ವಾರದ ವಿಶೇಷ | ರಾಜಕಾರಣಿಗಳ ನೆತ್ತಿ ಮೇಲೆ ‘ಸ್ಟಿಂಗ್’ ಕತ್ತಿ
ರಾಜ್ಯದಲ್ಲಿ ಸ್ಟಿಂಗ್ ಕಾರ್ಯಾಚರಣೆಗಳು ಮತ್ತು ವಿಡಿಯೊಗಳು ಭಾರಿ ಚರ್ಚೆ, ವಿವಾದಕ್ಕೆ ಕಾರಣವಾಗಿವೆ. ಕರ್ನಾಟಕ ರಾಜಕಾರಣದಲ್ಲಿ ಸ್ಟಿಂಗ್ ವಿಡಿಯೊಗಳು ಮತ್ತು ಲೈಂಗಿಕ ಹಗರಣಗಳಿಗೆ ದಶಕಗಳ ಇತಿಹಾಸವೇ ಇದೆ. ಇಂಥ ವಿಡಿಯೊಗಳು/ಹಗರಣಗಳು ಹಲವು ಮಂತ್ರಿಗಳ ಸ್ಥಾನಕ್ಕೆ ಕುತ್ತು ತಂದಿವೆ. ಮಾಜಿ ಸಂಸದ ಜೈಲು ಸೇರಿದ್ದರೆ, ಹಲವು ಶಾಸಕರು ನ್ಯಾಯಾಲಯದ ಮೊರೆ ಹೋಗಿ ವಿಡಿಯೊಗಳು ಬಹಿರಂಗ

ರಾಜ್ಯದಲ್ಲಿ ಸ್ಟಿಂಗ್ ಕಾರ್ಯಾಚರಣೆಗಳು ಮತ್ತು ವಿಡಿಯೊಗಳು ಭಾರಿ ಚರ್ಚೆ, ವಿವಾದಕ್ಕೆ ಕಾರಣವಾಗಿವೆ. ಕರ್ನಾಟಕ ರಾಜಕಾರಣದಲ್ಲಿ ಸ್ಟಿಂಗ್ ವಿಡಿಯೊಗಳು ಮತ್ತು ಲೈಂಗಿಕ ಹಗರಣಗಳಿಗೆ ದಶಕಗಳ ಇತಿಹಾಸವೇ ಇದೆ. ಇಂಥ ವಿಡಿಯೊಗಳು/ಹಗರಣಗಳು ಹಲವು ಮಂತ್ರಿಗಳ ಸ್ಥಾನಕ್ಕೆ ಕುತ್ತು ತಂದಿವೆ. ಮಾಜಿ ಸಂಸದ ಜೈಲು ಸೇರಿದ್ದರೆ, ಹಲವು ಶಾಸಕರು ನ್ಯಾಯಾಲಯದ ಮೊರೆ ಹೋಗಿ ವಿಡಿಯೊಗಳು ಬಹಿರಂಗವಾಗದಂತೆ ತಡೆಯಾಜ್ಞೆಗಳನ್ನೂ ತಂದಿದ್ದಾರೆ. ಗಂಡು–ಹೆಣ್ಣಿನ ಏಕಾಂತದ ವಿಡಿಯೊ, ಚಿತ್ರಗಳನ್ನು ರಾಜಕಾರಣದಲ್ಲಿ ಬ್ಯ್ಲಾಕ್ಮೇಲ್ ಮಾಡಲು, ವಿರೋಧ ಪಕ್ಷಗಳ ಅಥವಾ ಸ್ವಪಕ್ಷದ ಎದುರಾಳಿಗಳನ್ನು ಹಣಿಯಲು ಬಳಸುವ ಪ್ರವೃತ್ತಿಯು ಹೆಚ್ಚುತ್ತಿದೆ ಎನ್ನುವ ವಿಶ್ಲೇಷಣೆ ಇದೆ. ರಾಜ್ಯ ರಾಜಕಾರಣದಲ್ಲಿ ವರದಿಯಾದ ಪ್ರಮುಖ ಲೈಂಗಿಕ ಹಗರಣಗಳ ವಿವರ ಇಲ್ಲಿದೆ..2007ರಿಂದ ಈಚೆಗೆ ರಾಜ್ಯ ರಾಜಕೀಯದಲ್ಲಿ ಲೈಂಗಿಕ ಹಗರಣಗಳು, ಸ್ಟಿಂಗ್ ಆಪರೇಷನ್ಗಳು, ಮಧುಬಲೆ (ಹನಿಟ್ರ್ಯಾಪ್) ಪ್ರಕರಣಗಳು ಸದ್ದು ಮಾಡುತ್ತಿವೆ. ಇಂತಹ ಪ್ರಕರಣಗಳಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದವರ ಪಟ್ಟಿ ಸಣ್ಣದೇನಲ್ಲ. ಸಂಸದರು, ಶಾಸಕರು, ವಿವಿಧ ಪಕ್ಷಗಳ ಮುಖಂಡರು ಕೂಡ ಇದರ ಸುಳಿಗೆ ಸಿಲುಕಿ ರಾಜಕೀಯವಾಗಿ ಮೂಲೆಗುಂಪಾದ ಉದಾಹರಣೆಗಳಿವೆ. ಈಗ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತದ್ದು ಎನ್ನಲಾಗುವ ಸ್ಟಿಂಗ್ ವಿಡಿಯೊವೊಂದು ಬಿಡುಗಡೆಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಸಿದ್ದರಾಮಯ್ಯ ಅವರು ಆರೋಪವನ್ನು ನಿರಾಕರಿಸಿದ್ದಾರೆ. ತಮ್ಮ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ದೂರಿದ್ದಾರೆ. ಅದರ ಪ್ರಸಾರದ ವಿರುದ್ಧ ನ್ಯಾಯಾಲಯದಿಂದ ತಡೆಯಾಜ್ಞೆಯನ್ನೂ ತಂದಿದ್ದಾರೆ. ರಾಜಕಾರಣಿಗಳನ್ನು ಕೇಂದ್ರೀಕರಿಸಿ ಅವರ ಖಾಸಗಿ ಕ್ಷಣಗಳನ್ನು ಚಿತ್ರಿಸುವ ವ್ಯವಸ್ಥಿತ ಜಾಲವೇ ರಾಜ್ಯದಲ್ಲಿ ಸಕ್ರಿಯವಾಗಿದೆ ಎನ್ನುವ ಆರೋಪಗಳು ಚರ್ಚೆಗೆ ಕಾರಣವಾಗಿವೆ.‘ಕರ್ನಾಟಕವು ಲೈಂಗಿಕ ಹಗರಣಗಳಿಗೆ ಸಂಬಂಧಿಸಿದ ಸಿ.ಡಿ, ಪೆನ್ಡ್ರೈವ್ಗಳ ಕಾರ್ಖಾನೆ ಆಗಿದೆ. ರಾಜ್ಯದ 48 ಮಂದಿ ರಾಜಕಾರಣಿಗಳಿಗೆ ‘ಮಧುಬಲೆ’ ಬೀಸಲಾಗಿದೆ’ ಎಂದು 2025ರ ಮಾರ್ಚ್ನಲ್ಲಿ ಕಾಂಗ್ರೆಸ್ ಶಾಸಕ, ಅಂದು ಸಚಿವರಾಗಿದ್ದ ಕೆ.ಎನ್.ರಾಜಣ್ಣ ವಿಧಾನಮಂಡಲದಲ್ಲಿ ಹೇಳಿದ್ದರು. ತಮ್ಮ ಬಗ್ಗೆಯೂ ಕೆಲವರು ಇಂಥ ಸ್ಟಿಂಗ್ ಮಾಡಲು ಪ್ರಯತ್ನಿಸಿದ್ದಾಗಿ ಅವರು ತಿಳಿಸಿದ್ದರು.ವಿವಾಹೇತರ ಲೈಂಗಿಕ ಸಂಬಂಧ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್, ಜೋಸೆಫ್ ಶೈನ್ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ (2018) ತೀರ್ಪು ನೀಡಿದೆ. ಅದರ ಪ್ರಕಾರ, ವಯಸ್ಕರಾದ ಗಂಡು ಹೆಣ್ಣು ಪರಸ್ಪರ ಒಪ್ಪಿಗೆಯಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ, ಅದು ಅಪರಾಧವಲ್ಲ. ಆದರೆ, ಅದನ್ನು ಚಿತ್ರೀಕರಿಸುವುದು, ವಿಡಿಯೊಗಳನ್ನು ಬ್ಲ್ಯಾಕ್ಮೇಲ್ಗೆ ಬಳಸುವುದು ಅಪರಾಧವಾಗಿದೆ. ಜತೆಗೆ, ಆಮಿಷ, ಬಲಾತ್ಕಾರ, ಪ್ರಭಾವ, ಒತ್ತಡ ಬಳಸಿ ಲೈಂಗಿಕ ಸಂಪರ್ಕ ಬೆಳೆಸುವುದು ಅಪರಾಧದ ವ್ಯಾಪ್ತಿಗೆ ಬರುತ್ತದೆ. ರಾಜಕಾರಣದಲ್ಲಿ ಇರುವ ಪ್ರಭಾವಿಗಳು, ಪ್ರಮುಖರ ಇಂಥ ವಿಡಿಯೊಗಳು ಬಹಿರಂಗವಾದರೆ, ಅದರ ಸುತ್ತ ಸಾಕಷ್ಟು ಗದ್ದಲ, ಚರ್ಚೆ, ಆರೋಪ ಪ್ರತ್ಯಾರೋಪಗಳು ವ್ಯಕ್ತವಾಗುತ್ತವೆ. ರಾಜಕಾರಣಿಗಳನ್ನು ನಿಯಂತ್ರಿಸಲು, ಅವರಿಂದ ಕೆಲಸ ಮಾಡಿಸಿಕೊಳ್ಳಲು ಹಲವರು ಇಂಥ ಸ್ಟಿಂಗ್ಗಳನ್ನು ಮಾಡುತ್ತಿದ್ದಾರೆ ಎನ್ನುವ ಆರೋಪ ಇದೆ.2019ರಲ್ಲಿ ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವ ಸಂಬಂಧ 17 ಶಾಸಕರು ಮುಂಬೈಗೆ ತೆರಳಿದ್ದರು. ಅವರನ್ನು ‘ಬಾಂಬೆ ಬಾಯ್ಸ್’ ಎಂದೇ ಕರೆಯಲಾಯಿತು. ಅವರು ಖಾಸಗಿ ಕ್ಷಣಗಳ 19 ಸಿ.ಡಿ.ಗಳು ಇವೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಈ ಪೈಕಿ ಆರು ಮಂದಿ ಬಿಜೆಪಿ ಮುಖಂಡರು ತಮ್ಮ ಕುರಿತ ಇಂಥ ಯಾವುದೇ ವಿಡಿಯೊ ಬಿಡುಗಡೆಗೊಳಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ‘ಈ ಬಗ್ಗೆ ನಾನು ‘ಬಾಂಬೆ ಬಾಯ್ಸ್’ ಎನ್ನುವ ಪುಸ್ತಕ ರಚಿಸಿದ್ದೇನೆ. ಅದು ಹೊರಬಂದರೆ, ಮೂರೂ ಪಕ್ಷಗಳ ನಾಯಕರು ಬೆತ್ತಲಾಗುತ್ತಾರೆ. ಆದರೆ, ವ್ಯಕ್ತಿಯೊಬ್ಬರ ರಾಜಕೀಯ ಬೆಳವಣಿಗೆಯನ್ನು ಕುಗ್ಗಿಸಲು ಈ ರೀತಿಯ ತಂತ್ರಗಳನ್ನು ಬಳಸುವುದು ಸರಿಯಲ್ಲ’ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಇತ್ತೀಚೆಗೆ ಹೇಳಿದ್ದರು.ರಾಜಕಾರಣಿಗಳನ್ನು ‘ಮಧುಬಲೆ’ಗೆ ಕೆಡವುವುದು, ಖಾಸಗಿ ಕ್ಷಣಗಳು ವಿಡಿಯೊ/ಚಿತ್ರಗಳು ಬಹಿರಂಗಗೊಳ್ಳುತ್ತಿರುವ ವಿದ್ಯಮಾನವು ಕರ್ನಾಟಕಕ್ಕೆ ಸೀಮಿತವಾಗಿಲ್ಲ. ದೇಶದ ಬಹುತೇಕ ರಾಜ್ಯಗಳಲ್ಲಿ ಹಲವು ಮಂತ್ರಿ, ಶಾಸಕ, ಮುಖಂಡರ ವಿಡಿಯೊಗಳು ಸೋರಿಕೆಯಾಗಿ ಗದ್ದಲವುಂಟುಮಾಡಿವೆ. ಹಲವರು ತಮ್ಮ ಹುದ್ದೆ, ಪ್ರಭಾವ ಕಳೆದುಕೊಳ್ಳಲೂ ಇವು ಕಾರಣವಾಗಿವೆ. ಆದರೆ, ಇವು ರಾಜಕಾರಣವನ್ನು, ರಾಜಕಾರಣಿಗಳನ್ನು ನಿಯಂತ್ರಿಸುವ ಸಾಧನಗಳಾಗಿ ಬಳಕೆಯಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ.ರಾಜ್ಯದ ಆಡಳಿತ ನಡೆಸುವವರು, ಶಾಸನ ರೂಪಿಸುವವರು, ನಾಡಿನ ಜನರ ಬದುಕಿನಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಹೊಣೆ ಹೊತ್ತವರು ಶುದ್ಧಹಸ್ತರಾಗಿರಬೇಕು, ನೈತಿಕತೆ ಕಾಪಾಡಿಕೊಳ್ಳಬೇಕು, ಮಾದರಿಯಾಗಿರಬೇಕು ಎನ್ನುವುದು ಜನರ ಬಯಕೆಯಾಗಿರುತ್ತದೆ. ಆದರೆ, ರಾಜಕಾರಣಿಗಳ ವಿಡಿಯೊಗಳು, ಛಾಯಾಚಿತ್ರಗಳು ಹೆಚ್ಚಿನ ಪ್ರಮಾಣದಲ್ಲಿ ಬಹಿರಂಗಗೊಳ್ಳುತ್ತಿರುವುದು, ಉದ್ದೇಶಪೂರ್ವಕವಾಗಿ ರಾಜಕಾರಣಿಗಳನ್ನು ಇಂಥ ಖೆಡ್ಡಾಕ್ಕೆ ಕೆಡವಿ, ಅದನ್ನು ರಾಜಕೀಯ ಅಧಿಕಾರದ ದಾಳವಾಗಿ ಬಳಸಿಕೊಳ್ಳುತ್ತಿರುವುದು ಕಳವಳಕಾರಿ. ಸರ್ಕಾರದ ಉನ್ನತ ಹುದ್ದೆಗಳಲ್ಲಿ ಇರುವವರು ಇಂಥ ಪ್ರಕರಣಗಳಲ್ಲಿ ಸಿಲುಕುವುದು, ಪ್ರಭಾವಿಗಳ ವಿರುದ್ಧ ಆರೋಪಗಳು ಕೇಳಿಬರುವುದು ದೇಶ ಹಾಗೂ ರಾಜ್ಯದ ರಾಜಕೀಯ ಸಂಸ್ಕೃತಿಯ ಅಧಃಪತನ ಎನ್ನುವ ವಿಶ್ಲೇಷಣೆ ಇದೆ.1973: ಆರ್.ಡಿ.ಕಿತ್ತೂರ್ ಪ್ರಕರಣಮುಖ್ಯಮಂತ್ರಿ ದೇವರಾಜ ಅರಸು ಸಂಪುಟದಲ್ಲಿ ಆರ್.ಡಿ.ಕಿತ್ತೂರ್ ಅವರು ಗೃಹ ಖಾತೆಯ ರಾಜ್ಯ ಸಚಿವರಾಗಿದ್ದರು. ಹೆಣ್ಣುಮಗಳೊಬ್ಬಳು ಕಿತ್ತೂರ್ ಅವರ ಮನೆಯಲ್ಲಿ ಇದ್ದರು ಎಂಬ ಆರೋಪ ಅವರ ಮೇಲೆ ಬಂದಿತ್ತು. ಅದು ಬಿಟ್ಟರೆ ಇನ್ಯಾವುದೇ ರೀತಿಯ ಆರೋಪ ಅವರ ಮೇಲಿರಲಿಲ್ಲ. ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಆ ಕಾಲದಲ್ಲಿ ಇದು ಲೈಂಗಿಕ ಹಗರಣ ಎಂದು ಬಿಂಬಿತವಾಗಿತ್ತು. ಬಹುಶಃ ಇಂತಹ ಪ್ರಕರಣದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೊದಲ ಸಚಿವ ಅವರೇ. ರಾಜ್ಯದ ರಾಜಕೀಯದಲ್ಲಿ ದೊಡ್ಡ ಹುದ್ದೆಯಲ್ಲಿದ್ದವರ ಹೆಸರಿನೊಂದಿಗೆ ತಳಕು ಹಾಕಿದ ಮೊದಲ ಪ್ರಕರಣವೂ ಅದೇ.ಆ ಹೆಣ್ಣುಮಗಳು ಅದೊಂದು ದಿನ ಭಾರಿ ಮಳೆ ಬೀಳುತ್ತಿದ್ದ ಸಂದರ್ಭದಲ್ಲಿ ಸಚಿವರ ಅಧಿಕೃತ ನಿವಾಸದ ಕಾಂಪೌಂಡ್ ಒಳಗಿನ ಮರದ ಕೆಳಗೆ ನಿಂತಿದ್ದಳು. ಸಚಿವರು ಆಕೆಯನ್ನು ಮನೆಯ ಒಳಗೆ ಕರೆದಿದ್ದರು. ಇಲ್ಲಿಂದ ಕಥೆ ಬೇರೆ ಬೇರೆ ತಿರುವುಗಳನ್ನು ಪಡೆದುಕೊಂಡು ಅವರು ರಾಜೀನಾಮೆ ನೀಡಬೇಕಾಯಿತು ಎನ್ನಲಾಗಿತ್ತು.2007: ರೇಣುಕಾಚಾರ್ಯ ವಿವಾದರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಮೊದಲ ಲೈಂಗಿಕ ಹಗರಣ ಇದು. ಆಗ ಜೆಡಿಎಸ್, ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರದಲ್ಲಿತ್ತು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ರೇಣುಕಾಚಾರ್ಯ ಅವರು, ಉಪಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಬಳಗದಲ್ಲಿದ್ದರು. ರೇಣುಕಾಚಾರ್ಯ ಅವರು ನರ್ಸ್ ಒಬ್ಬರನ್ನು ಚುಂಬಿಸುತ್ತಿರುವ ಫೋಟೊಗಳು ಬಹಿರಂಗಗೊಂಡವು. ಶಾಸಕರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಬೆದರಿಕೆ ಹಾಕುತ್ತಿದ್ದಾರೆ ಎಂದು ನರ್ಸ್ ಆರೋಪಿಸಿದ್ದರು. ರಾಜಕೀಯದಲ್ಲಿ ತೀವ್ರವಾದ ಪರ–ವಿರೋಧ ಚರ್ಚೆಯನ್ನು ಈ ಪ್ರಕರಣ ಹುಟ್ಟುಹಾಕಿತ್ತು. 2008ರಲ್ಲಿ ರೇಣುಕಾಚಾರ್ಯ ಅವರು ಸಚಿವರೂ ಆದರು. ನಂತರದಲ್ಲಿ ನರ್ಸ್, ಪ್ರಕರಣವನ್ನು ವಾಪಸ್ ಪಡೆದರು.2010: ಹಾಲಪ್ಪ ಪ್ರಕರಣಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದ ಹರತಾಳು ಹಾಲಪ್ಪ ಅವರ ವಿರುದ್ಧ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಕೇಳಿಬಂತು. ಅವರ ಸ್ನೇಹಿತರೇ, ಹಾಲಪ್ಪ ಅವರು ತಮ್ಮ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ದೂರಿದ್ದರು. ರೇಣುಕಾಚಾರ್ಯ ಪ್ರಕರಣದಲ್ಲಿ ತೀವ್ರ ಮುಜುಗರ ಅನುಭವಿಸಿದ್ದ ಬಿಜೆಪಿ ಈ ಪ್ರಕರಣದಲ್ಲಿ ಮತ್ತೆ ಮುಜುಗರ ಅನುಭವಿಸಿತು. ರಾಜಕೀಯ ಬಿರುಗಾಳಿ ಎಬ್ಬಿಸಿದ್ದ ಈ ಪ್ರಕರಣದಿಂದಾಗಿ ಹಾಲಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಬೇಕಾಯಿತು. ತಮ್ಮ ಮೇಲಿನ ಆರೋಪವನ್ನು ಅವರು ಈ ತಳ್ಳಿ ಹಾಕಿದರು. ಆದರೆ, ಅವರು ತನಿಖೆ, ವಿಚಾರಣೆಗಳನ್ನು ಎದುರಿಸಬೇಕಾಯಿತು. 2017ರಲ್ಲಿ ಸಾಕ್ಷ್ಯಗಳ ಕೊರತೆಯ ಕಾರಣದಿಂದ ನ್ಯಾಯಾಲಯವು ಹಾಲಪ್ಪ ಅವರನ್ನು ನಿರ್ದೋಷಿ ಎಂದು ಘೋಷಿಸಿತು.2012: ಸದನದಲ್ಲಿ ನೀಲಿಚಿತ್ರ ವೀಕ್ಷಣೆದೇಶದಾದ್ಯಂತ ದೊಡ್ಡದಾಗಿ ಸದ್ದು ಮಾಡಿದ ಮತ್ತೊಂದು ಪ್ರಕರಣವೆಂದರೆ, ವಿಧಾನಸಭೆಯಲ್ಲಿ ಕಲಾಪ ನಡೆಯುತ್ತಿದ್ದಾಗ ಬಿಜೆಪಿಯ ಮೂವರು ಸಚಿವರು ಮೊಬೈಲ್ನಲ್ಲಿ ಅಶ್ಲೀಲ ವಿಡಿಯೊ ವೀಕ್ಷಿಸಿದ ಪ್ರಕರಣ. ಇದು ಕೂಡ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿತ್ತು. ಸಚಿವರಾಗಿದ್ದ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ ಮತ್ತು ಕೃಷ್ಣ ಪಾಲೇಮರ್ ಅವರು ನೀಲಿ ಚಿತ್ರ ವೀಕ್ಷಿಸುತ್ತಿದ್ದುದನ್ನು ಮಾಧ್ಯಮಗಳ ಕ್ಯಾಮೆರಾಗಳು ಸೆರೆಹಿಡಿದಿದ್ದವು. ಮಾಧ್ಯಮಗಳಲ್ಲಿ ಇದು ಪ್ರಸಾರವಾಗುತ್ತಿದ್ದಂತೆಯೇ ಸದನದ ಒಳಗಡೆ ಮತ್ತು ಹೊರಗಡೆ ಕೋಲಾಹಲ ಸೃಷ್ಟಿಯಾಗಿತ್ತು. ಮೂವರೂ ಪದತ್ಯಾಗ ಮಾಡಬೇಕಾಯಿತು. ಪ್ರಕರಣದ ತನಿಖೆಗಾಗಿ ಸದನ ಸಮಿತಿಯನ್ನು ನೇಮಕ ಮಾಡಲಾಯಿತು. ಸಮಿತಿಯು ಸವದಿಯವರನ್ನು ತಪ್ಪಿತಸ್ಥ ಎಂದು ಹೇಳಿತು. ಉಳಿದಿಬ್ಬರು ಆರೋಪಮುಕ್ತರಾದರು.2013: ರಘುಪತಿ ಭಟ್ಟರ ವಿಡಿಯೊ ವಿವಾದಒಂದು ವರ್ಷದ ಬಳಿಕ ಮತ್ತೊಂದು ಪ್ರಕರಣ ರಾಜಕೀಯವಾಗಿ ದೇಶದ ಗಮನ ಸೆಳೆಯಿತು. ಉಡುಪಿ ಶಾಸಕರಾಗಿದ್ದ, ಬಿಜೆಪಿಯ ರಘುಪತಿ ಭಟ್ಟರು ಮಹಿಳೆಯೊಬ್ಬರ ಜೊತೆ ಇದ್ದ ವಿಡಿಯೊ ತುಣುಕೊಂದು ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತು. ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ಈ ವಿಡಿಯೊ ಹೊರಬಂದಿತ್ತು. ಉಡುಪಿ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲು ಅವರು ಬಯಸಿದ್ದರು. ತಮ್ಮ ಮೇಲಿನ ಆರೋಪ ನಿರಾಕರಿಸಿದ್ದ ರಘುಪತಿ ಭಟ್, ರಾಜಕೀಯವಾಗಿ ತಮ್ಮನ್ನು ಮುಗಿಸಲು ಹೂಡಿರುವ ಸಂಚು ಇದು ಎಂದಿದ್ದರು. ನಂತರ, ವಿಧಾನಸಭಾ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಅವರು ಘೋಷಿಸಿದ್ದರು.2014: ಎಸ್.ಎ.ರಾಮದಾಸ್ ಪ್ರಕರಣಬಿಜೆಪಿ ಮುಖಂಡ, ಮಾಜಿ ಸಚಿವ ಮೈಸೂರಿನ ಎಸ್.ಎ.ರಾಮದಾಸ್ ಅವರು ಮಹಿಳೆಯೊಬ್ಬರನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪ ಕೇಳಿಬಂದಿತ್ತು. ಸ್ವತಃ ಮಹಿಳೆಯೇ ಈ ಆರೋಪ ಮಾಡಿದ್ದರು. ಅದಕ್ಕೆ ಪೂರಕವಾಗಿ ಆಡಿಯೊ, ವಿಡಿಯೊವನ್ನೂ ಬಿಡುಗಡೆ ಮಾಡಿದ್ದರು. ಮಾಧ್ಯಮಗಳಲ್ಲಿ ಇದು ಪ್ರಸಾರವಾಗುತ್ತಲೇ ರಾಮದಾಸ್ ಅವರು ಆತ್ಮಹತ್ಯೆ ಮಾಡಿಕೊಳ್ಳಲೂ ಯತ್ನಿಸಿದ್ದರು. ತಮ್ಮ ಮೇಲೆ ಕೇಳಿಬಂದಿದ್ದ ಆರೋಪಗಳನ್ನು ಅವರು ನಿರಾಕರಿಸಿದ್ದರು. ಪ್ರಕರಣದ ತನಿಖೆಯನ್ನು ನಡೆಸಿದ್ದ ಸಿಐಡಿಯು ಅವರನ್ನು ಆರೋಪಮುಕ್ತಗೊಳಿಸಿತ್ತು.2016: ಎಚ್.