ಆಳ –ಅಗಲ| ಬ್ಯಾಂಕ್ ದತ್ತಾಂಶ ಎಷ್ಟು ಸುರಕ್ಷಿತ?
ಎಸ್ಬಿಐ ಗ್ರಾಹಕರ ಗೋಪ್ಯ ಮಾಹಿತಿಗಳು ಡಾರ್ಕ್ವೆಬ್ನಲ್ಲಿ ಸೋರಿಕೆಯಾಗಿರುವುದು ಬ್ಯಾಂಕಿಂಗ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಾಹಿತಿ ಹೇಗೆ ಸೋರಿಕೆಯಾಗಿದೆ ಎಂಬುದನ್ನು ಬ್ಯಾಂಕ್ ತಿಳಿಸಿಲ್ಲ. ವಿಸ್ತೃತ ತನಿಖೆ ನಡೆಸಬೇಕಿದೆ ಎಂದು ಹೇಳಿದೆ. ಬ್ಯಾಂಕ್ಗಳಲ್ಲಿರುವ ಗ್ರಾಹಕರ ದತ್ತಾಂಶ ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯನ್ನೂ ಈ ಪ್ರಕರಣ ಎತ್ತಿದೆ. ಬ್ಯಾಂಕಿಂಗ್ ಕ

ಎಸ್ಬಿಐ ಗ್ರಾಹಕರ ಗೋಪ್ಯ ಮಾಹಿತಿಗಳು ಡಾರ್ಕ್ವೆಬ್ನಲ್ಲಿ ಸೋರಿಕೆಯಾಗಿರುವುದು ಬ್ಯಾಂಕಿಂಗ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಾಹಿತಿ ಹೇಗೆ ಸೋರಿಕೆಯಾಗಿದೆ ಎಂಬುದನ್ನು ಬ್ಯಾಂಕ್ ತಿಳಿಸಿಲ್ಲ. ವಿಸ್ತೃತ ತನಿಖೆ ನಡೆಸಬೇಕಿದೆ ಎಂದು ಹೇಳಿದೆ. ಬ್ಯಾಂಕ್ಗಳಲ್ಲಿರುವ ಗ್ರಾಹಕರ ದತ್ತಾಂಶ ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯನ್ನೂ ಈ ಪ್ರಕರಣ ಎತ್ತಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನ ಬಳಕೆ ವ್ಯಾಪಕವಾಗುತ್ತಿದ್ದಂತೆಯೇ ಸೈಬರ್ ಸುರಕ್ಷತೆಯೂ ಸವಾಲಾಗಿ ಪರಿಣಮಿಸುತ್ತಿದೆ. ಹಿಂದೆಯೂ ಹಲವು ಬ್ಯಾಂಕ್ಗಳಿಂದ ಗ್ರಾಹಕರ ಮಾಹಿತಿ ಸೋರಿಕೆಯಾಗಿತ್ತು. ಸೈಬರ್ ದಾಳಿಯೂ ನಡೆದಿವೆ. ಇಂತಹ ಸಂದರ್ಭದಲ್ಲಿ ಗ್ರಾಹಕರು ಹೆಚ್ಚು ಎಚ್ಚರಿಕೆಯಿಂದ ಇರಬೇಕು..ದೇಶದ ಅತಿ ದೊಡ್ಡ ಬ್ಯಾಂಕ್, ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ಬಿಐ) 3,897 ಗ್ರಾಹಕರ ವೈಯಕ್ತಿಕ ವಿವರಗಳು ಸೇರಿದಂತೆ ಗೋಪ್ಯ ಮಾಹಿತಿಗಳು ಡಾರ್ಕ್ ವೆಬ್ನಲ್ಲಿ ಸೋರಿಕೆಯಾಗಿರುವುದು ಬ್ಯಾಂಕಿಂಗ್ ವಲಯದಲ್ಲಿ ಕಳವಳಕ್ಕೆ ಕಾರಣವಾಗಿದೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಎಡ ಪಕ್ಷಗಳು ಒತ್ತಾಯಿಸಿವೆ. ಎಸ್ಬಿಐ ತನ್ನ ಗ್ರಾಹಕರಿಗೆ ಈ ಬಗ್ಗೆ ವಿವರಣೆ ನೀಡಬೇಕು ಮತ್ತು ಇದಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.ದತ್ತಾಂಶ ಸೋರಿಕೆಯಾಗಿರುವ ಬಗ್ಗೆ ಎಸ್ಬಿಐಯು ಬುಧವಾರ ಷೇರುಪೇಟೆಗೆ ಮಾಹಿತಿ ನೀಡಿದೆ. ‘ಇದರಿಂದಾಗಿ ಬ್ಯಾಂಕ್ನ ವಹಿವಾಟಿಗೆ ಧಕ್ಕೆಯಾಗಿಲ್ಲ. ಗ್ರಾಹಕರ ಖಾತೆಗಳಲ್ಲಿ ಹಣ ಭದ್ರವಾಗಿದೆ. ಸೋರಿಕೆ ಆಗಿರುವ ದತ್ತಾಂಶದ ಖಚಿತತೆ ಮತ್ತು ಸೋರಿಕೆಯು ಎಷ್ಟರಮಟ್ಟಿಗೆ ಆಗಿದೆ ಎಂಬುದನ್ನು ದೃಢಪಡಿಸಿಕೊಳ್ಳಲು, ಎಲ್ಲಿಂದ ಸೋರಿಕೆ ಆಗಿದೆ ಹಾಗೂ ಅದರಿಂದ ಆಗಬಹುದಾದ ಸಮಸ್ಯೆಗಳು ಏನು ಎಂಬುದನ್ನು ತಿಳಿಯಲು ವಿಸ್ತೃತವಾದ ತನಿಖೆಯ ಅಗತ್ಯವಿದೆ’ ಎಂದು ಅದು ತಿಳಿಸಿದೆ.ಗ್ರಾಹಕರ ಮೊಬೈಲ್ ಸಂಖ್ಯೆ, ಹೆಸರು, ಜನ್ಮದಿನಾಂಕ, ಇ–ಮೇಲ್ ವಿಳಾಸ, ಮನೆಯ ವಿಳಾಸ, ಸಾಲದ ಖಾತೆಯ ವಿವರ, ಗ್ರಾಹಕ ಸಂಖ್ಯೆ ಸೇರಿದಂತೆ ಬ್ಯಾಂಕ್ ಬಳಿ ಭದ್ರವಾಗಿರಬೇಕಾಗಿದ್ದ ಎಲ್ಲ ಮಾಹಿತಿಗಳು ಸೋರಿಕೆಯಾಗಿದ್ದು ಬ್ಯಾಂಕ್ನ ಗಮನಕ್ಕೆ ಬಂದಿದ್ದು ಇದೇ 16ರಂದು. ಬ್ಯಾಂಕ್ನ ಗುಪ್ತಚರ ಎಚ್ಚರಿಕೆ ಸೇವೆ ನೀಡುವ ಡಿಫೆನ್ಸ್ ಸೈಬರ್ ಏಜೆನ್ಸಿ ಮತ್ತು ಸಿಇಆರ್ಟಿ–ಇನ್ (ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ) ಎಚ್ಚರಿಕೆ ನೀಡಿದ ಬಳಿಕ. ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ, ಡಾರ್ಕ್ ವೆಬ್ನಲ್ಲಿ 3.75 ಲಕ್ಷ ದಾಖಲೆಗಳು ಲಭ್ಯವಿದ್ದು, ಅದರಲ್ಲಿ ಎಸ್ಬಿಐನ 3,897 ಗ್ರಾಹಕರ ಮಾಹಿತಿಗಳಿವೆ ಎಂದು ಬ್ಯಾಂಕ್ ಹೇಳಿದೆ.ಇದಕ್ಕೂ ಮೊದಲು, ಸೈಬರ್ ಸುರಕ್ಷತೆಯ ಮೇಲ್ವಿಚಾರಣೆ ಮಾಡುವ ‘ಸೈಬರ್ಪಲ್ಸ್’ ಎಂಬ ‘ಎಕ್ಸ್’ ಖಾತೆಯಲ್ಲಿ, ‘ ಸಿರಿಯುಸಿಎಂ (Siriusim) ಎಂಬ ವ್ಯಕ್ತಿ/ಗುಂಪು/ಸಂಸ್ಥೆಯು ಎಸ್ಬಿಐಗೆ ಸಂಬಂಧಿಸಿದ್ದು ಎನ್ನಲಾದ ವೈಯಕ್ತಿಕ ಮಾಹಿತಿಗಳನ್ನೊಳಗೊಂಡ ದಾಖಲೆಗಳನ್ನು ಸೋರಿಕೆ ಮಾಡಿದೆ’ ಎಂದು ಪೋಸ್ಟ್ ಮಾಡಲಾಗಿತ್ತು. ಸಿಎಸ್ವಿ ಫಾರ್ಮೆಟ್ನಲ್ಲಿ 3.75 ಲಕ್ಷ ದಾಖಲೆಗಳು ಮತ್ತು 2,722 ಪಿಡಿಎಫ್ ಫೈಲ್ಗಳಿವೆ ಎಂದು ಅದು ಪ್ರತಿಪಾದಿಸಿತ್ತು.