ಜಿಯೋ ಐಪಿಒಗೆ 7.40 ಲಕ್ಷ ಕೋಟಿ ಬಿಡ್ – ಅರ್ಜಿ ಸಲ್ಲಿಕೆಯಲ್ಲಿ ವಿಶ್ವದಾಖಲೆ
ಮುಂಬೈ: ಭಾರತದ ಷೇರು ಮಾರುಕಟ್ಟೆ(Indian Share Market) ಇತಿಹಾಸದಲ್ಲೇ ಅತಿ ದೊಡ್ಡ ಸಾರ್ವಜನಿಕ ಕೊಡುಗೆ (IPO) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ರಿಲಯನ್ಸ್(Reliance) ಸಮೂಹದ ಜಿಯೋ ಪ್ಲಾಟ್ಫಾರ್ಮ್ಸ್(Jio Platforms) ಐಪಿಒ ಶುಕ್ರವಾರ ಅಭೂತಪೂರ್ವ ಬಿಡ್ಡಿಂಗ್ನೊಂದಿಗೆ ಮುಕ್ತಾಯಗೊಂಡಿದೆ. ಆ್ಯಂಕರ್ ಹೂಡಿಕೆದಾರರ ಬೇಡಿಕೆ ಸೇರಿದಂತೆ ಒಟ್ಟು ಬರೋಬ್ಬರಿ 7.40 ಲಕ್

ಮುಂಬೈ: ಭಾರತದ ಷೇರು ಮಾರುಕಟ್ಟೆ(Indian Share Market) ಇತಿಹಾಸದಲ್ಲೇ ಅತಿ ದೊಡ್ಡ ಸಾರ್ವಜನಿಕ ಕೊಡುಗೆ (IPO) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ರಿಲಯನ್ಸ್(Reliance) ಸಮೂಹದ ಜಿಯೋ ಪ್ಲಾಟ್ಫಾರ್ಮ್ಸ್(Jio Platforms) ಐಪಿಒ ಶುಕ್ರವಾರ ಅಭೂತಪೂರ್ವ ಬಿಡ್ಡಿಂಗ್ನೊಂದಿಗೆ ಮುಕ್ತಾಯಗೊಂಡಿದೆ. ಆ್ಯಂಕರ್ ಹೂಡಿಕೆದಾರರ ಬೇಡಿಕೆ ಸೇರಿದಂತೆ ಒಟ್ಟು ಬರೋಬ್ಬರಿ 7.40 ಲಕ್ಷ ಕೋಟಿ ರೂ. ಮೌಲ್ಯದ ಬಿಡ್ಗಳನ್ನು ಸೆಳೆಯುವ ಮೂಲಕ ದೇಶದ ಬಂಡವಾಳ ಮಾರುಕಟ್ಟೆಯಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ. 30,213 ಕೋಟಿ ರೂ. ಗಾತ್ರದ ಈ ಐಪಿಒ ಕೇವಲ ಹಣದ ಹರಿವಿನಲ್ಲಿ ಮಾತ್ರವಲ್ಲದೆ ಹೂಡಿಕೆದಾರರ ಭಾಗವಹಿಸುವಿಕೆಯಲ್ಲೂ ಜಾಗತಿಕ ದಾಖಲೆ(World Record) ನಿರ್ಮಿಸಿದೆ. ಬಿಡ್ಡಿಂಗ್ ನಡೆದ ಮೂರು ದಿನಗಳಲ್ಲಿ ಜಾಗತಿಕ ಮಟ್ಟದಲ್ಲೇ ಗರಿಷ್ಠ ಎನ್ನಲಾದ 1.38 ಕೋಟಿಗೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. 2024ರ ಅಕ್ಟೋಬರ್ನಲ್ಲಿ ‘ವಾರೀ ಎನರ್ಜೀಸ್’ ನಿರ್ಮಿಸಿದ್ದ 97.3 ಲಕ್ಷ ಅರ್ಜಿಗಳ ದಾಖಲೆಯನ್ನು ಜಿಯೋ ಬರೋಬ್ಬರಿ ಶೇ.42ರಷ್ಟು ಅಂತರದಿಂದ ಹಿಂದಿಕ್ಕಿದೆ. ಮೊದಲ ದಿನವೇ 30.5 ಲಕ್ಷ, ಎರಡನೇ ದಿನಕ್ಕೆ 75 ಲಕ್ಷ ದಾಟಿದ್ದ ಅರ್ಜಿಗಳ ಸಂಖ್ಯೆ ಕೊನೆಯ ದಿನ ಮುಗಿಲುಮುಟ್ಟಿತ್ತು. 