ಗುಂಡಿನ ನೆರಳಲ್ಲಿ ಬಾಲಿವುಡ್: ಮೂರು ದಶಕಗಳಾದರೂ ಮುಗಿಯದ ಭೂಗತ ಲೋಕದ ನಂಟು
ಮುಂಬೈ: 1997ರ ಆಗಸ್ಟ್ 12ರಂದು ಮುಂಬೈನ ಜುಹು ಪ್ರದೇಶದ ದೇವಸ್ಥಾನವೊಂದರ ಹೊರಗೆ ಟಿ-ಸೀರೀಸ್ ಸಂಸ್ಥಾಪಕ ಗುಲ್ಶನ್ ಕುಮಾರ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಕ್ಯಾಸೆಟ್ ಅಂಗಡಿಯೊಂದರಿಂದ ಆರಂಭಿಸಿ ದೇಶದ ಅತಿದೊಡ್ಡ ಸಂಗೀತ ಕಂಪನಿಗಳಲ್ಲಿ ಒಂದನ್ನು ಕಟ್ಟಿದ್ದ ಉದ್ಯಮಿಯ ಮೇಲೆ ಮೂವರು ದಾಳಿಕೋರರು 16 ಸುತ್ತು ಗುಂಡು ಹಾರಿಸಿದ್ದರು. ಈ ಕೊಲೆ, ಬಾಲಿವುಡ್ ಮೇಲೆ
ಮುಂಬೈ: 1997ರ ಆಗಸ್ಟ್ 12ರಂದು ಮುಂಬೈನ ಜುಹು ಪ್ರದೇಶದ ದೇವಸ್ಥಾನವೊಂದರ ಹೊರಗೆ ಟಿ-ಸೀರೀಸ್ ಸಂಸ್ಥಾಪಕ ಗುಲ್ಶನ್ ಕುಮಾರ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಕ್ಯಾಸೆಟ್ ಅಂಗಡಿಯೊಂದರಿಂದ ಆರಂಭಿಸಿ ದೇಶದ ಅತಿದೊಡ್ಡ ಸಂಗೀತ ಕಂಪನಿಗಳಲ್ಲಿ ಒಂದನ್ನು ಕಟ್ಟಿದ್ದ ಉದ್ಯಮಿಯ ಮೇಲೆ ಮೂವರು ದಾಳಿಕೋರರು 16 ಸುತ್ತು ಗುಂಡು ಹಾರಿಸಿದ್ದರು. ಈ ಕೊಲೆ, ಬಾಲಿವುಡ್ ಮೇಲೆ ಭೂಗತ ಲೋಕ ನಡೆಸಿದ ಹಿಂಸಾತ್ಮಕ ದಾಳಿಯ ಪ್ರಮುಖ ಘಟನೆಗಳಲ್ಲಿ ಒಂದು.ಸುಮಾರು ಮೂರು ದಶಕಗಳ ಬಳಿಕ, ಅಕ್ಟೋಬರ್ 18ರಂದು ಮುಂಬೈನ ಜುಹು ಪ್ರದೇಶದಲ್ಲಿ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದರು. ಶ್ರಾಫ್ ಗುಂಡೇಟಿನಿಂದ ಪಾರಾದರೂ, ಅವರ ಚಾಲಕ ಮತ್ತು ದಾರಿಹೋಕರೊಬ್ಬರು ಗಾಯಗೊಂಡರು. ಏಳು ಸುತ್ತು ಗುಂಡು ಹಾರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಜತೆ ಸಂಪರ್ಕ ಹೊಂದಿರುವವರು ಈ ದಾಳಿ ನಡೆಸಿದ್ದರಬಹುದು ಎಂದು ಶಂಕೆ ವ್ಯಕ್ತವಾಗಿದೆ.ದಾವೂದ್ನಿಂದ ಲಾರೆನ್ಸ್ ಬಿಷ್ಣೋಯ್ವರೆಗೆ: ಚಿತ್ರರಂಗದ ಮೇಲೆ ಭೂಗತ ಲೋಕದ ನೆರಳು29 ವರ್ಷಗಳ ಅಂತರದಲ್ಲಿನ ಈ ಎರಡು ಘಟನೆಗಳು, ಸಂಘಟಿತ ಅಪರಾಧ ಜಗತ್ತಿನೊಂದಿಗೆ ಬಾಲಿವುಡ್ ಹೊಂದಿರುವ ಸಂಕೀರ್ಣ ಸಂಬಂಧದ ವಿಭಿನ್ನ ಹಂತಗಳನ್ನು ಪ್ರತಿಬಿಂಬಿಸುತ್ತವೆ. ಅಪರಾಧಿಗಳ ಜಾಲ, ವಿಧಾನಗಳು ಮತ್ತು ಅದರಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಬದಲಾಗಿದ್ದರೂ, ಹಣ, ಪ್ರಭಾವ ಅಥವಾ ಚಿತ್ರರಂಗದ ಪ್ರಮುಖ ವ್ಯಕ್ತಿಗಳ ಮೇಲೆ ಹಿಡಿತ ಸಾಧಿಸಲು ಯತ್ನಿಸುವ ಕ್ರಿಮಿನಲ್ ಗುಂಪುಗಳ ಬೆದರಿಕೆ ಮುಂದುವರಿದಿದೆ.1990ರ ದಶಕದಲ್ಲಿ ಮುಂಬೈ ಚಿತ್ರರಂಗವನ್ನು ಕಾಡಿದ್ದ ಗ್ಯಾಂಗ್ವಾರ್ಗಳು ಮತ್ತು ಸುಲಿಗೆ ಬೆದರಿಕೆಗಳ ನೆನಪನ್ನು ಇತ್ತೀಚಿನ ದಾಳಿ ಮತ್ತೆ ಮುನ್ನೆಲೆಗೆ ತಂದಿದೆ. ಹೊಸ ಹಣಕಾಸು ಮಾದರಿಗಳು, ಜಾಗತಿಕ ವಿತರಣಾ ವ್ಯವಸ್ಥೆ ಮತ್ತು ಡಿಜಿಟಲ್ ವೇದಿಕೆಗಳಿಂದ ಚಿತ್ರರಂಗ ಬದಲಾಗಿದ್ದರೂ, ಅದು ಇನ್ನೂ ಗ್ಯಾಂಗ್ಸ್ಟರ್ಗಳ ಬೆದರಿಕೆಗೆ ಏಕೆ ತುತ್ತಾಗುತ್ತಿದೆ ಎಂಬ ಪ್ರಶ್ನೆಯನ್ನೂ ಈ ಘಟನೆ ಹುಟ್ಟುಹಾಕಿದೆ.ಸಾಮಾಜಿಕ ಒಡನಾಟದಿಂದ ಬೆದರಿಕೆಯವರೆಗೆಭೂಗತ ಲೋಕದೊಂದಿಗಿನ ಬಾಲಿವುಡ್ ನಂಟು ಗುಂಡಿನ ದಾಳಿ ಮತ್ತು ಬೆದರಿಕೆಗಳಿಗೆ ಸೀಮಿತವಾಗಿರಲಿಲ್ಲ. 1960 ಮತ್ತು 1970ರ ದಶಕಗಳಲ್ಲಿ ಹಾಜಿ ಮಸ್ತಾನ್ ಹಾಗೂ ಕರೀಂ ಲಾಲಾ ಅವರಂತಹ ವ್ಯಕ್ತಿಗಳು ಚಿತ್ರರಂಗದ ಗಣ್ಯರೊಂದಿಗೆ ಇರುತ್ತಿದ್ದರು.. ಮುಂಬೈನ ಮನರಂಜನಾ ಉದ್ಯಮಕ್ಕೂ ಪ್ರಭಾವಿ ಭೂಗತ ಲೋಕದ ವ್ಯಕ್ತಿಗಳಿಗೂ ಇದ್ದ ನಿಕಟ ಸಂಪರ್ಕಗಳು ಅದು ತೋರಿಸುತ್ತಿದ್ದವು. 1980 ಮತ್ತು 1990ರ ದಶಕಗಳಲ್ಲಿ ದಾವೂದ್ ಇಬ್ರಾಹಿಂನ ಪ್ರಾಬಲ್ಯ ಹೆಚ್ಚಾದಂತೆ ಪರಿಸ್ಥಿತಿ ಹೆಚ್ಚು ಬಲವಂತದ ಸ್ವರೂಪ ಪಡೆದುಕೊಂಡಿತು. ವಿದೇಶಿ ವಿತರಣೆ ಮತ್ತು ಸಂಗೀತ ಹಕ್ಕುಗಳು ಸೇರಿದಂತೆ ಚಿತ್ರರಂಗದ ವ್ಯವಹಾರಗಳ ಮೇಲೆ ಪ್ರಭಾವ ಸಾಧಿಸಲು ಅಪರಾಧ ಜಾಲಗಳು ಯತ್ನಿಸಿದ್ದವು ಎನ್ನಲಾಗಿದೆ. ಬಾಲಿವುಡ್ ವಾಣಿಜ್ಯವಾಗಿ ಬೆಳೆಯುತ್ತಿದ್ದಂತೆ, ಅದರಲ್ಲಿನ ಲಾಭದಾಯಕ ಅವಕಾಶಗಳು ಹಣ ವಸೂಲಿ ಮಾಡಲು ಮತ್ತು ವ್ಯವಹಾರಗಳಲ್ಲಿ ಹಿಡಿತ ಸಾಧಿಸಲು ಬಯಸಿದ ಗ್ಯಾಂಗ್ಸ್ಟರ್ಗಳನ್ನು ಆಕರ್ಷಿಸಿದವು.