ಹೆಣ್ಣಿಗೆ ಹುಟ್ಟುವ ಸ್ವಾತಂತ್ರ್ಯಕೊಡದ ದೇಶ: ನಾಯಕಿ ಚುಕ್ಕಿ ಕಿಡಿ ನಂಜುಂಡಸ್ವಾಮಿ
ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ‘ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಪಡೆದ ಹೆಣ್ಣುಮಕ್ಕಳಿಗೆ, ಈ ದೇಶದಲ್ಲಿ ಹುಟ್ಟುವ ಸ್ವಾತಂತ್ರ್ಯವೇ ಇಲ್ಲ ಎನ್ನುವ ಸ್ಥಿತಿ ಬಂದಿದೆ’ ಎಂದು ರೈತ ಚಳವಳಿಯ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಕಳವಳ ವ್ಯಕ್ತಪಡಿಸಿದರು.ಇಲ್ಲಿನ ರಾಣಿ ಚನ್ನಮ್ಮ ಮುಖ್ಯವೇದಿಕೆಯಲ್ಲಿ ಶುಕ್ರವಾರ ಸಂಜೆ 202ನೇ ಕಿತ್ತೂರು ಉತ್ಸವ ಉದ್ಘಾಟಿಸಿ ಮಾತನಾಡಿದ

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ‘ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಪಡೆದ ಹೆಣ್ಣುಮಕ್ಕಳಿಗೆ, ಈ ದೇಶದಲ್ಲಿ ಹುಟ್ಟುವ ಸ್ವಾತಂತ್ರ್ಯವೇ ಇಲ್ಲ ಎನ್ನುವ ಸ್ಥಿತಿ ಬಂದಿದೆ’ ಎಂದು ರೈತ ಚಳವಳಿಯ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಕಳವಳ ವ್ಯಕ್ತಪಡಿಸಿದರು.ಇಲ್ಲಿನ ರಾಣಿ ಚನ್ನಮ್ಮ ಮುಖ್ಯವೇದಿಕೆಯಲ್ಲಿ ಶುಕ್ರವಾರ ಸಂಜೆ 202ನೇ ಕಿತ್ತೂರು ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ‘ದೇಶದಲ್ಲಿ ಪ್ರತಿ 18 ನಿಮಿಷಕ್ಕೆ ಒಬ್ಬ ಮಹಿಳೆ ಮೇಲೆ ಅತ್ಯಾಚಾರ ನಡೆಯುತ್ತಿದೆ. ಪ್ರತಿ 1,000 ಹೆಣ್ಣುಮಕ್ಕಳು ಹುಟ್ಟುವ ಜಾಗದಲ್ಲಿ 28 ಮಕ್ಕಳನ್ನು ಭ್ರೂಣದಲ್ಲೇ ಹಿಸುಕುತ್ತಿದ್ದಾರೆ. ಇದೇ ಕಾರಣಕ್ಕೆ ಪ್ರತಿ 1,000 ಗಂಡಸರಿಗೆ 967 ಹೆಣ್ಣುಮಕ್ಕಳು ಮಾತ್ರ ಇದ್ದಾರೆ. ಇವೆಲ್ಲ ಈ ಸಮಾಜದ ಮನಸ್ಥಿತಿಯ ಕನ್ನಡಿ’ ಎಂದರು.‘ರಾಣಿ ಚನ್ನಮ್ಮ ಕರ್ನಾಟಕದ ಅಸ್ತಿತ್ವ. ಜಗತ್ತನ್ನೇ ಆಳುವವರ ಮುಲಾಜಿಗೂ ಒಳಗಾಗದೇ ನಿಂತವಳು. ಇಂಥವಳ ನಾಡಲ್ಲೂ ಹೆಣ್ಣುಮಕ್ಕಳಿಗೆ ಸಮಾನತೆ ನೀಡಿಲ್ಲ. ಇದಕ್ಕೆ ಈ ವೇದಿಕೆಯೂ ಸಾಕ್ಷಿ’ ಎಂದು ಅವರು ಅಸಮಾಧಾನ ಹೊರಗೆಡವಿದರು.