ಉಡುಪಿ ಸೀರೆ ಮನಸೋತ ನೀರೆ
ನವರಾತ್ರಿ ಎಂದರೆ ಹೆಣ್ಣು ಮಕ್ಕಳ ಭಾವಕೋಶಕ್ಕೆ ರಂಗು ಬಳಿಯುವ ಕಾಲ, ನೆನಪುಗಳ ಸರಮಾಲೆ ಗರಿ ಬಿಚ್ಚಿಕೊಳ್ಳುವ ಹೊತ್ತು. ದೈವಿಕ ಆರಾಧನೆಯ ಜೊತೆಗೆ ನವವರ್ಣಗಳ ಚಾರ್ಟ್ ನೋಡಿ, ಅದಕ್ಕೆ ತಕ್ಕುದಾದ ಸೀರೆ, ಡ್ರೆಸ್ ಧರಿಸುವ ಮನೋಲ್ಲಾಸ.ನವರಾತ್ರಿಯ ಮೋಹ ಇಮ್ಮಡಿಸಿದ್ದು ಇತ್ತೀಚಿನ ವರ್ಷಗಳ ಟ್ರೆಂಡ್ನ ಭಾಗ. ತಿಂಗಳ ಹಿಂದಿನಿಂದಲೇ ಸಿದ್ಧತೆಗಳು ಶುರು. ಕಲರ್ ಚಾರ್ಟ್ಗೆ ಹೊಂದು

ನವರಾತ್ರಿ ಎಂದರೆ ಹೆಣ್ಣು ಮಕ್ಕಳ ಭಾವಕೋಶಕ್ಕೆ ರಂಗು ಬಳಿಯುವ ಕಾಲ, ನೆನಪುಗಳ ಸರಮಾಲೆ ಗರಿ ಬಿಚ್ಚಿಕೊಳ್ಳುವ ಹೊತ್ತು. ದೈವಿಕ ಆರಾಧನೆಯ ಜೊತೆಗೆ ನವವರ್ಣಗಳ ಚಾರ್ಟ್ ನೋಡಿ, ಅದಕ್ಕೆ ತಕ್ಕುದಾದ ಸೀರೆ, ಡ್ರೆಸ್ ಧರಿಸುವ ಮನೋಲ್ಲಾಸ.ನವರಾತ್ರಿಯ ಮೋಹ ಇಮ್ಮಡಿಸಿದ್ದು ಇತ್ತೀಚಿನ ವರ್ಷಗಳ ಟ್ರೆಂಡ್ನ ಭಾಗ. ತಿಂಗಳ ಹಿಂದಿನಿಂದಲೇ ಸಿದ್ಧತೆಗಳು ಶುರು. ಕಲರ್ ಚಾರ್ಟ್ಗೆ ಹೊಂದುವ ಬಟ್ಟೆಗಳನ್ನು ಬೀರುವಿನಲ್ಲಿ ತಡಕಾಡಿ, ಇಲ್ಲದಿದ್ದರೆ ಹೊಸ ಬಟ್ಟೆ ಖರೀದಿಸುವ, ಅದಕ್ಕೆ ಹೊಂದಿಕೆಯಾಗುವ ಬಳೆ, ಬಿಂದಿ, ಕಿವಿಯೋಲೆ, ಕೈಯುಂಗುರ, ಕೊರಳಿಗೆ ಹಾರ, ನೇಲ್ ಪಾಲಿಶ್, ಬ್ಯಾಗ್, ಗೆಳತಿಯರೊಂದಿಗೆ ನಾನಾ ಭಂಗಿಯಲ್ಲಿ ಫೋಟೊ ಕ್ಲಿಕ್ಕಿಸಿಕೊಳ್ಳಲು ಪಿನ್ಟ್ರೆಸ್ಟ್ನಂತಹ ತಾಣಗಳಲ್ಲಿ ಹುಡುಕಾಟ. ಮನೆಯಲ್ಲಿ ಪೂಜೆ – ಪುನಸ್ಕಾರ, ಕಚೇರಿಯಲ್ಲಿ ಬಿಡುವಿನ ವೇಳೆ ಸಹೋದ್ಯೋಗಿಗಳೊಂದಿಗೆ ಸೆಲ್ಫಿಗೆ ಪೋಸು ಕೊಡುವ, ರೀಲ್ಸೋ, ವಿಡಿಯೊವೋ ಮಾಡಿ ವಾಟ್ಸ್ಆ್ಯಪ್ ಸ್ಟೇಟಸ್ಗೆ ಅಂಟಿಸಿ ಲೈಕ್ಗಳನ್ನು ಎಣಿಸುವ ಸಂಭ್ರಮ. ಹೀಗೆ ನವರಾತ್ರಿಯೆಂದರೆ ಪ್ರತಿ ಬೆಳಗೂ ಹೊಸದೊಂದು ಸಡಗರ.