ಹೊಸ ಕಾಲದ ಸವಾಲಿಗೆ ನೇಕಾರಿಕೆ ತತ್ತರ
ಹೊಸ ಕಾಲದ ತಂತ್ರಜ್ಞಾನಗಳು ಎಸೆಯುತ್ತಿರುವ ಸವಾಲುಗಳಿಂದ ತತ್ತರಿಸುತ್ತಿರುವ ಕಸುಬುಗಳಲ್ಲಿ ನೇಕಾರಿಕೆಯೂ ಒಂದು. ವಿದ್ಯುತ್ಚಾಲಿತ, ಸ್ವಯಂಚಾಲಿತ ಯಂತ್ರಗಳ ಹೊಡೆತಕ್ಕೆ ಸಿಲುಕಿ ಕೈಮಗ್ಗ ಏದುಸಿರು ಬಿಡುತ್ತಿದೆ. ಇದು ನೇಕಾರರಿಗೆ ಸಂಕಷ್ಟ ತಂದೊಡ್ಡಿದೆ.ಕಚ್ಚಾವಸ್ತುಗಳ ಬೆಲೆ ಏರಿಕೆ, ಕಾರ್ಮಿಕರ ಕೊರತೆ, ಉತ್ಪಾದನಾ ವೆಚ್ಚ ಹೆಚ್ಚಳ ಮತ್ತು ಮಾರುಕಟ್ಟೆಯಲ್ಲಿನ ಸ್ಪರ್ಧೆಯಿಂದಾ

ಹೊಸ ಕಾಲದ ತಂತ್ರಜ್ಞಾನಗಳು ಎಸೆಯುತ್ತಿರುವ ಸವಾಲುಗಳಿಂದ ತತ್ತರಿಸುತ್ತಿರುವ ಕಸುಬುಗಳಲ್ಲಿ ನೇಕಾರಿಕೆಯೂ ಒಂದು. ವಿದ್ಯುತ್ಚಾಲಿತ, ಸ್ವಯಂಚಾಲಿತ ಯಂತ್ರಗಳ ಹೊಡೆತಕ್ಕೆ ಸಿಲುಕಿ ಕೈಮಗ್ಗ ಏದುಸಿರು ಬಿಡುತ್ತಿದೆ. ಇದು ನೇಕಾರರಿಗೆ ಸಂಕಷ್ಟ ತಂದೊಡ್ಡಿದೆ.ಕಚ್ಚಾವಸ್ತುಗಳ ಬೆಲೆ ಏರಿಕೆ, ಕಾರ್ಮಿಕರ ಕೊರತೆ, ಉತ್ಪಾದನಾ ವೆಚ್ಚ ಹೆಚ್ಚಳ ಮತ್ತು ಮಾರುಕಟ್ಟೆಯಲ್ಲಿನ ಸ್ಪರ್ಧೆಯಿಂದಾಗಿ ಕೈಮಗ್ಗ ಉದ್ಯಮಗಳು ತೊಂದರೆಗೆ ಒಳಗಾಗಿವೆ. ಇದರಿಂದಾಗಿ, ಈ ಉದ್ಯಮವನ್ನೇ ನಂಬಿಕೊಂಡಿದ್ದ ಕುಟುಂಬಗಳ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ವಿಶೇಷವಾಗಿ, ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ದಾರಿ ಮಾಡಿಕೊಟ್ಟಿದ್ದ ಕೈಮಗ್ಗಗಳು ಕೈ ಹಿಡಿಯುವ ಸ್ಥಿತಿಯಿಂದ ದೂರಾಗುತ್ತಿವೆ!ಗ್ರಾಹಕರ ಅಭಿರುಚಿ ಬದಲಾಗುತ್ತಿರುವ ಕಾರಣ ಕೈಮಗ್ಗಗಳು ತಲ್ಲಣಿಸುತ್ತಿವೆ.ಕೈಮಗ್ಗದಲ್ಲಿ ನೇಯ್ಗೆಗೆ ಕುಶಲಕರ್ಮಿಗಳ ಶ್ರಮ ಅಗತ್ಯ. ಸೀರೆ ಅಥವಾ ಬಟ್ಟೆ ತಯಾರಿಕೆಗೆ ಹೆಚ್ಚು ಸಮಯ ಬೇಕಾಗುತ್ತದೆ. ಇದರಿಂದ ಸೀರೆಗಳು ದುಬಾರಿಯೂ ಹೌದು. ವಿಶಿಷ್ಟ ಹಾಗೂ ಸಂಕೀರ್ಣವಾದ ವಿನ್ಯಾಸ ಇದರಲ್ಲಿ ಸಾಧ್ಯ. ಬಟ್ಟೆಯು ಗಟ್ಟಿಯಾಗಿರುತ್ತದೆ ಹಾಗೂ ವಿಶಿಷ್ಟವಾದ ವಿನ್ಯಾಸವನ್ನು ಹೊಂದಿರುತ್ತದೆ. ವಿದ್ಯುತ್ ಬಳಕೆ ಇಲ್ಲದಿರುವುದರಿಂದ ಪರಿಸರಸ್ನೇಹಿಯೂ ಹೌದು.