ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕವನ: ಕಾಲು ಮುರಿದುಕೊಂಡ ಹೊಳೆ
ಕಪ್ಪು ಕೆಂಪಾಗ್ತಿದೆ…ಬಿಳಿ ಹಸಿರಾಗ್ತಿದೆ…ನೇರಳೆ ಗುಲಾಬಿ ಆಗ್ತಿದೆ…. ಬದಲಾಗುತ್ತಿರುವುದು ಬದುಕೋ… ಬಣ್ಣವೋ, ನಿರ್ಧಾರಗಳೋ ತಿಳಿಯದೇ… ಎಲ್ಲ ಬಣ್ಣ ಕಲಸುಮೇಲೋಗರ.ಅಮ್ಮನ ಮಾತುಗಳೇ ಕಿವಿಯಲ್ಲಿ….***‘ಅತ್ತೆ, ನಾ ನಿಮ್ಮ ಅಳಿಯ ಅನ್ನೋದಕ್ಕಿಂತ ಹೆಚ್ಚಾಗಿ ಮಗ ಅಲ್ವಾ?’‘ಇಲ್ಲ ಅಂದೋರು ಯಾರಪ’‘ನಿಮ್ಮ ತಮ್ಮನ ಮಗ ನಾನು, ಎತ್ತಿ ಆಡಿಸಿ ಬೆಳೆಸಿದ್ದು ನೀವು’‘ಹೌದಪ’‘ಮತ್ತೆ ಈಗ್ಯಾಕ

ಕಪ್ಪು ಕೆಂಪಾಗ್ತಿದೆ…ಬಿಳಿ ಹಸಿರಾಗ್ತಿದೆ…ನೇರಳೆ ಗುಲಾಬಿ ಆಗ್ತಿದೆ…. ಬದಲಾಗುತ್ತಿರುವುದು ಬದುಕೋ… ಬಣ್ಣವೋ, ನಿರ್ಧಾರಗಳೋ ತಿಳಿಯದೇ… ಎಲ್ಲ ಬಣ್ಣ ಕಲಸುಮೇಲೋಗರ.ಅಮ್ಮನ ಮಾತುಗಳೇ ಕಿವಿಯಲ್ಲಿ….***‘ಅತ್ತೆ, ನಾ ನಿಮ್ಮ ಅಳಿಯ ಅನ್ನೋದಕ್ಕಿಂತ ಹೆಚ್ಚಾಗಿ ಮಗ ಅಲ್ವಾ?’‘ಇಲ್ಲ ಅಂದೋರು ಯಾರಪ’‘ನಿಮ್ಮ ತಮ್ಮನ ಮಗ ನಾನು, ಎತ್ತಿ ಆಡಿಸಿ ಬೆಳೆಸಿದ್ದು ನೀವು’‘ಹೌದಪ’‘ಮತ್ತೆ ಈಗ್ಯಾಕೆ ಈ ಹಠ?’‘ರೋಹನ್…ನಿನಗೆ ಅರ್ಥ ಆಗಲ್ಲ. ಇದನ್ನು ಬಿಟ್ಟು ಬೇರೆ ಮಾತಾಡು’ಕಂಬನಿ ಒರೆಸಿಕೊಂಡು ಸೋಫಾ ಮೇಲಿಂದ ಎದ್ದಳು ರೇವತಿ.ರೋಹನ್ ಗೀರಿದ ಕಡ್ಡಿ ಆರಿ ಬೂದಿಯಾದಂತಾಯಿತು ಮುಖ..