ಕಲರ್ಫುಲ್ ಉತ್ಸವವಾಗಿ ಶರನ್ನವರಾತ್ರಿ ಬದಲಾದ ಮೇಲೆ ಒಂದೇ ಬಣ್ಣ, ಒಂದೇ ಡಿಸೈನ್, ಅಗಲ ಅಂಚಿನ ಸೀರೆಯುಟ್ಟು ಅಪ್ಪಟ ಸಾಂಪ್ರದಾಯಿಕ ಶೈಲಿಯಲ್ಲಿ ರೆಡಿಯಾಗಿ ಸಾಕ್ಷಾತ್ ದೇವಿಯಂತೆ ಕಂಗೊಳಿಸುವ ಯುವತಿಯರನ್ನು ನೋಡುವುದೇ ಕಣ್ಣಿಗೆ ಹಬ್ಬ. ಅದರಲ್ಲೂ ಹಳದಿಯೊಂದಿಗೆ ಬೆಳಗುವ ಐದನೇ ದಿನ, ಸೀರೆ ಅಥವಾ ಡ್ರೆಸ್ ಹಾಕಿ ಬಂದ ಯುವತಿಯರನ್ನು ಕಂಡಾಗ ಸೂರ್ಯಕಾಂತಿ ಹೊಲವೇ ಬೀದಿಯಲ್ಲಿ ಚಲಿಸುತ್ತಿರುವಂತೆ ಭಾಸವಾಗುತ್ತದೆ. ಹಳದಿ, ಎಂದಾಕ್ಷಣ ಥಟ್ಟನೆ ಮನದ ನೆರಿಗೆಯ ಎಳೆಯಲ್ಲಿ ಅರಳಿದ್ದು ಕರಾವಳಿಯ ಕೈಮಗ್ಗದ ಉಡುಪಿ ಸೀರೆಯ ಸೊಬಗು. ನೀಲಿ, ಗುಲಾಬಿ, ಹಸಿರು ಹೀಗೆ ಗಾಢ ಬಣ್ಣಗಳಲ್ಲಿ ಉಡುಪಿ ಸೀರೆಯನ್ನು ಕಾಣಬಹುದಾದರೂ, ನಾನು ಮೋಹಗೊಂಡಿದ್ದು ಹಳದಿ ಬಣ್ಣದ ಸೀರೆಗೆ. ಹಳದಿ ಸೀರೆ, ಅದಕ್ಕೆ ತಿಳಿನೀಲಿಯ ಕಡಿದಾದ ಅಂಚು, ನೀಲಕುರುಂಜಿ ಹೂವಿನಂತಹ ಪುಟ್ಟ ಬುಟ್ಟಾ, ಕೋಮಲ ಸ್ಪರ್ಶದ ಉಡುಪಿ ಸೀರೆಯ ಆತ್ಮಾನಂದವನ್ನು ಧರಿಸಿಯೇ ಅನುಭವಿಸಬೇಕು.ತಿಳಿಯಾದ ಮೈಬಣ್ಣ, ಸೌಮ್ಯ ಬಿಳಿ ವರ್ಣ, ಅಡಿಕೆ ಚೊಗರಿನ ಹೊಳಪಿನ ಸೀರೆಗಳನ್ನು ನೇಯುವ ಕರಾವಳಿ ನೇಕಾರರು, ಪ್ಲೇನ್ ಸೀರೆ, ಚೌಕಳಿ ಸೀರೆ, ಬುಟ್ಟಾ ಸೀರೆ, ಗೆರೆಯ ಸೀರೆ ಹೀಗೆ ಅಚ್ಚ ಕಲರ್ಗಳ ಸೀರೆಯನ್ನೂ ತಯಾರಿಸುತ್ತಾರೆ.