ಆದರೆ, ಪವರ್ಲೂವ್ ಇದಕ್ಕೆ ತದ್ವಿರುದ್ಧ. ವಿದ್ಯುತ್ಚಾಲಿತ ಯಂತ್ರಗಳನ್ನು ಬಳಸಲಾಗುತ್ತದೆ. ಕಡಿಮೆ ಸಮಯದಲ್ಲಿ ಹೆಚ್ಚು ಬಟ್ಟೆ ಉತ್ಪಾದನೆ ಸಾಧ್ಯ. ಇವು ಕೈಗೆಟುಕವ ಬೆಲೆಯಲ್ಲಿ ಸಿಗುತ್ತವೆ. ಒಂದೇ ರೀತಿಯ ಅಥವಾ ಪುನರಾವರ್ತಿತ ವಿನ್ಯಾಸಗಳನ್ನು ಕಾಣಬಹುದು. ಬಟ್ಟೆಯು ನುಣುಪಾಗಿರುತ್ತದೆ; ಆದರೆ ಕೈಮಗ್ಗದಷ್ಟು ಗಟ್ಟಿತನ ಇರುವುದಿಲ್ಲ. ದೊಡ್ಡ ಪ್ರಮಾಣದ ಬೇಡಿಕೆ ಪೂರೈಸಲು ಈ ವಿಧಾನದಿಂದ ಸಾಧ್ಯ. ಈ ಕಾರಣದಿಂದ ಬಟ್ಟೆಗಳಿಗೆ ಮಾರುಕಟ್ಟೆಯಲ್ಲಿರುವ ಬೇಡಿಕೆ ಪೂರೈಕೆಗೆ ಕೈಮಗ್ಗಕ್ಕಿಂತ ಪವರ್ಲೂಮ್ ಬಳಕೆಗೆ ಹೆಚ್ಚಿನವರು ಮುಂದಾಗುತ್ತಿದ್ದಾರೆ ಎಂಬ ವ್ಯತ್ಯಾಸವನ್ನು ಮುಂದಿಡುತ್ತಾರೆ ಈ ಕ್ಷೇತ್ರದ ತಜ್ಞರು.ಯಂತ್ರಗಳಿಂದ ತಯಾರಾಗುವ ಬಟ್ಟೆಗಳು ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯ ಆಗುತ್ತಿರುವುದರಿಂದ ಬೇಡಿಕೆಯೂ ಕುಸಿದಿದೆ. ಕೈಮಗ್ಗದ ಉತ್ಪನ್ನಗಳ ದುಬಾರಿ ಬೆಲೆಯೂ ಕುಸಿತಕ್ಕೆ ಕಾರಣ. ಮಾರುಕಟ್ಟೆಯಲ್ಲಿ ಸ್ಪರ್ಧೆ ಎದುರಿಸಲಾಗದ ಸ್ಥಿತಿ ಇದೆ.‘ನೇಕಾರರಿಗೆ ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ನೆರವು ಹಾಗೂ ಸೌಲಭ್ಯಗಳು ದೊರೆಯುತ್ತಿಲ್ಲ. ಕೈಮಗ್ಗ ಕಾರ್ಮಿಕರು ಅನಿವಾರ್ಯವಾಗಿ ಪರ್ಯಾಯ ಉದ್ಯೋಗಕ್ಕೆ ಹೋಗುವಂತಾಗಿದೆ. ಸರ್ಕಾರ ಇತ್ತ ಗಮನಹರಿಸಿ ಸಮರ್ಪಕ ಕ್ರಮಕೈಗೊಳ್ಳುವ ಅಗತ್ಯವಿದೆ’ ಎನ್ನುತ್ತಾರೆ ನೇಕಾರ ಸಮಾಜದ ಮುಖಂಡ ಬೆಳಗಾವಿಯ ಗಜಾನನ ಗುಂಜೇರಿ.‘ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಉತ್ಪಾದನಾ ವೆಚ್ಚವೂ ಜಾಸ್ತಿಯಾಗಿದೆ. ಕಾರ್ಮಿಕರ ಕೊರತೆ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಳದಿಂದ ಉದ್ಯಮ ನಡೆಸುವುದು ಕಷ್ಟವಾಗಿದೆ’ ಎನ್ನುವ ನೋವಿನ ಮಾತು ನೇಕಾರರದ್ದು.