ದಾಂಪತ್ಯ ಜೀವನಕ್ಕೆ 25 ವರ್ಷ: ಅತ್ತೆಯ ಮದುವೆ ಸೀರೆಯುಟ್ಟು ಪ್ರಿಯಾ ಸುದೀಪ್ ಸಂಭ್ರಮ
ನಟ ಕಿಚ್ಚ ಸುದೀಪ್ ಹಾಗೂ ಪ್ರಿಯಾ ಮದುವೆಯಾಗಿ 25 ವರ್ಷಗಳು ಕಳೆದಿವೆ. ಈ ಹಿನ್ನೆಲೆ ಸುದೀಪ್ ಮನೆಯಲ್ಲಿ ಇತ್ತೀಚೆಗೆ ಅದ್ದೂರಿಯಾಗಿ, ಶಾಸ್ತ್ರೋಕ್ತವಾಗಿ ಈ ಸಂಭ್ರಮವನ್ನು ಆಚರಿಸಲಾಗಿದೆ. ಈ ಕಾರ್ಯಕ್ರಮದ ಚೆಂದದ ವಿಡಿಯೊ ಹಂಚಿಕೊಂಡಿರುವ ಸುದೀಪ್, ದಾಂಪತ್ಯ ಜೀವನದ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ವಿಡಿಯೊದಲ್ಲಿ ಸುದೀಪ್ ಮತ್ತು ಪ್ರಿಯಾ ತಮ್ಮ ಜೀವನದ ಅಮೂಲ

ನಟ ಕಿಚ್ಚ ಸುದೀಪ್ ಹಾಗೂ ಪ್ರಿಯಾ ಮದುವೆಯಾಗಿ 25 ವರ್ಷಗಳು ಕಳೆದಿವೆ. ಈ ಹಿನ್ನೆಲೆ ಸುದೀಪ್ ಮನೆಯಲ್ಲಿ ಇತ್ತೀಚೆಗೆ ಅದ್ದೂರಿಯಾಗಿ, ಶಾಸ್ತ್ರೋಕ್ತವಾಗಿ ಈ ಸಂಭ್ರಮವನ್ನು ಆಚರಿಸಲಾಗಿದೆ. ಈ ಕಾರ್ಯಕ್ರಮದ ಚೆಂದದ ವಿಡಿಯೊ ಹಂಚಿಕೊಂಡಿರುವ ಸುದೀಪ್, ದಾಂಪತ್ಯ ಜೀವನದ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ವಿಡಿಯೊದಲ್ಲಿ ಸುದೀಪ್ ಮತ್ತು ಪ್ರಿಯಾ ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಕಳೆದ ಬಗ್ಗೆ ಹಂಚಿಕೊಂಡಿದ್ದಾರೆ. ಸುದೀಪ್ ಮಾತನಾಡಿ, ‘ಈ 25 ವರ್ಷಗಳ ಸುಂದರ ಪಯಣಕ್ಕೆ ಧನ್ಯವಾದ ಪ್ರಿಯಾ. ಈ 25 ವರ್ಷಗಳನ್ನೂ ನಿನಗೆ ಅರ್ಪಿಸುತ್ತೇನೆ, ನಿನ್ನದೇ ಕೊಡುಗೆಯಿದು. ನನ್ನ ಅಮ್ಮನ 62 ವರ್ಷಗಳ ಹಿಂದಿನ ಸೀರೆಯನ್ನು ಉಟ್ಟಿರುವುದನ್ನು ಕಂಡರೆ, ಈ ಕಾರ್ಯಕ್ರಮದಲ್ಲಿ ಅಮ್ಮ ಇದ್ದಂತೆ ಭಾಸವಾಗುತ್ತಿದೆ. ಎಲ್ಲದಕ್ಕೂ ಧನ್ಯವಾದ’ ಎಂದು ಹೇಳಿದ್ದಾರೆ.