‘ಈ ನಾಡಿನ ಹೆಣ್ಣುಮಕ್ಕಳಿಗೂ ಕುದುರೆ ಸವಾರಿ ಮಾಡುವ, ಕತ್ತಿ ಬೀಸುವ, ಹೋರಾಟ ಮನೋಸ್ಥೈರ್ಯ ತುಂಬುವ ಕಲಿಕೆ ಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ದುರಂತವೆಂದರೆ; ಕೇವಲ 8ನೇ ತರಗತಿವರೆಗೆ ಮಾತ್ರ ಶಿಕ್ಷಣವಿರುವ ಊರುಗಳು ಇನ್ನೂ ಇವೆ. ಪ್ರತಿಯೊಬ್ಬ ಹೆಣ್ಣುಮಗಳಿಗೂ ಕಾಲೇಜು ಶಿಕ್ಷಣ ಸಿಗುವಂತೆ ಮಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿ. ನಾನು ಇಲ್ಲಿ ದೀಪ ಹಚ್ಚಿ ಹೋಗಲು ಬಂದಿಲ್ಲ. ನನ್ನ ಜವಾಬ್ದಾರಿ ಏನು, ಸರ್ಕಾರದ ಜವಾಬ್ದಾರಿ ಏನು ಎಂದು ತಿಳಿಸಲು ಬಂದಿದ್ದೇನೆ’ ಎಂದು ಅವರು ವೇದಿಕೆ ಮೇಲಿದ್ದ ಸಚಿವರಿಗೆ ಹೇಳಿದರು.‘ಇಡೀ ದೇಶದಲ್ಲಿ ರೈತ ಆತ್ಮಹತ್ಯೆ ಮಾಡಿಕೊಳ್ಳುವ ಪಟ್ಟಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷ ಪ್ರತಿ 2 ಗಂಟೆಗೆ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವರ್ಷ ಭೀಕರ ಬರಗಾಲವಿದೆ. ಆತ್ಮಹತ್ಯೆಯ ಸಂಖ್ಯೆ ಲೆಕ್ಕಕ್ಕೆ ಸಿಗಲಿಕ್ಕಿಲ್ಲ. ಇಂಥ ವಿಷಮ ಸ್ಥಿತಿಯಲ್ಲಿ ಸರ್ಕಾರ ಜವಾಬ್ದಾರಿ ಮೆರೆಯಬೇಕು’ ಎಂದೂ ಅವರು ಆಗ್ರಹಿಸಿದರು.‘ಚನ್ನಮ್ಮ ಒಂದು ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಹೋರಾಡಿದಳು. ಇಂದು ದೇಶದಲ್ಲಿ ಸಾವಿರಾರು ಬಹು ರಾಷ್ಟ್ರೀಯ ಕಂಪನಿಗಳು ಬೆಳೆದಿವೆ. ಇವೆಲ್ಲವೂ ಈಸ್ಟ್ ಇಂಡಿಯಾ ಕಂಪನಿಗಿಂತ ಭಿನ್ನವೇನೂ ಇಲ್ಲ. ಇನ್ನು ಕೆಲವೇ ದಿನಗಳಲ್ಲಿ ಸಂಸತ್ತು ಹಾಗೂ ವಿಧಾನಸಭೆಗಳು ನೆಪಕ್ಕೆ ಮಾತ್ರ ಉಳಿಯುತ್ತವೆ. ಆಳುವ ಶಕ್ತಿ ಬಹುರಾಷ್ಟ್ರೀಯ ಕಂಪನಿಗಳ ತೆಕ್ಕೆಗೆ ಬಂದರೂ ಅಚ್ಚರಿ ಇಲ್ಲ’ ಎಂದೂ ಎಚ್ಚರಿಸಿದರು.‘ನಮಗೆ ಬ್ರಿಟಿಷರಿಂದ ಮಾತ್ರ ಸ್ವಾತಂತ್ರ್ಯ ಸಿಕ್ಕಿದೆ. ಅವರು ಬಿಟ್ಟುಹೋದ ಕಾನೂನುಗಳಿಂದ ಸ್ವಾತಂತ್ರ್ಯ ಬಂದಿಲ್ಲ. ಹೊಸ ಹೊಸ ಬಂಡವಾಳಶಾಹಿ ಕಾನೂನುಗಳು ಬರುತ್ತಿವೆ. ಭಾರತಕ್ಕೆ ಭೇಟಿ ನೀಡಿದ ಅಮೆರಿಕದ ಕಾರ್ಯದರ್ಶಿಗೂ, ಉದ್ಯಮಿ ಅಂಬಾನಿಗೂ ಏನು ಸಂಬಂಧ? ಅವರು ಒಬ್ಬರನ್ನೊಬ್ಬರು ಏಕೆ ಭೇಟಿ ಆಗುತ್ತಾರೆ. ಯಾರು ಏನನ್ನು ಮಾರಲು ಹೊರಟಿದ್ದಾರೆ, ಯಾರು ಏನನ್ನು ಖರೀದಿಸಲು ಹೊರಟಿದ್ದಾರೆ ಎಂಬುದು ದೇಶಕ್ಕೆಲ್ಲ ಗೊತ್ತಿದೆ. ಆದರೂ ಯಾರೂ ಏನೂ ಮಾಡಲಾಗುತ್ತಿಲ್ಲ. ಇದೆಂಥ ಸ್ವಾತಂತ್ರ್ಯ?’ ಎಂದೂ ಪ್ರಶ್ನೆ ಮಾಡಿದರು.