22 ಪಟ್ಟು ಚಂದಾದಾರಿಕೆ: ಶುಕ್ರವಾರ ಸಂಜೆ 7 ಗಂಟೆಗೆ ಬಿಡ್ಡಿಂಗ್ ಪ್ರಕ್ರಿಯೆ ಮುಕ್ತಾಯವಾದಾಗ, ಒಟ್ಟು ಬಿಡುಗಡೆಯು 22 ಪಟ್ಟಿಗೂ ಹೆಚ್ಚು ಚಂದಾದಾರಿಕೆ ಕಂಡಿದೆ. ಇದರಲ್ಲಿ 4.90 ಲಕ್ಷ ಕೋಟಿ ರೂ. ಆ್ಯಂಕರ್ ಅಲ್ಲದ ಬಿಡ್ಗಳು ಹಾಗೂ 2.50 ಲಕ್ಷ ಕೋಟಿ ರೂ. ಆ್ಯಂಕರ್ ಹೂಡಿಕೆದಾರರ ಬೇಡಿಕೆ ಸೇರಿದೆ. ಸಾಂಸ್ಥಿಕ ಹೂಡಿಕೆದಾರರ(QIB) ವಿಭಾಗದಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ವರ್ಗ ಬರೋಬ್ಬರಿ 70.55 ಪಟ್ಟು ಚಂದಾದಾರಿಕೆ ಪಡೆದಿದೆ. ಸಾಂಸ್ಥಿಕೇತರ ಹೂಡಿಕೆದಾರರ( (NII) ಕೋಟಾ 14 ಪಟ್ಟು ಸಬ್ಸ್ಕ್ರೈಬ್ ಆಗಿದೆ. ಚಿಲ್ಲರೆ ಹೂಡಿಕೆದಾರರಿಗೆ ಮೀಸಲಾಗಿದ್ದ 8.5 ಕೋಟಿ ಷೇರುಗಳಿಗೆ 23 ಕೋಟಿಗೂ ಅಧಿಕ ಷೇರುಗಳಿಗೆ ಬೇಡಿಕೆ ಬಂದಿದ್ದು, ಈ ವಿಭಾಗದಲ್ಲಿ 2.72 ಪಟ್ಟು ಬಿಡ್ಡಿಂಗ್ ದಾಖಲಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ನ ಅರ್ಹ ಷೇರುದಾರರ ಕೋಟಾ 7.60 ಪಟ್ಟು ಹಾಗೂ ಉದ್ಯೋಗಿಗಳಿಗೆ ಮೀಸಲಾದ ಕೋಟಾ 2.93 ಪಟ್ಟು ಭರ್ತಿಯಾಗಿದೆ. ಘೋಷಿತ ವೇಳಾಪಟ್ಟಿಯಂತೆ ಅಕ್ಟೋಬರ್ 26ರಂದು ಷೇರು ಹಂಚಿಕೆ (Allotment) ಅಂತಿಮಗೊಳ್ಳಲಿದ್ದು, ಯಶಸ್ವಿ ಹೂಡಿಕೆದಾರರ ಡಿಮ್ಯಾಟ್ ಖಾತೆಗಳಿಗೆ ಅಕ್ಟೋಬರ್ 27ರಂದು ಷೇರುಗಳು ಜಮೆಯಾಗಲಿವೆ. ಅಕ್ಟೋಬರ್ 28ರಂದು ಬಿಎಸ್ಇ (BSE) ಮತ್ತು ಎನ್ಎಸ್ಇ (NSE) ಮಾರುಕಟ್ಟೆಗಳಲ್ಲಿ ಜಿಯೋ ಪ್ಲಾಟ್ಫಾರ್ಮ್ಸ್ ಅಧಿಕೃತವಾಗಿ ಲಿಸ್ಟಿಂಗ್ ಆಗಲಿದೆ. ವಿಶೇಷವೆಂದರೆ ಈ ಐತಿಹಾಸಿಕ ಐಪಿಒ ಯಶಸ್ವಿಯಾಗಿ ಮುಕ್ತಾಯಗೊಂಡ ದಿನವಾದ ಇಂದು(ಅ.23)ಜಿಯೋ ಪ್ಲಾಟ್ಫಾರ್ಮ್ಸ್ನ ವ್ಯವಸ್ಥಾಪಕ ನಿರ್ದೇಶಕ ಆಕಾಶ್ ಅಂಬಾನಿ ಅವರ ಜನ್ಮದಿನವೂ ಆಗಿರುವುದು ಸಂಭ್ರಮವನ್ನು ಇಮ್ಮಡಿಗೊಳಿಸಿದೆ.