ದಾವೂದ್ನ ಜಾಲದಲ್ಲಿ ಛೋಟಾ ಶಕೀಲ್ ಪ್ರಮುಖ ಸಹಚರನಾಗಿದ್ದ. ಬಳಿಕ ದಾವೂದ್ನಿಂದ ಬೇರ್ಪಟ್ಟ ಛೋಟಾ ರಾಜನ್ ತನ್ನದೇ ಪ್ರಭಾವ ಬೆಳೆಸಿಕೊಂಡರೆ, ಅಬು ಸಲೇಂ ಕೂಡ ಸ್ವತಂತ್ರ ಅಪರಾಧ ಜಾಲವನ್ನು ರೂಪಿಸಿದ. ಈ ಗುಂಪುಗಳ ನಡುವಿನ ಪೈಪೋಟಿ ಚಿತ್ರರಂಗದ ನಟರು, ನಿರ್ಮಾಪಕರು ಮತ್ತು ಇತರರ ವಿರುದ್ಧ ಸುಲಿಗೆ, ಬೆದರಿಕೆ ಹಾಗೂ ಹಿಂಸಾಚಾರದ ವಾತಾವರಣ ಸೃಷ್ಟಿಸಿತು.ಗುಲ್ಶನ್ ಕುಮಾರ್ ಹತ್ಯೆಗೂ ಮೊದಲು ಮತ್ತು ನಂತರ ನಡೆದ ಹಲವು ದಾಳಿಗಳು ಬಾಲಿವುಡ್ನಲ್ಲಿ ಕೆಲಸ ಮಾಡುವವರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದ್ದವು. 1997ರ ಮಾರ್ಚ್ 7ರಂದು ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಮುಕೇಶ್ ದುಗ್ಗಲ್ ಅವರನ್ನು ಅಂಧೇರಿಯ ಕಚೇರಿಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಅದೇ ವರ್ಷದ ಜುಲೈ 31ರಂದು ಮುಂಬೈನ ತಾರ್ದೇವ್ ಪ್ರದೇಶದಲ್ಲಿರುವ ಕಚೇರಿಯ ಹೊರಗೆ ಐವರು ಗುಂಡಿನ ದಾಳಿ ನಡೆಸಿದ್ದರು. ಅದರಲ್ಲಿ ಚಿತ್ರನಿರ್ಮಾಪಕ ರಾಜೀವ್ ರೈ ಪಾರಾಗಿದ್ದರು. 1999ರ ಡಿಸೆಂಬರ್ನಲ್ಲಿ ಅಡ್ಲ್ಯಾಬ್ಸ್ ಸಂಸ್ಥಾಪಕ ಮನಮೋಹನ್ ಶೆಟ್ಟಿ ಅವರ ಹತ್ಯೆಗೆ ಯತ್ನಿಸಲಾಗಿತ್ತು. 2002ರ ಜುಲೈನಲ್ಲಿ ಚಿತ್ರನಿರ್ಮಾಪಕ ಲಾರೆನ್ಸ್ ಡಿಸೋಜಾ ಅವರನ್ನೂ ಗುರಿಯಾಗಿಸಲಾಗಿತ್ತು.ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಆರೋಪಿಗಳಿಗೆ ವರವಾದ ಮಾಧ್ಯಮ ವರದಿ2000ರ ಜನವರಿಯಲ್ಲಿ ರಾಕೇಶ್ ರೋಷನ್ ಅವರ ಮೇಲೆ ನಡೆದ ಗುಂಡಿನ ದಾಳಿ, ಭೂಗತ ಲೋಕದ ಬೆದರಿಕೆಯ ಪ್ರಮಾಣವನ್ನು ಮತ್ತೊಮ್ಮೆ ತೋರಿಸಿತು. ‘ಕಹೋ ನಾ... ಪ್ಯಾರ್ ಹೈ’ ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮುಂಬೈನ ಸಾಂತಾಕ್ರೂಜ್ ಪ್ರದೇಶದಲ್ಲಿರುವ ಕಚೇರಿಯ ಹೊರಗೆ ಅವರ ಮೇಲೆ ಗುಂಡು ಹಾರಿಸಲಾಗಿತ್ತು. ಅವರು ಬದುಕುಳಿದರೂ, ಚಿತ್ರರಂಗದ ಪ್ರಭಾವಿ ವ್ಯಕ್ತಿಗಳ ವಿರುದ್ಧವೂ ಗ್ಯಾಂಗ್ಸ್ಟರ್ಗಳು ಹಿಂಸಾಚಾರಕ್ಕೆ ಮುಂದಾಗಬಹುದು ಎಂಬ ಆತಂಕ ಮತ್ತಷ್ಟು ಹೆಚ್ಚಾಯಿತು.ಬಾಲಿವುಡ್ಗಿರುವ ವಾಣಿಜ್ಯ ಪ್ರಭಾವವೇ ಅಪರಾಧ ಗುಂಪುಗಳ ಗುರಿಯಾಗಲು ಪ್ರಮುಖ ಕಾರಣ. ಚಲನಚಿತ್ರ ನಿರ್ಮಾಣ, ವಿತರಣೆ, ಸಂಗೀತ ಹಕ್ಕುಗಳು ಮತ್ತು ವಿದೇಶಿ ಮಾರುಕಟ್ಟೆಗಳು ದೊಡ್ಡ ಆದಾಯ ಹಾಗೂ ಪ್ರಭಾವ ಗಳಿಸುವ ಅವಕಾಶ ಒದಗಿಸುತ್ತಿದ್ದವು. ಯಶಸ್ವಿ ವ್ಯಕ್ತಿಗಳಿಂದ ಹಣ ವಸೂಲಿ ಮಾಡುವುದು ಒಂದು ಮಾರ್ಗವಾಗಿದ್ದರೆ, ವ್ಯವಹಾರಗಳ ಮೇಲೆ ಹಿಡಿತ ಸಾಧಿಸುವುದು ಮತ್ತೊಂದು. ಆದರೆ, ಚಿತ್ರರಂಗವೇ ಸಂಘಟಿತ ಅಪರಾಧಗಳೊಂದಿಗೆ ಸ್ವಯಂಪ್ರೇರಿತವಾಗಿ ಕೈಜೋಡಿಸಿತ್ತು ಎನ್ನಲಾಗದು.. ಸಾಮಾಜಿಕ ಸಂಪರ್ಕ, ಹಣಕಾಸಿನ ವ್ಯವಹಾರ ಮತ್ತು ಬೆದರಿಕೆಯ ಮೂಲಕ ಒತ್ತಡ ಹೇರುವುದು.. ಹೀಗೆ ವ್ಯಕ್ತಿ ಮತ್ತು ಕಾಲಘಟ್ಟಕ್ಕೆ ಅನುಗುಣವಾಗಿ ಇವುಗಳ ಸ್ವರೂಪವೂ ಬದಲಾಗಿತ್ತು.ಎನ್ಕೌಂಟರ್ಗಳ ಕಾಲ ಮತ್ತು ಬದಲಾದ ಬೆದರಿಕೆ1990ರ ದಶಕದ ಕೊನೆ ಹಾಗೂ 2000ರ ದಶಕದ ಆರಂಭದಲ್ಲಿ ಪೊಲೀಸರು ಗ್ಯಾಂಗ್ಸ್ಟರ್ಗಳ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸಿದರು. ಮುಂಬೈನ ‘ಎನ್ಕೌಂಟರ್ ಸ್ಪೆಷಲಿಸ್ಟ್’ಗಳೆಂದು ಹೆಸರಾಗಿದ್ದ ಪೊಲೀಸರು ನೂರಾರು ಶಂಕಿತ ಗ್ಯಾಂಗ್ಸ್ಟರ್ಗಳನ್ನು ಹತ್ಯೆ ಮಾಡಿದರು. ಇದರಿಂದ ದಾವೂದ್ ಇಬ್ರಾಹಿಂ, ಛೋಟಾ ರಾಜನ್, ಅರುಣ್ ಗಾವ್ಲಿ ಮತ್ತು ಅಬು ಸಲೇಂ ಅವರೊಂದಿಗೆ ಗುರುತಿಸಿಕೊಂಡಿದ್ದ ಅಪರಾಧ ಜಾಲಗಳು ದುರ್ಬಲಗೊಂಡವು. ಆದರೆ, ಕೆಲವು ಪೊಲೀಸ್ ಎನ್ಕೌಂಟರ್ಗಳಲ್ಲಿ ಅನುಸರಿಸಲಾದ ವಿಧಾನಗಳ ಬಗ್ಗೆ ಪ್ರಶ್ನೆಗಳು ಎದ್ದವು.ಈ ಕಾರ್ಯಾಚರಣೆಗಳು ಭೂಗತ ಲೋಕದ ಸ್ವರೂಪವನ್ನು ಬದಲಿಸಿದರೂ, ಬಾಲಿವುಡ್ ಅಪರಾಧಿಗಳ ಗುರಿಯಾಗುವುದನ್ನು ಸಂಪೂರ್ಣವಾಗಿ ತಡೆಯಲಿಲ್ಲ. ಮುಂದಿನ ದಶಕಗಳಲ್ಲಿಯೂ ಚಿತ್ರರಂಗ ಬೆದರಿಕೆಗಳನ್ನು ಎದುರಿಸಿತು. ಆದರೆ, ಬೆದರಿಕೆ ಹಾಕಿದವರ ಗುರುತು ಮತ್ತು ಪ್ರತಿ ಘಟನೆಯ ಹಿನ್ನೆಲೆ ವಿಭಿನ್ನವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಬಾಲಿವುಡ್ಗೆ ಪ್ರಮುಖ ಆತಂಕವಾಗಿ ಪರಿಣಮಿಸಿದೆ. ಅದರಲ್ಲೂ ನಟ ಸಲ್ಮಾನ್ ಖಾನ್ ಅವರಿಗೆ ಹಲವು ಬಾರಿ ಬೆದರಿಕೆ ಹಾಕಿರುವುದು ಗಮನ ಸೆಳೆದಿದೆ.1998ರ ಸೆಪ್ಟೆಂಬರ್ನಲ್ಲಿ ನಡೆದ ಕೃಷ್ಣಮೃಗ ಬೇಟೆ ಪ್ರಕರಣದೊಂದಿಗೆ ಬಿಷ್ಣೋಯಿ ಮತ್ತು ಸಲ್ಮಾನ್ ಖಾನ್ ನಡುವಿನ ವೈರತ್ವವನ್ನು ತಳುಕು ಹಾಕಲಾಗಿದೆ. ‘ಹಮ್ ಸಾಥ್ ಸಾಥ್ ಹೈ’ ಚಿತ್ರದ ಚಿತ್ರೀಕರಣದ ವೇಳೆ ರಾಜಸ್ಥಾನದ ಜೋಧಪುರ ಸಮೀಪದ ಕಂಕಣಿ ಗ್ರಾಮದಲ್ಲಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ ಆರೋಪ ಸಲ್ಮಾನ್ ಖಾನ್ ಮೇಲಿತ್ತು. ವನ್ಯಜೀವಿಗಳ ರಕ್ಷಣೆಯನ್ನು ಪ್ರಮುಖ ತತ್ವವಾಗಿ ಪರಿಗಣಿಸುವ ಬಿಷ್ಣೋಯಿ ಸಮುದಾಯವು ಖಾನ್ ಹಾಗೂ ಅವರ ಸಹನಟರಾದ ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ನೀಲಂ ಕೊಠಾರಿ ಮತ್ತು ತಬು ವಿರುದ್ಧ ದೂರು ನೀಡಿತ್ತು.ಎಕಾನಮಿ 360: ಜಿಯೋ ಐಪಿಒ, ಕಾರ್ಪೊರೇಟ್ ಲಾಭದ ಸಂಭ್ರಮದಾಚೆ ಉದ್ಯೋಗದ ಸಂಕಟ 2018ರ ಏಪ್ರಿಲ್ 5ರಂದು ಜೋಧಪುರ ನ್ಯಾಯಾಲಯವು ಸಲ್ಮಾನ್ ಖಾನ್ಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ₹ 10,000 ದಂಡ ವಿಧಿಸಿತ್ತು. ಉಳಿದ ನಾಲ್ವರು ನಟರನ್ನು ಖುಲಾಸೆಗೊಳಿಸಿತ್ತು. ಖಾನ್ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಿ ಜಾಮೀನು ಪಡೆದಿದ್ದರು. ಇತರ ಆರೋಪಿಗಳ ಖುಲಾಸೆಯನ್ನು ರಾಜಸ್ಥಾನ ಸರ್ಕಾರ ಪ್ರಶ್ನಿಸಿತ್ತು. ಪ್ರಕರಣ ರಾಜಸ್ಥಾನ ಹೈಕೋರ್ಟ್ನಲ್ಲಿ ಇನ್ನೂ ಬಾಕಿ ಇದೆ.ಮುಂಬೈ ಪೊಲೀಸ್ ಅಪರಾಧ ವಿಭಾಗದ ಸಿಐಡಿ ಮತ್ತು ರಾಜ್ಯ ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡಿದ್ದ ಅಧಿಕಾರಿಯೊಬ್ಬರ ಪ್ರಕಾರ, ಕೃಷ್ಣಮೃಗ ಬೇಟೆಯ ಘಟನೆ ನಡೆದಾಗ ಬಿಷ್ಣೋಯಿಗೆ ಕೇವಲ ಐದಾರು ವರ್ಷ ವಯಸ್ಸಾಗಿತ್ತು.