ಬರದಲ್ಲೂ ದಾಳಿಂಬೆಗೆ ಬಂಪರ್ ಬೆಲೆ
ಶಿಡ್ಲಘಟ್ಟ: ಮಳೆ ಕೊರತೆ, ಕುಸಿಯುತ್ತಿರುವ ಅಂತರ್ಜಲ ಮಟ್ಟ, ಬತ್ತಿದ ಕೆರೆ-ಕುಂಟೆಗಳು... ಇಂತಹ ಬರದ ಸಂಕಷ್ಟದ ನಡುವೆಯೂ ಶಿಡ್ಲಘಟ್ಟ ತಾಲ್ಲೂಕಿನ ಆನೂರು ಗ್ರಾಮದ ರೈತ ಶ್ರೀನಿವಾಸ್ ದಾಳಿಂಬೆ ಬೆಳೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.ತಮ್ಮ ತೋಟದಲ್ಲಿ ಬೆಳೆದ ಉತ್ತಮ ಗುಣಮಟ್ಟದ ದಾಳಿಂಬೆಯನ್ನು ಕೆ.ಜಿ.ಗೆ ₹221ರಂತೆ ಮಾರಾಟ ಮಾಡುವ ಮೂಲಕ ದಾಖಲೆ ಬೆಲೆ ಪಡೆದಿದ್ದಾರೆ. ಉತ್

ಶಿಡ್ಲಘಟ್ಟ: ಮಳೆ ಕೊರತೆ, ಕುಸಿಯುತ್ತಿರುವ ಅಂತರ್ಜಲ ಮಟ್ಟ, ಬತ್ತಿದ ಕೆರೆ-ಕುಂಟೆಗಳು... ಇಂತಹ ಬರದ ಸಂಕಷ್ಟದ ನಡುವೆಯೂ ಶಿಡ್ಲಘಟ್ಟ ತಾಲ್ಲೂಕಿನ ಆನೂರು ಗ್ರಾಮದ ರೈತ ಶ್ರೀನಿವಾಸ್ ದಾಳಿಂಬೆ ಬೆಳೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.ತಮ್ಮ ತೋಟದಲ್ಲಿ ಬೆಳೆದ ಉತ್ತಮ ಗುಣಮಟ್ಟದ ದಾಳಿಂಬೆಯನ್ನು ಕೆ.ಜಿ.ಗೆ ₹221ರಂತೆ ಮಾರಾಟ ಮಾಡುವ ಮೂಲಕ ದಾಖಲೆ ಬೆಲೆ ಪಡೆದಿದ್ದಾರೆ. ಉತ್ತಮ ಗುಣಮಟ್ಟದ ಹಣ್ಣು ಬೆಳೆಸಿದ ರೈತನ ಪರಿಶ್ರಮಕ್ಕೆ ಮನಸೋತ ಮಹಾರಾಷ್ಟ್ರದ ವರ್ತಕ ನಾಮದೇವ್ ಸರ್ಕಾರ್, ತೋಟದಲ್ಲೇ ಶ್ರೀನಿವಾಸ್ ಅವರನ್ನು ಸನ್ಮಾನಿಸಿದ್ದಾರೆ.ಜಿಲ್ಲೆಯ ಬಹುತೇಕ ರೈತರು ಕೃಷಿಗಾಗಿ ಕೊಳವೆಬಾವಿಗಳನ್ನೇ ಅವಲಂಬಿಸಿದ್ದಾರೆ. ಈ ಬಾರಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಸಂಕಷ್ಟ ಎದುರಾಗಿದ್ದರೂ, ಶ್ರೀನಿವಾಸ್ ತಮ್ಮ ದಾಳಿಂಬೆ ತೋಟವನ್ನು ಸಮರ್ಥವಾಗಿ ನಿರ್ವಹಿಸಿ ಉತ್ತಮ ಫಸಲು ಪಡೆದಿದ್ದಾರೆ. ನೀರಾವರಿ ಸೌಲಭ್ಯವಿರುವ ಜಿಲ್ಲೆಗಳ ರೈತರಿಗೂ ಕಡಿಮೆ ಇಲ್ಲದಂತೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಬಹುದು ಎಂಬುದನ್ನು ತಮ್ಮ ಸಾಧನೆ ಮೂಲಕ ತೋರಿಸಿಕೊಟ್ಟಿದ್ದಾರೆ.1.2 ಎಕರೆಯಲ್ಲಿ 17 ಟನ್ ಇಳುವರಿ: ಶ್ರೀನಿವಾಸ್ ಅವರು 1.2 ಎಕರೆಯಲ್ಲಿ ಒಟ್ಟು 440 ದಾಳಿಂಬೆ ಗಿಡಗಳನ್ನು ಬೆಳೆಸಿದ್ದಾರೆ. ಏ. 12ರಂದು ಗಿಡಗಳ ಪ್ರೂನಿಂಗ್ (ರೆಂಬೆ ಕತ್ತರಿಸುವಿಕೆ) ಮಾಡಿದ್ದು, ಸುಮಾರು ಆರೂವರೆ ತಿಂಗಳ ಬಳಿಕ ಫಸಲು ಕಟಾವಿಗೆ ಬಂದಿದೆ. ಇದು ತೋಟದ ಎರಡನೇ ಕಟಾವಾಗಿದ್ದು, ಪ್ರತಿ ಗಿಡಕ್ಕೆ ಸರಾಸರಿ 38 ಕೆ.ಜಿ.ಯಷ್ಟು ಇಳುವರಿ ದೊರೆತಿದೆ ಎಂದು ರೈತರು ತಿಳಿಸಿದ್ದಾರೆ. ಒಟ್ಟು ಸುಮಾರು 17 ಟನ್ ಹಣ್ಣು ಉತ್ಪಾದನೆಯಾಗಿದೆ.ತೋಟದಲ್ಲಿ 250 ಗ್ರಾಂ.ನಿಂದ 700 ಗ್ರಾಂ.ವರೆಗೆ ತೂಕದ ಹಣ್ಣುಗಳು ದೊರೆತಿವೆ. ಉತ್ತಮ ಗಾತ್ರ, ಗುಣಮಟ್ಟ ಹಾಗೂ ಮಾರುಕಟ್ಟೆಯಲ್ಲಿ ಬೇಡಿಕೆ ಹೊಂದಿರುವ ಹಣ್ಣುಗಳಿಗೆ ಪ್ರತಿ ಕೆ.ಜಿ.ಗೆ ₹221ರ ಬೆಲೆ ಸಿಕ್ಕಿದೆ. ಹಣ್ಣುಗಳನ್ನು ಖರೀದಿಸಿರುವ ಮಹಾರಾಷ್ಟ್ರದ ವರ್ತಕ ನಾಮದೇವ್ ಸರ್ಕಾರ್, ಅವುಗಳನ್ನು ಬಾಂಗ್ಲಾದೇಶಕ್ಕೆ ರಫ್ತು ಮಾಡುತ್ತಿದ್ದಾರೆ ಎಂದು ರೈತ ಶ್ರೀನಿವಾಸ್ ತಿಳಿಸಿದರು. ವಿಜ್ಞಾನಿಗಳ ಮಾರ್ಗದರ್ಶನ: ತಮ್ಮ ಸಾಧನೆ ಕುರಿತು ಮಾತನಾಡಿರುವ ರೈತ ಶ್ರೀನಿವಾಸ್, ದಾಳಿಂಬೆ ಬೆಳೆಗೆ ಉತ್ತಮ ಬೆಲೆ ದೊರೆತಿರುವುದಕ್ಕೆ ಹಿರಿಯ ವಿಜ್ಞಾನಿ ಸೋಲಾಪುರದ ಡಾ. ಮಂಜುನಾಥ್ ಅವರ ಮಾರ್ಗದರ್ಶನ ಮತ್ತು ಸಲಹೆಗಳು ಪಾತ್ರ ವಹಿಸಿವೆ ಎಂದು ಸ್ಮರಿಸಿದರು. ‘ಜೀರೋ ಕಟಿಂಗ್ ದಾಳಿಂಬೆ ಕೆ.ಜಿ.