ಅಮಿತ್ ಶಾ ವಿರುದ್ಧ ಬೆಂಗಳೂರಿನಲ್ಲಿ ಆಕ್ಷೇಪಾರ್ಹ ಹೇಳಿಕೆ – ರಾಹುಲ್ ಖುಲಾಸೆ
ಲಕ್ನೋ: ಅಮಿತ್ ಶಾ(Amit Shah) ವಿರುದ್ಧ ನೀಡಿದ ಆಕ್ಷೇಪಾರ್ಹ ಹೇಳಿಕೆ ಸಂಬಂಧಿಸಿದಂತೆ ದಾಖಲಾಗಿರುವ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿ(Rahul Gandhi) ಖುಲಾಸೆಯಾಗಿದ್ದಾರೆ. ಸುಲ್ತಾನ್ಪುರದಲ್ಲಿರುವ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಿದ್ದರಿಂದ ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ಸಿಕ್ಕಿದೆ. ತೀರ್ಪು ಪ್ರಕಟವಾಗುವ ಸಮಯದಲ್ಲಿ ರಾಹುಲ್ ಗಾಂಧ

ಲಕ್ನೋ: ಅಮಿತ್ ಶಾ(Amit Shah) ವಿರುದ್ಧ ನೀಡಿದ ಆಕ್ಷೇಪಾರ್ಹ ಹೇಳಿಕೆ ಸಂಬಂಧಿಸಿದಂತೆ ದಾಖಲಾಗಿರುವ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿ(Rahul Gandhi) ಖುಲಾಸೆಯಾಗಿದ್ದಾರೆ. ಸುಲ್ತಾನ್ಪುರದಲ್ಲಿರುವ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಿದ್ದರಿಂದ ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ಸಿಕ್ಕಿದೆ. ತೀರ್ಪು ಪ್ರಕಟವಾಗುವ ಸಮಯದಲ್ಲಿ ರಾಹುಲ್ ಗಾಂಧಿ ಖುದ್ದು ಕೋರ್ಟ್ನಲ್ಲಿ ಹಾಜರಿದ್ದರು. ಏನಿದು ಪ್ರಕರಣ? 2018ರ ಮೇ ತಿಂಗಳಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಅವರು ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಅಂದಿನ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿಜಯ್ ಮಿಶ್ರಾ ಅವರು ಸುಲ್ತಾನ್ಪುರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ಮಾತನಾಡಿದ ವಿಜಯ್ ಮಿಶ್ರಾ, “ನಾನು ಕಳೆದ 33 ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಅವರು ಅಮಿತ್ ಶಾ ವಿರುದ್ಧ ಕೊಲೆಗಾರ ಎಂದು ಆರೋಪಿಸಿದ್ದರು. ಇದು ನನಗೆ ತೀವ್ರ ನೋವುಂಟುಮಾಡಿದ್ದರಿಂದ ವಕೀಲರ ಮೂಲಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದೆ. ಸುಮಾರು ಐದು ವರ್ಷಗಳಿಂದ ನಡೆಯುತ್ತಿರುವ ಈ ವಿಚಾರಣೆಯ ತೀರ್ಪು ಈಗ ಹೊರಬರುತ್ತಿದೆ” ಎಂದು ಹೇಳಿದರು. ರಾಹುಲ್ ಹೇಳಿದ್ದೇನು? ಬೆಂಗಳೂರಿನಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು ಗುಜರಾತಿನಲ್ಲಿ ನಡೆದ ಸೊಹ್ರಾಬುದ್ದೀನ್ ಶೇಖ್ ಎನ್ಕೌಂಟರ್ ಪ್ರಕರಣವನ್ನು ಉಲ್ಲೇಖಿಸಿ ಬಿಜೆಪಿ ಪಕ್ಷವು ದೇಶದ ಕಾನೂನನ್ನು ಗೌರವಿಸುವುದಿಲ್ಲ. ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ವ್ಯಕ್ತಿಯೊಬ್ಬರನ್ನು ಅವರು ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಹೇಳಿದ್ದರು. 2005ರ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ಅವರ ಹೆಸರನ್ನು ಸಿಬಿಐ ಸೇರಿಸಿತ್ತು. ಆದರೆ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು 2014 ರಲ್ಲೇ ಅಮಿತ್ ಶಾ ಅವರನ್ನು ಈ ಪ್ರಕರಣದಿಂದ ಮುಕ್ತಗೊಳಿಸಿತ್ತು. ಕೋರ್ಟ್ ಖುಲಾಸೆಗೊಳಿಸಿದ ನಂತರವೂ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದನ್ನು ಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು.