ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ; 33 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ
ಬೀದರ್: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು.ಜಿಲ್ಲೆಯ ಒಟ್ಟು 33 ಮತಗಟ್ಟೆಗಳಲ್ಲಿ ಬೆಳಿಗ್ಗೆ 8ರಿಂದ ಸಂಜೆ 4ರ ವರೆಗೆ ಮತದಾನ ನಡೆಯಿತು. ಒಟ್ಟು 7,038 ನೋಂದಾಯಿತ ಮತದಾರರಲ್ಲಿ 6,086 ಜನ ಹಕ್ಕು ಚಲಾಯಿಸಿದ್ದು, ಶೇ 86.47ರಷ್ಟು ಮತದಾನ ದಾಖಲಾಗಿದೆ. ಶೇ 89.98ರಷ್ಟು ಪುರುಷ

ಬೀದರ್: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು.ಜಿಲ್ಲೆಯ ಒಟ್ಟು 33 ಮತಗಟ್ಟೆಗಳಲ್ಲಿ ಬೆಳಿಗ್ಗೆ 8ರಿಂದ ಸಂಜೆ 4ರ ವರೆಗೆ ಮತದಾನ ನಡೆಯಿತು. ಒಟ್ಟು 7,038 ನೋಂದಾಯಿತ ಮತದಾರರಲ್ಲಿ 6,086 ಜನ ಹಕ್ಕು ಚಲಾಯಿಸಿದ್ದು, ಶೇ 86.47ರಷ್ಟು ಮತದಾನ ದಾಖಲಾಗಿದೆ. ಶೇ 89.98ರಷ್ಟು ಪುರುಷರು ಹಾಗೂ ಶೇ 82.37ರಷ್ಟು ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಬಿಗಿ ಭದ್ರತೆ ನಡುವೆ ಬೆಳಿಗ್ಗೆ ಎಂಟು ಗಂಟೆಗೆ ಮತದಾನ ಆರಂಭಗೊಂಡಿತು. ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಕೆಂಡದಂತಹ ಬಿಸಿಲು ಇರುತ್ತಿರುವುದರಿಂದ ಹೆಚ್ಚಿನ ಮತದಾರರು ಮಧ್ಯಾಹ್ನ 12 ಗಂಟೆಯೊಳಗೆ ಮತಗಟ್ಟೆಗಳಿಗೆ ತೆರಳಿ ಮತ ಚಲಾವಣೆ ಮಾಡಿದರು. ಬೆಳಿಗ್ಗೆ 9ರಿಂದ 12 ಗಂಟೆಯ ವರೆಗೆ ಬಹುತೇಕ ಎಲ್ಲಾ ಮತಗಟ್ಟೆಗಳ ಎದುರು ಉದ್ದನೆಯ ಸರತಿ ಸಾಲು ಕಂಡು ಬಂತು. ಆದರೆ, ಗ್ರಾಮೀಣ ಭಾಗಗಳಲ್ಲಿ ಈ ಪರಿಸ್ಥಿತಿ ಇರಲಿಲ್ಲ. ಆಗೊಬ್ಬರು, ಈಗೊಬ್ಬರು ಎಂಬಂತೆ ಬಿಡುವು ಮಾಡಿಕೊಂಡು ಬಂದು ಮತ ಹಾಕಿದರು. ಗ್ರಾಮೀಣ ಭಾಗದ ಬಹುತೇಕ ಮತಗಟ್ಟೆಗಳು ಬಿಕೋ ಎನ್ನುತ್ತಿದ್ದವು. ಮಧ್ಯಾಹ್ನ 1ಗಂಟೆಗೆ ತಾಲ್ಲೂಕಿನ ಜನವಾಡಕ್ಕೆ ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ಕೊಟ್ಟಾಗ 100 ಮತದಾರರಲ್ಲಿ 33 ಜನ ಮತ ಹಾಕಿದ್ದರು. ಔರಾದ್ ತಾಲ್ಲೂಕಿನ ಸಂತಪುರಿನ ಮತಗಟ್ಟೆಯಲ್ಲೂ ಇದೇ ಪರಿಸ್ಥಿತಿ ಇತ್ತು. ಮತಗಟ್ಟೆ ಸಂಖ್ಯೆ 28ರಲ್ಲಿ ಶೇ 50ಕ್ಕಿಂತ ಹೆಚ್ಚು ಮತದಾನ ಆಗಿತ್ತು. 