ಚನ್ನಮ್ಮನ ಕಿತ್ತೂರು: ಕೃಷಿಕರನ್ನು ಆಕರ್ಷಿಸಿದ ಜಾನುವಾರು ‘ಜಾತ್ರೆ’
ಚನ್ನಮ್ಮನ ಕಿತ್ತೂರು: 1,200 ಕೆ.ಜಿ ತೂಕದ ಜಾಫರಾಬಾದಿ ತಳಿಯ ‘ಪಂಚಕಲ್ಯಾಣಿ’ ಎಮ್ಮೆ, ₹15 ಲಕ್ಷ ಬೆಲೆಬಾಳುವ ಕೊಳವಿ–ಬೆಣಚಿನಮರಡಿಯ ‘ಸುಲ್ತಾನ್’ ಎತ್ತು. ವಿಶ್ವದಲ್ಲೇ ಅತಿಚಿಕ್ಕ ಗೋಣುಳ್ಳ ‘ಕುಂಗನೂರ’ ತಳಿಯ ಆಕಳು.ಇವೆಲ್ಲ ಕಂಡುಬಂದಿದ್ದು ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಐತಿಹಾಸಿಕ ಕಿತ್ತೂರು ಉತ್ಸವದ ಮೊದಲ ದಿನ ಆಯೋಜಿಸಿದ್ದ ಜಾನುವಾರುಗಳ ಪ್ರದರ್ಶನದಲ್ಲಿ.ಈ ಹಿಂದೆ

ಚನ್ನಮ್ಮನ ಕಿತ್ತೂರು: 1,200 ಕೆ.ಜಿ ತೂಕದ ಜಾಫರಾಬಾದಿ ತಳಿಯ ‘ಪಂಚಕಲ್ಯಾಣಿ’ ಎಮ್ಮೆ, ₹15 ಲಕ್ಷ ಬೆಲೆಬಾಳುವ ಕೊಳವಿ–ಬೆಣಚಿನಮರಡಿಯ ‘ಸುಲ್ತಾನ್’ ಎತ್ತು. ವಿಶ್ವದಲ್ಲೇ ಅತಿಚಿಕ್ಕ ಗೋಣುಳ್ಳ ‘ಕುಂಗನೂರ’ ತಳಿಯ ಆಕಳು.ಇವೆಲ್ಲ ಕಂಡುಬಂದಿದ್ದು ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಐತಿಹಾಸಿಕ ಕಿತ್ತೂರು ಉತ್ಸವದ ಮೊದಲ ದಿನ ಆಯೋಜಿಸಿದ್ದ ಜಾನುವಾರುಗಳ ಪ್ರದರ್ಶನದಲ್ಲಿ.ಈ ಹಿಂದೆ ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಕ್ರೀಡಾ ಚಟುವಟಿಕೆಗೆ ಮಾತ್ರ ಉತ್ಸವ ಸೀಮಿತವಾಗಿತ್ತು. ಗ್ರಾಮೀಣ ಹಿನ್ನೆಲೆ ಹೊಂದಿದ ಉತ್ಸವದಲ್ಲಿ ಇದೇ ಮೊದಲ ಬಾರಿ ಸಂಘಟಿಸಿದ್ದ ಜಾನುವಾರುಗಳ ಪ್ರದರ್ಶನ ಕೃಷಿಕರನ್ನು ಸೂಜಿಗಲ್ಲಿನಂತೆ ಸೆಳೆಯಿತು. ನಾನಾ ತಳಿಗಳ ಎತ್ತು, ಹೋರಿ, ಆಕಳು, ಎಮ್ಮೆ, ಟಗರು, ಆಡು, ಕುರಿ, ಕೋಳಿ, ಹಂದಿ ಪ್ರದರ್ಶನ ಗಮನಸೆಳೆದವು. ‘ಸಾಮಾನ್ಯವಾಗಿ ಎಮ್ಮೆಗಳು 900 ಕೆ.