ಉಡುಪಿ | ಗಂಗಾರತಿ, ಜಲಸ್ತಂಭನದೊಂದಿಗೆ ಉಚ್ಚಿಲ ದಸರಾ ವೈಭವಕ್ಕೆ ತೆರೆ
ಉಡುಪಿ: ಕರಾವಳಿಯ ಪ್ರಸಿದ್ಧ ಉಚ್ಚಿಲ ದಸರಾ (Uchila Dasara) ಮಹೋತ್ಸವವು ಗಂಗಾರತಿ ಹಾಗೂ ಜಲಸ್ತಂಭನದೊಂದಿಗೆ ವೈಭವಯುತವಾಗಿ ಸಂಪನ್ನಗೊಂಡಿತು. ಹತ್ತು ದಿನಗಳ ಕಾಲ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಶಾರದಾ ಮಾತೆ ಸೇರಿದಂತೆ ನವದುರ್ಗೆಯರ ವಿಗ್ರಹಗಳನ್ನು 11ನೇ ದಿನ ಶೋಭಾಯಾತ್ರೆಯ ಮೂಲಕ ಕಾಪು ಕಡಲತೀರಕ್ಕೆ ಕೊಂಡೊಯ್ದು ಧಾರ್ಮಿಕ ವಿಧಿವಿಧಾನಗಳೊಂ

ಉಡುಪಿ: ಕರಾವಳಿಯ ಪ್ರಸಿದ್ಧ ಉಚ್ಚಿಲ ದಸರಾ (Uchila Dasara) ಮಹೋತ್ಸವವು ಗಂಗಾರತಿ ಹಾಗೂ ಜಲಸ್ತಂಭನದೊಂದಿಗೆ ವೈಭವಯುತವಾಗಿ ಸಂಪನ್ನಗೊಂಡಿತು. ಹತ್ತು ದಿನಗಳ ಕಾಲ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಶಾರದಾ ಮಾತೆ ಸೇರಿದಂತೆ ನವದುರ್ಗೆಯರ ವಿಗ್ರಹಗಳನ್ನು 11ನೇ ದಿನ ಶೋಭಾಯಾತ್ರೆಯ ಮೂಲಕ ಕಾಪು ಕಡಲತೀರಕ್ಕೆ ಕೊಂಡೊಯ್ದು ಧಾರ್ಮಿಕ ವಿಧಿವಿಧಾನಗಳೊಂದಿಗೆ ಜಲಸ್ತಂಭನ ನೆರವೇರಿಸಲಾಯಿತು. ಉಚ್ಚಿಲ ದೇವಸ್ಥಾನದ ಮುಖ್ಯದ್ವಾರದ ಮೂಲಕ ನವದುರ್ಗೆಯರ ವಿಗ್ರಹಗಳನ್ನು ಹೊರತರುತ್ತಿದ್ದಂತೆ ಪುಷ್ಪವೃಷ್ಟಿಯ ಮೂಲಕ ಭಕ್ತರು ಭಕ್ತಿಭಾವ ಮೆರೆದರು. ದಸರಾ ರೂವಾರಿ ನಾಡೋಜ ಡಾ. ಜಿ.ಶಂಕರ್ ಸೇರಿದಂತೆ ಗಣ್ಯರು ನವದುರ್ಗೆಯರಿಗೆ ಪುಷ್ಪನಮನ ಸಲ್ಲಿಸಿದರು. ಡ್ರೋನ್ ಮೂಲಕ ಸುರಿದ ಪುಷ್ಪವೃಷ್ಟಿ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು. ಬಳಿಕ ನಡೆದ ಬೃಹತ್ ಶೋಭಾಯಾತ್ರೆಯಲ್ಲಿ ನವದುರ್ಗೆಯರ ವಿಗ್ರಹಗಳ ಜೊತೆಗೆ ಶಾರದಾ ಮಾತೆಯ ವೇಷದಲ್ಲಿದ್ದ ಮಕ್ಕಳು ಹಾಗೂ ಯುವತಿಯರು ಗಮನ ಸೆಳೆದರು. ವಿವಿಧ ಆಕರ್ಷಕ ಟ್ಯಾಬ್ಲೋಗಳು ನೋಡುಗರನ್ನು ರಂಜಿಸಿದರೆ, ಡಿಜೆ ಹಾಡುಗಳ ಲಯಕ್ಕೆ ಮಹಿಳೆಯರು ಮತ್ತು ಯುವತಿಯರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಭಕ್ತರು ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆಯಿಂದ ಶೋಭಾಯಾತ್ರೆ ಅದ್ಧೂರಿಯಾಗಿ ಸಾಗಿತು. ಶೋಭಾಯಾತ್ರೆ ಕಾಪು ಕಡಲತೀರ ತಲುಪಿದ ಬಳಿಕ ಅಲ್ಲಿ ನಿರ್ಮಿಸಲಾಗಿದ್ದ ಬೃಹತ್ ವೇದಿಕೆಯಲ್ಲಿ ನವದುರ್ಗೆಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ಕಾಶಿಯ ಪಂಡಿತರು ಧಾರ್ಮಿಕ ವಿಧಿವಿಧಾನಗಳೊಂದಿಗೆ ನವದುರ್ಗೆಯರಿಗೆ ಗಂಗಾರತಿ ಸಲ್ಲಿಸಿದರು. ಬಳಿಕ ಕಡಲತೀರದಲ್ಲಿ ಪುಷ್ಪವೃಷ್ಟಿ ಸುರಿಯುವ ಮೂಲಕ ದೇವಿಯರಿಗೆ ಭಕ್ತಿಪೂರ್ವಕವಾಗಿ ವಿದಾಯ ಕೋರಲಾಯಿತು. ಕಡಲಿನಲ್ಲಿ ಬೃಹತ್ ಅಲೆಗಳು ಅಪ್ಪಳಿಸುತ್ತಿದ್ದಂತೆ ಏಕಕಾಲದಲ್ಲಿ ನವದುರ್ಗೆಯರ ವಿಗ್ರಹಗಳ ಜಲಸ್ತಂಭನ ನಡೆಯಿತು. ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು ಭಕ್ತಿಭಾವದಿಂದ ದೇವಿಯರಿಗೆ ಅಂತಿಮ ನಮನ ಸಲ್ಲಿಸಿದರು. ಸಮುದ್ರದ ನಡುವೆ ಬೋಟುಗಳ ಮೂಲಕ ನಡೆದ ವಿದ್ಯುತ್ ದೀಪಗಳ ಪ್ರದರ್ಶನ ಹಾಗೂ ಆಕರ್ಷಕ ಸುಡುಮದ್ದು ಪ್ರದರ್ಶನ ಉಚ್ಚಿಲ ದಸರಾ ವೈಭವಕ್ಕೆ ಕಳೆ ತುಂಬಿದವು. ಧಾರ್ಮಿಕ ಶ್ರದ್ಧೆ, ಭಕ್ತಿ, ಸಾಂಸ್ಕೃತಿಕ ಸಂಭ್ರಮ ಹಾಗೂ ಮನಮೋಹಕ ಬೆಳಕಿನ ಚಿತ್ತಾರಗಳ ಸಮ್ಮಿಲನದೊಂದಿಗೆ ಉಚ್ಚಿಲ ದಸರಾ ಮಹೋತ್ಸವಕ್ಕೆ ಅದ್ಧೂರಿ ತೆರೆ ಬಿದ್ದಿತು.