160 ಮತದಾರರಲ್ಲಿ 90 ಜನ ಹಕ್ಕು ಚಲಾಯಿಸಿದ್ದರು. ಎಲ್ಲಾ ಮತಗಟ್ಟೆಗಳ ಎದುರು ಕಾಂಗ್ರೆಸ್ ಹಾಗೂ ಬಿಜೆಪಿಯವರು ಶಾಮಿಯಾನ ಹಾಕಿಕೊಂಡು, ಮತದಾರರಿಗೆ ನೆರವಾದರು. ಎರಡೂ ಪಕ್ಷಗಳ ಮುಖಂಡರು ಜಿಲ್ಲೆಯಾದ್ಯಂತ ಸಂಚರಿಸಿ, ಮಾಹಿತಿ ಪಡೆದರು. ಕೊನೆಯ ಕ್ಷಣದ ವರೆಗೆ ಮತದಾರರನ್ನು ಓಲೈಸಲು ಪ್ರಯತ್ನಿಸಿದರು.ಬೀದರ್ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್, ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ ಸೇರಿದಂತೆ ಹಲವರು ಓಡಾಡಿದರು. ಸಂಸದ ಸಾಗರ್ ಖಂಡ್ರೆ ಭಾಲ್ಕಿ, ಔರಾದ್ ಹಾಗೂ ಕಮಲನಗರದ ವಿವಿಧ ಮತಗಟ್ಟೆಗಳ ಹೊರಗೆ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ, ಮುಖಂಡರಾದ ಈಶ್ವರ ಸಿಂಗ್ ಠಾಕೂರ್, ರಘುನಾಥರಾವ್ ಮಲ್ಕಾಪುರೆ, ಪೀರಪ್ಪ ಔರಾದೆ, ರಾಜಶೇಖರ ನಾಗಮೂರ್ತಿ, ಶಶಿಧರ ಹೊಸಳ್ಳಿ ಮತ್ತಿತರರು ವಿವಿಧ ಮತಗಟ್ಟೆಗಳಿಗೆ ಭೇಟಿ ಕೊಟ್ಟರು. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲರಾವ್, ಬೀದರ್ ಉಪವಿಭಾಗಾಧಿಕಾರಿ ಅಭಿನವ್ ಜೈನ್ ಅವರು ಬೀದರ್ ನಗರ, ಹುಮನಾಬಾದ್, ತಾಲ್ಲೂಕಿನ ಹಳ್ಳಿಖೇಡ್, ದುಬಲಗುಂಡಿ, ರಾಜೇಶ್ವರ ಸೇರಿದಂತೆ ಜಿಲ್ಲೆಯ ವಿವಿಧ ಭಾಗದ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರೂ ವಿವಿಧ ಮತದಾನ ಕೇಂದ್ರಗಳಿಗೆ ಭೇಟಿ ನೀಡಿದರು.ಬೀದರ್ ಜಿಲ್ಲೆಯ ಎಂಟು ತಾಲ್ಲೂಕುಗಳಲ್ಲಿ ಚಲಾವಣೆಯಾದ ಮತಗಳ ವಿವರ...ತಾಲ್ಲೂಕು ಹೆಸರು; ಮತಗಳುಬೀದರ್; 2,279ಭಾಲ್ಕಿ; 975ಬಸವಕಲ್ಯಾಣ; 900ಹುಮನಾಬಾದ್; 744ಔರಾದ್; 425ಚಿಟಗುಪ್ಪ; 309ಕಮಲನಗರ; 304ಹುಲಸೂರ; 147ಒಟ್ಟು; 6,083ಅಂಕಿ ಅಂಶ...* 6,086 ಜನರಿಂದ ಮತ ಚಲಾವಣೆ* 3,414 ಪುರುಷರು ಹಕ್ಕು ಚಲಾವಣೆ* 2,672 ಮಹಿಳೆಯರು ಮತ ಚಲಾವಣೆ* 7,038 ಒಟ್ಟು ಮತದಾರರ ಸಂಖ್ಯೆ