ಎಸ್ಬಿಐಯು ಸದ್ಯ ಈ ದತ್ತಾಂಶಗಳ ಪ್ರಾಥಮಿಕ ವಿಶ್ಲೇಷಣೆಯನ್ನಷ್ಟೇ ಮಾಡಿದ್ದು, ಡಾರ್ಕ್ವೆಬ್ನಲ್ಲಿ 2,722 ಪಿಡಿಎಫ್ ಫೈಲ್ಗಳು ಇವೆ ಎನ್ನಲಾಗುತ್ತಿದೆ. ಒಂದು ವೇಳೆ ಈ ದಾಖಲೆಗಳು ಇರುವುದು ನಿಜವೇ ಆಗಿದ್ದರೆ, ಮಾಹಿತಿ ಸೋರಿಕೆಯಾದ ಗ್ರಾಹಕರ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದೂ ಹೇಳಲಾಗುತ್ತಿದೆ.ದತ್ತಾಂಶಗಳು ಸೋರಿಕೆಯಾಗಿದ್ದು ಹೇಗೆ ಎಂಬುದನ್ನು ಬ್ಯಾಂಕ್, ಷೇರುಪೇಟೆಗೆ ಸಲ್ಲಿಸಿರುವ ವಿವರಗಳಲ್ಲಿ ತಿಳಿಸಿಲ್ಲ. ಆದರೆ, ಗ್ರಾಹಕರ ವಿಶಿಷ್ಟ ಐಡಿ, ಸಾಲಕ್ಕೆ ಸಂಬಂಧಿಸಿದ ಮಾಹಿತಿಗಳು ಸೋರಿಕೆಯಾಗಿರುವುದರಿಂದ ಅವುಗಳನ್ನು ನಿರ್ವಹಿಸುವ ವಿಭಾಗದಿಂದಲೇ ಸೋರಿಕೆಯಾಗಿದೆಯೇ ಅಥವಾ ಗ್ರಾಹಕರ ಮಾಹಿತಿಗಳನ್ನು ನಿರ್ವಹಿಸುವ ಏಜೆಂಟ್ಗಳಿಂದ ಸೋರಿಕೆಯಾಗಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.ಮಾಹಿತಿ ನೀಡಿಕೆ ವಿಳಂಬ: ಸಂಭಾವ್ಯ ಮಾಹಿತಿ ಸೋರಿಕೆ ಬಗ್ಗೆ ಅಕ್ಟೋಬರ್ 16ರಂದು ಎಚ್ಚರಿಕೆ ಸಂದೇಶ ಸಿಕ್ಕಿದ್ದರೂ, ಈ ಮಾಹಿತಿಯನ್ನು ಷೇರುಪೇಟೆಗೆ ಹಂಚಿಕೊಳ್ಳಲು ಎಸ್ಬಿಐ ಐದು ದಿನಗಳನ್ನು ತೆಗೆದುಕೊಂಡಿರುವುದು ಕೂಡ ಹಲವರ ಆಕ್ಷೇಪಕ್ಕೆ ಕಾರಣವಾಗಿದೆ. ಈ ಪ್ರಕರಣದ ಬಗ್ಗೆ ಎಸ್ಬಿಐ ಇನ್ನೂ ಗ್ರಾಹಕರಿಗೆ ಮಾಹಿತಿ ನೀಡಿಲ್ಲ ಎಂದೂ ಹೇಳಲಾಗುತ್ತಿದೆ. ಕಾಂಗ್ರೆಸ್ ಕೂಡ ಈ ಆರೋಪ ಮಾಡಿದೆ.ಕೇಂದ್ರ ಸರ್ಕಾರವು ಡಿಜಿಟಲ್ ವೈಯಕ್ತಿಕ ದತ್ತಾಂಶಗಳ ರಕ್ಷಣಾ ಕಾಯ್ದೆಯನ್ನು 2023ರಲ್ಲಿ ರೂಪಿಸಿದೆ. ಕಾಯ್ದೆಯ ನಿಯಮಗಳನ್ನು ಹಂತ ಹಂತವಾಗಿ ಜಾರಿಗೆ ತರುವ ಸಂಬಂಧ ಕೇಂದ್ರ ಸರ್ಕಾರ ಅಧಿಸೂಚನೆಯನ್ನೂ ಹೊರಡಿಸಿದೆ. ಈ ಕಾಯ್ದೆಯ ಸೆಕ್ಷನ್ 8 (6)ರ ಪ್ರಕಾರ, ಗ್ರಾಹಕರ ದತ್ತಾಂಶಗಳನ್ನು ಹೊಂದಿರುವ ಸಂಸ್ಥೆಯು, ಯಾವುದೇ ದತ್ತಾಂಶ ಸೋರಿಕೆಯಾದ ಪಕ್ಷದಲ್ಲಿ ತಕ್ಷಣವೇ ದತ್ತಾಂಶ ರಕ್ಷಣಾ ಮಂಡಳಿ ಮತ್ತು ಅದರಿಂದ ಬಾಧಿತರಾದವರಿಗೆ ಮಾಹಿತಿ ನೀಡಬೇಕು. ಆದರೆ. ಈ ನಿಯಮವು 2027ರ ಮೇ ತಿಂಗಳಿಂದ ಜಾರಿಗೆ ಬರಲಿದೆ.