ವಂಡರ್; ವಂಡರ್ಫುಲ್... ಜುಕರ್ಬರ್ಗ್ ಹೊಸ ಎಐ ಅಸ್ತ್ರಕ್ಕೆ ಜಗತ್ತು ಸಂಚಲನ
ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ದಿನಕ್ಕೊಂದು ಹೊಸ ಕ್ರಾಂತಿಗಳು ನಡೆಯುತ್ತಲೇ ಇವೆ. ಈವರೆಗೆ ಓಪನ್ಎಐ ಸಂಸ್ಥೆಯ ‘ಚಾಟ್ಜಿಪಿಟಿ’ ಮತ್ತು ಆಂಥ್ರೋಪಿಕ್ ಕಂಪನಿಯ ‘ಕ್ಲಾಡ್’ ಈ ರೇಸ್ನಲ್ಲಿ ಮುಂಚೂಣಿಯಲ್ಲಿದ್ದವು. ಆದರೆ, ಈಗ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನ ಮಾತೃ ಸಂಸ್ಥೆಯಾದ ಮೆಟಾ ತನ್ನ ಅತ್ಯಾಧುನಿಕ ‘ಮ್ಯೂಸ್ ವಂಡರ್’ ಮತ್ತು ‘ಮ್ಯೂಸ್ ವಂಡರ್ಫುಲ್’ ಎಐ ಮ

ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ದಿನಕ್ಕೊಂದು ಹೊಸ ಕ್ರಾಂತಿಗಳು ನಡೆಯುತ್ತಲೇ ಇವೆ. ಈವರೆಗೆ ಓಪನ್ಎಐ ಸಂಸ್ಥೆಯ ‘ಚಾಟ್ಜಿಪಿಟಿ’ ಮತ್ತು ಆಂಥ್ರೋಪಿಕ್ ಕಂಪನಿಯ ‘ಕ್ಲಾಡ್’ ಈ ರೇಸ್ನಲ್ಲಿ ಮುಂಚೂಣಿಯಲ್ಲಿದ್ದವು. ಆದರೆ, ಈಗ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನ ಮಾತೃ ಸಂಸ್ಥೆಯಾದ ಮೆಟಾ ತನ್ನ ಅತ್ಯಾಧುನಿಕ ‘ಮ್ಯೂಸ್ ವಂಡರ್’ ಮತ್ತು ‘ಮ್ಯೂಸ್ ವಂಡರ್ಫುಲ್’ ಎಐ ಮಾಡೆಲ್ಗಳನ್ನು ಬಿಡುಗಡೆ ಮಾಡುವ ಮೂಲಕ ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.ಮಾರ್ಕ್ ಜುಕರ್ಬರ್ಗ್ ನೇತೃತ್ವದ ಮೆಟಾ ಸಂಸ್ಥೆಯು ಈ ನೂತನ ಫ್ರಾಂಟಿಯರ್ ಮಾಡೆಲ್ಗಳ ಮೂಲಕ ಎಐ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ.ಮೆಟಾ ಅಭಿವೃದ್ಧಿಪಡಿಸಿದ ಈ ಮಾಡೆಲ್ಗಳು ಸಾಂಪ್ರದಾಯಿಕ ಪಠ್ಯ ಆಧಾರಿತ ಚಾಟ್ಬಾಟ್ಗಳಲ್ಲ. ಇವುಗಳನ್ನು ನಿರ್ದಿಷ್ಟವಾಗಿ ‘ಏಜೆಂಟಿಕ್ ಟಾಸ್ಕ್’, ಅಂದರೆ ಬಳಕೆದಾರರ ಪರವಾಗಿ ಸ್ವತಂತ್ರವಾಗಿ ಆಲೋಚಿಸಿ, ತೀರ್ಮಾನ ತೆಗೆದುಕೊಂಡು ಕೆಲಸಗಳನ್ನು ಪೂರ್ಣಗೊಳಿಸುವ ಸಾಮರ್ಥ್ಯದೊಂದಿಗೆ ವಿನ್ಯಾಸಗೊಳಿಸಲಾಗಿದೆ.