ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಬಂಧನಕ್ಕೆ ಒತ್ತಾಯ
ಬೀದರ್: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಿ, ಪ್ರಜಾಪ್ರಭುತ್ವ ಮರು ಸ್ಥಾಪಿಸಬೇಕು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಿ, ಅವರನ್ನು ಬಂಧಿಸುವಂತೆ ಆಗ್ರಹಿಸಿ ನಗರದಲ್ಲಿ ಶುಕ್ರವಾರ ಸಂಜೆ ತಿರಂಗಾ ಯಾತ್ರೆ ನಡೆಸಲಾಯಿತು. ಎಸ್ಐಆರ್ ವಿರೋಧಿ ಒಕ್ಕೂಟ, ಸಂಯುಕ್ತ ಕಿಸಾನ್ ಮೋರ

ಬೀದರ್: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಿ, ಪ್ರಜಾಪ್ರಭುತ್ವ ಮರು ಸ್ಥಾಪಿಸಬೇಕು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಿ, ಅವರನ್ನು ಬಂಧಿಸುವಂತೆ ಆಗ್ರಹಿಸಿ ನಗರದಲ್ಲಿ ಶುಕ್ರವಾರ ಸಂಜೆ ತಿರಂಗಾ ಯಾತ್ರೆ ನಡೆಸಲಾಯಿತು. ಎಸ್ಐಆರ್ ವಿರೋಧಿ ಒಕ್ಕೂಟ, ಸಂಯುಕ್ತ ಕಿಸಾನ್ ಮೋರ್ಚಾ, ಜಾತ್ಯತೀತ ಪಕ್ಷಗಳು ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾಕಾರರು ಜಮಾಯಿಸಿದರು. ಒಂದು ಕೈಯಲ್ಲಿ ತ್ರಿವರ್ಣ ಧ್ವಜ, ಇನ್ನೊಂದು ಕೈಯಲ್ಲಿ ಎಸ್ಐಆರ್ ವಿರೋಧಿ ಭಿತ್ತಿ ಪತ್ರಗಳನ್ನು ಹಿಡಿದು, ಘೋಷಣೆ ಕೂಗಿದರು. ನಗರದ ಪ್ರಮುಖ ಮಾರ್ಗಗಳಲ್ಲಿ ರ್ಯಾಲಿ ನಡೆಸಿ, ಪುನಃ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡರು. ರಾಷ್ಟ್ರಮಟ್ಟದಲ್ಲಿ ತಿರಂಗಾ ಯಾತ್ರೆಗೆ ಕರೆ ಕೊಟ್ಟಿದ್ದರಿಂದ ನಗರದಲ್ಲಿ ರ್ಯಾಲಿ ನಡೆಸಲಾಯಿತು. ಮುಖಂಡ ಓಂಪ್ರಕಾಶ್ ರೊಟ್ಟೆ ಮಾತನಾಡಿ, ಕೇಂದ್ರ ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಪ್ರಭಾವಕ್ಕೆ ಒಳಗಾಗಿ ಮತದಾರರ ಹಕ್ಕುಗಳನ್ನು ಕಸಿಯುವ ಪ್ರಯತ್ನ ನಡೆಸುತ್ತಿದೆ. ಸಂವಿಧಾನಬದ್ಧ ಹಕ್ಕುಗಳಿಗೆ ಧಕ್ಕೆ ತರುತ್ತಿದೆ. ಮತದಾರರ ಪಟ್ಟಿಯ ಪರಿಷ್ಕರಣೆ ಪಾರದರ್ಶಕವಾಗಿ ಮತ್ತು ನ್ಯಾಯಸಮ್ಮತವಾಗಿ ನಡೆಯಬೇಕು. ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂದು ಒತ್ತಾಯಿಸಿದರು.‘ಹರ್ ಹಾಥ್ ಮೇ ತಿರಂಗಾ, ಹರ್ ಗಲಿ ಮೇ ಜಂತರ್ ಮಂತರ್’ ಎಂಬ ಘೋಷಣೆಯೊಂದಿಗೆ ಜನರನ್ನು ಸಂಘಟಿಸಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ಸಾಮೂಹಿಕ ಹೋರಾಟ ರೂಪಿಸುವ ಅಗತ್ಯವಿದೆ. ದೇಶದ ಭವಿಷ್ಯ ಯುವಜನರ ಕೈಯಲ್ಲಿದೆ. ಪ್ರಜಾಪ್ರಭುತ್ವವನ್ನು ಮರಳಿ ಪಡೆಯುವ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕು. ಎಸ್ಐಆರ್ ರದ್ದತಿಗಾಗಿ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು. ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸಬೇಕು ಎಂದು ಹೇಳಿದರು.ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಎಸ್ಐಆರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಮತದಾರರ ಪಟ್ಟಿಯಿಂದ ಅಳಿಸಲಾಗಿರುವ ಅರ್ಹ ಮತದಾರರ ಹೆಸರುಗಳನ್ನು ಮರು ಸ್ಥಾಪಿಸಬೇಕು. ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆ-2023ಕ್ಕೆ ಮಾಡಲಾದ ತಿದ್ದುಪಡಿಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.ಪಕ್ಷಪಾತರಹಿತ ಪ್ರಕ್ರಿಯೆಯ ಮೂಲಕ ಹೊಸ ಚುನಾವಣಾ ಆಯೋಗವನ್ನು ನೇಮಿಸಬೇಕು. ಮತದಾರರ ಪಟ್ಟಿಯನ್ನು ನ್ಯಾಯಸಮ್ಮತವಾಗಿ ಪರಿಷ್ಕರಿಸಬೇಕು. ಇವಿಎಂಗಳ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವ ವ್ಯವಸ್ಥೆ ಜಾರಿಗೊಳಿಸಬೇಕು. ದೇಶದಲ್ಲಿ ಸಂವಿಧಾನ ಉಳಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ. ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ ಹಾಗೂ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮುಂದುವರಿಸಲಾಗುವುದು ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಮುಹಮ್ಮದ್ ನಿಜಾಮುದ್ದಿನ್, ಬಾಬುರಾವ್ ಹೊನ್ನಾ ನಾಯಕ್, ಮಾರುತಿ ಬೌದ್ಧೆ, ವಿಠ್ಠಲದಾಸ ಪ್ಯಾಗೆ, ಡಾ. ಮಕ್ಸೂದ್ ಚಂದಾ, ಡಾ. ದೇವಿದಾಸ ತುಮಕುಂಟೆ, ರೇಷ್ಮಾ ಹಂಸರಾಜ್, ಮುಹಮ್ಮದ್ ಆಸಿಫುದ್ದಿನ್, ಎಂ.ಡಿ. ಶಫಾಯತ್ ಅಲಿ, ಗುರುನಾಥ ಗಡ್ಡೆ, ನಜೀರ್ ಸಾಬ್, ಡಾ. ಜಿಯಾವುಲ್ ಇಸ್ಲಾಂ, ಮುಹಮ್ಮದ್ ಯೂಸೂಫ್, ಮುಬಸೀರ್ ಸಿಂಧೆ, ಅರುಣ್ ಪಟೇಲ್, ಸೈಯದ್ ಮನ್ಸೂರ್ ಖಾದ್ರಿ, ಸಂತೋಷಕುಮಾರ ಜೋಳದಾಬಕೆ ಮತ್ತಿತರರು ಪಾಲ್ಗೊಂಡಿದ್ದರು.