ಬಾಸೆಲ್ ಮಿಷನ್ ಪರಿಚಯಿಸಿರುವ ಮಲಬಾರ್ ಫ್ರೇಮ್ ಮಗ್ಗ, ಅದಕ್ಕೆ ಸಮಾನಾಂತರದಲ್ಲಿ ಕಟ್ಟಿರುವ ಒಂದೆಳೆ ಹತ್ತಿ ನೂಲಿನ ಸಾಲು, ಮಗ್ಗದ ಮೇಲಿರುವಾಗಲೇ ಗಂಜಿ ಹಾಕಿ ಹದಗೊಳಿಸುವ ನೇಕಾರರ ಚಮತ್ಕಾರ, ಕೈಯಿಂದ ಅಡ್ಡ ನೂಲನ್ನು ಹಾಯಿಸಿ ನೇಯುವ ತಂತ್ರಗಾರಿಕೆ ಇವು ಉಡುಪಿ ಸೀರೆಯ ವಿಶೇಷಗಳು.ಕಡಲಂಚಿನಲ್ಲಿ ವಿಸ್ತರಿಸಿರುವ ಕರಾವಳಿಯ ಕೈಮಗ್ಗದ ಸೀರೆಗಳಿಗೆ ದೀರ್ಘ ಪರಂಪರೆಯಿದೆ. ಕೆಲವರ್ಷ ಮರೆಯಾಗಿದ್ದ ಉಡುಪಿ ಸೀರೆ ಮತ್ತೆ ಮುನ್ನೆಲೆಗೆ ಬಂದು, ಭೌಗೋಳಿಕ ಸೂಚ್ಯಂಕ (ಜಿಐ) ಮಾನ್ಯತೆಯ ಹೊಳಪನ್ನು ಮುಡಿಗೇರಿಸಿಕೊಂಡಿದೆ. ಹಿರಿಯರು, ಮಧ್ಯ ವಯಸ್ಕರಷ್ಟೇ ಅಲ್ಲ, ಯುವತಿಯರು, ಸಂಗೀತಗಾರರು, ವೈದ್ಯರು, ಎಂಜಿನಿಯರ್ಗಳು, ಉದ್ಯೋಗಿಗಳು, ಗೃಹಿಣಿಯರು ಹೀಗೆ ಎಲ್ಲರೂ ಉಡುಪಿ ಸೀರೆಗೆ ಮನಸೋತವರೇ. ‘ಓ ಉಡುಪಿ ಸೀರೆನಾ ಇದು, ನಂಗೊಂದು ಎತ್ತಿಡಿ, ಎಲ್ಲಿ ಸಿಗುತ್ತೆ, ಯಾವಾಗ ರೆಡಿ ಆಗುತ್ತೆ ಹೇಳಿ ನಾವೇ ಬಂದು ತಕೊಂಡು ಹೋಗ್ತೀವಿ’ ಎನ್ನುವಷ್ಟರ ಮಟ್ಟಿಗೆ ಉಡುಪಿ ಸೀರೆ ತನ್ನ ಬ್ರ್ಯಾಂಡ್ನ ಮೌಲ್ಯ ಹೆಚ್ಚಿಸಿಕೊಂಡಿದೆ.ಈಚೆಗಂತೂ ರಿಟೇಲರ್ಗಳು, ಆನ್ಲೈನ್ ಮಾರಾಟಗಾರರು ಇದ್ದ ಎಲ್ಲ ಸೀರೆಗಳನ್ನು ಬಾಚುತ್ತಾರೆ. ಬೇಡಿಕೆ ಉತ್ಪಾದನೆಗಿಂತ ಹೆಚ್ಚಿದೆ. ಕೃಶಗೊಂಡ ಕೈಗಳು ನೂಲುವುದನ್ನು ನಿಲ್ಲಿಸಿವೆ. ಹಿರಿಯರು ನೇಕಾರಿಕೆಗೆ ವಿರಾಮ ಹೇಳಿದ್ದಾರೆ. ಯುವಜನರು ತರಬೇತಿ ಕೊರತೆಯಿಂದ ನೇಕಾರಿಕೆಯಲ್ಲಿ ತೊಡಗಿಕೊಳ್ಳುತ್ತಿಲ್ಲ. ಹೀಗಾಗಿ, ಬೇಡಿಕೆ ಬರುವಷ್ಟು ಸೀರೆ ಪೂರೈಸಲಾಗುತ್ತಿಲ್ಲ ಎಂಬ ಅಳಲು ಕೆಲವು ಸಹಕಾರಿ ಸಂಘಗಳದ್ದು.ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲ ಸಹಕಾರಿ ಸಂಘಗಳು ಈ ಸೀರೆ ಮಾರಾಟ ಮಾಡುತ್ತವೆ. ಶಿವಳ್ಳಿ, ಉಡುಪಿ, ಪಡುಪಣಂಬೂರು, ಕಿನ್ನಿಗೋಳಿಯಲ್ಲಿ ಸಹಕಾರ ಸಂಘಗಳಿವೆ. ಎರಡೂ ಜಿಲ್ಲೆಗಳಿಂದ 65ಕ್ಕೂ ಹೆಚ್ಚು ನೇಕಾರರು ಇದ್ದಾರೆ. ಕಳೆದ ಆರೆಂಟು ವರ್ಷಗಳಲ್ಲಿ ತರಬೇತಿ ಪಡೆದ ಕೆಲ ಉತ್ಸಾಹಿಗಳು ನೇಕಾರಿಕೆಯಲ್ಲಿ ತೊಡಗಿದ್ದಾರೆ.ಡಿಪ್ಲೊಮಾ ಪದವೀಧರೆಯಾಗಿರುವ ಸಾಧನಾ ಶೆಟ್ಟಿಗಾರ್, ಕದಿಕೆ ಟ್ರಸ್ಟ್ - ನಬಾರ್ಡ್ ಮೂಲಕ ತರಬೇತಿ ಪಡೆದು ಸೀರೆ ನೇಯುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಕೆಲ ತಿಂಗಳುಗಳ ಹಿಂದೆ ನಡೆದ ಸಾಧನಾ ಅವರ ಸೀಮಂತಕ್ಕೆ ಸ್ನೇಹಿತೆಯರೆಲ್ಲ ಉಡುಪಿ ಸೀರೆಯನ್ನೇ ಉಟ್ಟು ಗಮನಸೆಳೆದರು. ಕದಿಕೆ ಟ್ರಸ್ಟ್ ಮೂಲಕ ತರಬೇತಿ ಪಡೆದ ಹೊಸೆರಿ ಬೈಂದೂರಿನ ಬಾಗಳ್ ಬಂಧುಗಳು ಉಡುಪಿ ಸೀರೆಯುಟ್ಟು ಫೋಟೊಶೂಟ್ ಮಾಡಿಸಿದ್ದು, ಅದಕ್ಕೆ ಮೆಚ್ಚುಗೆಯ ಮಹಾಪೂರ ಹರಿದುಬಂತು. ತರಬೇತಿ ಪಡೆದ ಇವರು ಯಶಸ್ವಿ ನೇಕಾರರಾಗಿದ್ದು, ಇದರಿಂದ ಪ್ರೇರಿತರಾಗಿ ಯುವಜನರು ತರಬೇತಿ ಪಡೆಯಲು ಮುಂದೆ ಬಂದಿದ್ದಾರೆ.ವಿವಿಧ ಸಹಕಾರ ಸಂಘಗಳು ಉಡುಪಿ ಸೀರೆಯ ಔನ್ನತ್ಯಕ್ಕೆ ಕೆಲಸ ಮಾಡುತ್ತಿದ್ದರೂ, ಈ ಸೀರೆಗೊಂದು ಹೆಗ್ಗುರುತು ಸಿಗುವಲ್ಲಿ ದಣಿವರಿಯದೆ ಕೆಲಸ ಮಾಡಿದ್ದು ಕಾರ್ಕಳದ ಕದಿಕೆ ಟ್ರಸ್ಟ್ ಸ್ಥಾಪಕಾಧ್ಯಕ್ಷೆ ಮಮತಾ ರೈ. ಅವರ ಈ ಪುನಶ್ಚೇತನ ಕಾರ್ಯಕ್ಕೆ ಹೆಗಲಾದವರು ಅವರ ಪತಿ ಬಿ.