ಪ್ರಿಯಾ ಸುದೀಪ್ ಮಾತನಾಡಿ, ‘25 ವರ್ಷಗಳ ಹಿಂದೆ, ಹಿರಿಯರ ಮಾರ್ಗದರ್ಶನದಲ್ಲಿ, ಕೈಹಿಡಿದ ನಾವು, ಜೀವನದ ಪಯಣವನ್ನು ಆರಂಭಿಸಿದೆವು. ನಮ್ಮನ್ನು ಕುಟುಂಬ ಪ್ರೀತಿಯಿಂದ ಅಪ್ಪಿಕೊಂಡಿದೆ. ಅವೆರಲ್ಲರ ಸಮ್ಮುಖದಲ್ಲಿ ನಮ್ಮ ಅತ್ತೆಯವರ ಮದುವೆಯ ಸೀರೆ, ಅವರದೇ ಚಿನ್ನದ ಬಳೆಯನ್ನು ಧರಿಸಿದ್ದೇನೆ. ಪ್ರೀತಿಯಿಂದ ನೀಡಿದ ಈ ಉಡುಗೊರೆಗಳನ್ನು, ಅಪಾರ ಗೌರವದೊಂದಿಗೆ ಇರಿಸಿಕೊಂಡಿದ್ದೇವೆ. ಈ ಸೀರೆಯ ಪ್ರತಿ ಮಡಿಕೆಯಲ್ಲೂ, ಬಳೆಯ ಹೊಳಪಿನಲ್ಲೂ ಅತ್ತೆಯವರು ನಮ್ಮೊಂದಿಗಿದ್ದಾರೆ. ಹಿರಿಯರನ್ನು ಗೌರವಿಸುವುದೆಂದರೆ ಕೇವಲ ಅವರನ್ನು ನೆನಪಿಸಿಕೊಳ್ಳುವುದಷ್ಟೇ ಅಲ್ಲ; ನಾವು ಪ್ರೀತಿಸುವ ರೀತಿಯಲ್ಲಿ, ನಾವು ಕಟ್ಟುವ ಮನೆಗಳಲ್ಲಿ, ನಾವು ಪಾಲಿಸುವ ಸಂಪ್ರದಾಯಗಳ ಮೂಲಕ ಅವರು ನಮ್ಮಲ್ಲಿ ಜೀವಂತವಾಗಿರುವಂತೆ ಮಾಡುವುದೂ ಹೌದು. ವಾಸ್ತವವಾಗಿ, ಸಂಪ್ರದಾಯವೆಂಬುದು ಒಂದು ಸಾಮೂಹಿಕ ಗಾಯನವಿದ್ದಂತೆ; ಇದರಲ್ಲಿ ನಮ್ಮ ಪೂರ್ವಜರು ಇಂದಿಗೂ ಹಾಡುತ್ತಿರುತ್ತಾರೆ, ನಾವು ಅವರ ಆ ಸುಂದರ ಸ್ವರಗಳನ್ನು ಮುಂದಕ್ಕೆ ಕೊಂಡೊಯ್ಯುವವರಾಗಿದ್ದೇವೆ. ನಮ್ಮನ್ನು ಬೆಳೆಸಿದ, ನಮಗೆ ಆಶೀರ್ವದಿಸಿದ, ನಮ್ಮೊಂದಿಗೆ ಹೆಜ್ಜೆ ಹಾಕುತ್ತಲೇ ಇರುವ ಎಲ್ಲರಿಗೂ ಧನ್ಯವಾದಗಳು’ ಎಂದಿದ್ದಾರೆ. ಈ ಕಾರ್ಯಕ್ರಮದಲ್ಲಿ ಗಾಯಕ ವಿಜಯ್ ಪ್ರಕಾಶ್ ದಂಪತಿ ‘ಸೀತಾ ಕಲ್ಯಾಣ’ ಹಾಡನ್ನು ಹಾಡಿ ಸಂಭ್ರಮವನ್ನು ವಿಶೇಷವಾಗಿಸಿದ್ದಾರೆ. ಚಂದನವನದ ತಾರೆಯರು ಈ ಸಂಭ್ರಮದಲ್ಲಿ ಭಾಗಿಯಾಗಿ ಸುದೀಪ್ ಮತ್ತು ಪ್ರಿಯಾ ಅವರಿಗೆ ಶುಭಾಶಯ ತಿಳಿಸಿದ್ದಾರೆ. View this post on Instagram