ಸಿಇಆರ್ಟಿ–ಇನ್ 2022ರ ಏಪ್ರಿಲ್ನಲ್ಲಿ ಹೊರಡಿಸಿರುವ ನಿರ್ದೇಶನಗಳ ಪ್ರಕಾರ, ಸೋರಿಕೆ ಖಚಿತವಾದ ಆರು ಗಂಟೆಗಳ ಒಳಗಾಗಿ ಸಿಇಆರ್ಟಿ–ಇನ್ಗೆ ಮಾಹಿತಿ ನೀಡಬೇಕು. ಆರ್ಬಿಐಯ ಸೈಬರ್ ಭದ್ರತೆಯ ಚೌಕಟ್ಟಿನ ಅನುಸಾರ ಎರಡರಿಂದ ಆರು ಗಂಟೆಗಳ ಒಳಗಾಗಿ ಆರ್ಬಿಐಗೆ ಮಾಹಿತಿ ನೀಡಬೇಕು. ಆದರೆ, ಈ ಕ್ರಮಗಳನ್ನು ಎಸ್ಬಿಐ ಕೈಗೊಂಡಿದೆಯೇ ಎಂಬ ಬಗ್ಗೆ ಅದು ಷೇರುಪೇಟೆಗೆ ಸಲ್ಲಿಸಿರುವ ವಿವರಗಳಲ್ಲಿ ಮಾಹಿತಿ ನೀಡಿಲ್ಲ.ಆರ್ಬಿಐಯ ಮೇಲ್ವಿಚಾರಣಾ ವಿಭಾಗವು ಇದೇ ಮಾರ್ಚ್ 25ರಂದು ಹೊರಡಿಸಿರುವ ಮಾರ್ಗಸೂಚಿಯ ಪ್ರಕಾರ, ದತ್ತಾಂಶ ಸೋರಿಕೆಯಾದರೆ ಸಂಬಂಧಿಸಿದ ಗ್ರಾಹಕರಿಗೆ ಬ್ಯಾಂಕ್ಗಳು ಎಸ್ಎಂಎಸ್, ಇ–ಮೇಲ್, ಆ್ಯಪ್ ನೋಟಿಫಿಕೇಷನ್, ಕರೆ ಮಾಡಿ ಮತ್ತು ವೆಬ್ಸೈಟ್ ಮೂಲಕ ಮಾಹಿತಿ ನೀಡಬೇಕು. ಸಮಸ್ಯೆ ಆದರೆ ಅದನ್ನು ನಿಭಾಯಿಸುವುದು ಹೇಗೆ ಎಂಬುದರ ವಿವರಗಳು, ಸಹಾಯವಾಣಿ ಸಂಖ್ಯೆಗಳನ್ನೂ ನೀಡಬೇಕು. ಆದರೆ, ಈ ಕ್ರಮಗಳನ್ನು ಎಸ್ಬಿಐ ಕೈಗೊಂಡಿಲ್ಲ ಎಂದು ದೂರಲಾಗಿದೆ. ಈ ವಿದ್ಯಮಾನವು ಬ್ಯಾಂಕ್ಗಳಲ್ಲಿರುವ ಮಾಹಿತಿ ಮತ್ತು ಹಣದ ಸುರಕ್ಷತೆ ಹಾಗೂ ಬ್ಯಾಂಕ್ಗಳ ಉತ್ತರದಾಯಿತ್ವದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಎಐ ಏಜೆಂಟ್ಗಳ ದಾಳಿಸ್ವಯಂ ಆಗಿ ನಿರ್ದೇಶನಗಳನ್ನು ಕೊಟ್ಟುಕೊಂಡು ಕಾರ್ಯನಿರ್ವಹಿಸುವ ಸಾಮರ್ಥ್ಯವಿರುವ ಎಐ ಏಜೆಂಟ್ ರೂಪದ ತಂತ್ರಾಂಶ ವ್ಯವಸ್ಥೆಗಳು ಭಾರತದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವ್ಯವಸ್ಥೆಯ ಮೇಲೆ ದಾಳಿ ನಡೆಸುತ್ತಿವೆ. ಸೈಬರ್ ದಾಳಿಕೋರರು ದತ್ತಾಂಶಗಳನ್ನು ಕದಿಯಲು ಉದ್ದೇಶಪೂರ್ವಕವಾಗಿ ಓಪನ್ ಸೋರ್ಸ್ ಎಐ ಟೂಲ್ಗಳನ್ನು ಬಳಸುತ್ತಿದ್ದಾರೆ ಎಂದು ಅಕ್ಟೋಬರ್ 15ರಂದು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ ಎಚ್ಚರಿಕೆ ನೀಡಿತ್ತು.