‘ಜವಳಿ ಕೇತ್ರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ವೃತ್ತಿಪರ ನೇಕಾರರಿಗೆ ₹1ಕೋಟಿವರೆಗಿನ ಯೋಜನೆ ರೂಪಿಸಿ, ಶೇ. 75ರಷ್ಟು ಸಹಾಯಧನ ನೀಡುವ ಕಾರ್ಯಕ್ರಮ ಜಾರಿಗೊಳಿಸಬೇಕು. ನೇಕಾರರನ್ನು ಅಸಂಘಟಿತ ವಲಯದಲ್ಲಿ ಸೇರಿಸಿ, ವೃತ್ತಿಪರ ಕೂಲಿ ಸಿಗುವಂತೆ ನೋಡಿಕೊಳ್ಳಬೇಕು. ನೂರಾರು ವರ್ಷಗಳಿಂದ ಮನೆಯಲ್ಲಿಯೇ ಉದ್ಯೋಗ ನಡೆಸುತ್ತಿರುವ ನೇಕಾರರಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಕೊಡಿಸಬೇಕು. ಕೈಗಾರಿಕಾ ವಲಯದಲ್ಲಿ ಇದ್ದವರಿಗೆ ಮಾತ್ರ ಸರ್ಕಾರದ ಜವಳಿ ಇಲಾಖೆಯ ಸಹಾಯಧನ ನೀಡುವ ನಿಯಮವನ್ನು ರದ್ದುಗೊಳಿಸಬೇಕು’ ಎಂಬ ಆಗ್ರಹವೂ ಅವರದ್ದಾಗಿದೆ.ಮೈಸೂರು ಸೀರೆ ಬಗ್ಗೆ ‘ಹಂಸ’ಗುಣಗಾನನುಣುಪು ಹೊಳಪಿನ ಸಿರಿ ಮೈಸೂರು ರೇಷ್ಮೆ ಸೀರಿಮೈಸೂರ್ ಸೀಮೆ ಹೆಣ್ಣು ನೋಡು...ಇವಳ್ ಮೈಸೂರ್ ರೇಶಿಮೆ ಸೀರೆ ನೋಡು...ಇವಳ್ ಮೈಸೂರ್ ಮಲ್ಲಿಗೆ ಜಡೆ ನೋಡು...ಇವಳ್ ಮೈಸೂರ್ ಗಂಧದ ಕೆನ್ನೆ ನೋಡು...–ಖ್ಯಾತ ಚಲನಚಿತ್ರ ನಿರ್ದೇಶಕ ಹಂಸಲೇಖ ಅವರು ಈ ಸಾಲುಗಳಲ್ಲಿ ಮೈಸೂರು ರೇಷ್ಮೆ ಸೀರೆಯನ್ನು, ಅದನ್ನು ಉಟ್ಟ ಹೆಣ್ಣನ್ನು ಬಣ್ಣಿಸಿರುವುದು ಹೀಗೆ.ಈ ಸಾಲುಗಳು ಶಿವರಾಜ್ಕುಮಾರ್ ಮತ್ತು ರಮ್ಯಾಕೃಷ್ಣ ನಟನೆಯ ‘ಯಾರೇ ನೀ ಅಭಿಮಾನಿ’ ಚಲನಚಿತ್ರದಲ್ಲಿ ಹಾಡಾಗಿದೆ. ಇದರಲ್ಲಿ ಮೈಸೂರು ರೇಷ್ಮೆ ಸೀರೆಯ ಸೌಂದರ್ಯವನ್ನು ಅದ್ಭುತವಾಗಿ ವರ್ಣಿಸಲಾಗಿದೆ. ಜಾನಪದ ಶೈಲಿಯ ಹಾಡಾದ ‘ಮೈಸೂರು ಮಾವತ್ತೆ ಮಗಳೇ’ ಎಂಬ ಹಾಡಿನಲ್ಲೂ ‘ಮೈಸೂರ್ ಸಿಲ್ಕಿನ್ ಸೀರೆ ತಾರೋ’ ಎಂಬ ಸಾಲಿದೆ. ಅಷ್ಟು ಜನಪ್ರಿಯತೆ ಮೈಸೂರು ರೇಷ್ಮೆ ಸೀರೆಗಿದೆ. ಅದನ್ನು ಧರಿಸಿದವರ ಸೊಬಗು ಹೆಚ್ಚುತ್ತದೆ. ಅದು ನುಣುಪು ಮತ್ತು ಹೊಳಪಿನ ಸಿರಿಯಾಗಿ ಕಂಗೊಳಿಸುವುದೇ ಇದಕ್ಕೆ ಕಾರಣ.