**ಕ್ಯಾನ್ವಾಸ್ ತುಂಬಾ ಬರಿ ಬಣ್ಣ. ಕೈಯೆಲ್ಲಾ ಬಣ್ಣ. ಬ್ರಷ್ ಕೂಡ ಬಣ್ಣ. ಬ್ರಷ್ಷು ಆಡಿಸುತ್ತಲೇ ಇದ್ದಳು ಸುರೇಖಾ. ಪೇಂಟಿಂಗ್ ಸ್ಟಾಂಡ್ ಕೂಡಾ ಗಲೀಜಾಗಿತ್ತು. ಬಣ್ಣದ ಸಣ್ಣ ಸಣ್ಣ ಡಬ್ಬಿಗಳು ಮುಚ್ಚಳ ತೆಗೆದು ಕೆಲವು, ಬಾಯಿ ಮುಚ್ಚಿ ಕೆಲವು, ಬಣ್ಣ ಚೆಲ್ಲಿ ಉರುಳ್ತಾ ಇಡೀ ರೂಮಿನಲ್ಲಿ ಮೌನಗೀತೆ ಹಾಡುತ್ತಿದ್ದವು. ರೂಮು ಸುರೇಖಾಳದ್ದು. ಬೆಡ್ ರೂಮು ಅದೇ, ಡ್ರಾಯಿಂಗ್ ರೂಮೂ ಅದೇ… ಖುಷಿಯ ತಾಣ ಅದೇ ಅಳುವ ಗೋಡನ್ನೂ ಅದೇ ….ಓಡುವ ಬಸ್ಸಲ್ಲಿ ಕಿಟಕಿ ಪಕ್ಕ ಕೂತು ರೊಯ್ಯನೆ ಓಡ್ತಾ ಮರೆಯಾಗುವ ಗಿಡ ಮರ ಬಳ್ಳಿ ಬೆಟ್ಟ ಗುಡ್ಡ ಹೊಲ ತೋಟ ದನ ಕರ ಜನ ಎಲ್ಲ ಹಂಗಂಗೆ ಕಂಡೊಡನೆ ಕರಗುವಂತೆ ಮರೆಯಾಗುತ್ತಿದ್ದವು. ಸುರೇಖಾ ಮನಸಲ್ಲೂ ಸಾವಿರಾರು ನೆನಪುಗಳೇ ಓಡುತ್ತಿದ್ದವು. ಕೆಲವು ಸ್ಪಷ್ಟ ಮತ್ತಷ್ಟು ಅಸ್ಪಷ್ಟ. ಈ ರೋಹನ್ ನನ್ನ ಬಾಳಲ್ಲಿ ಯಾಕ್ ಬಂದ….ಏಳು ಬಣ್ಣ ಸೇರಿ ಬಿಳಿಯ ಬಣ್ಣ ಅಂತಾರೆ; ಎಷ್ಟು ಬಣ್ಣಗಳು ಸೇರಿದರೂ ನನ್ನ ಭವಿಷ್ಯದ ಕ್ಯಾನ್ವಾಸ್ ಯಾಕೆ ಕಪ್ಪಾಗ್ತಿದೆ…ಮುದ್ದಿಸೋ ಅಮ್ಮ, ಎದೆಪದಕ ಮಾಡಿಕೊಂಡ ಅಪ್ಪ, ಜೀವ ಬಿಡೋ ಅಣ್ಣ ಇದೇ ಪ್ರಪಂಚ ಅಂದುಕೊಂಡಾಗಲೇ ಮಾವನ ಮಗ ರೋಹನ್ ಎದೆಯಂಗಳದ ರಂಗೋಲಿಯಂತೆ ಬಂದ.ರೋಹನ್ ಶಾರ್ಟ್ ಫಿಲ್ಮ್ ಡೈರೆಕ್ಟರ್ ಆಗಿ ಎರಡು ರಾಜ್ಯ ಪ್ರಶಸ್ತಿ ತಗಂಡಿದ್ದ. ದೊಡ್ಡ ಪರದೆ ಮೇಲೆ ನಿರ್ದೇಶಕ ಅನ್ನಿಸಿಕೊಳ್ಳುವ ಹಂಬಲ. ಅತ್ತೆ ಮನೆಗೆ ಬರ್ತ ಹೋಗ್ತಾ.. ಸುರೇಖಾ ಜೊತೆಗಿನ ಸಲುಗೆ, ಅತ್ತೆ ಮಗಳೆಂಬ ಫ್ರೀನೆಸ್ ಎಲ್ಲಿಗೋ ಒಯ್ದಿತ್ತು. ಬಣ್ಣದ ಲೋಕದ ಬೆಡಗಿ ಸುರೇಖಾ ಬ್ರಷ್ ಜೊತೆಗೆ ಆಡುತ್ತಿದ್ದರೆ ಕಲಾವಂತಿಕೆ ಎದುರುಗೊಳ್ಳುವ ಪರಿಗೆ ಮನೆ ಮಂದಿ ನಿಬ್ಬೆರಗು. ಕಂಡ ಹಸಿರು, ಬಯಲು, ಬೆಟ್ಟ, ಮನೆ, ಮನುಷ್ಯ, ಮೃಗ ಮತ್ತು ಮೃಗವಾಗುವ ಮನುಷ್ಯನ ಮನಸ್ಥಿತಿ ಜೀವಂತಿಕೆ ದೃಶ್ಯಗಳನ್ನು ಕ್ಯಾನ್ವಾಸ್ಗೆ ಯಥಾವತ್ ಇಳಿಸಿ ಚಿಂತನೆಗೆ ಹಚ್ಚುತ್ತಿದ್ದಳು.ಇಂದು ಮಾತ್ರ ಬ್ರಷ್ ಆಡ್ತಿಲ್ಲ, ಬಣ್ಣ ಮಾತು ಕೇಳ್ತಿಲ್ಲ….**‘ಇದು ನಿಮ್ಮಪ್ಪಂಗೆ ಗೊತ್ತಾದ್ರೆ ಬಹಳ ಕಷ್ಟ’‘ಕದ್ದು ಚಾಕಲೇಟ್ ತಿಂತಿದಿನಾ ನಾನು’‘ಚಾಕೊಲೇಟ್ ಆದರೆ ಕೊಡಿಸಬಹುದು, ಇದು ಜೀವನ’‘ಎಲ್ಲಾ ಕೊಡಿಸಿದವರು ಜೀವನ ಕೊಡಿಸಕ್ಕಾಗಲ್ವ…’ ಕೈಯಲ್ಲಿದ್ದ ಪುಸ್ತಕ ಮಡಚುತ್ತಾ ಸುರಳಿ ಮಾಡಿದಳು ಸುರೇಖಾ.‘ಕೆಲವು ಕೊಡಲಾಗದ, ಹೇಳಲಾಗದ , ನುಂಗಲಾಗದ ವಿಚಾರಗಳಿರ್ತವೆ ಮಕ್ಕಳಿಗವು ಅರ್ಥ ಆಗಲ್ಲ…’ ಸೆರಗು ಬಾಯಿಗಿಟ್ಟುಕೊಂಡಳು ರೇವತಿ.‘ಅಷ್ಟು ದೊಡ್ಡ ಮಾತುಗಳೇಕೆ ? ನಮಗೆ…ದಾರಿ ತೋರಿಸಿ ಅಷ್ಟೇ…’ನಿಮ್ ಅತ್ತೆ ಮಾವಂಗೆ ಗೊತ್ತೆನೇ ಈ ಕತೆ…?’‘ಇಲ್ಲ’‘ಗೊತ್ತಾದರೆ ಏನಾಗುತ್ತೆ ಗೊತ್ತಾ?’ ಮೂಗೊರೆಸಿಕೊಂಡಳು.‘ಅಮ್ಮ, ಮಾಡಬಾರದ ಕೆಲಸ ಮಾಡಿಲ್ಲ, ಅವನು ದೂರದವನೇನಲ್ಲ. ನಿನ್ ತಮ್ಮನ ಮಗ ತಾನೇ… ಗುಣ, ನಡತೆ, ದುಡಿಮೆ ನೀವೇ ನೋಡಿದ್ದೀರಿ.. ಇಬ್ರೂ ಇಷ್ಟ ಪಟ್ಟಿದ್ದೀವಿ…’‘ಕರ್ಮ ಕರ್ಮ ಇಷ್ಟ ಪಡೋಕೆ ಅವನಿಗೆ ಬೇರೆ ಯಾರೂ ಸಿಗಲಿಲ್ವ ಅಥವಾ ನಿಂಗ್ಯಾವನೂ ಕಾಣಲಿಲ್ವ… ರೋಹನ್ನೇ ಆಗಬೇಕಿತ್ತಾ? ಮೂಲೆಲಿದ್ದ ಮರದ ಸ್ಟೂಲಿನ ಮೇಲೆ ದಸಕ್ಕಂತ ಕೂತವಳೇ ಎದುರಿನ ಗೋಡೆ ಟೈಲ್ಸಿಗೆ ತಲೆ ಎರಡು ಸಾರಿ ಜೋರಾಗಿ ಚಚ್ಚಿಕೊಂಡಳು.‘ಅಮ್ಮಾ…’ ಓಡಿಬಂದು ತಲೆಗೆ ಕೈ ಅಡ್ಡ ಹಿಡಿದು ಅಪ್ಪಿ ಅಳುತ್ತಾ‘ಇದೆಂಥಾ ಹುಚ್ಚಾಟ…ಜಗತ್ತಿನಲ್ಲಿ ಓಡಿ ಹೋದರೆ, ತಪ್ಪು ಮಾಡಿದರೆ, ಹೇಗೋ ಬದುಕಿದರೆ ಸಂಕಟ: ಆಪ್ತರನ್ನ ಅದರಲ್ಲೂ ಸೋದರಮಾವನ ಮಗನನ್ನು ಪ್ರೀತಿಸೋದು ತಪ್ಪಾ…’‘ಈ ಮನೇಲಿ ತಪ್ಪು’ ಗೋಡೆಯತ್ತ ಮುಖ ಮಾಡಿ ಹೇಳಿದಳು ರೇವತಿ.‘ಈ ಮನೇಲ? ನಮ್ ಕಾಲ ಮೇಲೆ ನಿಂತು, ಎಲ್ಲರ ಒಪ್ಪಿಗೆ ತಗಂಡು ಮುಂದುವರೆದರೂ ಅಡಚಣೆಯ…’‘ಹೇಳದ, ಕೇಳದ ವಿಷಯ ಇರ್ತವೆ ತಾಯಿ… ಕೈ ಮುಗಿತಿನಿ ರೋಹನ್ ಸುದ್ದಿ ಬಿಟ್ಟು ನಮ್ಮನೆ ಕಾಪಾಡವ್ವ… ನಿಮ್ಮತ್ತೆ ಮಾವಂಗೂ, ಇವರಿಗೂ ಈ ಅವಾಂತರ ಗೊತ್ತಾಗೋದು ಬೇಡ…’‘ಗೊತ್ತಾದರೆ?’‘ಯಾವ ಮನೆಲಿ ಯಾರ ಹೆಣ ಬೀಳುತ್ತೋ ಗೊತ್ತಿಲ್ಲ’***ಸೂಳೆಕೆರೆ ಗುಡ್ಡದ ಮೇಲೆ ಕ್ಯಾಮೆರಾ ಇಟ್ಟು ರೋಹನ್ ಸೂರ್ಯ ಬರುವುದನ್ನೇ ಕಾಯುತ್ತಾ ಕೂತಿದ್ದ. ಬ್ರಾಹ್ಮಿ ಮುಹೂರ್ತ ದಾಟಿದ ನಂತರ ಮೊದಲ ರವಿರಶ್ಮಿ ನೆಲ ಮುಟ್ಟುವ ಮುನ್ನ ತನ್ನ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಬೇಕೆಂದು ಕಣ್ ಮುಚ್ಚದೇ ಪೂರ್ವ ದಿಕ್ಕಿನತ್ತ ದೃಷ್ಟಿಯಿಟ್ಟಿದ್ದ.