‘ಲಾರೆನ್ಸ್ ಬಿಷ್ಣೋಯಿ 1993ರ ಸುಮಾರಿಗೆ ಜನಿಸಿದ್ದ. ಆಪಾದಿತ ಬೇಟೆ ನಡೆದಾಗ ಅವನಿಗೆ ಐದಾರು ವರ್ಷವಷ್ಟೇ ಆಗಿರಬಹುದು. ಬಿಷ್ಣೋಯಿ ಸಮುದಾಯವು 29 ತತ್ವಗಳನ್ನು ಅನುಸರಿಸುತ್ತದೆ. ಅವುಗಳಲ್ಲಿ ಅಹಿಂಸೆ ಹಾಗೂ ಪ್ರಾಣಿಗಳು, ಪಕ್ಷಿಗಳು ಮತ್ತು ಪರಿಸರದ ರಕ್ಷಣೆಯೂ ಸೇರಿವೆ’ ಎಂದು ಅಧಿಕಾರಿ ಹೇಳಿದ್ದಾರೆ.ಬಳಿಕ ಬಿಷ್ಣೋಯಿ ಸಮುದಾಯದ ವನ್ಯಜೀವಿ ಸಂರಕ್ಷಣೆಯ ಬದ್ಧತೆಯನ್ನು ಸಲ್ಮಾನ್ ಖಾನ್ ವಿರುದ್ಧದ ದ್ವೇಷಕ್ಕೆ ಕಾರಣವಾಗಿ ಬಳಸಿಕೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. 2018ರ ಜನವರಿ 4ರಂದು ಪ್ರತ್ಯೇಕ ವಿಚಾರಣೆಗಳಿಗಾಗಿ ಸಲ್ಮಾನ್ ಖಾನ್ ಮತ್ತು ಬಿಷ್ಣೋಯಿ ಇಬ್ಬರೂ ಜೋಧಪುರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಕೋರ್ಟ್ ಹೊರಗೆ ಕೊಲೆ ಮಾಡುತ್ತೇನೆ ಎಂದು ಸಲ್ಮಾನ್ ಖಾನ್ ಗೆ ಬಿಷ್ಣೋಯಿ ಬೆದರಿಕೆ ಹಾಕಿದ್ದ.‘ಚಿತ್ರರಂಗದಲ್ಲಿ ನಿರ್ಧಾರಗಳನ್ನು ಪ್ರಭಾವಿಸುವ ಕೆಲವೇ ವ್ಯಕ್ತಿಗಳಲ್ಲಿ ಸಲ್ಮಾನ್ ಖಾನ್ ಒಬ್ಬರು. ಗ್ಯಾಂಗ್ ನೇರವಾಗಿ ಅವರನ್ನೇ ಗುರಿಯಾಗಿಸಿಕೊಂಡಿದೆ’ ಎಂದು ಅಧಿಕಾರಿ ಹೇಳಿದ್ದಾರೆ.ಸುದ್ದಿಹಾಳೆ ಬಿಕ್ಕಟ್ಟು: ಆತಂಕದಲ್ಲಿ ಪತ್ರಿಕೋದ್ಯಮದ ಭವಿಷ್ಯ, ಪರಿಹಾರವೇನು?ಸಲ್ಮಾನ್ ಖಾನ್ನಿಂದ ಟೈಗರ್ ಶ್ರಾಫ್ವರೆಗೆ..2024ರ ಏಪ್ರಿಲ್ನಲ್ಲಿ ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಹೊರಗೆ ಬಂದೂಕುಧಾರಿಗಳು ಗುಂಡು ಹಾರಿಸಿದಾಗ ಈ ಬೆದರಿಕೆ ಮತ್ತಷ್ಟು ಸ್ಪಷ್ಟವಾಗಿ ಗೋಚರಿಸಿತು. ಭದ್ರತಾ ವ್ಯವಸ್ಥೆಗಳ ನಡುವೆಯೂ ಪ್ರಭಾವಿ ಚಿತ್ರರಂಗದ ವ್ಯಕ್ತಿಗಳನ್ನು ಗುರಿಯಾಗಿಸುವ ಗ್ಯಾಂಗ್ನ ಸಾಮರ್ಥ್ಯದ ಬಗ್ಗೆ ಈ ಘಟನೆ ಆತಂಕ ಮೂಡಿಸಿತು.2024ರ ಅಕ್ಟೋಬರ್ 12ರಂದು ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆಗೀಡಾದ ಘಟನೆ ಕೂಡ ಗ್ಯಾಂಗ್ನ ಆಪಾದಿತ ಚಟುವಟಿಕೆಗಳತ್ತ ಗಮನ ಸೆಳೆಯಿತು. ಸಿದ್ದಿಕಿ ಅವರು ಸಲ್ಮಾನ್ ಖಾನ್ ಸೇರಿದಂತೆ ಹಲವು ಬಾಲಿವುಡ್ ಗಣ್ಯರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಈ ಹತ್ಯೆಗೂ ಬಿಷ್ಣೋಯಿ ಜಾಲಕ್ಕೂ ಸಂಬಂಧವಿದೆಯೇ ಎಂಬುದರ ಬಗ್ಗೆ ತನಿಖೆ ನಡೆಯಿತು..2026ರ ಫೆಬ್ರುವರಿ 1ರಂದು ಮುಂಬೈನ ಜುಹು ಪ್ರದೇಶದಲ್ಲಿರುವ ಚಿತ್ರನಿರ್ದೇಶಕ ರೋಹಿತ್ ಶೆಟ್ಟಿ ಅವರ ನಿವಾಸದ ಹೊರಗೆ ಗುಂಡಿನ ದಾಳಿ ನಡೆದಿತ್ತು. ಬಿಷ್ಣೋಯಿ ಗ್ಯಾಂಗ್ಗೆ ಸಂಬಂಧಿಸಿದೆ ಎನ್ನಲಾದ ಸಾಮಾಜಿಕ ಮಾಧ್ಯಮದ ಪೋಸ್ಟ್ ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಬಳಿಕ ಆ ಜಾಲದೊಂದಿಗೆ ಸಂಪರ್ಕ ಹೊಂದಿರುವ ಶಂಕಿತರ ವಿರುದ್ಧ ಕ್ರಮ ತೆಗೆದುಕೊಳ್ಳಲಾಯಿತು.ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಈ ಸರಣಿಗೆ ಮತ್ತೊಂದು ಉದಾಹರಣೆ. ಮುಂಬೈನಿಂದ ಪರಾರಿಯಾಗಿದ್ದ ಮೂವರು ಶಂಕಿತ ಶೂಟರ್ಗಳನ್ನು ರಾಜಸ್ಥಾನದ ಕೋಟಾದಲ್ಲಿ ಬಂಧಿಸಲಾಗಿದೆ. ದಾಳಿಗೆ ಅಗತ್ಯವಾದ ವ್ಯವಸ್ಥೆ ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸಿದ ಶಂಕಿತರನ್ನು ಬಂಧಿಸಿದ ಬಳಿಕ, ಅಕ್ಟೋಬರ್ 22ರ ವೇಳೆಗೆ ಬಂಧಿತರ ಸಂಖ್ಯೆ 10ಕ್ಕೆ ಏರಿತ್ತು. ಶಸ್ತ್ರಾಸ್ತ್ರಗಳನ್ನು ಎಲ್ಲಿಂದ ತರಲಾಗಿತ್ತು ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನ ಕಾರ್ಯಕರ್ತ ಎನ್ನಲಾದ ಅನಿಲ್ ಪಂಡಿತ್ ದಾಳಿಯ ಸಂಚು ರೂಪಿಸುವಲ್ಲಿ ಭಾಗಿಯಾಗಿದ್ದಾನೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಗುಂಡಿನ ದಾಳಿಯ ಹೊಣೆಯನ್ನು ಗ್ಯಾಂಗ್ ಹೊತ್ತುಕೊಂಡಿದೆ. ಸಂಚು ಮತ್ತು ಬಂಧಿತರ ಪಾತ್ರಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ದಾಳಿಯನ್ನು ಅಖಿಲ ಭಾರತ ಸಿನಿ ಕಾರ್ಮಿಕರ ಸಂಘ (ಎಐಸಿಡಬ್ಲ್ಯುಎ) ಮತ್ತು ಪಶ್ಚಿಮ ಭಾರತ ಚಲನಚಿತ್ರ ಉದ್ಯೋಗಿಗಳ ಒಕ್ಕೂಟ (ಎಫ್ಡಬ್ಲ್ಯುಐಸಿಇ) ಖಂಡಿಸಿವೆ. ಇವು ಚಿತ್ರರಂಗದ ಪ್ರಮುಖ ಸಂಘಟನೆಗಳಾಗಿವೆ.