ಹಿಂದಿನ ಕೆಲವು ಪ್ರಕರಣಗಳುಬ್ಯಾಂಕ್ ಆಫ್ ಬರೋಡ: ಜುಲೈ 27ರಂದು ಬ್ಯಾಂಕ್ ಆಫ್ ಬರೋಡ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ದಾಖಲೆಯ ಪ್ರಕಾರ, ‘ಬಿಸಿನೆಸ್ ಇ–ಮೇಲ್ ಕಾಂಪ್ರಮೈಸ್’ (ಬ್ಯಾಂಕ್ನ ಇ–ಮೇಲ್ ವ್ಯವಸ್ಥೆಗೆ ಅನಧಿಕೃತ ಪ್ರವೇಶ) ಒಳಗೊಂಡ ಸೈಬರ್ ಭದ್ರತಾ ಪ್ರಕರಣವೊಂದು ನಡೆದಿರುವುದನ್ನು ಬ್ಯಾಂಕ್ ಆಫ್ ಬರೋಡ ಬಹಿರಂಗಪಡಿಸಿತ್ತು. ಮಾಧ್ಯಮ ವರದಿಗಳ ಪ್ರಕಾರ, 700 ಗಿಗಾಬೈಟ್ಗೂ (ಜಿಬಿ) ಹೆಚ್ಚಿದ್ದ ಬ್ಯಾಂಕ್ನ ಡೇಟಾಸೆಟ್ ಬಗ್ಗೆ ಡಾರ್ಕ್ನೆಟ್ ತಾಣವೊಂದರಲ್ಲಿ ಜಾಹೀರಾತು ಪ್ರಕಟವಾಗಿತ್ತು. ಆ ತಾಣದ ಮೆಟಾಡೇಟಾ ವಿಶ್ಲೇಷಣೆಯಿಂದ ಈ ವಿಚಾರ ತಿಳಿದುಬಂದಿತ್ತು. ಅದರ ಬಗ್ಗೆ ವಿಧಿ ವಿಜ್ಞಾನ ತನಿಖೆ ನಡೆಸಿದ್ದ ಬ್ಯಾಂಕ್, ತನ್ನ ಕಾರ್ಯನಿರ್ವಹಣೆ, ಹಣಕಾಸು, ವ್ಯವಹಾರದ ಮುಂದುವರಿಕೆಗೆ ಅದರಿಂದ ಯಾವುದೇ ಅಡ್ಡಿಯಾಗುವುದಿಲ್ಲ ಎಂದಿತ್ತು.ಐಸಿಐಸಿಐ: ಬ್ಯಾಂಕ್ನ ಮಾಹಿತಿ ಕದ್ದಿರುವುದಾಗಿ ಬಿಎಎಸ್ಎಚ್ಇ ರ್ಯಾನ್ಸಮ್ವೇರ್ (ಕದ್ದ ದತ್ತಾಂಶವನ್ನು ಒತ್ತೆಯಾಗಿಟ್ಟುಕೊಂಡು, ಹಣಕ್ಕಾಗಿ ಒತ್ತಾಯಿಸುವ ಕುತಂತ್ರಾಂಶ) 2025ರ ಜನವರಿಯಲ್ಲಿ ಪ್ರತಿಪಾದಿಸಿತ್ತು. ಆದರೆ, ಐಸಿಐಸಿಐ ಬ್ಯಾಂಕ್ ಅದನ್ನು ಖಚಿತಪಡಿಸಲಿಲ್ಲ. ಈ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಪ್ರಕಟಣೆಯನ್ನೂ ನೀಡಲಿಲ್ಲ. ಸೈಬರ್ ಭದ್ರತೆಗೆ ಸಂಬಂಧಿಸಿದ ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಮಾರ್ಗಸೂಚಿಯನ್ನು ಬ್ಯಾಂಕ್ ಉಲ್ಲಂಘಿಸಿದೆ ಎಂದು ಆರ್ಬಿಐ, ಐಸಿಐಸಿಐ ಬ್ಯಾಂಕ್ಗೆ 2025ರ ಏಪ್ರಿಲ್ 29ರಂದು ₹97.80 ಲಕ್ಷ ದಂಡ ವಿಧಿಸಿತ್ತು.2024ರ ಏಪ್ರಿಲ್ನಲ್ಲಿ ಐಸಿಐಸಿಐ ಬ್ಯಾಂಕ್ನ ಡಿಜಿಟಲ್ ವಿಭಾಗದವರು ಹೊಸದಾಗಿ ವಿತರಿಸಿದ್ದ 17,000 ಕ್ರೆಡಿಟ್ ಕಾರ್ಡ್ಗಳನ್ನು ಬೇರೊಬ್ಬರ ಹೆಸರಿಗೆ ಜೋಡಿಸಿದ್ದರು. ಕಾರ್ಡ್ ಬಳಕೆಯ ವಿಚಾರದಲ್ಲಿ ಉಂಟಾದ ಗೊಂದಲ, ಅವ್ಯವಸ್ಥೆ ಬಗ್ಗೆ ಅನೇಕ ಗ್ರಾಹಕರು ದೂರು ನೀಡಿದರು. ಬ್ಯಾಂಕ್ನ ಒಟ್ಟು ಕ್ರೆಡಿಟ್ ಕಾರ್ಡ್ಗಳಲ್ಲಿ ಶೇ 0.1ರಷ್ಟು ಕಾರ್ಡ್ಗಳ ವಿಚಾರದಲ್ಲಿ ಮಾತ್ರ ಹೀಗಾಗಿದೆ ಎಂದು ಬ್ಯಾಂಕ್ ಹೇಳಿತ್ತು. ಗ್ರಾಹಕರ ಸೂಕ್ಷ್ಮ ಮಾಹಿತಿಯು ಎಷ್ಟರಮಟ್ಟಿಗೆ ಸುರಕ್ಷಿತ ಎನ್ನುವುದರ ಬಗ್ಗೆ ಮತ್ತು ಬ್ಯಾಂಕ್ಗಳ ಕಾರ್ಯಶೈಲಿಯ ಬಗ್ಗೆ ಹಲವು ಪ್ರಶ್ನೆಗಳು ಮೂಡಿದ್ದವು.ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ): ಬ್ಯಾಂಕ್ನ ಸರ್ವರ್ನಲ್ಲಿನ ದೋಷದಿಂದಾಗಿ 18 ಕೋಟಿ ಗ್ರಾಹಕರ ಮಾಹಿತಿಯು ಏಳು ತಿಂಗಳವರೆಗೆ ಬಹಿರಂಗಗೊಂಡಿದ್ದಿರಬಹುದು ಎಂದು ಸೈಬರ್ ಭದ್ರತಾ ಸಂಸ್ಥೆಯಾದ ‘ಸೈಬರ್ಎಕ್ಸ್9’ 2021ರ ನವೆಂಬರ್ನಲ್ಲಿ ಆರೋಪಿಸಿತ್ತು. ಪಿಎನ್ಬಿ ಆರೋಪವನ್ನು ತಳ್ಳಿಹಾಕಿತ್ತು.ಪಿಎನ್ಬಿಯ 18,000 ಗ್ರಾಹಕರ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ಗಳ ಗೋಪ್ಯ ದತ್ತಾಂಶವು ಆನ್ಲೈನ್ನಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ಸಿಂಗಪುರದ ಸೈಬರ್ ಭದ್ರತಾ ಸಂಸ್ಥೆಯಾದ ‘ಕ್ಲೈಡ್ಸೆಕ್’ 2018ರ ಫೆಬ್ರುವರಿಯಲ್ಲಿ ಸರ್ಕಾರಿ ಸಂಸ್ಥೆಯೊಂದರ ಮೂಲಕ ಬ್ಯಾಂಕ್ಗೆ ಮಾಹಿತಿ ನೀಡಿತು. ಆದರೆ, ಅದನ್ನು ನಿರಾಕರಿಸಿದ್ದ ಬ್ಯಾಂಕ್, ತನ್ನ ಭದ್ರತಾ ವ್ಯವಸ್ಥೆಯು ಸದೃಢವಾಗಿದೆ ಎಂದಿತ್ತು.300 ಸಹಕಾರ ಬ್ಯಾಂಕ್ಗಳು: 2024ರ ಜುಲೈ–ಆಗಸ್ಟ್ನಲ್ಲಿ ಬ್ಯಾಂಕ್ಗಳಿಗೆ ಸೇವೆ ಒದಗಿಸುವ ಸಿ–ಎಡ್ಜ್ ಟೆಕ್ನಾಲಜೀಸ್ ಮೇಲೆ ರ್ಯಾನ್ಸಮ್ವೇರ್ ದಾಳಿ ನಡೆದು, ಅದರಿಂದ ಸುಮಾರು 300 ಸಹಕಾರ ಬ್ಯಾಂಕ್ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳ ಹಣ ಪಾವತಿ ವ್ಯವಸ್ಥೆಗೆ ಅಡ್ಡಿಯುಂಟಾಗಿತ್ತು. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ)ತನ್ನ ಪಾವತಿ ಜಾಲದಿಂದ ಸಿ–ಎಡ್ಜ್ ಅನ್ನು ತಾತ್ಕಾಲಿಕವಾಗಿ ಹೊರಗಿಟ್ಟಿತು. ಭಾರತದ ಪಾವತಿ ವ್ಯವಸ್ಥೆಯಲ್ಲಿ ಈ ಬ್ಯಾಂಕ್ಗಳ ಪಾಲು ಶೇ 0.5 ಎಂದು ಮಾಧ್ಯಮ ವರದಿಗಳು ತಿಳಿಸಿದ್ದವು.