ಉಡುಪಿ | ಮುಳುಗಿದ ಭತ್ತದ ಗದ್ದೆ: ಫಸಲು ನಾಶ
ಬ್ರಹ್ಮಾವರ: ಈಚೆಗೆ ಸುರಿದ ಮಳೆಯಿಂದಾಗಿ ಭತ್ತದ ಗದ್ದೆಗಳು ಜಲಾವೃತವಾಗಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ಹೇರೂರಿನ ರೈತರಿಗೆ ಸಂಕಷ್ಟ ಎದುರಾಗಿದೆ.ಬೈಕಾಡಿಯಲ್ಲಿ ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕಿದ ಬಳಿಕ ಸುರಿದ ಭಾರಿ ಮಳೆಗೆ ಹೇರೂರು, ಹೆರಂಜೆ, ಉಪ್ಪೂರು, ಬೈಕಾಡಿಯ ಸುಮಾರು 100 ಎಕರೆಗೂ ಅಧಿಕ ಪ್ರದೇಶದ ಭತ್ತದ ಗದ್ದೆಗಳು ಜಲಾವೃತಗೊಂಡಿವೆ.ಹಲವೆಡೆ

ಬ್ರಹ್ಮಾವರ: ಈಚೆಗೆ ಸುರಿದ ಮಳೆಯಿಂದಾಗಿ ಭತ್ತದ ಗದ್ದೆಗಳು ಜಲಾವೃತವಾಗಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ಹೇರೂರಿನ ರೈತರಿಗೆ ಸಂಕಷ್ಟ ಎದುರಾಗಿದೆ.ಬೈಕಾಡಿಯಲ್ಲಿ ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕಿದ ಬಳಿಕ ಸುರಿದ ಭಾರಿ ಮಳೆಗೆ ಹೇರೂರು, ಹೆರಂಜೆ, ಉಪ್ಪೂರು, ಬೈಕಾಡಿಯ ಸುಮಾರು 100 ಎಕರೆಗೂ ಅಧಿಕ ಪ್ರದೇಶದ ಭತ್ತದ ಗದ್ದೆಗಳು ಜಲಾವೃತಗೊಂಡಿವೆ.ಹಲವೆಡೆ ಕಟಾವು ಮಾಡಿದ ಭತ್ತದ ತೆನೆಗಳು ನೀರಿನಲ್ಲಿ ತೇಲಿ ಹೋದರೆ ಇನ್ನು ಕೆಲವೆಡೆ ಭತ್ತದ ತೆನೆ ಮುಳುಗಿವೆ.ಬೈಕಾಡಿಯಲ್ಲಿ ಸೀತಾ ನದಿಗೆ ನಾಲ್ಕು ವರ್ಷಗಳ ಹಿಂದೆ ನಿರ್ಮಾಣ ಮಾಡಲಾದ ಕಿಂಡಿ ಅಣೆಕಟ್ಟೆ ಹೆರಂಜೆ, ಹೇರೂರು, ಉಪ್ಪೂರು ಭಾಗದ ಜನರಿಗೆ ಸಮಸ್ಯೆ ತಂದೊಡ್ಡುತ್ತಿದೆ.ಉದ್ದು, ಹೆಸರು ಮತ್ತು ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದವರು ಕಿಂಡಿ ಅಣೆಕಟ್ಟೆಯ ಕಾರಣದಿಂದಾಗಿ ಭತ್ತದ ಕೃಷಿ ಮಾತ್ರ ಮಾಡುತ್ತಿದ್ದಾರೆ. ಎಲ್ಲ ಕಡೆ ಮಳೆ ಇಲ್ಲದೆ ಭತ್ತದ ಇಳುವರಿಯಲ್ಲಿ ಕುಸಿತ ಕಂಡಿದ್ದರೂ ಇಲ್ಲಿ ಉತ್ತಮ ಬೆಳೆಯಾಗಿತ್ತು. ಆದರೆ, ಮಳೆಯಿಂದ ಸಮಸ್ಯೆಯಾಗಿದೆ ಎನ್ನುತ್ತಾರೆ ರೈತರು.‘ಕಟಾವು ಕೆಲಸ ಮುಗಿಯಲಿ; ಆ ಬಳಿಕ ಹಲಗೆಯನ್ನು ಹಾಕಿ ಎಂದು ನಾವು ಅಣೆಕಟ್ಟೆಗೆ ಹಲಗೆ ಹಾಕುವ ಮುನ್ನ ಕೆಲಸಗಾರರಿಗೆ ಹೇಳಿದ್ದೆವು. ಆದರೆ, ಮೇಲಿನ ಆದೇಶ ಎಂದು ಹಲಗೆ ಹಾಕಿದ್ದರು. ಈಚೆಗೆ ಸುರಿದ ಮಳೆಗೆ ನೀರು ಉಕ್ಕಿ ಬಂದಿದ್ದು ಗದ್ದೆಗಳಲ್ಲಿ ತೆನೆ ಮುಳುಗಿಹೋಗಿದೆ’ ಎಂದು ರೈತ ರಾಮಣ್ಣ ಪೂಜಾರಿ ತಿಳಿಸಿದರು.