ಎಂದೋ ಆದ ಮದುವೆ. ಮುದಿವಯಸ್ಸಿನಲ್ಲಿ ಬೇರೆಯಾಗಲು ಗಂಡ–ಹೆಂಡತಿ ಕೋರ್ಟ್ ಮೆಟ್ಟಿಲು ಏರಿರ್ತಾರೆ. ಮೂವತ್ತು ವರ್ಷಗಳ ಸುಧೀರ್ಘ ದಾಂಪತ್ಯ ಸಣ್ಣ ಶಂಕೆಯ ಸುಳಿಗಾಳಿಗೆ ಬಿದ್ದು ಮಕ್ಕಳೆದುರು ಧೂಳೀಪಟವಾಗುವ ಸನ್ನಿವೇಶ. ಮೂರು ತಿಂಗಳ ಕೋರ್ಟ್ ಗಡುವಿನಲ್ಲಿ ಮನಃಪರಿವರ್ತನೆಯಾಗುವ ಗಳಿಗೆ ಮೊಮ್ಮಗಳಿಂದ ಬಂದಿತ್ತು.ಮಾತು, ಮಮತೆ, ಪ್ರೀತಿ ಎರಡು ಜೀವಗಳ ಮರಳಿ ಒಂದಾಗಿಸುವ ಗಳಿಗೆ. ಬೆಳಗಾದರೆ ಕೋರ್ಟಲಿ ಅರ್ಜಿ ಹಿಂಪಡೆವ ದಿನ. ಅದು ಹೊಸಬೆಳಕು ತರಲೆಂಬ ಸಂಕೇತ ಮತ್ತು ಆಶಯದೊಂದಿಗೆ ರೋಹನ್ ಸೂರ್ಯನ ಆಗಮನ ಎಫೆಕ್ಟಾಗಿ ಬರಲೆಂದೇ ಏಷ್ಯಾದ ಅತಿ ದೊಡ್ಡ ಎರಡನೇ ಕೆರೆ ಸೂಳೆಕೆರೆ ಗುಡ್ಡದ ಮೇಲೆ ಬಿಟ್ಟ ಕಣ್ಣು ಬಿಟ್ಟುಕೊಂಡು ಕೂತಿದ್ದ….ಆದರೆ ಅತ್ತೆಯ ವರ್ತನೆ ಇವನ ಮನದಲ್ಲಿ ಕಗ್ಗತ್ತಲು ತುಂಬಿ ತನಗೆ ಹೊಸ ಬೆಳಕು ತನ್ನ– ಸುರೇಖಾ ಭವಿಷ್ಯದಲ್ಲಿ ಬರುತ್ತೋ ಇಲ್ಲವೋ ಅನ್ನುವ ಚಿಂತೆಯಲ್ಲಿದ್ದ. ಆಗಲೇ ಸುರೇಖಾಳ ಫೋನು ಬಂದಿದ್ದು…***ಹಾಸಿಗೆ ಹಿಡಿದ ರೇವತಿ ಮೌನ ಮೂಟೆಯಾಗಿ ಹೋದಳು. ಮನೆ ಮಸಣಕೂ ಮಿಗಿಲು. ತಾಯಿ ಮಗಳಿಬ್ಬರ ನಡುವಿನ ಮಾತು, ಮೌನ ಗಂಡನಿಗೂ, ಮಗನಿಗೂ ಅರ್ಥವಾಗದ ಗಣಿತ. ಮನೆಗೆ ಬಂದು ಹೋಗುವ ತಮ್ಮನ ಮಕ್ಕಳನ್ನು ಮಾತಾಡಿಸದಷ್ಟು ಮೌನಿಯಾದ ಮಡದಿಯ ಅವಸ್ಥೆಗೆ ಗಂಡ ಹಳಿ ಬಿಟ್ಟ ರೈಲಿನ ಚಿಂತನೆ…ಮಗಳಿಗೆ ವಿಚಾರಿಸಿದರೂ, ಮಗನಿಗೆ ಕೇಳಿದರೂ ಉತ್ತರ ಶೂನ್ಯ.