ದಸರಾ ಬಗ್ಗೆ ಧನಾತ್ಮಕ ಪ್ರಚಾರಕ್ಕೆ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳ ಬಳಕೆ!
ಅಭಿಪ್ರಾಯ ಹೇರುವ ಪ್ರಯತ್ನದ ಅರಿವಿರಲಿ..ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು.. ಹಿರಿಯರ ಗಾದೆ ಮಾತು ಮೈಸೂರು ದಸರಾ ಮುಕ್ತಾಯವಾದ ಬಳಿಕ ಪದೇ, ಪದೇ ನೆನಪಾಗುತ್ತಿದೆ.ಜನರ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ತಿಳಿಸಲು ಬಳಕೆಯಾಗುತ್ತಿದ್ದ ಸಾಮಾಜಿಕ ಜಾಲತಾಣಗಳನ್ನು, ಜನರಲ್ಲಿ ಅಭಿಪ್ರಾಯ ಹೇರಲು ಬಳಕೆ ಮಾಡಲಾಗಿದೆ ಎಂಬ ಮಾತು ದಸರಾ ಬಳಿಕ ಜನರ ನಡುವೆ ಕೇಳಿಬರುತ್ತಿದೆ.‘20 ಸಾವ
ಅಭಿಪ್ರಾಯ ಹೇರುವ ಪ್ರಯತ್ನದ ಅರಿವಿರಲಿ..ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು.. ಹಿರಿಯರ ಗಾದೆ ಮಾತು ಮೈಸೂರು ದಸರಾ ಮುಕ್ತಾಯವಾದ ಬಳಿಕ ಪದೇ, ಪದೇ ನೆನಪಾಗುತ್ತಿದೆ.ಜನರ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ತಿಳಿಸಲು ಬಳಕೆಯಾಗುತ್ತಿದ್ದ ಸಾಮಾಜಿಕ ಜಾಲತಾಣಗಳನ್ನು, ಜನರಲ್ಲಿ ಅಭಿಪ್ರಾಯ ಹೇರಲು ಬಳಕೆ ಮಾಡಲಾಗಿದೆ ಎಂಬ ಮಾತು ದಸರಾ ಬಳಿಕ ಜನರ ನಡುವೆ ಕೇಳಿಬರುತ್ತಿದೆ.‘20 ಸಾವಿರಕ್ಕಿಂತ ಅಧಿಕ ಫಾಲೋವರ್ಸ್ ಇರುವ ಕೆಲವು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಿಗೆ ಪಾಸ್ ಕೊಡಿಸಿ, ದಸರಾ ಕಾರ್ಯಕ್ರಮಗಳ ಬಗ್ಗೆ ಧನಾತ್ಮಕ ವಿಚಾರ ಹಂಚಿಕೊಳ್ಳುವಂತೆ ತಿಳಿಸಿದ್ದಾರೆ’ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯೊಂದು ನಡೆಯುತ್ತಿದೆ. ಇದರಿಂದ ವಿವಿಧ ಕಾರ್ಯಕ್ರಮಗಳಲ್ಲಿನ ಲೋಪ ಅಥವಾ ನೈಜ ವಿಚಾರಗಳನ್ನು ಜನರಿಂದ ಮರೆಮಾಚುವ ಪ್ರಯತ್ನವಾಗಿದೆ ಎನ್ನಲಾಗುತ್ತಿದೆ.ಮೊಬೈಲ್ ಮೂಲಕ ಪ್ರಪಂಚದ ವಿಷಯಗಳನ್ನು ಅಂಗೈಯಲ್ಲಿ ಕಾಣಬಹುದು ಎಂಬ ಮಾತಿನಂತೆ ಹೆಚ್ಚಿನ ಜನರು ರೀಲ್ಸ್ಗಳ ಮೂಲಕ ಮಾಹಿತಿ ಪಡೆಯುವುದು ವಾಡಿಕೆಯಾಗಿದೆ. ಇದನ್ನೇ ಬಳಸಿಕೊಂಡ ಅನೇಕ ಅಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಯುವಕ, ಯುವತಿಯರನ್ನು ಬಳಸಿಕೊಂಡು ತಮ್ಮ ಕಾರ್ಯಕ್ರಮದ ಬಗ್ಗೆ ಧನಾತ್ಮಕವಾಗಿ ಮಾತನಾಡುವ ವಿಡಿಯೊಗಳನ್ನು ಮಾಡಿಸಿದ್ದಾರೆ.ಸಾಮಾಜಿಕ ಮಾಧ್ಯಮ ಬಳಸಿ ಸಕ್ರಿಯವಾಗಿ ಸುದ್ದಿ ಬಿತ್ತರಿಸುವ ಅನೇಕ ಜನರಿಗೆ ಡಿಜಿಟಲ್ ಮೀಡಿಯಾ ಪಾಸ್ ವಿತರಿಸಲಾಗಿತ್ತು. ಅವರು ಎಂದಿನಂತೆ ಸುದ್ದಿ ಬಿತ್ತರಿಸುತ್ತಿದ್ದರು. ಈ ಬಗ್ಗೆ ಯಾರೂ ತಕರಾರು ಎತ್ತಲೂ ಇಲ್ಲ. ಆದರೆ ನಿತ್ಯದ ಸುದ್ದಿ ಲೋಕದಲ್ಲಿ ಕಾಣಿಸಿ ಕೊಳ್ಳದ ಅನೇಕರು, ದಸರಾ ಕಾರ್ಯಕ್ರಮಗಳಲ್ಲಿ ಪಾಸ್ ಹಾಕಿಕೊಂಡು ವೇದಿಕೆ ಮುಂಭಾಗ ನಿಂತು ಹಿಂದಿರುವ ಜನರಿಗೂ ತೊಂದರೆ ನೀಡುತ್ತಿದ್ದರು.ಪಾಸ್ ಇದ್ದ ಕಾರಣ ಪೊಲೀಸರು ಪ್ರಶ್ನಿಸದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಲಾಖೆಗಳಿಗೆ, ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ನಿಯೋಜಿಸಿರುವ ಸಾಮಾಜಿಕ ಜಾಲತಾಣದ ತಂಡಗಳು ತಮ್ಮವರನ್ನು ಸುಂದರವಾಗಿ ಸೆರೆಹಿಡಿಯುವ ಭರದಲ್ಲಿ ಕಾರ್ಯಕ್ರಮ ವೀಕ್ಷಿಸಲು ಬರುವವರ ಹಿತ ಮರೆಯುತ್ತಿದ್ದರು. ಅನೇಕ ಕಡೆ ಫೊಟೊ, ವಿಡಿಯೊಗೆ ಬೇಕಾದ ವಾತಾವರಣ ಸೃಷ್ಟಿಸಲಾಗುತ್ತಿತ್ತು.ಕೆಲವು ಇನ್ಫ್ಲುವೆನ್ಸರ್ ಗಳು ಸಮಸ್ಯೆಗಳ ವಿವರಣೆಯಿಲ್ಲದೆ, ತಮಗೆ ಸಹಾಯ ಮಾಡಿದವರ ವೈಭವೀಕರಣ ಮಾಡಿದ ಪರಿಣಾಮ, ಅದನ್ನು ನೋಡಿ ನಗರಕ್ಕೆ ಆಗಮಿಸಿದ ಜನ ಪೇಚಿಗೆ ಸಿಲುಕಿದ್ದೂ ಇವೆ. ದಸರಾ ಆರಂಭಕ್ಕೆ ಮುನ್ನ ದಸರಾ ಉಪಸಮಿತಿಗಳು ಪತ್ರಕರ್ತರನ್ನು ಕರೆದು ಸಾರ್ವಜನಿಕರಿಗೆ ಮಾಹಿತಿ ತಿಳಿಸುವ ಕೆಲಸ ಮಾಡುತ್ತಿದ್ದರು. ಆದರೆ ಈ ಬಾರಿ ಅನೇಕ ಉಪಸಮಿತಿಗಳು ಪತ್ರಿಕಾಗೋಷ್ಠಿಯನ್ನೂ ಕರೆಯದೆ ಮಾಹಿತಿ ಮುಚ್ಚಿಟ್ಟಿದ್ದವು.ಯುವ ಸಂಭ್ರಮ, ಯುವ ದಸರಾ ಮುಂತಾದ ಕಾರ್ಯಕ್ರಮಗಳಲ್ಲಿ ಹೊಗಳುವ ಕೆಲಸ ಮಾಡಿಕೊಟ್ಟವರಿಗೆ ಅರಮನೆ ಆವರಣಕ್ಕೆ ಪಾಸ್ ನೀಡಲಾಗಿದೆ ಎಂಬ ಮಾತುಗಳೂ ಕೇಳಿ ಬಂದಿವೆ. ಇವೆಲ್ಲದರ ನಡುವೆ ಹಲವಾರು ಜನ.. ತಮಗಾದ ಸುಂದರ ಅನುಭವ ಅಥವಾ ಕಹಿ ಅನುಭವದ ವಾಸ್ತವ ಸತ್ಯಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹರಿ ಬಿಟ್ಟಿದ್ದಾರೆ..ರೀಲ್ಸ್ಗಳನ್ನಷ್ಟೇ ನೋಡಿ ಕಾರ್ಯಕ್ರಮದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಮೊದಲು ಈ ಮೇಲಿನ ವಿಚಾರಗಳು ನೆನಪಿದ್ದರೆ, ನೈಜತೆ ಕುರಿತು ಯೋಚಿಸುವ ಚಿಂತನೆ ಎಲ್ಲರಲ್ಲೂ ಮೂಡಬಹುದು.