ಗ್ರಾಹಕರು ಹೇಗೆ ಎಚ್ಚರಿಕೆ ವಹಿಸಬೇಕು?ಸೋರಿಕೆಯಾಗಿರುವ ಎಸ್ಬಿಐನ ದತ್ತಾಂಶವು ಸೈಬರ್ ಕಳ್ಳರ ಕೈಗೆ ಸಿಕ್ಕರೆ, ಅದರಿಂದ ಗ್ರಾಹಕರಿಗೆ ವಂಚನೆ ಮಾಡುವುದು ಸುಲಭವಾಗುತ್ತದೆ. ಆ ಮಾಹಿತಿ ಬಳಸಿ ಸೈಬರ್ ವಂಚಕರು ಗ್ರಾಹಕರ ಖಾತೆಗಳಲ್ಲಿರುವ ಹಣವನ್ನು ಲಪಟಾಯಿಸಬಹುದು. ಹೀಗಾಗಿ ಗ್ರಾಹಕರು ಕೆಲವು ಎಚ್ಚರಿಕೆಗಳನ್ನು ವಹಿಸಬೇಕು.ಒಟಿಪಿ, ಪಿನ್, ಪಾಸ್ವರ್ಡ್ ಹಂಚಿಕೊಳ್ಳಬಾರದು: ಈ ಮಾಹಿತಿಯನ್ನು ಯಾರಿಗೂ– ಬ್ಯಾಂಕ್ನವರು ಎಂದು ಹೇಳಿಕೊಂಡು ಫೋನ್ ಮಾಡಿದರೂ– ಹಂಚಿಕೊಳ್ಳಬಾರದು. ಅನಪೇಕ್ಷಿತ, ಹಣಕಾಸಿನ ವಹಿವಾಟಿಗೆ ಸಂಬಂಧಿಸಿದ ಕರೆ, ಮೆಸೇಜ್, ಇ–ಮೇಲ್ಗಳ ಬಗ್ಗೆ ಜಾಗರೂಕರಾಗಿರಬೇಕುವಹಿವಾಟು ಮಾಹಿತಿ ಲಭ್ಯವಿರಲಿ: ನಿಮ್ಮ ಖಾತೆಯಲ್ಲಿ ಯಾವುದೇ ರೀತಿಯ ವಹಿವಾಟು ನಡೆದರೂ ಅದರ ಬಗ್ಗೆ ಎಸ್ಎಂಎಸ್, ಇ–ಮೇಲ್ ಮೂಲಕ ನಿಮಗೆ ಮಾಹಿತಿ ರವಾನೆಯಾಗುವ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ನೀವು ಮಾಡದೇ ಇರುವ ವಹಿವಾಟಿನ ಬಗ್ಗೆ ಮಾಹಿತಿ ತಿಳಿದುಬಂದರೆ ತಕ್ಷಣವೇ ಬ್ಯಾಂಕ್ಗೆ ತಿಳಿಸಬೇಕುಅಧಿಕೃತ ಮಾರ್ಗಗಳನ್ನೇ ಬಳಸಿ: ಎಸ್ಬಿಐನಲ್ಲಿ ವ್ಯವಹಾರ ಮಾಡಬೇಕು ಎಂದರೆ, ಅದರ ಅಧಿಕೃತ ಮಾರ್ಗಗಳನ್ನೇ (ವೆಬ್ಸೈಟ್, ಆ್ಯಪ್...) ಬಳಸಬೇಕು. ಅಪರಿಚಿತರು ಕಳಿಸಿದ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬಾರದು. ಕ್ರೆಡಿಟ್ ಕಾರ್ಡ್ ಬಳಕೆ ಬಗ್ಗೆ ಇರಲಿ ಎಚ್ಚರ ಇರಲಿ. ಹಾಗೆಯೇ ಬಯೊಮೆಟ್ರಿಕ್ ಅನ್ನು ಆಧಾರ್ ವ್ಯವಸ್ಥೆ (ಯುಐಡಿಎಐ) ಮೂಲಕ ಲಾಕ್ ಮಾಡಿ ಇಡಬೇಕು.ದೂರು ದಾಖಲಿಸಿ: ವಂಚನೆ ನಡೆದಿರುವುದರ ಬಗ್ಗೆ ಅನುಮಾನ ಬಂದರೆ, ತಕ್ಷಣವೇ ಸೈಬರ್ಕ್ರೈಮ್ ಹೆಲ್ಪ್ಲೈನ್ 1930 ಅಥವಾ cybercrime.gov.in. ಮೂಲಕ ದೂರು ದಾಖಲಿಸಬೇಕು. ಬ್ಯಾಂಕ್ನ ಅಧಿಕಾರಿಗಳಿಗೆ ಮಾಹಿತಿ ನೀಡಬೇಕುಏನಿದು ಡಾರ್ಕ್ವೆಬ್?