ಊಟ ಬಿಟ್ಟು ಎಷ್ಟು ದಿನವೋ ಎಂಬಂತೆ ರೇವತಿ ಮುಖ. ಸುರೇಖಾ ಬಣ್ಣಗಳ ಚೆಲ್ಲಿ ರೂಮೆಲ್ಲಾ ಬಣ್ಣದ ಕಮಟು ವಾಸನೆ. ದಿನಕ್ಕೆ ಒಮ್ಮೆಯಾದರೂ ಬಂದು ಅತ್ತೆ ತೆಕ್ಕೆಗೆ ಬಿದ್ದು ಬೇಕಾದ್ದು ಮಾಡಿಸಿಕೊಂಡು ಉಣ್ಣುವ ರೋಹನ್ ವಾರದಿಂದ ನಾಪತ್ತೆ. ಮನೆಯಲ್ಲಿ ಹಿಂದೊಮ್ಮೆ ಮಾತುಗಳು ಉಸಿರಾಡುತ್ತಿದ್ದವು ಎಂಬುದೇ ಮರೆತು ಹೋಗಿತ್ತು.ರೇವತಿಯ ಕೈಯಲ್ಲಿ ಮಗಳ ಕಾಲಗೆಜ್ಜೆಗಳು ಗಟ್ಟಿಯಾಗಿ ಬಿಗಿದಿದ್ದವು. ಎಲ್.ಕೆ.ಜಿ ಓದೋವಾಗ ತಂದ ಪುಟ್ಟ ಬೆಳ್ಳಿ ಗೆಜ್ಜೆ. ತಲೆಯ ಬಳಿ ಸಣ್ಣ ಪ್ಲಾಸ್ಟಿಕ್ ಕಾರು ಎರಡನೇ ತರಗತಿ ಓದುವಾಗ ಆಡುತ್ತಿದ್ದದ್ದು. ಎದುರಿಗೇ ಗೋಡೆಯ ಮೇಲೆ ಐದನೇ ವರ್ಷದ ಬರ್ತಡೆ ಫೋಟೋ ಮುಖಕ್ಕೆ ಕೇಕು ಮೆತ್ತಿದ್ದು.ಎಲ್ಲವನ್ನೂ ಮಲಗೋ ಕೋಣೆಯಲ್ಲಿಯೇ ಜೋಡಿಸಿದ್ದಳು, ಅವನ್ನೇ ನೋಡುತ್ತಾ ಮಲಗಿದ್ದಳು. ಗಂಡನ ಸಂಕಟ ಅವಳ ಗಮನಕ್ಕೂ ಬಂದಿತ್ತು. ಮಾತು ಮಾತ್ರ ಮೌನವೇ!***‘ಯಾಕೆ ಅತ್ತೆಯ ಹಟ’ ರೋಹನ್ ನಿರಾಸೆಯಿಂದ ಕೇಳಿದ. ಬೆಳಗಿನ ಚಳಿಗೆ ಸಣ್ಣಗೆ ನಡುಗುತ್ತಿದ್ದ. ಹೆಡ್ಫೋನ್ ಕಿವಿಯಲ್ಲಿತ್ತು.‘ಗೊತ್ತಿಲ್ಲ’ ಅತ್ತ ಕಡೆಯಿಂದ ಸುರೇಖಾಳ ದನಿ...‘ನೀ ಹೆದರಿದ್ದೀಯ….’‘ಹೆದರಿಕೆಗಿಂತ ಅಮ್ಮನ ಸಂಕಟ ನೋಡಲಾಗ್ತಿಲ್ಲ…’ ಬಿಕ್ಕಳಿಸಿದ ಸದ್ದು.‘ತಮ್ಮನ ಮಗನಿಗಿಂತ ಒಳ್ಳೆಯ ಹುಡುಗ ಸಿಗಬಹುದೆಂಬ ಲೆಕ್ಕವಾ…’ ಕ್ಯಾಮೆರಾ ಕಣ್ಣಲ್ಲಿ ತನ್ನ ಕಣ್ಣಿಟ್ಟು ಬೆಟ್ಟದಾಚೆ ನೋಡುತ್ತಿದ್ದ.