ಅನಧಿಕೃತ ಗೈರಿಗೆ ತಾಯ್ತನದ ರಜೆಯ ಗುರಾಣಿ: ಉದ್ಯೋಗಿ ವಜಾ ಕ್ರಮ ಎತ್ತಿಹಿಡಿದ ಕೋರ್ಟ್
ಬೆಂಗಳೂರು: ‘ತಾಯ್ತನದ ರಜೆಯನ್ನು ದೀರ್ಘ ಕಾಲದ ಅನಧಿಕೃತ ಗೈರು ಹಾಜರಿಗೆ ಅನುಕೂಲಕರ ಗುರಾಣಿಯಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಜಿಲ್ಲಾ ನ್ಯಾಯಾಲಯದ ಸಾಫ್ಟ್ವೇರ್ ತಂತ್ರಜ್ಞೆಯೊಬ್ಬರನ್ನು ಸೇವೆಯಿಂದ ವಜಾಗೊಳಿಸಲಾಗಿದ್ದ ಕ್ರಮವನ್ನು ಎತ್ತಿಹಿಡಿದಿದೆ.ತಮ್ಮನ್ನು ಸೇವೆಯಿಂದ ವಜಾಗೊಳಿಸಿದ್ದ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಗ್ರಾಮಾಂತ

ಬೆಂಗಳೂರು: ‘ತಾಯ್ತನದ ರಜೆಯನ್ನು ದೀರ್ಘ ಕಾಲದ ಅನಧಿಕೃತ ಗೈರು ಹಾಜರಿಗೆ ಅನುಕೂಲಕರ ಗುರಾಣಿಯಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಜಿಲ್ಲಾ ನ್ಯಾಯಾಲಯದ ಸಾಫ್ಟ್ವೇರ್ ತಂತ್ರಜ್ಞೆಯೊಬ್ಬರನ್ನು ಸೇವೆಯಿಂದ ವಜಾಗೊಳಿಸಲಾಗಿದ್ದ ಕ್ರಮವನ್ನು ಎತ್ತಿಹಿಡಿದಿದೆ.ತಮ್ಮನ್ನು ಸೇವೆಯಿಂದ ವಜಾಗೊಳಿಸಿದ್ದ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ನ್ಯಾಯಾಲಯದಲ್ಲಿ ಸಾಫ್ಟ್ವೇರ್ ಟೆಕ್ನೀಶಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೋನಿಕಾ (36) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.‘ಮಗುವಿನ ಜನನವನ್ನೇ ಮುಂದು ಮಾಡಿಕೊಂಡು ಸರ್ಕಾರಿ ಉದ್ಯೋಗದ ಜವಾಬ್ದಾರಿಗಳಿಂದ ಶಾಶ್ವತವಾಗಿ ದೂರ ಉಳಿಯುವುದಕ್ಕೆ ಅವಕಾಶವಿಲ್ಲ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.‘ತಾಯ್ತನದ ರಜೆಯು ಘನತೆ, ಮಾತೃತ್ವ ಮತ್ತು ಸಾಮಾಜಿಕ ಸಮಾನತೆಯ ಒಂದು ಸಾಂವಿಧಾನಿಕ ಬದ್ಧತೆ. ಯಾವುದೇ ಹಕ್ಕು ಎಷ್ಟೇ ಪವಿತ್ರವಾಗಿದ್ದರೂ, ಅದು ಅನಧಿಕೃತ ಗೈರುಹಾಜರಿಗೆ ಅಕ್ಷಯ ಪಾತ್ರೆಯಾಗುವಂತೆ ಅವಕಾಶ ನೀಡಲಾಗದು. ಅಷ್ಟೇಕೆ, ಅದರ ಕಾನೂನು ಬದ್ಧ ಗಡಿಗಳನ್ನೂ ಮೀರಿ ಚಲಿಸಲಾಗದು’ ಎಂದು ವಿವರಿಸಿದೆ.‘ಅರ್ಜಿದಾರರು ಕಾನೂನು ಬದ್ಧವಾಗಿ ಸಿಗಬೇಕಾದ ತಾಯ್ತನದ ರಜೆಯನ್ನು ಪೂರ್ಣವಾಗಿ ಬಳಸಿಕೊಂಡ ನಂತರದಲ್ಲೂ ಬೇರೆ ರಜೆಗಳನ್ನು ಪಡೆದಿದ್ದಾರೆ. ಆ ಎಲ್ಲಾ ರಜೆಗಳ ಅವಧಿ ಮುಗಿದ ನಂತರವೂ ಯಾವುದೇ ಅಧಿಕೃತ ಅನುಮತಿ ಪಡೆಯದೆ ದೀರ್ಘಕಾಲ ಗೈರು ಹಾಜರಾಗಿದ್ದಾರೆ ಎಂಬ ಅಂಶ ಗಮನಾರ್ಹ’ ಎಂದು ನ್ಯಾಯಪೀಠ ಉಲ್ಲೇಖಿಸಿದೆ.‘ಅರ್ಜಿದಾರರಿಗೆ ಸಿಗಬೇಕಾದ ತಾಯ್ತನದ ರಜೆಯನ್ನು ಮೇಲಧಿಕಾರಿಗಳು ನಿರಾಕರಣೆ ಮಾಡಿಲ್ಲ. ಆದರೆ, ಆ ರಜೆಗಳು ಮುಗಿದ ನಂತರದಲ್ಲೂ ಅವರು ಅನಧಿಕೃತವಾಗಿ ಕರ್ತವ್ಯಕ್ಕೆ ಗೈರಾಗಿದ್ದಾರೆ ಹಾಗೂ ತಮ್ಮ ಗೈರನ್ನು ಸಮರ್ಥಿಸಿಕೊಳ್ಳಲು ತಾಯ್ತನದ ರಜೆಯನ್ನು ಅಸ್ತ್ರವನ್ನಾಗಿ ಬಳಸಿಕೊಂಡಿರುವುದು ಪ್ರಕರಣದಲ್ಲಿ ದೃಢಪಟ್ಟಿದೆ’ ಎಂದು ತಿಳಿಸಿದೆ.