ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ತಜ್ಞರ ಸಮಿತಿ
ಬೆಂಗಳೂರು: ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶಕ್ಕೆ ಬೇಡಿಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗಾಗಿ ಫಲಿತಾಂಶ ಆಧಾರಿತ ಮಾದರಿಯನ್ನು ರೂಪಿಸಿ, ಅದರ ಅನುಷ್ಠಾನದ ಮೇಲ್ವಿಚಾರಣೆ ನಡೆಸಲು ಉನ್ನತ ಶಿಕ್ಷಣ ಇಲಾಖೆಯು ತಜ್ಞರ ಸಮಿತಿಯನ್ನು ರಚಿಸಿದೆ.ಈ ವರ್ಷ ರಾಜ್ಯದ 17 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ಒಟ್ಟು 4,

ಬೆಂಗಳೂರು: ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶಕ್ಕೆ ಬೇಡಿಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗಾಗಿ ಫಲಿತಾಂಶ ಆಧಾರಿತ ಮಾದರಿಯನ್ನು ರೂಪಿಸಿ, ಅದರ ಅನುಷ್ಠಾನದ ಮೇಲ್ವಿಚಾರಣೆ ನಡೆಸಲು ಉನ್ನತ ಶಿಕ್ಷಣ ಇಲಾಖೆಯು ತಜ್ಞರ ಸಮಿತಿಯನ್ನು ರಚಿಸಿದೆ.ಈ ವರ್ಷ ರಾಜ್ಯದ 17 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ಒಟ್ಟು 4,704 ಸೀಟುಗಳ ಪೈಕಿ 1,402 ಸೀಟುಗಳು ಖಾಲಿ ಉಳಿದಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಕೌಶಲ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ತಾಂತ್ರಿಕ ಶಿಕ್ಷಣದ ಗುಣಮಟ್ಟ ಸುಧಾರಿಸಲು ಇಲಾಖೆ ಮುಂದಾಗಿದೆ.ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಮತ್ತು ರಾಷ್ಟ್ರೀಯ ಮಾನ್ಯತಾ ಮಂಡಳಿ (NBA) ನಿಗದಿಪಡಿಸಿರುವ ಕಲಿಕಾ ಫಲಿತಾಂಶಗಳನ್ನು ವಿದ್ಯಾರ್ಥಿಗಳು ಸಾಧಿಸಲು ನೆರವಾಗುವುದು ಈ ಸಮಿತಿಯ ಪ್ರಮುಖ ಉದ್ದೇಶವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.ವಿದ್ಯಾರ್ಥಿಗಳಿಗೆ ಕೇವಲ ಪಠ್ಯಕ್ರಮದ ಜ್ಞಾನ ನೀಡುವುದಷ್ಟೇ ಅಲ್ಲದೆ, ಪ್ರಾಯೋಗಿಕ ಕೌಶಲ, ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ, ನಾವೀನ್ಯತೆ ಮತ್ತು ವೃತ್ತಿಪರ ನೈತಿಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಸಚಿವರು ಹೇಳಿದ್ದಾರೆ.ಸಮಿತಿಯ ಪ್ರಮುಖ ಜವಾಬ್ದಾರಿಗಳುವಿದ್ಯಾರ್ಥಿಗಳ ಕೌಶಲ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಸಮಿತಿ ಹಲವು ಕ್ರಮಗಳನ್ನು ಕೈಗೊಳ್ಳಲಿದೆ.ಯೋಜನೆ ಆಧಾರಿತ ಕಲಿಕೆ, ವಿವಿಧ ವಿಷಯಗಳ ಅಧ್ಯಯನ ಮತ್ತು ಉದ್ಯಮಗಳೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ಕಲ್ಪಿಸಲಿದೆ.ವಿದ್ಯಾರ್ಥಿಗಳ ಕೌಶಲ, ಸಾಧನೆ ಮತ್ತು ಪ್ರಗತಿಯನ್ನು ದಾಖಲಿಸಲು ಡಿಜಿಟಲ್ ಪ್ರೊಫೈಲ್ ಸಿದ್ಧಪಡಿಸಲಿದೆ.ವಿದ್ಯಾರ್ಥಿಗಳ ಕಲಿಕೆಯಲ್ಲಿನ ಕೊರತೆಗಳನ್ನು ಗುರುತಿಸಲು ಕೃತಕ ಬುದ್ಧಿಮತ್ತೆ (AI) ಆಧಾರಿತ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು.ವಿದ್ಯಾರ್ಥಿಗಳಿಗೆ ವೈಯಕ್ತಿಕ ಅಭಿವೃದ್ಧಿ ಯೋಜನೆ ಮತ್ತು ಉದ್ಯೋಗದ ಕುರಿತು ಮಾರ್ಗದರ್ಶನ ನೀಡಲು ಕ್ರಮ ಕೈಗೊಳ್ಳಲಿದೆ.ಇಂಟರ್ನ್ಶಿಪ್, ಉದ್ಯೋಗಾವಕಾಶ, ಸಂಶೋಧನೆ, ಉದ್ಯಮಶೀಲತೆ ಮತ್ತು ಉನ್ನತ ಶಿಕ್ಷಣಕ್ಕೆ ಸೂಕ್ತ ವಿದ್ಯಾರ್ಥಿಗಳನ್ನು ಗುರುತಿಸಲು ನೆರವಾಗಲಿದೆ.ಕಾಲೇಜುಗಳಲ್ಲಿನ ವಿವಿಧ ತಾಂತ್ರಿಕ ವ್ಯವಸ್ಥೆಗಳ ಕುರಿತು ಒಂದೇ ಕೇಂದ್ರದ ಮೂಲಕ ಮೇಲ್ವಿಚಾರಣೆ ಮಾಡುವ ವ್ಯವಸ್ಥೆ ರೂಪಿಸುವುದು.ವಿದ್ಯಾರ್ಥಿಗಳ ಪ್ರಗತಿ ಅಳೆಯಲು ನಿರ್ದಿಷ್ಟ ಗುರಿ, ಕಾಲಮಿತಿ ಮತ್ತು ಕಾರ್ಯಯೋಜನೆಗಳನ್ನು ಸಿದ್ಧಪಡಿಸುವುದು.‘ಸರ್ಕಾರ ನೇಮಿಸಿರುವ ತಜ್ಞರ ಸಮಿತಿಯು ವಿದ್ಯಾರ್ಥಿಗಳ ಮಾಹಿತಿಯ ಗುಣಮಟ್ಟ, ತರಬೇತಿ ಮತ್ತು ನಿಯಮಿತ ಪರಿಶೀಲನೆಯ ಜವಾಬ್ದಾರಿಯನ್ನೂ ನಿರ್ವಹಿಸಲಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದಲ್ಲಿ ಆಗುವ ಬದಲಾವಣೆಗಳನ್ನು ಅಳೆಯುವ ವ್ಯವಸ್ಥೆಯನ್ನೂ ರೂಪಿಸಲಿದೆ’ ಎಂದು ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.ಈ ಸಮಿತಿಗೆ ದೇಶದ ವಿವಿಧ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಪ್ರಾಧ್ಯಾಪಕರನ್ನು ಆಯ್ಕೆ ಮಾಡಲಾಗಿದೆ. ಐಐಟಿ ಮದ್ರಾಸ್, ತಮಿಳುನಾಡಿನ ಬನ್ನಾರಿ ಅಮ್ಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಕಡಪಾದ ಯೋಗಿ ವೇಮನ ವಿಶ್ವವಿದ್ಯಾಲಯದ ತಜ್ಞರು ಸಮಿತಿಯಲ್ಲಿದ್ದಾರೆ.