ವೇಗವಾಗಿ ಹಾಗೂ ನಿಖರವಾಗಿ ಕಾರ್ಯನಿರ್ವಹಿಸಲೆಂದು ವಂಡರ್ ಅಭಿವೃದ್ಧಿಪಡಿಸಲಾಗಿದ್ದು, ದೈನಂದಿನ ಸಂಕೀರ್ಣ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಲು ಇದು ಸಹಕಾರಿ. ಆಳವಾದ ಸಂಶೋಧನೆ, ಬೃಹತ್ ಮಟ್ಟದ ಡೇಟಾ ವಿಶ್ಲೇಷಣೆ ಮತ್ತು ಸಂಕೀರ್ಣ ಸಾಫ್ಟ್ವೇರ್ ಡೆವಲಪ್ಮೆಂಟ್ ಕೆಲಸಗಳಿಗಾಗಿ ಸಿದ್ಧಪಡಿಸಲಾದ ಪ್ರಬಲ ಮಾಡೆಲ್ ವಂಡರ್ಫುಲ್ ಆಗಿದೆ.ವಿಶೇಷ ಮತ್ತು ತಾಂತ್ರಿಕ ಸಾಮರ್ಥ್ಯ10 ಲಕ್ಷ ಟೋಕನ್ಗಳ ಕಾಂಟೆಕ್ಸ್ಟ್ ವಿಂಡೋ: ಏಕಕಾಲದಲ್ಲಿ ಸುಮಾರು 10 ಲಕ್ಷ (1ಮಿಲಿಯನ್) ಟೋಕನ್ಗಳ ಡೇಟಾವನ್ನು ಪ್ರಕ್ರಿಯೆಗೊಳಿಸುವ ಸಾಮರ್ಥ್ಯವಿರುವುದು ಈ ಮಾಡೆಲ್ಗಳ ಪ್ಲಸ್ ಪಾಯಿಂಟ್. ಅಂದರೆ ನೂರಾರು ಪುಟಗಳ ದೊಡ್ಡ ಪುಸ್ತಕಗಳು, ಬೃಹತ್ ಪಿಡಿಎಫ್ಗಳು ಮತ್ತು ಸುದೀರ್ಘ ಕೋಡಿಂಗ್ ಫೈಲ್ಗಳನ್ನು ಕ್ಷಣಾರ್ಧದಲ್ಲಿ ವಿಶ್ಲೇಷಿಸಿ ಸೂಕ್ತ ಪರಿಹಾರ ನೀಡಬಲ್ಲವು.ಮಲ್ಟಿಮೋಡಲ್ ತಂತ್ರಜ್ಞಾನ: ಇವು ಕೇವಲ ಪಠ್ಯಕ್ಕೆ ಸೀಮಿತವಾಗಿಲ್ಲ. ಪಠ್ಯದ ಜೊತೆಗೆ ಚಿತ್ರಗಳು, ವಿಡಿಯೊಗಳು, ಆಡಿಯೊ ಮತ್ತು ಸಂಕೀರ್ಣ ಗ್ರಾಫ್ಗಳನ್ನು ಒಂದೇ ಸಮಯದಲ್ಲಿ ಗ್ರಹಿಸಿ, ಸಮಗ್ರ ಮತ್ತು ನಿಖರವಾದ ಉತ್ತರವನ್ನು ಒದಗಿಸುತ್ತವೆ.ಆಕ್ಟಿವ್ ಮೆಮೊರಿ ಮತ್ತು ಆಕ್ಟಿವ್ ಫೋಕಸ್: ಬಳಕೆದಾರರು ಈ ಹಿಂದೆ ನೀಡಿದ ಸೂಚನೆಗಳು ಮತ್ತು ಅವರ ಗುರಿಗಳನ್ನು ದೀರ್ಘಕಾಲದವರೆಗೆ ನೆನಪಿನಲ್ಲಿಟ್ಟುಕೊಳ್ಳುವ ‘ಆಕ್ಟಿವ್ ಮೆಮೊರಿ’ ತಂತ್ರಜ್ಞಾನವು ಈ ಮಾಡೆಲ್ಗಳಲ್ಲಿದೆ. ಸುದೀರ್ಘ ಹಾಗೂ ಸಂಕೀರ್ಣ ಪ್ರಾಜೆಕ್ಟ್ಗಳಲ್ಲಿ ಏಕಾಗ್ರತೆಯಿಂದ ಕಾರ್ಯನಿರ್ವಹಿಸಲು ಆಕ್ಟಿವ್ ಮೆಮೊರಿ ಸಹಕಾರಿ.