ಯುನೆಸ್ಕೊ ತಂಡ ಹಂಪಿಗೆ ಆಗಮನ: ಬೆಂಗಳೂರಿನಿಂದ ಕಾರುಗಳಲ್ಲಿ ಬಂದ ಅಧಿಕಾರಿಗಳು
ಹೊಸಪೇಟೆ (ವಿಜಯನಗರ): ಯುನೆಸ್ಕೊ ವಿಶ್ವ ಪಾರಂಪರಿಕ ಕೇಂದ್ರ ಹಾಗೂ ಸ್ಮಾರಕಗಳು ಮತ್ತು ತಾಣಗಳ ಮೇಲಿನ ಅಂತರರಾಷ್ಟ್ರೀಯ ಮಂಡಳಿಯ (ಐಸಿಒಎಂಒಎಸ್) ತಜ್ಞರ ನಿಯೋಗ ಹಂಪಿಗೆ ಶನಿವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಆಗಮಿಸಿದ್ದು, ಇದೇ 27ರವರೆಗೆ ಹಲವು ಸಭೆಗಳನ್ನು ನಡೆಸಿ ಸ್ಮಾರಕಗಳ ವೀಕ್ಷಣೆ ಮಾಡಲಿದೆ.ಅಂತರರಾಷ್ಟ್ರೀಯ ಪಾರಂಪರಿಕ ಪರಿಣಿತ ಕೀನ್ಯಾದ ಜಾರ್ಜ್ ಅಬುಂಗ್, ಜಪಾನ್ನ

ಹೊಸಪೇಟೆ (ವಿಜಯನಗರ): ಯುನೆಸ್ಕೊ ವಿಶ್ವ ಪಾರಂಪರಿಕ ಕೇಂದ್ರ ಹಾಗೂ ಸ್ಮಾರಕಗಳು ಮತ್ತು ತಾಣಗಳ ಮೇಲಿನ ಅಂತರರಾಷ್ಟ್ರೀಯ ಮಂಡಳಿಯ (ಐಸಿಒಎಂಒಎಸ್) ತಜ್ಞರ ನಿಯೋಗ ಹಂಪಿಗೆ ಶನಿವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಆಗಮಿಸಿದ್ದು, ಇದೇ 27ರವರೆಗೆ ಹಲವು ಸಭೆಗಳನ್ನು ನಡೆಸಿ ಸ್ಮಾರಕಗಳ ವೀಕ್ಷಣೆ ಮಾಡಲಿದೆ.ಅಂತರರಾಷ್ಟ್ರೀಯ ಪಾರಂಪರಿಕ ಪರಿಣಿತ ಕೀನ್ಯಾದ ಜಾರ್ಜ್ ಅಬುಂಗ್, ಜಪಾನ್ನ ಇಚಿಡಾ ಶಿಮೋಡಾ ಅವರು ಹಂಪಿಯ ಪರಂಪರೆಯನ್ನು ಸಂರಕ್ಷಿಸಲಾಗಿದೆಯೇ ಎಂಬುದರ ಕುರಿತು ಸೂಕ್ಷ್ಮ ಅವಲೋಕನ ನಡೆಸಲಿದ್ದು, ಇಲ್ಲಿಂದ ತೆರಳಿದ ಬಳಿಕ ಯುನೆಸ್ಕೊಗೆ ವರದಿ ಸಲ್ಲಿಸಲಿದ್ದಾರೆ. ಅದರ ಬಳಿಕ ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಹಂಪಿ ಭದ್ರವಾಗಿ ಇರುತ್ತದೆಯೋ, ಅಪಾಯಕಾರಿ ತಾಣಗಳ ಪಟ್ಟಿಯಲ್ಲಿ ಸೇರುತ್ತದೆಯೋ ಎಂಬುದು ಗೊತ್ತಾಗಲಿದೆ.ಬೆಂಗಳೂರಿನಿಂದ ಬೆಳಿಗ್ಗೆ ಕಾರುಗಳಲ್ಲಿ ಹೊರಟಿದ್ದ ಈ ತಂಡದ ಜತೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ಹೆಚ್ಚುವರಿ ಮಹಾನಿರ್ದೇಶಕ ಜಾನ್ವಿಜ್ ಶರ್ಮಾ ಸಹಿತ ಆರು ಅಧಿಕಾರಿಗಳು ಇದ್ದರು. ಒಟ್ಟು ಆರು ಕಾರುಗಳಲ್ಲಿ ಅಧಿಕಾರಿಗಳು ಸಂಚರಿಸಿ ಕಮಲಾಪುರದ ಇವಾಲ್ವ್ ಬ್ಯಾಕ್ ರೆಸಾರ್ಟ್ ತಲುಪಿದರು. ಸ್ವಲ್ಪ ಹೊತ್ತಲ್ಲಿ ಬಹಳ ಅಪರೂಪದ ಮಳೆಯೂ ಸುರಿಯಿತು.