ವೈ.ಮೇಟಿ ವಿಡಿಯೊಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದ, 71 ವರ್ಷದ ಎಚ್.ವೈ.ಮೇಟಿ ಅವರು ಮಹಿಳೆಯೊಂದಿಗಿದ್ದ ವಿಡಿಯೊ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಯಿತು. ವರ್ಗಾವಣೆ ಬಯಸಿದ್ದ ಮಹಿಳೆಯೊಬ್ಬರ ಜೊತೆ ಲೈಂಗಿಕ ಚಟುವಟಿಕೆ ನಡೆಸಿದ ಆರೋಪ ಅವರ ವಿರುದ್ಧ ಕೇಳಿ ಬಂತು. ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದ್ದ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಯಿತು. ಮೇಟಿ ಅವರು ರಾಜೀನಾಮೆಯನ್ನೂ ನೀಡಬೇಕಾಗಿ ಬಂತು. ನಂತರದಲ್ಲಿ ಮಹಿಳೆಯು ಆರೋಪಗಳನ್ನು ವಾಪಸ್ ಪಡೆದರು. ಹೀಗಾಗಿ, ಸಿಐಡಿಯು ಮೇಟಿ ಅವರನ್ನು ದೋಷಮುಕ್ತಗೊಳಿಸಿತು.2019:ಲಿಂಬಾವಳಿ ವಿಡಿಯೊಬಿಜೆಪಿ ಶಾಸಕರಾಗಿದ್ದ ಅರವಿಂದ ಲಿಂಬಾವಳಿ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ದೊಡ್ಡ ವಿವಾದವನ್ನು ಹುಟ್ಟುಹಾಕಿತು. ಆರೋಪವನ್ನು ತಳ್ಳಿ ಹಾಕಿದ್ದ ಲಿಂಬಾವಳಿ ಅವರು ಪ್ರಕರಣದ ತನಿಖೆಗೆ ಒತ್ತಾಯಿಸಿದ್ದರು. ತಮ್ಮನ್ನು ಗುರಿಯಾಗಿಸಿಕೊಂಡು ಸೃಷ್ಟಿಸಲಾದ ನಕಲಿ ವಿಡಿಯೊ ಅದು ಎಂದು ಅವರು ಅವಲತ್ತುಕೊಂಡಿದ್ದರು. ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ವಿಡಿಯೊವನ್ನು ಪರಿಶೀಲನೆಗೆ ಒಳಪಡಿಸಿದಾಗ ಅದು ನಕಲಿ ವಿಡಿಯೊ ಎಂಬುದು ತಿಳಿದುಬಂತು.2021:ರಮೇಶ ಜಾರಕಿಹೊಳಿ ಲೈಂಗಿಕ ಹಗರಣಬಿಜೆಪಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ವಿಡಿಯೊ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಯಿತು. ಮಹಿಳೆಯೊಬ್ಬರಿಗೆ ಸರ್ಕಾರದಿಂದ ನೆರವು ಕೊಡಿಸುವ ಭರವಸೆ ನೀಡಿ ಅವರೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ದಾರೆ ಎಂಬ ಆರೋಪ ಅವರ ಮೇಲೆ ಕೇಳಿಬಂತು. ಆರೋಪವನ್ನು ನಿರಾಕರಿಸಿದ್ದ ಅವರು, ಇದು ತಮ್ಮ ವಿರುದ್ಧ ನಡೆಸಿರುವ ಷಡ್ಯಂತ್ರ ಎಂದು ದೂರಿದ್ದರು. ವಿವಾದ ತೀವ್ರಗೊಳ್ಳುತ್ತಿದ್ದಂತೆಯೇ ರಮೇಶ ಜಾರಕಿಹೊಳಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದರು. ಪ್ರಕರಣವನ್ನು ಎಸ್ಐಟಿಗೆ ವಹಿಸಲಾಗಿತ್ತು. ತನಿಖಾಧಿಕಾರಿಗಳು ಸಾಕ್ಷ್ಯಗಳ ಕೊರತೆಯ ಕಾರಣದಿಂದ ‘ಬಿ’ ವರದಿ ಸಲ್ಲಿಸಿದ್ದರು.2021: ಡಿ.