ಏಷ್ಯನ್ ಪ್ಯಾರಾ ಕ್ರೀಡೆಗಳಲ್ಲಿ ದುರ್ವರ್ತನೆ: ತವರಿಗೆ ಆರೋಪಿ ಕ್ರೀಡಾಪಟು
ನವದೆಹಲಿ: ಅನುಚಿತ ವರ್ತನೆ ಆರೋಪದ ಕಾರಣ ಭಾರತದ ಕ್ರೀಡಾಪಟು ಒಬ್ಬರನ್ನು ಏಷ್ಯನ್ ಪ್ಯಾರಾ ಕ್ರೀಡೆಗಳಿಂದ ಸ್ವದೇಶಕ್ಕೆ ಕಳುಹಿಸಲಾಗಿದೆ. ವಾರಾಂತ್ಯದಲ್ಲಿ ಕ್ರೀಡೆಗಳ ಮುಕ್ತಾಯದ ನಂತರ ಸಂಭವನೀಯ ಜೀವಾವಧಿ ನಿಷೇಧ ಸೇರಿದಂತೆ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಭಾರತ ಪ್ಯಾರಾಲಿಂಪಿಕ್ ಸಮಿತಿ (ಪಿಸಿಐ) ಗುರುವಾರ ತಿಳಿಸಿದೆ.ಕ್ರೀಡಾಪಟುವಿನ ಹೆಸರನ್ನ

ನವದೆಹಲಿ: ಅನುಚಿತ ವರ್ತನೆ ಆರೋಪದ ಕಾರಣ ಭಾರತದ ಕ್ರೀಡಾಪಟು ಒಬ್ಬರನ್ನು ಏಷ್ಯನ್ ಪ್ಯಾರಾ ಕ್ರೀಡೆಗಳಿಂದ ಸ್ವದೇಶಕ್ಕೆ ಕಳುಹಿಸಲಾಗಿದೆ. ವಾರಾಂತ್ಯದಲ್ಲಿ ಕ್ರೀಡೆಗಳ ಮುಕ್ತಾಯದ ನಂತರ ಸಂಭವನೀಯ ಜೀವಾವಧಿ ನಿಷೇಧ ಸೇರಿದಂತೆ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಭಾರತ ಪ್ಯಾರಾಲಿಂಪಿಕ್ ಸಮಿತಿ (ಪಿಸಿಐ) ಗುರುವಾರ ತಿಳಿಸಿದೆ.ಕ್ರೀಡಾಪಟುವಿನ ಹೆಸರನ್ನಾಗಲಿ, ಅವರ ಎಸಗಿದ ಕೃತ್ಯದ ಸ್ವರೂಪವನ್ನಾಗಲಿ ಸಮಿತಿ ಬಹಿರಂಗಪಡಿಸಿಲ್ಲ. ‘ಸದ್ಯ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತ ತಂಡಕ್ಕೆ ಬೆಂಬಲ ನೀಡುವುದರ ಕಡೆಯಷ್ಟೇ ನಮ್ಮ ಗಮನ ಇರಲಿದೆ’ ಎಂದು ಹೇಳಿದೆ. ಕ್ರೀಡೆಗಳು ಶನಿವಾರ ಮುಕ್ತಾಯಗೊಳ್ಳಲಿವೆ.ಯಾವುದೇ ರೀತಿಯ ಲೈಂಗಿಕ ದುರ್ವರ್ತನೆ, ಇತರ ಕ್ರೀಡಾಪಟುವಿನ ಘನತೆಗೆ, ಸುರಕ್ಷತೆಗೆ ಧಕ್ಕೆ ತರುವಂತಹ ಯಾವುದೇ ವರ್ತನೆಯ ಬಗ್ಗೆ ಪ್ಯಾರಾಲಿಂಪಿಕ್ ಸಮಿತಿ ಶೂನ್ಯ ಸಹಿಷ್ಣುತೆ ನೀತಿ ಹೊಂದಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.‘ಈಗಿನ ವಿಷಯಕ್ಕೆ ಸಂಬಂಧಿಸಿ, ಕ್ರೀಡಾಪಟುವಿನ ವಿರುದ್ಧ ತಂಡದ ಷೆಫ್ ಡಿ ಮಿಷನ್ (ಸಿಡಿಎಂ) ಅವರು ಜೀವಾವಧಿ ನಿಷೇಧ ಸೇರಿದಂತೆ ಕಠಿಣ ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ. ಅವರನ್ನು ಜಪಾನ್ನಿಂದ ದೇಶಕ್ಕೆ ವಾಪಸು ಕಳಿಸಲಾಗಿದೆ’ ಎಂದು ಹೇಳಿದೆ.