ಇದು ಅಂತರ್ಜಾಲದ ಕತ್ತಲ ಜಗತ್ತು. ಜಗತ್ತಿಗೆ ಇಂಟರ್ನೆಟ್ ಪರಿಚಯವಾದಂದಿನಿಂದಲೇ ಈ ಡಾರ್ಕ್ ವೆಬ್ ಕೂಡ ಚಾಲ್ತಿಯಲ್ಲಿದೆ. ನಾವು ಬಳಸುವ ಅಂತರ್ಜಾಲದ ಮಾದರಿಯಲ್ಲಿ ಈ ಕತ್ತಲ ಅಂತರ್ಜಾಲದಲ್ಲೂ ಮಾಹಿತಿಗಳು ಇರುತ್ತವೆ. ದತ್ತಾಂಶಗಳು ಇಲ್ಲಿ ಗೋಪ್ಯವಾಗಿ ಇರುತ್ತವೆ. ಅವುಗಳು ಸಿಗಬೇಕು ಎಂದಿದ್ದರೆ, ವಿಶೇಷ ಸವಲತ್ತನ್ನು ಬಳಸಿಕೊಂಡು ಅಂತರ್ಜಾಲ ಪ್ರವೇಶಿಸಬೇಕಾಗುತ್ತದೆ.ಡಾರ್ಕ್ ವೆಬ್, ಸರ್ಕಾರಗಳು, ಕಾನೂನು, ನಿಯಮಗಳ ನಿಯಂತ್ರಣದಿಂದ ಹೊರಗಿದೆ. ನಾವು ಸಾಮಾನ್ಯವಾಗಿ ಬಳಸುವ ಗೂಗಲ್, ಬಿಂಗ್ ಸೇರಿದಂತೆ ಇನ್ನಿತರ ಸರ್ಚ್ ಎಂಜಿನ್ಗಳನ್ನು ಬಳಸಿಕೊಂಡು ಇದರಲ್ಲಿನ ಮಾಹಿತಿಗಳನ್ನು ಹುಡುಕಲು ಸಾಧ್ಯವಿಲ್ಲ. ಕ್ರೋಮ್, ಫೈರ್ಫಾಕ್ಸ್, ಒಪೆರಾ ಇನ್ನಿತರ ಬ್ರೌಸರ್ಗಳ ಮೂಲಕವೂ ಇದರಲ್ಲಿನ ಮಾಹಿತಿಗಳನ್ನು ಪಡೆಯಲು ಸಾಧ್ಯವಿಲ್ಲ.ಮೊದಲೇ ಹೇಳಿದಂತೆ, ಡಾರ್ಕ್ ವೆಬ್ನಲ್ಲೂ ಸಾಮಾನ್ಯ ವೆಬ್ನಲ್ಲಿರುವಂತಹ ಮಾಹಿತಿಗಳೇ ಇರುತ್ತವೆ. ಆದರೆ, ಇಂಟರ್ನೆಟ್ ಜಗತ್ತಿನಲ್ಲಿ ಡಾರ್ಕ್ ವೆಬ್ ಕುಖ್ಯಾತಿ ಗಳಿಸಿದೆ. ಯಾಕೆಂದರೆ, ಅದರಲ್ಲಿನ ಮಾಹಿತಿಗಳು ಅಕ್ರಮಗಳಿಗೆ, ದೇಶ ವಿರೋಧಿ ಕೃತ್ಯಗಳಿಗೆ ಬಳಕೆಯಾಗುತ್ತವೆ. ಉದಾಹರಣೆಗೆ ಶಸ್ತ್ರಾಸ್ತ್ರ ಅಕ್ರಮ ಮಾರಾಟ, ಮಾದಕ ವಸ್ತುಗಳ ಕಾಳಸಂತೆ, ಜನರ ಮಾಹಿತಿಯನ್ನು ಕದ್ದು, ಸಂಗ್ರಹಿಸಿಡುವುದು... ಹಾಗಾಗಿ, ಈ ಕತ್ತಲ ಅಂತರ್ಜಾಲವನ್ನು ಬಳಸುವವರಲ್ಲಿ ಅಪರಾಧಿಗಳೇ ಹೆಚ್ಚಿದ್ದಾರೆ.ಡಾರ್ಕ್ ವೆಬ್ಗೆ ಪ್ರವೇಶಿಸುವುದು ಕಾನೂನುಬಾಹಿರ ಅಲ್ಲ. ಆದರೆ, ಅಲ್ಲಿರುವ ಮಾಹಿತಿಗಳನ್ನು ಸಂಗ್ರಹಿಸಿ ಅದನ್ನು ದುರುದ್ದೇಶಕ್ಕೆ ಬಳಸುವುದು, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು, ನಿಷೇಧಿತ ವಸ್ತುಗಳನ್ನು ಖರೀದಿಸುವುದು ಇತ್ಯಾದಿ ಕೃತ್ಯಗಳು ಅಪರಾಧವಾಗುತ್ತವೆ. ಇಂತಹ ಡಾರ್ಕ್ ವೆಬ್ಗೆ ಪ್ರವೇಶ ಪಡೆಯಬೇಕಾದರೆ, ವಿಶೇಷ ಸಾಫ್ಟ್ವೇರ್ಗಳು ಬೇಕು.ಆಧಾರ: ಪಿಟಿಐ, ಸಿಇಆರ್ಟಿ–ಇನ್,ಇಂಟರ್ನೆಟ್ಫ್ರೀಡಂ.ಇನ್, ಮಾಧ್ಯಮ ವರದಿಗಳು