ಇದೀಗ ಯುನೆಸ್ಕೊ ತಂಡ ರಾಜ್ಯ ಸರ್ಕಾರ, ಎಎಸ್ಐ, ಹಂಪಿ ವಿಶ್ವಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರ (ಹವಾಮ), ಪ್ರವಾಸೋದ್ಯಮ, ರಾಜ್ಯ ಪುರಾತತ್ವ, ವಸ್ತುಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಗಳ ಜತೆಗೆ ಸಭೆ ನಡೆಸತೊಡಗಿದೆ.25ರಿಂದ ಕ್ಷೇತ್ರ ಭೇಟಿ: ಯುನೆಸ್ಕೊ ತಜ್ಞರ ತಂಡ ಭಾನುವಾರದಿಂದ (ಅ.25) ಕ್ಷೇತ್ರ ಭೇಟಿ ಆರಂಭಿಸಲಿದೆ. ಬೆಳಿಗ್ಗೆ ಕಮಲಾಪುರದ ಎಎಸ್ಐ ಮ್ಯೂಸಿಯಂ, ಮಾಲ್ಯವಂತ ರಘುನಾಥ ದೇವಸ್ಥಾನ, ವಿಜಯ ವಿಠ್ಠಲ ದೇವಸ್ಥಾನಗಳಿಗೆ ಭೇಟಿ ನೀಡಿ, ಮಧ್ಯಾಹ್ನದ ನಂತರ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ, ಆನೆಗುಂದಿಯ ಗಗನ ಮಹಲ್ಗಳಿಗೆ ಭೇಟಿ ನೀಡಲಿದೆ. ಸಂಜೆ 5.30ಕ್ಕೆ ಹೊಸಪೇಟೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಂಪಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು, ಪ್ರವಾಸೋದ್ಯಮಕ್ಕೆ ಸಂಬಂಧಿತ ಹಿತಾಸಕ್ತಿದಾರರ ಮತ್ತು ಪಾಲುದಾರರ ಸಭೆ ನಡೆಸಲಿದೆ.26ರಂದು ಬೆಳಿಗ್ಗೆ ವಿರೂಪಾಕ್ಷ ದೇವಸ್ಥಾನ, ಕೃಷ್ಣ ದೇವಸ್ಥಾನ, ಕಮಲಮಹಲ್ ಪ್ರದೇಶಗಳಿಗೆ ಭೇಟಿ ನೀಡಲಿರುವ ತಂಡ, ಮಧ್ಯಾಹ್ನದ ನಂತರ ಇವಾಲ್ವ್ ಬ್ಯಾಕ್ ರೆಸಾರ್ಟ್ನಲ್ಲಿ ಹಂಪಿ ಮಾಸ್ಟರ್ ಪ್ಲಾನ್, ಸಂಯೋಜಿತ ನಿರ್ವಹಣಾ ಯೋಜನೆಗಳ ಕುರಿತು ಸಮಾಲೋಚನೆ ನಡೆಸಲಿದೆ. 27ರ ಬೆಳಿಗ್ಗೆ ಸಹ ಹಿಂದಿನ ದಿನದ ಸಭೆ ಮುಂದುವರಿಯಲಿದೆ. ಅಂದು ಮಧ್ಯಾಹ್ನ 2.30ಕ್ಕೆ ರಸ್ತೆ ಮೂಲಕ ಬೆಂಗಳೂರಿಗೆ ತೆರಳಲಿದೆ. 28ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಎಎಸ್ಐ ಮತ್ತು ಯುನೆಸ್ಕೊ ತಂಡಗಳ ಜತೆಗೆ ಚರ್ಚಿಸಲಿದೆ.ಯುನೆಸ್ಕೊ ತಂಡ ಕೊನೆಯ ಬಾರಿಗೆ ಹಂಪಿಗೆ ಬಂದುದು 2009ರಲ್ಲಿ. ಬಳಿಕ ಪ್ರತಿ ವರ್ಷ ಹಂಪಿಯ ಸ್ಥಿತಿಗತಿಗಳ ಕುರಿತು ವರದಿ ತರಿಸಿಕೊಂಡು ಅವಲೋಕನ ನಡೆಸುತ್ತಲೇ ಇದೆ. ಪಾರಂಪರಿಕ ತಾಣಗಳಿಗೆ ಗಂಭೀರ ಅಪಾಯ ಎದುರಾಗುವ ಲಕ್ಷಣ ಇದೆ ಎಂದಾಗ ತಜ್ಞರ ತಂಡ ಖುದ್ದಾಗಿ ಕ್ಷೇತ್ತ ಭೇಟಿ ನೀಡಿ ಪರಿಶೀಲಿಸುತ್ತದೆ ಎಂದು ಹೇಳಲಾಗುತ್ತಿದೆ. ಈ ಬಾರಿ ತಜ್ಞರ ತಂಡದ ಪ್ರಮುಖ ಗುರಿ ಅಂಜನಾದ್ರಿ ಎಂದು ಜಿಲ್ಲಾಡಳಿತ ಹಾಗೂ ಎಎಸ್ಐ ಮೂಲಗಳು ತಿಳಿಸಿವೆ.