಡೀಲರ್) ಕ್ರಿಮಿನಲ್ ಪ್ರಕರಣದಲ್ಲಿ ಹೊಣೆಗಾರನನ್ನಾಗಿ ಮಾಡಲು ಆಗದು’ ಎಂದು ಹೈಕೋರ್ಟ್ ಆದೇಶಿಸಿದೆ.ಈ ಸಂಬಂಧ ಬಾಗಲಕೋಟೆ ಜಿಲ್ಲೆಯ ಶಿರೂರಿನ ಗೊಬ್ಬರ ಪೂರೈಕೆದಾರ ಅಲ್ಲಾಭಕ್ಷ ಎಂ.ಮಕಾನ್ದಾರ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಟಿ. ವೆಂಕಟೇಶ್

ಬೆಂಗಳೂರು: ‘ಹೊಲಿದ (ಸೀಲ್ಡ್) ಚೀಲಗಳ ಒಳಗಿನ ಗೊಬ್ಬರದ ಗುಣಮಟ್ಟ ಕಳಪೆಯಾಗಿದ್ದರೆ ಅದರ ಮಾರಾಟಗಾರನನ್ನು (ಡೀಲರ್) ಕ್ರಿಮಿನಲ್ ಪ್ರಕರಣದಲ್ಲಿ ಹೊಣೆಗಾರನನ್ನಾಗಿ ಮಾಡಲು ಆಗದು’ ಎಂದು ಹೈಕೋರ್ಟ್ ಆದೇಶಿಸಿದೆ.ಈ ಸಂಬಂಧ ಬಾಗಲಕೋಟೆ ಜಿಲ್ಲೆಯ ಶಿರೂರಿನ ಗೊಬ್ಬರ ಪೂರೈಕೆದಾರ ಅಲ್ಲಾಭಕ್ಷ ಎಂ.ಮಕಾನ್ದಾರ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯಕ್ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಮಾನ್ಯ ಮಾಡಿದೆ.‘ಅರ್ಜಿದಾರರು ಗೊಬ್ಬರದ ಉತ್ಪಾದನೆಗೆ ಅಥವಾ ಅದರ ಗುಣಮಟ್ಟ ನಿಯಂತ್ರಣಕ್ಕೆ ಹೊಣೆಗಾರರಾಗಿದ್ದರು ಎಂಬುದನ್ನು ತೋರಿಸುವ ಯಾವುದೇ ನಿರ್ದಿಷ್ಟ ಆರೋಪಗಳು ದೂರಿನಲ್ಲಿ ಇಲ್ಲ. ಅರ್ಜಿದಾರರು ಕೇವಲ ಮಾರಾಟಗಾರ ಆಗಿದ್ದು, ಸೀಲ್ ಮಾಡಲಾದ ಚೀಲಗಳಲ್ಲಿ ಬಂದ ಗೊಬ್ಬರದ ಗುಣಮಟ್ಟ ಕಳಪೆಯಾಗಿರುವುದಕ್ಕೆ ಅವರನ್ನು ನೇರ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿದೆ. ಕರ್ನಾಟಕ ಹೈಕೋರ್ಟ್ 2016ರಲ್ಲಿ ಸಂಜಯ್ ಗೌಡ ವಿರುದ್ಧದ ಪ್ರಕರಣದಲ್ಲಿ ನೀಡಿರುವ ತೀರ್ಪನ್ನು ಉಲ್ಲೇಖಿಸಿರುವ ನ್ಯಾಯಪೀಠ, ‘‘ರಸಗೊಬ್ಬರ ನಿಯಂತ್ರಣ ಆದೇಶದ ಪಾಲನೆ ಮತ್ತು ಗುಣಮಟ್ಟ ನಿಯಂತ್ರಣಕ್ಕೆ ಕಂಪನಿಯಿಂದ ಅಧಿಕೃತವಾಗಿ ನೇಮಿಸಲಾದ ವ್ಯಕ್ತಿಯ ವಿರುದ್ಧವಷ್ಟೇ ಕ್ರಮ ಕೈಗೊಳ್ಳಬಹುದು. ಕಂಪನಿಯಲ್ಲಿರುವ ಪ್ರತಿಯೊಬ್ಬ ಅಧಿಕಾರಿ ಅಥವಾ ಮಾರಾಟಗಾರರನ್ನು ಸ್ವಯಂಪ್ರೇರಿತವಾಗಿ ಆರೋಪಿಯನ್ನಾಗಿ ಮಾಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದೆ.ಪ್ರಕರಣ: ಅರ್ಜಿದಾರರ ಗೊಬ್ಬರದ ಅಂಗಡಿಯಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿ ಗೊಬ್ಬರದ ಮಾದರಿ ವಶಕ್ಕೆ ಪಡೆದಿದ್ದರು. ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವರದಿಯಲ್ಲಿ, ವಶಪಡಿಸಿಕೊಂಡ ಗೊಬ್ಬರವು ನಿಗದಿತ ಮಾನದಂಡಗಳಿಗೆ ಹೊಂದಿಕೆಯಾಗದ ಹಾಗೂ ಕಳಪೆ ಗುಣಮಟ್ಟದ್ದಾಗಿದೆ ಎಂದು ಕಾಣಿಸಲಾಗಿತ್ತು. ಈ ವರದಿಯ ಆಧಾರದಡಿ ಕಂಪನಿ, ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳು ಮತ್ತು ಮಾರಾಟಗಾರರ ವಿರುದ್ಧ; ಅಗತ್ಯ ವಸ್ತುಗಳ ಕಾಯ್ದೆ-1955ರ ಕಲಂ 3 ಮತ್ತು 7 ಹಾಗೂ ರಸಗೊಬ್ಬರ ನಿಯಂತ್ರಣ ಆದೇಶ-1985ರ 19 ಮತ್ತು 21ರ ಅಡಿಯಲ್ಲಿ ಪ್ರಕರಣ ಕ್ರಿಮಿನಲ್ ದಾಖಲಿಸಲಾಗಿತ್ತು.