ವಿ.ಎಸ್ ಪ್ರಕರಣಕೇಂದ್ರದ ಮಾಜಿ ಸಚಿವ, ಸಂಸದರಾಗಿದ್ದ ಡಿ.ವಿ.ಸದಾನಂದ ಗೌಡ ಅವರು ಮಹಿಳೆಯೊಬ್ಬರೊಂದಿಗೆ ವಿಡಿಯೊ ಕಾಲ್ನಲ್ಲಿ ಅಶ್ಲೀಲವಾಗಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ 2021ರ ಸೆಪ್ಟೆಂಬರ್ನಲ್ಲಿ ಹರಿದಾಡಿತ್ತು. ಆದರೆ, ಇದು ‘ಡೀಪ್ಫೇಕ್’ ವಿಡಿಯೊ ಎಂದು ಸದಾನಂದ ಗೌಡ ಅವರು ಹೇಳಿದ್ದರು. ಈ ವಿಡಿಯೊವನ್ನು ಪ್ರಸಾರ ಮಾಡದಂತೆ ಅವರು ನ್ಯಾಯಾಲಯದಿಂದ ತಡೆಯಾಜ್ಞೆಯನ್ನೂ ತಂದಿದ್ದರು. ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಎರಡು ತಿಂಗಳ ನಂತರ ಈ ವಿಡಿಯೊ ಬಹಿರಂಗಗೊಂಡಿತ್ತು. ಅವರು ರಾಜೀನಾಮೆ ನೀಡಲು ಈ ವಿಡಿಯೊವೂ ಕಾರಣ ಎಂದು ಹೇಳಲಾಗಿತ್ತು.2024: ಪ್ರಜ್ವಲ್ ರೇವಣ್ಣ ವಿವಾದರಾಜ್ಯ ಮಾತ್ರವಲ್ಲ, ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಇದು. 2024ರ ಲೋಕಸಭಾ ಚುನಾವಣೆಯ ಮತದಾನಕ್ಕೂ ಮುನ್ನ, ಹಾಸನ ಸಂಸದರಾಗಿದ್ದ ಪ್ರಜ್ವಲ್ ರೇವಣ್ಣ ಅವರು ಹಲವು ಮಹಿಳೆಯರೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿರುವ ವಿಡಿಯೊಗಳಿದ್ದ ಪೆನ್ಡ್ರೈವ್ಗಳು ಕ್ಷೇತ್ರದಾದ್ಯಂತ ಹಂಚಿಕೆಯಾಗಿದ್ದು, ರಾಜಕೀಯವಾಗಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತು. ವಿಡಿಯೊ ಬಹಿರಂಗವಾಗುತ್ತಿದ್ದಂತೆಯೇ ಹಲವು ಮಹಿಳೆಯರು ಪೊಲೀಸರಿಗೆ ದೂರನ್ನೂ ನೀಡಿದರು. ಪ್ರಕರಣದ ತನಿಖೆಗೆ ಸರ್ಕಾರ ವಿಶೇಷ ತನಿಖಾ ತಂಡವನ್ನೂ ರಚಿಸಿತು. ಒಂದು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 2025ರ ಆಗಸ್ಟ್ನಲ್ಲಿ ವಿಶೇಷ ನ್ಯಾಯಾಲಯವು ಪ್ರಜ್ವಲ್ ಅವರನ್ನು ದೋಷಿ ಎಂದು ಘೋಷಿಸಿ, ಜೀವಾವಧಿ ಶಿಕ್ಷೆಯನ್ನು ವಿಧಿಸಿ ಆದೇಶಿಸಿತ್ತು.