ಕೋಡಿಂಗ್ ಕ್ಷೇತ್ರದಲ್ಲಿ ಹೊಸ ಕ್ರಾಂತಿ: ಸಾಫ್ಟ್ವೇರ್ ಎಂಜಿನಿಯರ್ಗಳಿಗೆ ಈ ಮಾಡೆಲ್ಗಳು ವರದಾನವೆಂದರೂ ತಪ್ಪಾಗದು. ಮಲ್ಟಿ-ಫೈಲ್ ರೀಫ್ಯಾಕ್ಟರಿಂಗ್, ಬಗ್ಗಳನ್ನು ಹುಡುಕುವುದು ಹಾಗೂ ದಕ್ಷತೆಯಿಂದ ಹೊಸ ಸಾಫ್ಟ್ವೇರ್ ಕೋಡ್ ಅನ್ನು ನಿಖರವಾಗಿ ಬರೆಯುವಷ್ಟು ದಕ್ಷತೆಯನ್ನು ಹೊಂದಿವೆ.ಚಾಟ್ಜಿಪಿಟಿ ಮತ್ತು ಕ್ಲಾಡ್ಗೆ ಸವಾಲುಇಲ್ಲಿಯವರೆಗೆ ಓಪನ್ಎಐ ಮತ್ತು ಆಂಥ್ರೋಪಿಕ್ ಕಂಪನಿಗಳು ಪಾರುಪತ್ಯ ಹೊಂದಿದ್ದ ಎಐ ಮಾರುಕಟ್ಟೆಯಲ್ಲಿ ಮೆಟಾ ಸಂಸ್ಥೆಯ ಈ ನಡೆ ಪ್ರತಿಸ್ಪರ್ಧಿಗಳಿಗೆ ದೊಡ್ಡ ಸವಾಲಾಗಿದೆ. ಮುಕ್ತವಾಗಿ ಲಭ್ಯವಾಗುವಂತಹ ತಂತ್ರಜ್ಞಾನ ಮತ್ತು ಉನ್ನತ ಮಟ್ಟದ ಫೀಚರ್ಗಳನ್ನು ಒದಗಿಸುವ ಮೂಲಕ ಮೆಟಾ ಸಾಮಾನ್ಯ ಬಳಕೆದಾರರು ಹಾಗೂ ಡೆವಲಪರ್ಗಳನ್ನು ತನ್ನತ್ತ ಸೆಳೆಯಲು ಸಜ್ಜಾಗಿದೆ. ‘ವಂಡರ್’ ಮತ್ತು ‘ವಂಡರ್ಫುಲ್’ ಮಾಡೆಲ್ಗಳು ನೀಡುವ ನಿಖರ ಮತ್ತು ವೇಗದ ಕಾರ್ಯವೈಖರಿ ಮಾರುಕಟ್ಟೆಯ ಇತರೆ ಪ್ರಮುಖ ಮಾಡೆಲ್ಗಳಿಗೆ ತೀವ್ರ ಸ್ಪರ್ಧೆ ಒಡ್ಡುತ್ತಿವೆ.ಕೃತಕ ಬುದ್ಧಿಮತ್ತೆಯು ಭವಿಷ್ಯದ ತಂತ್ರಜ್ಞಾನವನ್ನು ನಿರ್ಧರಿಸಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಮೆಟಾದ ಈ ಮಾಡೆಲ್ಗಳ ಆಗಮನವು ಈ ತಂತ್ರಜ್ಞಾನದ ಓಟವನ್ನು ಮತ್ತಷ್ಟು ಚುರುಕುಗೊಳಿಸಿದೆ. ಮುಂಬರುವ ದಿನಗಳಲ್ಲಿ ಇವು ಶಿಕ್ಷಣ, ಸಾಫ್ಟ್ವೇರ್ ರಂಗ, ವೈದ್ಯಕೀಯ ಹಾಗೂ ವೈಯಕ್ತಿಕ ಉತ್ಪಾದಕತೆಯಲ್ಲಿ ಎಷ್ಟರ ಮಟ್ಟಿಗೆ ಬದಲಾವಣೆ ತರಲಿವೆ ಎಂಬುದನ್ನು ಕಾದುನೋಡಬೇಕಿದೆ.(ಇನ್ನಷ್ಟು ಆಸಕ್ತಿಕರ ನುಡಿಚಿತ್ರಗಳಿಗಾಗಿ, ಕುತೂಹಲಕರ ಕತೆ–ಕಾದಂಬರಿಗಾಗಿ ಮಾರುಕಟ್ಟೆಯಲ್ಲಿರುವ ಸುಧಾ ಓದಿ)