ನಿಜವಾದ ಬೆಳ್ಳಿ ಮತ್ತು ಚಿನ್ನ ಮಿಶ್ರಿತ ಜರಿ ಹೊಂದಿರುವುದು ಇದರ ವಿಶೇಷಗಳಲ್ಲೊಂದು. ಈ ಸೀರೆ ಮೃದು (ಸಾಫ್ಟ್) ಆಗಿರುವುದರಿಂದ ಉಟ್ಟುಕೊಳ್ಳುವುದು ಸುಲಭ ಎನ್ನುವ ಮೆಚ್ಚುಗೆಯ ಮಾತು ಹೆಂಗಳೆಯರದ್ದಾಗಿದೆ.ಮೈಸೂರು ರಾಜವಂಶಸ್ಥರ ರಾಜಲಾಂಛನವೂ, ಕರ್ನಾಟಕ ಸರ್ಕಾರದ ಅಧಿಕೃತ ರಾಜ್ಯ ಲಾಂಛನವಾದ ‘ಗಂಡಭೇರುಂಡ’ ವಿನ್ಯಾಸಕ್ಕೆ ಹೆಚ್ಚು ಖ್ಯಾತಿ. ಗುಣಮಟ್ಟ, ವೈಶಿಷ್ಟ್ಯ ಹಾಗೂ ಸೂಕ್ಷ್ಮ ತಯಾರಿಕೆಯ ಕಾರಣದಿಂದ ಮೈಸೂರು ರೇಷ್ಮೆ ಸೀರೆಗೆ ತುಸು ಹೆಚ್ಚಿನ ಬೆಲೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ‘ಬ್ರ್ಯಾಂಡ್’ಕೂಡ ಹೌದು.2022ರಲ್ಲಿ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಆಗಮಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೈಸೂರು ರೇಷ್ಮೆ ಸೀರೆ ಧರಿಸಿದ್ದರು. ಅವರನ್ನು ಆಹ್ವಾನಿಸುವಾಗಲೇ ಈ ಸೀರೆಯನ್ನು ಜಿಲ್ಲಾಡಳಿತವು ಉಡುಗೊರೆಯಾಗಿ ನೀಡಿತ್ತು. ಮೈಸೂರಿನ ಕೆಎಸ್ಐಸಿ ಕಾರ್ಖಾನೆಯಲ್ಲಿ ಆ ಸೀರೆಯನ್ನು ನೇಯಲಾಗಿತ್ತು. ಇದು ದೇಶದ ಪ್ರಥಮ ಪ್ರಜೆಯಾದ ಅವರಿಗೆ ‘ರಿಚ್ ಲುಕ್’ ನೀಡಿತ್ತು.ಶತಮಾನದ ಇತಿಹಾಸವುಳ್ಳ ಮೈಸೂರಿನ ಕೆಎಸ್ಐಸಿ ಕಾರ್ಖಾನೆಯಲ್ಲಿ ಮೈಸೂರು ರೇಷ್ಮೆ ಸೀರೆ ಉತ್ಪಾದಿಸಲಾಗುತ್ತಿದೆ. ಇದಕ್ಕೆ ಜಿಐ ಟ್ಯಾಗ್ನ ಮಾನ್ಯತೆಯೂ ದೊರೆತಿದೆ.ಸದ್ಯ, ಉತ್ಪಾದನೆಗಿಂತಲೂ ಬೇಡಿಕೆ ಜಾಸ್ತಿ ಇರುವುದರಿಂದ, ‘ಶುದ್ಧ ಮೈಸೂರು ರೇಷ್ಮೆ ಸೀರೆ’ ಸುಲಭವಾಗಿ ಸಿಗುತ್ತಿಲ್ಲ!(ಇನ್ನಷ್ಟು ಆಸಕ್ತಿಕರ ನುಡಿಚಿತ್ರಗಳಿಗಾಗಿ, ಕುತೂಹಲಕರ ಕತೆ–ಕಾದಂಬರಿಗಾಗಿ ಮಾರುಕಟ್ಟೆಯಲ್ಲಿರುವ ಸುಧಾ ಓದಿ)