‘ಭಯ ಹುಟ್ಟಿಸಿ ಹಣ ವಸೂಲಿ ಮಾಡುವ ಉದ್ದೇಶದಿಂದ ಚಿತ್ರರಂಗದ ವ್ಯಕ್ತಿಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗುತ್ತಿದೆ’ ಎಂದು ಎಐಸಿಡಬ್ಲ್ಯುಎ ಅಧ್ಯಕ್ಷ ಸುರೇಶ್ ಶ್ಯಾಮಲಾಲ್ ಗುಪ್ತಾ ಹೇಳಿದ್ದಾರೆ. ದಾಳಿಯನ್ನು ಖಂಡಿಸಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ. ಭಾರತದ ಸಾಂಸ್ಕೃತಿಕ ಗುರುತು ಮತ್ತು ಆರ್ಥಿಕತೆಗೆ ಚಿತ್ರರಂಗ ಮಹತ್ವದ ಕೊಡುಗೆ ನೀಡುತ್ತಿದೆ. ಇಲ್ಲಿ ಕೆಲಸ ಮಾಡುವವರು ಭಯ, ಬೆದರಿಕೆ ಮತ್ತು ಒತ್ತಡವಿಲ್ಲದೆ ಕಾರ್ಯನಿರ್ವಹಿಸುವಂತಾಗಬೇಕು ಎಂದು ಎಫ್ಡಬ್ಲ್ಯುಐಸಿಇಯ ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ಹೇಳಿದ್ದಾರೆ.ಇತ್ತೀಚಿನ ಗುಂಡಿನ ದಾಳಿ ಬಾಲಿವುಡ್ಗೆ ಸಂಘಟಿತ ಅಪರಾಧಗಳ ಬೆದರಿಕೆ ಇನ್ನೂ ಸಂಪೂರ್ಣವಾಗಿ ಮಾಯವಾಗಿಲ್ಲ ಎಂಬುದನ್ನು ತೋರಿಸಿದೆ. ಗುಲ್ಶನ್ ಕುಮಾರ್ ತಮ್ಮ ಸಂಗೀತ ಉದ್ಯಮವನ್ನು ಕಟ್ಟಿದ ಮತ್ತು ರಾಕೇಶ್ ರೋಷನ್ ಚಿತ್ರಗಳನ್ನು ನಿರ್ಮಿಸಿದ ಕಾಲಕ್ಕಿಂತ ಇಂದಿನ ಚಿತ್ರರಂಗ ಬಹಳಷ್ಟು ಬದಲಾಗಿದೆ. ಹಳೆಯ ಗ್ಯಾಂಗ್ಗಳ ಜಾಲ ದುರ್ಬಲಗೊಂಡಿದೆ, ಛಿದ್ರವಾಗಿದೆ ಅಥವಾ ರೂಪಾಂತರಗೊಂಡಿದೆ. ಹೊಸ ಗುಂಪುಗಳೂ ಹುಟ್ಟಿಕೊಂಡಿವೆ.ಆದರೆ, ಪ್ರಭಾವಿ ವ್ಯಕ್ತಿಗಳನ್ನು ಮತ್ತೆ ಮತ್ತೆ ಗುರಿಯಾಗಿಸಲಾಗುತ್ತಿರುವುದು ಆತಂಕ ಇನ್ನೂ ಮುಗಿದಿಲ್ಲ ಎನ್ನುವುದನ್ನು ತೋರಿಸುತ್ತದೆ. ಬಾಲಿವುಡ್ನ ಹಣ, ಜನಪ್ರಿಯತೆ ಮತ್ತು ಪ್ರಭಾವವು ಬೆದರಿಕೆಯ ಮೂಲಕ ಹಿಡಿತ ಸಾಧಿಸಲು ಬಯಸುವವರನ್ನು ಇನ್ನೂ ಆಕರ್ಷಿಸುತ್ತಿವೆ. ಪ್ರತಿ ದಾಳಿಯ ಹಿನ್ನೆಲೆಯನ್ನು ಪ್ರತ್ಯೇಕವಾಗಿ ತನಿಖೆ ಮಾಡಿ ಸಾಬೀತು ಮಾಡಬೇಕಾದರೂ, 1997, 2000 ಮತ್ತು 2026ರ ಘಟನೆಗಳು ಒಂದೇ ಪ್ರಶ್ನೆಯನ್ನು ಮತ್ತೆ ಎತ್ತುತ್ತವೆ: ಬಾಲಿವುಡ್ ಭೂಗತ ಲೋಕದ ನೆರಳಿನಿಂದ ಸಂಪೂರ್ಣವಾಗಿ ಹೊರಬರಲು ಏಕೆ ಸಾಧ್ಯವಾಗಿಲ್ಲ?ಗುಲ್ಶಾನ್ to ಟೈಗರ್: ಗುಂಡಿನ ದಾಳಿಗೆ ಗುರಿಯಾದ ಬಾಲಿವುಡ್ ತಾರೆಯರಿವರು