‘ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅವರೆಲ್ಲರೂ ವರ್ಗವಾಗಿದ್ದರು. ಸ್ಥಳೀಯ ಜನಪ್ರತಿನಿಧಿಗಳ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿದರೆ ಹಲಗೆ ಎತ್ತುವುದಕ್ಕೆ ಸಮರ್ಪಕ ವ್ಯವಸ್ಥೆ ಇರಲಿಲ್ಲ. ಕೆಲಸಗಾರರನ್ನು ಸೇರಿಸಿ ಹಲಗೆ ವಾಪಸ್ ಎತ್ತುವಾಗ ತಡವಾಗಿತ್ತು. ಸದ್ಯ ನೀರು ಸ್ವಲ್ಪ ಇಳಿದಿದೆ. ಆದರೆ, ನೀರು ನಿಂತ ಪರಿಣಾಮ ಅರ್ಧಕ್ಕರ್ಧ ಭತ್ತದ ತೆನೆಗಳು ಉದುರಿ ಹೋಗಿವೆ. ಅಲ್ಲದೆ ಹುಲ್ಲು ಕೂಡ ಸಿಗುವುದಿಲ್ಲ’ ಎಂದರು.ರಘುಪತಿ ಭಟ್ ಅವರು ಶಾಸಕರಾಗಿದ್ದ ಅವಧಿಯಲ್ಲಿ ಉಪ್ಪು ನೀರು ತಡೆಯುವ ಉದ್ದೇಶದಿಂದ ಈ ಕಿಂಡಿ ಅಣೆಕಟ್ಟೆ ನಿರ್ಮಾಣ ಮಾಡಲಾಗಿತ್ತು. ಆದರೆ, ಈ ಅಣೆಕಟ್ಟೆ ನಿರ್ಮಾಣ ಸರಿಯಾಗಿ ಆಗದ ಕಾರಣ ಉಪ್ಪು ನೀರು ತಡೆಯುತ್ತಿಲ್ಲ. ಕಿಂಡಿ ಅಣೆಕಟ್ಟೆಗೆ ಹಲಗೆ ಜೋಡಿಸಿದ ಮೇಲೂ ಉಪ್ಪು ನೀರು ಹಿನ್ನೀರಿಗೆ ನುಗ್ಗುತ್ತಿದೆ. ಅದರ ಪರಿಣಾಮವಾಗಿ ನದಿ ಪಾತ್ರದ ಹಲವರ ಮನೆಯ ಬಾವಿಗಳ ನೀರು ಉಪ್ಪಾಗಿದೆ. ನದಿ ನೀರನ್ನು ಬಳಸಿಯೂ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಬಾವಿಯ ನೀರು ಉಪ್ಪಾಗಿರುವುದರಿಂದ ಆ ನೀರನ್ನೂ ಬಳಸಿ ಕೃಷಿ ಮಾಡಲಾಗುತ್ತಿಲ್ಲ ಎಂದು ರೈತರು ಅಳಲು ತೊಡಿಕೊಳ್ಳುತ್ತಾರೆ.ಜೇಮ್ಸ್ ರಾಡ್ರಿಗಸ್ ಕೃಷಿಕ, ಹೇರೂರು ಕೃಷಿಯಿಂದ ಹಾಕಿದ ಬಂಡವಾಳ ಬಾರದಿದ್ದರೂ ಬೆಳೆ ಮನೆಗೆ ಬರುವ ತೃಪ್ತಿ ಇತ್ತು. ಕಿಂಡಿ ಅಣೆಕಟ್ಟೆ ಆದ ಮೇಲೆ ಆ ಆಸೆಯೂ ಹೋಗಿದೆ. ಮೂರು ವರ್ಷಗಳಿಂದ ಕೃಷಿ ಕಾಯಕದಿಂದ ಹಿಂದೆ ಸರಿದಿದ್ದೇವೆ ಕುಮಾರ್ ಬೈಕಾಡಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಳೆ ಬಂದು ಗದ್ದೆಗಳಲ್ಲಿ ನೀರು ತುಂಬಿದಾಗ ಹಲಗೆ ತೆಗೆಯಿರಿ ಎಂದು ಹೇಳಿದರೆ ಕೆಲಸಗಾರರು ಇಲ್ಲ ಯಂತ್ರಗಳು ಇಲ್ಲ ಎನ್ನುತ್ತಾರೆ ಅಧಿಕಾರಿಗಳು. ಮಳೆಗೆ ಮನೆಗಳು ಮುಳುಗಿದರೆ ಗತಿ ಏನು? ಉದಯ್ಕುಮಾರ್ ಹೆಗ್ಡೆ,ಗ್ರಾಮಪಂಚಾಯಿತಿ ಮಾಜಿ ಸದಸ್ಯ ಸಂಬಂಧಪಟ್ಟವರು ಸಮಸ್ಯೆ ಇರುವಲ್ಲಿ ತಡೆಗೋಡೆ ನಿರ್ಮಾಣ ಮಾಡಿ, ನೀರು ಒಳ ನುಗ್ಗದಂತೆ ವ್ಯವಸ್ಥೆ ಮಾಡಬೇಕು. ಕಿಂಡಿ ಅಣೆಕಟ್ಟೆಯನ್ನೂ ಪರಿಶೀಲಿಸಿ ಉಪ್ಪು ನೀರು ಹಿನ್ನೀರಿಗೆ ನುಗ್ಗುವ ಕಾರಣವನ್ನು ಕಂಡು ಹಿಡಿದು ಸಮಸ್ಯೆಗೆ ಪರಿಹರಿಸಬೇಕು