ಸಿ.ಶೆಟ್ಟಿ. ಕದಿಕೆ ಟ್ರಸ್ಟ್ ಹಲವಾರು ಮಂದಿಗೆ ನೇಕಾರಿಕೆಯ ತರಬೇತಿ ನೀಡಿ, ಅವರನ್ನು ನಿರಂತರ ಪ್ರೋತ್ಸಾಹಿಸಿ, ಈ ವೃತ್ತಿಯಲ್ಲಿ ನೆಲೆ ನಿಲ್ಲಲು ಕಾರಣೀಭೂತವಾಗಿದೆ. ಯುವಜನರೂ ನೇಕಾರಿಕೆಯಲ್ಲಿ ಆಸಕ್ತಿ ತಳೆಯಲು ಅವರ ಬೆಂಬಲವೇ ಕಾರಣ ಎಂದು ಸ್ಮರಿಸುತ್ತಾರೆ ನೇಕಾರರು.ಸೀರೆ, ಶಾಲು, ಟಾವೆಲ್, ಪಂಚೆ ಹೀಗೆ ಪರಿಸರಸ್ನೇಹಿಯಾಗಿರುವ ಅನೇಕ ಕೈಮಗ್ಗದ ಉತ್ಪನ್ನಗಳನ್ನು ಕೂಡ ಜನರು ಬಳಕೆ ಮಾಡುವುದರಿಂದ ನೇಕಾರಿಕೆಯನ್ನು ಉಳಿಸಿಕೊಳ್ಳಬಹುದು ಎನ್ನುವ ಮಮತಾ ರೈ, ಸ್ವಯಂ ಸೇವಾ ನೆಲೆಯಲ್ಲಿ ಕೆಲಸ ಮಾಡುವ ಸಂಸ್ಥೆಗಳಿಗೆ ಸರ್ಕಾರದಿಂದ ಪ್ರೋತ್ಸಾಹ ದೊರೆತರೆ ಯುವತಲೆಮಾರನ್ನು ಇನ್ನಷ್ಟು ಆಕರ್ಷಿಸಬಹುದು ಎನ್ನುವ ಆಶಯ ವ್ಯಕ್ತಪಡಿಸುತ್ತಾರೆ.ಕೈಮಗ್ಗದ ಬಗ್ಗೆ ಸಮಗ್ರ ಮಾಹಿತಿ ಒದಗಿಸಲು ಕದಿಕೆ ಟ್ರಸ್ಟ್ ಸ್ವಯಂ ಆಸಕ್ತಿಯಿಂದ ಉಡುಪಿಯಲ್ಲಿ ‘ಎಕ್ಸ್ಪಿರಿಯನ್ಸ್ ಸೆಂಟರ್’ ಒಂದನ್ನು ತೆರೆಯಲು ಸಿದ್ಧತೆ ನಡೆಸಿದೆ.ಈಚಿನ ದಿನಗಳಲ್ಲಿ ತರಬೇತಿಗೆ ಅನುದಾನ ಬರುತ್ತಿಲ್ಲ ಎಂಬ ಅಳಲು ಯುವ ಉತ್ಸಾಹಿಗಳದ್ದು. ಇಲಾಖೆಗಳು ವಿಶೇಷ ಒಲವು ತೋರಿ, ಕೈಮಗ್ಗ ನೇಕಾರಿಕೆಯ ಉಳಿವಿಗಾಗಿ ಕೆಲಸ ಮಾಡುವ ಸಂಸ್ಥೆಗಳನ್ನು ಗುರುತಿಸಿ ಬೆಂಬಲಿಸಿ, ಕೈಮಗ್ಗ ಪರಂಪರೆಯನ್ನು ಸಂರಕ್ಷಿಸಬೇಕಷ್ಟೆ.(ಇನ್ನಷ್ಟು ಆಸಕ್ತಿಕರ ನುಡಿಚಿತ್ರಗಳಿಗಾಗಿ, ಕುತೂಹಲಕರ ಕತೆ–ಕಾದಂಬರಿಗಾಗಿ ಮಾರುಕಟ್ಟೆಯಲ್ಲಿರುವ ಸುಧಾ ಓದಿ)