‘ಲೆಕ್ಕಾಚಾರ ಅದಲ್ಲ ಅನ್ಸುತ್ತೆ… ನಿಗೂಡತೆ ಅಮ್ಮನ ಮಾತಲಿ ದಟ್ಟವಾಗಿದೆ ಕಣೊ.. ‘ಉಫ್… ಎಂಬ ಸಣ್ಣ ದನಿ.‘ಏನು ಮಾಡೋಣ’‘ಮಾಡೋದೇನು..’‘ದೊಡ್ಡವರ ದೂರಾಗಿಸಿಕೊಂಡು ನಾವು ಸುಖವಾಗಿ ಬಾಳಲಾದೀತ…?’ ರೋಹನ್ ಈಗ ಆಕಾಶ ನೋಡುತ್ತಿದ್ದ.‘ನಾವು ದೂರಾಗಿ ಬದುಕಲಾದೀತಾ…’ ಬಣ್ಣದ ಡಬ್ಬಿ ಉರುಳಿದ ಶಬ್ದಇಬ್ಬರೂ ಬಹಳ ಹೊತ್ತಿನವರೆಗೆ ಬಿಕ್ಕಳಿಸುತ್ತಲೇ ಇದ್ದರು.***ರೇವತಿ ಕಣ್ಣೀರು ನಿಂತಿರಲಿಲ್ಲ.ಅರ್ಧ ರಾತ್ರಿ ದಾಟಿತ್ತು..ಗಂಡ ಅವಳ ಕಾಲ ಬಳಿಯೇ ಕೂತು ತೂಕಡಿಸುತ್ತಿದ್ದ. ಎದ್ದು ಕುಳಿತಳು.ಕಣ್ಣು ಮುಚ್ಚಿದಳು… ಮದುವೆ ಆದ ಎಂಟು ವರ್ಷಕ್ಕೆ ಮಗ ಹುಟ್ಟಿದ್ದು ಮತ್ತೆ ಮಕ್ಕಳಾಗಲಿಲ್ಲ.ಮನೆಗೊಂದು ಹೆಣ್ಣು ಮಗು ಬೇಕೆಂದೇ ನೂರು ದೇವರ ಹರಕೆ ಹೊತ್ತಳು. ಫಲಿತಾಂಶ ಸೊನ್ನೆ. ಗಂಡನಿಗೂ ಹೆಣ್ಣುಮಕ್ಕಳು ಎಂದರೆ ಜೀವ.ಎರಡನೇ ತಮ್ಮನಿಗೆ ಒಂದರ ಮೇಲೊಂದರಂತೆ ಮೂರು ಹೆಣ್ಣು. ಗಂಡನ ಅನುಮತಿ ಪಡೆದು ತಮ್ಮ ಮತ್ತು ಅವನ ಹೆಂಡತಿಯ ಒಪ್ಪಿಸಿ ಒಂದುವರೆ ತಿಂಗಳ ಕೂಸು ಮಡಿಲಿಗೆ, ಮನೆಗೆ ತಂದಿದ್ದು… ಸುರೇಖಾ… ಆ ಕೂಸು!ಇನ್ನೊಬ್ಬ ತಮ್ಮನ ಮಗ ರೋಹನ್ ಇದೀಗ ಮಗಳ ಎದೆಯಂಗಳದಲ್ಲಿದ್ದಾನೆ… ಏನು ಹೇಳಲಿ…..ಏನು ಮಾಡಲಿ…ರೇವತಿ ತಲೆ ಎರಡೂ ಕೈಗಳಿಂದ ಒತ್ತಿ ಹಿಡಿದುಕೊಂಡಳು.ಕೆಂಪು ಬಣ್ಣ ಸುರೇಖಾ ರೂಮಿನ ಬಾಗಿಲು ದಾಟಿ ಬರುತ್ತಿತ್ತು. ****