ವ್ಯಕ್ತಿಯೊಬ್ಬರ ವಿರುದ್ಧ ರೌಡಿ ಶೀಟ್ ತೆರೆಯಲು ಪೂರ್ವಾಪರ ಅವಲೋಕನ ಅಗತ್ಯ:ಹೈಕೋರ್ಟ್
ಬೆಂಗಳೂರು: 'ಕ್ರಿಮಿನಲ್ ಪ್ರಕರಣಗಳ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸದೆ ವ್ಯಕ್ತಿಯೊಬ್ಬರ ವಿರುದ್ಧ ರೌಡಿ ಶೀಟ್ ತೆರೆಯಲು ಅಥವಾ ಮುಂದುವರಿಸಲು ನೋಟಿಸ್ ನೀಡುವಂತಿಲ್ಲ' ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಪೊಲೀಸ್ ಇಲಾಖೆಗೆ ನಿರ್ದೇಶಿಸಿದೆ.ಪ್ರಕರಣವೊಂದರಲ್ಲಿ ಈ ಕುರಿತಂತೆ ಆದೇಶಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, 'ವ್ಯಕ್ತಿಗಳ ವ

ಬೆಂಗಳೂರು: 'ಕ್ರಿಮಿನಲ್ ಪ್ರಕರಣಗಳ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸದೆ ವ್ಯಕ್ತಿಯೊಬ್ಬರ ವಿರುದ್ಧ ರೌಡಿ ಶೀಟ್ ತೆರೆಯಲು ಅಥವಾ ಮುಂದುವರಿಸಲು ನೋಟಿಸ್ ನೀಡುವಂತಿಲ್ಲ' ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಪೊಲೀಸ್ ಇಲಾಖೆಗೆ ನಿರ್ದೇಶಿಸಿದೆ.ಪ್ರಕರಣವೊಂದರಲ್ಲಿ ಈ ಕುರಿತಂತೆ ಆದೇಶಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, 'ವ್ಯಕ್ತಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಸಮಗ್ರ ಡಿಜಿಟಲ್ ಡಾಟಾಬೇಸ್ ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಪರಿಶೀಲಿಸಿ' ಎಂದು ಸೂಚಿಸಿದೆ.ಡಿಜಿಟಲ್ ವೇದಿಕೆಯಲ್ಲಿ ಸಿಸಿಟಿಎನ್ಎಸ್, ಐಸಿಜೆಎಸ್, ಇ-ಕೋರ್ಟ್ಸ್ ದತ್ತಾಂಶ ಮತ್ತು ಇತರ ಲಭ್ಯವಿರುವ ಸರ್ಕಾರಿ ದತ್ತಾಂಶಗಳಿಂದ ಮಾಹಿತಿಯನ್ನು ಸಂಯೋಜಿಸಬೇಕು. ಪ್ರಕರಣಗಳ ದಾಖಲು, ದೋಷಾರೋಪ ಪಟ್ಟಿ ಸಲ್ಲಿಕೆ, ವಿಚಾರಣೆಯ ಬಾಕಿ ಸ್ಥಿತಿ, ಖುಲಾಸೆ, ಅಪರಾಧ ಸಾಬೀತು, ಆರೋಪ ಮುಕ್ತಿ, ಪ್ರಕರಣಗಳ ರದ್ದು, ಮೇಲ್ಮನವಿ, ಮರು ಪರಿಶೀಲನೆ ಹಾಗೂ ತನಿಖೆ ಮುಕ್ತಾಯಗೊಂಡಿರುವ ವಿವರಗಳು ಲಭ್ಯವಾಗುವಂತಹ ವ್ಯವಸ್ಥೆ ರೂಪಿಸಬೇಕು' ಎಂದು ತಿಳಿಸಿದೆ.'ರೌಡಿ ಶೀಟ್ ತೆರೆಯಲು ಅಥವಾ ಮುಂದುವರಿಸಲು ಕಾನೂನುಬದ್ಧ ಆಧಾರವಿದೆಯೇ ಎಂಬುದನ್ನು ಸಂಬಂಧಪಟ್ಟ ಪ್ರಾಧಿಕಾರವು ಲಭ್ಯವಿರುವ ಮತ್ತು ಪ್ರಸ್ತುತ ಮಾಹಿತಿಯ ಆಧಾರದಡಿ ಖಚಿತ ಪಡಿಸಿಕೊಳ್ಳಬೇಕು' ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.'ರೌಡಿ ಶೀಟ್ ಎಂಬುದು ಸಾರ್ವಜನಿಕ ಸುವ್ಯವಸ್ಥೆ ಕಾಪಾಡಲು ಮತ್ತು ಅಪರಾಧಿಕ ಚಾಳಿ ಹೊಂದಿದವರ ಮೇಲೆ ನಿಗಾ ಇರಿಸಲು ಬಳಸುವ ಆಡಳಿತಾತ್ಮಕ ಕ್ರಮವಾಗಿದ್ದರೂ ಅದು ವ್ಯಕ್ತಿಯ ಗೌರವ, ಘನತೆ, ಸ್ವಾತಂತ್ರ್ಯ, ಉದ್ಯೋಗ, ವ್ಯವಹಾರ ಮತ್ತು ಸಾಮಾಜಿಕ ಸ್ಥಾನಮಾನಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಇಂತಹ ಕ್ರಮವನ್ನು ವಾಡಿಕೆಯಂತೆ ಅಥವಾ ಯಾಂತ್ರಿಕವಾಗಿ ಕೈಗೊಳ್ಳುವಂತಿಲ್ಲ' ಎಂದು ಸ್ಪಷ್ಟಪಡಿಸಿದೆ.