ಜಿ ತೂಕ ಹೊಂದಿರುತ್ತವೆ. ಆದರೆ, ನಾವು ಪ್ರದರ್ಶಿಸಿದ ಜಾಫರಬಾದಿ ತಳಿಯ ‘ಪಂಚಕಲ್ಯಾಣಿ’ ಎಮ್ಮೆ 1,200 ಕೆ.ಜಿ ತೂಕ ಹೊಂದಿದೆ. ಗುಜರಾತ್ನಿಂದ ಖರೀದಿಸಿ ತಂದಿರುವ ಇದರ ಮೌಲ್ಯ ₹4.5 ಲಕ್ಷ. ದಿನಕ್ಕೆ 20 ಲೀಟರ್ ಹಾಲು ನೀಡುತ್ತದೆ. ನೋಡಲೂ ಆಕರ್ಷಕವಾಗಿರುವ ಇದನ್ನು ನಾಡಿನ ವಿವಿಧ ಜಾತ್ರೆ, ಉತ್ಸವಗಳಲ್ಲಿ ಪ್ರದರ್ಶಿಸಿದ್ದೇವೆ’ ಎಂದು ಬೆಂಗಳೂರಿನ ಬೇಗೂರಿನ ಶ್ರೀಕೃಷ್ಣ ಗೋಶಾಲೆಯ ಅಧ್ಯಕ್ಷ ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಈ ಎಮ್ಮೆಯೊಂದಿಗೆ ಸಾಹಿವಾಲ್, ಗಿರ್, ಢಾಂಗಿ, ಕಾರ್ಪಾರ್ಕರ್, ಕಾಂಗಾಯ್ ತಳಿಗಳ ಆಕಳುಗಳನ್ನು ಇಲ್ಲಿ ಪ್ರದರ್ಶಿಸಿದ್ದೇವೆ’ ಎನ್ನುತ್ತಾರೆ ಅವರು.‘ಸುಲ್ತಾನ್’ ಗಮ್ಮತ್ತು!‘ಮಹಾರಾಷ್ಟ್ರದಿಂದ ಸಣ್ಣ ಕರು ತಂದು, ಮೂರು ವರ್ಷಗಳಿಂದ ಸಾಕುತ್ತಿದ್ದೇವೆ. ಐದಾರು ಕಡೆ ಸ್ಪರ್ಧೆಗಳಲ್ಲಿ ಗೆದ್ದಿರುವ ಇದಕ್ಕೆ ಜನರೇ ಪ್ರೀತಿಯಿಂದ ‘ಸುಲ್ತಾನ್’ ಎಂಬ ಹೆಸರಿಟ್ಟಿದ್ದಾರೆ’ ಎಂದು ಗೋಕಾಕ ತಾಲ್ಲೂಕಿನ ಕೊಳವಿ–ಬೆಣಚಿನಮರಡಿಯ ಯಮನಪ್ಪ ಮಾಳಗಿ ಹೇಳಿದರು. ಗಟ್ಟಿಮುಟ್ಟಾಗಿರುವ ಈ ಎತ್ತಿನ ಬೆಲೆ ₹15 ಲಕ್ಷ!ಜನವೋ ಜನ...:ಈ ಪ್ರದರ್ಶನದಲ್ಲಿ ಬೆಳಗಾವಿ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ರೈತರು ಪಾಲ್ಗೊಂಡಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನರು ಆಗಮಿಸಿ ಪ್ರದರ್ಶನ ಕಣ್ತುಂಬಿಕೊಂಡರು. ಜಾನುವಾರುಗಳ ವೈಶಿಷ್ಟ್ಯತೆ ಬಗ್ಗೆ ಮಾಹಿತಿ ಪಡೆದುಕೊಂಡರು.ಈ ಪ್ರದರ್ಶನದ ಮುಖ್ಯ ಆಕರ್ಷಣೆ ಎಂದರೆ, ‘ಕುಂಗನೂರ’ ತಳಿಯ ಆಕಳು. ವಿಶ್ವದಲ್ಲೇ ಚಿಕ್ಕ ಗೋಣುಳ್ಳ ತಳಿ ಎಂದು ಗುರುತಿಸಿಕೊಂಡಿದೆ. ವಯಸ್ಕ ಹಸುವಿನ ತೂಕ ಸರಾಸರಿ 150ರಿಂದ 250 ಕೆ.