ಗೆ ₹221 ಬೆಲೆಗೆ ಮಾರಾಟವಾಗಿರುವುದು ನನ್ನ ಪರಿಶ್ರಮದ ಫಲ. ಡಾ. ಮಂಜುನಾಥ್ ಅವರು ಯಾವುದೇ ಅಪೇಕ್ಷೆಯಿಲ್ಲದೆ ದೇಶದಾದ್ಯಂತ ರೈತರಿಗೆ ಉಚಿತವಾಗಿ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ. ಅವರ ಸಲಹೆಗಳ ಮೂಲಕ ನಮ್ಮ ತೋಟದ ನಿರ್ವಹಣೆ ಸುಧಾರಿಸಿದೆ. ಉತ್ತಮ ಬೆಳೆ ಬೆಳೆಯಲು ಪ್ರೇರಣೆ ದೊರೆತಿದೆ’ ಎಂದರು.ಬೆಳೆದ ಬೆಳೆ ನನ್ನ ಕೈಬಿಟ್ಟಿಲ್ಲ. ಮನಸ್ಸಿಟ್ಟು ಕೃಷಿ ಮಾಡಿದರೆ ರೈತ ಯಾವತ್ತೂ ಕೈ ಸುಟ್ಟುಕೊಳ್ಳುವುದಿಲ್ಲ. ಆತ್ಮವಿಶ್ವಾಸದ ಜೊತೆಗೆ ಗಿಡಗಳಿಗೆ ಸಮಯಕ್ಕೆ ಸರಿಯಾಗಿ ಅಗತ್ಯ ಪೋಷಕಾಂಶ ಮತ್ತು ಆರೈಕೆ ಒದಗಿಸಿದರೆ ಯಶಸ್ಸು ಸಾಧಿಸಲು ಸಾಧ್ಯ’ ಎಂಬುದು ಶ್ರೀನಿವಾಸ್ ಅವರ ವಿಶ್ವಾಸ.ದಾಳಿಂಬೆ ಗಿಡದೊಂದಿಗೆ ರೈತ ಶ್ರೀನಿವಾಸ್ - ಸಾವಯವ ಗೊಬ್ಬರಕ್ಕೆ ಆದ್ಯತೆ ದಾಳಿಂಬೆ ತೋಟದ ನಿರ್ವಹಣೆಯಲ್ಲಿ ಶ್ರೀನಿವಾಸ್ ಅವರು ಕೊಟ್ಟಿಗೆ ಗೊಬ್ಬರ ಬೇವಿನ ಹಿಂಡಿ ಹಾಗೂ ಹೊಂಗೆ ಹಿಂಡಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಇವುಗಳ ಜೊತೆಗೆ ಅಗತ್ಯಕ್ಕೆ ಅನುಗುಣವಾಗಿ ರಾಸಾಯನಿಕ ಗೊಬ್ಬರಗಳನ್ನೂ ಬಳಸಿದ್ದಾರೆ. ಟ್ರೈಕೋಡರ್ಮಾ ಮತ್ತು ಸ್ಯೂಡೋಮೊನಾಸ್ನಂತಹ ಜೈವಿಕ ಉಪಯುಕ್ತ ಸೂಕ್ಷ್ಮಜೀವಿ ಉತ್ಪನ್ನಗಳ ಬಳಕೆಯನ್ನೂ ಕೃಷಿ ನಿರ್ವಹಣೆಯಲ್ಲಿ ಅಳವಡಿಸಿಕೊಂಡಿದ್ದಾರೆ. ಗಿಡಗಳಿಗೆ ಅವುಗಳ ಅಗತ್ಯಕ್ಕೆ ತಕ್ಕಂತೆ ಪೋಷಕಾಂಶಗಳನ್ನು ಒದಗಿಸುವುದು ಸೂಕ್ತ ಸಮಯದಲ್ಲಿ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದು ಮತ್ತು ಬೆಳೆಯ ಗುಣಮಟ್ಟದತ್ತ ಗಮನಹರಿಸುವುದು ಉತ್ತಮ ಫಸಲು ಪಡೆಯಲು ನೆರವಾಗಿದೆ ಎಂಬುದು ಅವರ ಅನುಭವ.