ಸಾಲು ರಜೆ: ಪ್ರವಾಸಿ ತಾಣಗಳಲ್ಲಿ ಜನಜಾತ್ರೆ
ಶ್ರೀರಂಗಪಟ್ಟಣ: ಸಾಲು ಸಾಲು ಸರ್ಕಾರಿ ರಜೆಯ ಕಾರಣ ಪಟ್ಟಣದ ಪ್ರವಾಸಿ ತಾಣಗಳು ಹಾಗೂ ಶ್ರದ್ಧಾ, ಕೇಂದ್ರಗಳು ಪ್ರವಾಸಿಗರಿಂದ ತುಂಬಿವೆ.ಪಟ್ಟಣದ ಐತಿಹಾಸಿಕ ಶ್ರೀರಂಗನಾಥಸ್ವಾಮಿ ದೇವಾಲಯ, ಗಂಜಾಂ ನಿಮಿಷಾಂಬ ದೇವಾಲಯ, ಟಿಪ್ಪು ಬೇಸಿಗೆ ಅರಮನೆ, ರಂಗನತಿಟ್ಟು ಪಕ್ಷಿಧಾಮ, ಕೆಆರ್ಎಸ್ ಅಣೆಕಟ್ಟೆ ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲಿ ಅ.18ರಿಂದಲೇ ಪ್ರವಾಸಿಗರ ದಟ್ಟಣೆ ಹೆಚ್ಚ

ಶ್ರೀರಂಗಪಟ್ಟಣ: ಸಾಲು ಸಾಲು ಸರ್ಕಾರಿ ರಜೆಯ ಕಾರಣ ಪಟ್ಟಣದ ಪ್ರವಾಸಿ ತಾಣಗಳು ಹಾಗೂ ಶ್ರದ್ಧಾ, ಕೇಂದ್ರಗಳು ಪ್ರವಾಸಿಗರಿಂದ ತುಂಬಿವೆ.ಪಟ್ಟಣದ ಐತಿಹಾಸಿಕ ಶ್ರೀರಂಗನಾಥಸ್ವಾಮಿ ದೇವಾಲಯ, ಗಂಜಾಂ ನಿಮಿಷಾಂಬ ದೇವಾಲಯ, ಟಿಪ್ಪು ಬೇಸಿಗೆ ಅರಮನೆ, ರಂಗನತಿಟ್ಟು ಪಕ್ಷಿಧಾಮ, ಕೆಆರ್ಎಸ್ ಅಣೆಕಟ್ಟೆ ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲಿ ಅ.18ರಿಂದಲೇ ಪ್ರವಾಸಿಗರ ದಟ್ಟಣೆ ಹೆಚ್ಚಿತ್ತು, ವಾರಾಂತ್ಯ ಹಾಗೂ ಅ. 25ರಂದು ಸರ್ಕಾರಿ ರಜೆ ಇರುವ ಕಾರಣ ಶನಿವಾರ, ಭಾನುವಾರ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಪ್ರವಾಸಿಗರು ಕಂಡುಬಂದರು.ಪಟ್ಟಣದ ಶ್ರೀರಂಗನಾಥಸ್ವಾಮಿದೇವಾಲಯಕ್ಕೆ ಭಾನುವಾರ ಮುಂಜಾನೆಯಿಂದಲೇ ಭಕ್ತರು ಬರಲಾರಂಭಿಸಿದರು. ಬೆಳಿಗ್ಗೆ 10ರ ವೇಳೆಗೆ ದೇವಾಲಯದ ಮುಂದೆ ರಾಜ್ಯ, ಹೊರ ರಾಜ್ಯಗಳಿಂದ ಬಂದಿದ್ದ ಅಪಾರ ಭಕ್ತರು ನೆರೆದಿದ್ದರು. ದೇವಾಲಯದಿಂದ ರೈಲ್ವೆ ನಿಲ್ದಾಣ ಸಂಪರ್ಕ ರಸ್ತೆಯವರೆಗೂ ಭಕ್ತರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು. ಭಕ್ತರ ದಟ್ಟಣೆ ಹೆಚ್ಚು ಇದ್ದುದರಿಂದ ಸರದಿ ಸಾಲಿನಲ್ಲಿ ತೆರಳಿ ಗರ್ಭಗುಡಿ ತಲುಪಲು ಎರಡು ತಾಸು ಸಮಯ ಹಿಡಿಯಿತು ಎಂದು ಭಕ್ತರೊಬ್ಬರು ಹೇಳಿದರು.ಪಟ್ಟಣ ಸಮೀಪದ ಗಂಜಾಂ ನಿಮಿಷಾಂಬ ದೇವಾಲಯಕ್ಕೂ ಹೆಚ್ಚಿನ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ವಿಶೇಷ ದರ್ಶನದ ಸಾಲಿನಲ್ಲೂ ನೂರಾರು ಮಂದಿ ಸಾಲುಗಟ್ಟಿ ನಿಂತಿದ್ದರು. ಹಾಗಾಗಿ ದೇವಿಯ ದರ್ಶನ ಪಡೆಯಲು ಸುಮಾರು ಒಂದು ತಾಸು ಸಮಯ ಹಿಡಿಯುತ್ತಿತ್ತು. ಪಟ್ಟಣದ ಕ್ಷಣಾಂಬಿಕಾ ಮತ್ತು ಚಾಮುಂಡೇಶ್ವರಿ ದೇವಾಲಯ, ತಾಲ್ಲೂಕಿನ ಕರಿಘಟ್ಟದ ಶ್ರೀನಿವಾಸ ದೇಗುಲಗಳಿಗೂ ಹೆಚ್ಚಿನ ಭಕ್ತರು ಭೇಟಿ ನೀಡಿದ್ದರು.ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ, ಟಿಪ್ಪು ಮತ್ತು ಹೈದರ್ ಅಲಿಖಾನ್ ಸಮಾಧಿ ಸ್ಥಳವಾದ ಗುಂಬಸ್, ಜಾಮಿಯಾ ಮಸೀದಿ, ದೊಡ್ಡ ಗೋಸಾಯಿಘಾಟ್, ಕರ್ನಲ್ ಬೇಯ್ಲಿ ಡಂಜನ್ ಸ್ಮಾರಕಗಳು ಮತ್ತು ಕಾವೇರಿ ಸಂಗಮ ಬಳಿಯೂ ಪ್ರವಾಸಿಗರ ದಟ್ಟಣೆ ಕಂಡುಬಂತು.ತಾಲ್ಲೂಕಿನ ಬೆಳಗೊಳ ಬಳಿಯ ಬಲಮುರಿ ಮ್ತು ಎಡಮುರಿ ಪ್ರಕೃತಿ ತಾಣಗಳು ಹಾಗೂ ಮಂಡ್ಯಕೊಪ್ಪಲು ಸಮೀಪದ ಕಾವೇರಿ ಬೋರೇದೇವರ ದೇವಾಲಯ, ರಾಜಪರಮೇಶ್ವರಿ ಅಣೆಕಟ್ಟೆ, ಬಂಗಾರದೊಡ್ಡಿ ಅಣೆಕಟ್ಟೆಗಳ ಬಳಿಯೂ ಪ್ರವಾಸಿಗರ ಕಲರವ ಇತ್ತು.ಪಟ್ಟಣ ಸಮೀಪದ ರಂಗನತಿಟ್ಟು ಪಕ್ಷಿಧಾಮಕ್ಕೆ ಮೈಸೂರು ದಸರಾ ಉತ್ಸವ ಆರಂಭವಾದ ಬಳಿಕ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.ದೇಶ, ವಿದೇಶಗಳ ಪಕ್ಷಿಪ್ರಿಯರು ಇಲ್ಲಿಗೆ ಬರುತ್ತಾರೆ. ಪಕ್ಷಿ ವೀಕ್ಷಣೆ ಜತೆಗೆ ದೋಣಿ ವಿಹಾರ ನಡೆಸಿ ಸಂಭ್ರಮಿಸುತ್ತಿದ್ದಾರೆ.‘ರಂಗನತಿಟ್ಟು ಪಕ್ಷಿಧಾಮಕ್ಕೆ ಒಂದು ವಾರದಿಂದ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ. ದಸರಾ ಉತ್ಸವದ ಜತೆಗೆ ನಾಲ್ಕೈದು ದಿನಗಳ ಕಾಲ ರಜೆ ಸಿಕ್ಕಿರುವುದರಿಂದ ಪ್ರವಾಸಿಗರ ಸಂಖ್ಯೆ ವಾಡಿಕೆಗಿಂತ ಹೆಚ್ಚಾಗಿದೆ’ ಎಂದು ಪಕ್ಷಿಧಾಮದ ವಲಯ ಅರಣ್ಯಾಧಿಕಾರಿ ಎಸ್ಮಾ ಮಾಚಮ್ಮ ತಿಳಿಸಿದ್ದಾರೆ.ಬೇಸಿಗೆ ಅರಮನೆಗೆ ಹೆಚ್ಚಿನ ಪ್ರವಾಸಿಗರುಟಿಪ್ಪು ಬೇಸಿಗೆ ಅರಮನೆಗೆ ವಾಡಿಕೆಯ ದಿನಗಳಲ್ಲಿ 300ರಿಂದ 400 ಮಂದಿ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ದಸರಾ ಉತ್ಸವ ಆರಂಭವಾದ ಬಳಿಕ ಹೆಚ್ಚು ಪ್ರವಾಸಿಗರು ಬರುತ್ತಿದ್ದಾರೆ. ಅ.24ರಂದು 2,300 ಹಾಗೂ ಅ.25ರಂದು 2,500 ಮಂದಿ ಭೇಟಿ ನೀಡಿದ್ದಾರೆ’ ಎಂದು ಬೇಸಿಗೆ ಅರಮನೆಯ ಸಂರಕ್ಷಣಾ ಸಹಾಯಕ ಎನ್. ಸುನಿಲ್ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.261026-40-1313173840