ಪೋಕ್ಸೊ ಸಂತ್ರಸ್ತರಿಗೆ ನ್ಯಾಯಿಕ ಪ್ರಕ್ರಿಯೆ ಮುಳ್ಳಾಗದಿರಲಿ: ಹೈಕೋರ್ಟ್
ಬೆಂಗಳೂರು: 'ಪೋಕ್ಸೊ ನ್ಯಾಯ ಪಡೆಯಲು ನಡೆಯುವ ಕಾನೂನು ಪ್ರಕ್ರಿಯೆಯೇ ಸಂತ್ರಸ್ತರ ಮನಸ್ಸಿನ ಮೇಲೆ ಮತ್ತೊಂದು ಗಾಯ ಅಥವಾ ಘಾಸಿಯುಂಟು ಮಾಡುವ ಮುಳ್ಳಾಗಬಾರದು' ಎಂದು ಹೈಕೋರ್ಟ್ ವಿಚಾರಣಾ ನ್ಯಾಯಾಲಯಗಳಿಗೆ ಕಿವಿಮಾತು ಹೇಳಿದೆ.ಪ್ರಕರಣವೊಂದರಲ್ಲಿ 12 ವರ್ಷದ ಸಂತ್ತಸ್ತ ಬಾಲಕಿಯನ್ನು ಪದೇ ಪದೇ ಪಾಟಿ ಸವಾಲಿಗೆ ಒಳಪಡಿಸಲು ಅವಕಾಶ ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ
ಬೆಂಗಳೂರು: 'ಪೋಕ್ಸೊ ನ್ಯಾಯ ಪಡೆಯಲು ನಡೆಯುವ ಕಾನೂನು ಪ್ರಕ್ರಿಯೆಯೇ ಸಂತ್ರಸ್ತರ ಮನಸ್ಸಿನ ಮೇಲೆ ಮತ್ತೊಂದು ಗಾಯ ಅಥವಾ ಘಾಸಿಯುಂಟು ಮಾಡುವ ಮುಳ್ಳಾಗಬಾರದು' ಎಂದು ಹೈಕೋರ್ಟ್ ವಿಚಾರಣಾ ನ್ಯಾಯಾಲಯಗಳಿಗೆ ಕಿವಿಮಾತು ಹೇಳಿದೆ.ಪ್ರಕರಣವೊಂದರಲ್ಲಿ 12 ವರ್ಷದ ಸಂತ್ತಸ್ತ ಬಾಲಕಿಯನ್ನು ಪದೇ ಪದೇ ಪಾಟಿ ಸವಾಲಿಗೆ ಒಳಪಡಿಸಲು ಅವಕಾಶ ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.'ನ್ಯಾಯಾಲಯದ ಉದ್ದೇಶ ಸತ್ಯವನ್ನು ಪತ್ತೆ ಹಚ್ಚುವದೇ ಆಗಿದ್ದರೂ, ಅದಕ್ಕಾಗಿ ಮಗುವಿನ ಮೇಲೆ ನಿರಂತರ ಒತ್ತಡ ಹೇರಲು ಸಾಧ್ಯವಿಲ್ಲ' ಎಂದು ಹೇಳಿದೆ.'ಆರೋಪಿಗೆ ನ್ಯಾಯಸಮ್ಮತ ವಿಚಾರಣೆಯ ಹಕ್ಕು ಇದೆ ಎಂಬುದನ್ನು ಒಪ್ಪಿಕೊಂಡರೂ, ಅದೇ ಕಾರಣಕ್ಕೆ ಸಂತ್ರಸ್ತರ ಮಾನಸಿಕ ಆರೋಗ್ಯವನ್ನೂ ಕಡೆಗಣಿಸಲಾಗದು. ನಡೆದ ಘಟನೆಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವಂತೆ ಮಾಡುವುದರಿಂದ ಮಗುವಿನ ಗಂಭೀರ ಮಾನಸಿಕ ಸಂಕಷ್ಟಕ್ಕೆ ಕಾರಣವಾಗಬಹುದು’ ಎಂದು ನ್ಯಾಯಪೀಠ ತೀವ್ರ ಕಳವಳ ವ್ಯಕ್ತಪಡಿಸಿದೆ.'ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ-2012ರ (ಪೋಕ್ಸೊ) ಕಲಂ 33(5)ರ ಪ್ರಕಾರ, ಬಾಲಕಿಯನ್ನು ಸಾಕ್ಷಿ ನುಡಿಯಲು ಮತ್ತೆ ಮತ್ತೆ ನ್ಯಾಯಾಲಯಕ್ಕೆ ಕರೆಯದಂತೆ ವಿಶೇಷ ನ್ಯಾಯಾಲಯ ಖಚಿತಪಡಿಸಿಕೊಳ್ಳಬೇಕು. ಈ ನಿಬಂಧನೆಯ ಉದ್ದೇಶವೇ ಸಂತ್ರಸ್ತರನ್ನು ನಿರಂತರ ವಿಚಾರಣೆ, ಪಾಟಿ ಸವಾಲು ಮತ್ತು ನ್ಯಾಯಾಲಯದ ಹಾಜರಾತಿಯಿಂದ ರಕ್ಷಿಸುವುದಾಗಿದೆ' ಎಂದು ಉಲ್ಲೇಖಿಸಿದೆ.'ಮಕ್ಕಳ ಸಾಕ್ಷಿ ದಾಖಲಿಸುವ ಸಂದರ್ಭದಲ್ಲಿ ಅವರ ಗೌರವ, ಭದ್ರತೆ ಮತ್ತು ಮಾನಸಿಕ ಆರೋಗ್ಯವನ್ನು ರಕ್ಷಿಸುವುದು ನ್ಯಾಯಾಂಗದ ಪ್ರಮುಖ ಕರ್ತವ್ಯವಾಗಿದೆ’ ಎಂದೂ ನ್ಯಾಯಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.