ಜಿ ಇರುತ್ತದೆ. ಇದೇ ತಳಿಯ ಹೋರಿಗಳು 200ರಿಂದ 225 ಕೆ.ಜಿ ಇರುತ್ತವೆ. ಇದೇ ತಳಿಯ ಆಕಳಿಗೆ ವಿಧ್ಯುಕ್ತವಾಗಿ ಪೂಜೆ ಸಲ್ಲಿಸಿ, ಚನ್ನಮ್ಮನ ಕಿತ್ತೂರು ಕ್ಷೇತ್ರದ ಶಾಸಕ ಬಾಬಾಸಾಹೇಬ ಪಾಟೀಲ ಅವರು ಜಾನುವಾರು ಪ್ರದರ್ಶನಕ್ಕೆ ಚಾಲನೆ ಕೊಟ್ಟರು. ಬೈಲಹೊಂಗಲ ಕ್ಷೇತ್ರದ ಶಾಸಕ ಮಹಾಂತೇಶ ಕೌಜಲಗಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಪಶುಸಂಗೋಪನೆ ಇಲಾಖೆ ಜಿಲ್ಲಾ ಉಪನಿರ್ದೇಶಕ ರವಿ ಸಾಲಿಗೌಡರ, ಡಿವೈಎಸ್ಪಿ ವೀರಯ್ಯ ಹಿರೇಮಠ, ಸಿಪಿಐ ಶಿವಾನಂದ ಗುಡಗನಟ್ಟಿ ಇತರರಿದ್ದರು.ಯಾವ್ಯಾವ ತಳಿ?‘ಬೆಳಗಾವಿ ಜಿಲ್ಲೆಯಲ್ಲಿ ಆಕಳಿನಲ್ಲಿ ಪ್ರಮುಖ ತಳಿ ಎಂದರೆ ಖಿಲಾರಿ. ಈ ತಳಿಯ 100ಕ್ಕೂ ಅಧಿಕ ಆಕಳು ಇಲ್ಲಿ ಪ್ರದರ್ಶನವಾಗಿವೆ. ಇದರೊಂದಿಗೆ ವಿದೇಶಿ ಎಚ್ಎಫ್ ಮತ್ತು ಗೀರ್ ತಳಿಯ ಆಕಳೂ ಇವೆ. ಖಿಲಾರಿ, ಹಳ್ಳಿಕಾರ್ ಮತ್ತು ಅಮೃತ್ಮಹಲ್ ತಳಿಗಳ ಎತ್ತುಗಳು, ಜಾಫರಬಾದಿ, ಮೆಹಸಾನಾ, ಮುರ್ರಾ, ಸುರ್ತಿ ತಳಿಗಳ ಎಮ್ಮೆಗಳು ರೈತರನ್ನು ಸೆಳೆಯುತ್ತಿವೆ’ ಎಂದು ಪಶುಸಂಗೋಪನೆ ಇಲಾಖೆ ಜಿಲ್ಲಾ ಉಪನಿರ್ದೇಶಕ ರವಿ ಸಾಲಿಗೌಡರ ‘ಪ್ರಜಾವಾಣಿ’ಗೆ ತಿಳಿಸಿದರು.‘ದಾರಫರ್, ಯಳಗಾ ತಳಿಗಳ ಟಗರುಗಳು, ಬೀಟಲ್, ಶಿರೋಹಿ ತಳಿಗಳ ಆಡುಗಳು, ಲ್ಯಾಂಡ್ರೇಸ್, ಡ್ಯೂರಾಕ್, ಯಾರ್ಕ್ಶೈರ್ ಎಂಬ ವಿದೇಶಿ ತಳಿಗಳ ಹಂದಿಗಳು ಮತ್ತು ದೇಶಿ–ಟರ್ಕಿಯ ತಳಿಗಳ ಕೋಳಿಗಳು ಪ್ರದರ್ಶನದಲ್ಲಿವೆ. 500ಕ್ಕಿಂತ ಅಧಿಕ ಪ್ರಾಣಿಗಳು ಪಾಲ್ಗೊಂಡ ಪ್ರದರ್ಶನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ’ ಎಂದು ಅವರು ತಿಳಿಸಿದರು.