ಇದು ಬ್ರ್ಯಾಂಡ್ ಅಲ್ಲ, ಕಸದ ಬೆಂಗಳೂರು:ಡಿಕೆಶಿ, ಕೃಷ್ಣಬೈರೇಗೌಡ ವಿರುದ್ಧ ಅಶೋಕ ಗರಂ
ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ನಿರ್ಮಿಸುತ್ತೇವೆ ಎಂದು ಭಾಷಣ ಬಿಗಿಯುವ ನಿಮಗೆ, ರಾಜಧಾನಿ ರಸ್ತೆಗಳಲ್ಲಿ ಬಿದ್ದಿರುವ ಕಸದ ಬೆಟ್ಟಗಳನ್ನು ತೆರವುಗೊಳಿಸುವ ಯೋಗ್ಯತೆಯೂ ಇಲ್ಲವೇ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.‘ಪ್ರಜಾವಾಣಿ’ ವರದಿಯನ್ನು ಉಲ್ಲೇಖಿಸಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಸಿ

ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ನಿರ್ಮಿಸುತ್ತೇವೆ ಎಂದು ಭಾಷಣ ಬಿಗಿಯುವ ನಿಮಗೆ, ರಾಜಧಾನಿ ರಸ್ತೆಗಳಲ್ಲಿ ಬಿದ್ದಿರುವ ಕಸದ ಬೆಟ್ಟಗಳನ್ನು ತೆರವುಗೊಳಿಸುವ ಯೋಗ್ಯತೆಯೂ ಇಲ್ಲವೇ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.‘ಪ್ರಜಾವಾಣಿ’ ವರದಿಯನ್ನು ಉಲ್ಲೇಖಿಸಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಸಿಎಂ ಡಿ.ಕೆ.ಶಿವಕುಮಾರ್ ಅವರೇ, ಸಚಿವ ಕೃಷ್ಣ ಬೈರೇಗೌಡ ಅವರೇ, ಪತ್ರಿಕೆಗಳಲ್ಲಿ ದಿನ ಬೆಳಗಾದರೆ ಬೆಂಗಳೂರಿನ ಈ ದುಸ್ಥಿತಿಯನ್ನು ಕಣ್ಣಿಗೆ ರಾಚುವಂತೆ ತೋರಿಸುತ್ತಿದ್ದರೂ ನಿಮ್ಮ ಕರ್ತವ್ಯ ಪ್ರಜ್ಞೆ ಜಾಗೃತವಾಗುತ್ತಿಲ್ಲ ಅಂದರೆ ನಿಮ್ಮ ಕಾಂಗ್ರೆಸ್ ಸರ್ಕಾರದ ಭಂಡತನಕ್ಕೆ ಏನು ಹೇಳೋಣ ಸ್ವಾಮಿ’ ಎಂದು ಕಿಡಿಕಾರಿದ್ದಾರೆ.ಆಯುಧ ಪೂಜೆ, ವಿಜಯದಶಮಿ ಮುಗಿದು ದಿನಗಳೇ ಕಳೆದಿವೆ. ಆದರೆ, ರಸ್ತೆಗಳಲ್ಲಿ ಕೊಳೆತ ಹೂವು, ಬಾಳೆಕಂಬ, ಮನೆಯ ತ್ಯಾಜ್ಯದ ರಾಶಿ. ದುರ್ನಾತದಿಂದ ಜನ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ. ಇದೇನಾ ನಿಮ್ಮ ಬ್ರ್ಯಾಂಡ್ ಬೆಂಗಳೂರು?, ಇದೇನಾ ನಿಮ್ಮ ಅಭಿವೃದ್ಧಿಯ ಮಾದರಿ?, ಬೆಂಗಳೂರು ಕಸದ ರಾಶಿಯಲ್ಲಿ ಮುಳುಗುತ್ತಿದ್ದರೆ, ಕಾಂಗ್ರೆಸ್ ಸರ್ಕಾರ ಮಾತ್ರ ಪೊಳ್ಳು ಪ್ರಚಾರದ ಅಮಲಿನಲ್ಲಿ ತೇಲುತ್ತಿದೆ ಎಂದು ಗುಡುಗಿದ್ದಾರೆ.ಕಸದ ಸಮಸ್ಯೆ ಒಂದು ದಿನದಲ್ಲಿ ಹುಟ್ಟಿದ್ದಲ್ಲ. ಕಳೆದ ಮೂರು ತಿಂಗಳಿಂದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವಿನ ಸಂಘರ್ಷ ಮುಂದುವರಿದಿದ್ದರೂ ಬಿಕ್ಕಟ್ಟು ಬಗೆಹರಿಸಲು ನಿಮ್ಮಿಂದ ಸಾಧ್ಯವಾಗಿಲ್ಲ. ಸಮಸ್ಯೆ ಉಲ್ಬಣಿಸುವವರೆಗೆ ಕಣ್ಣುಮುಚ್ಚಿ ಕುಳಿತು, ಈಗ ಅದರ ದುಷ್ಪರಿಣಾಮವನ್ನು ಬೆಂಗಳೂರಿನ ಜನರ ಮೇಲೆ ಹೇರುತ್ತಿದ್ದೀರಿ ಎಂದು ಅಶೋಕ ಕುಟುಕಿದ್ದಾರೆ.2017ರಲ್ಲಿ ಡೀಸೆಲ್ ದರ ಲೀಟರ್ಗೆ ₹66ರಷ್ಟಿದ್ದಾಗ ನಿಗದಿಪಡಿಸಿದ ದರದಲ್ಲಿ, ಇಂದಿನ ಇಂಧನ ವೆಚ್ಚವನ್ನು ಭರಿಸಿ ಕೆಲಸ ಮಾಡಲು ಗುತ್ತಿಗೆದಾರರಿಗೆ ಹೇಗೆ ಸಾಧ್ಯ?, ಕಾರ್ಮಿಕರ ವೇತನ ಪರಿಷ್ಕರಣೆ, ಇಪಿಎಫ್ ಮತ್ತು ಇಎಸ್ಐ ಪಾವತಿಗಳ ಬಾಕಿ ಸೇರಿದಂತೆ ಗುತ್ತಿಗೆದಾರರು ಎತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಬದಲು, ಅವರನ್ನೇ ಬೆದರಿಸುವುದು ನಿಮ್ಮ ಆಡಳಿತದ ವೈಫಲ್ಯವನ್ನು ಮುಚ್ಚಿಹಾಕುವುದಿಲ್ಲ ಎಂದಿದ್ದಾರೆ.ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರು ತಮ್ಮ ಸಮಸ್ಯೆಗಳನ್ನು ಮುಂದಿಟ್ಟಾಗ ಎಸ್ಮಾ ಕಾಯ್ದೆಯ ಅಸ್ತ್ರ ಪ್ರಯೋಗಿಸುವ ಬೆದರಿಕೆ ಹಾಕಲಾಗುತ್ತಿದೆ. ಆದರೆ, ಇಂಧನ ವೆಚ್ಚ, ಕಾರ್ಮಿಕರ ವೇತನ ಮತ್ತು ಬಾಕಿ ಪಾವತಿಗಳ ಸಮಸ್ಯೆಗಳನ್ನು ಬಗೆಹರಿಸುವ ಹೊಣೆಗಾರಿಕೆ ಯಾರದ್ದು?, ಅಧಿಕಾರದ ದರ್ಪ ತೋರಿಸುವುದೇ ಆಡಳಿತವೇ? ಸಮಸ್ಯೆಗಳನ್ನು ಆಲಿಸಿ ಪರಿಹರಿಸುವುದೇ ನಿಜವಾದ ಆಡಳಿತವಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.ಸಣ್ಣಪುಟ್ಟ ಬಿಲ್ಗಳ ಪಾವತಿಗೂ ಗುತ್ತಿಗೆದಾರರು 25ರಿಂದ 30 ದಿನ ಅಧಿಕಾರಿಗಳ ಕಚೇರಿಗಳಿಗೆ ಅಲೆಯಬೇಕಾದ ಪರಿಸ್ಥಿತಿ ಇದೆ ಎಂಬ ವರದಿಗಳು ಹೊರಬಿದ್ದಿವೆ. ಗುತ್ತಿಗೆದಾರರ ಸಮಸ್ಯೆಗಳನ್ನು ಕಾಲಕಾಲಕ್ಕೆ ಬಗೆಹರಿಸದೆ, ಇಡೀ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಿರುವ ಹೊಣೆಗಾರಿಕೆಯಿಂದ ಸರ್ಕಾರ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಸರ್ಕಾರವನ್ನು ತಿವಿದಿದ್ದಾರೆ.‘ಸಚಿವ ಕೃಷ್ಣ ಬೈರೇಗೌಡ ಅವರೇ, ನಿಮ್ಮ ಆರಂಭ ಶೂರತ್ವದ ಪಾಠಗಳೆಲ್ಲ ಎಲ್ಲಿ ಹೋದವು?, ರೀಲ್ಸ್ಗಳಲ್ಲಿ, ಸಂದರ್ಶನಗಳಲ್ಲಿ ದೊಡ್ಡ ದೊಡ್ಡ ಮಾತುಗಳನ್ನಾಡುವುದು ಸುಲಭ. ಆದರೆ, ನಿಮ್ಮ ಕಣ್ಣಮುಂದೆಯೇ ರಾಜಧಾನಿಯ ರಸ್ತೆಗಳು ಕಸದ ರಾಶಿಗಳಿಂದ ತುಂಬಿರುವಾಗ, ಸಮಸ್ಯೆ ಬಗೆಹರಿಸಲು ನಿಮ್ಮ ಕ್ರಮಗಳೇನು?, ಬೆಂಗಳೂರಿನ ಜನರಿಗೆ ಬೇಕಿರುವುದು ವಿದೇಶಿ ಮಾದರಿಗಳ ಉಪನ್ಯಾಸವಲ್ಲ, ತಮ್ಮ ಬೀದಿಗಳಲ್ಲಿ ಸ್ವಚ್ಛತೆ’ ಎಂದು ಲೇವಡಿ ಮಾಡಿದ್ದಾರೆ.‘ಸಿಎಂ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮ ಬ್ರ್ಯಾಂಡ್ ಬೆಂಗಳೂರಿನ ಬಣ್ಣ ಬಯಲಾಗಿದೆ! ಬ್ರ್ಯಾಂಡ್ ಬೆಂಗಳೂರು ಎಂದು ಬಿಟ್ಟಿ ಪ್ರಚಾರ ಪಡೆಯುತ್ತೀರಿ. ಜಾಗತಿಕ ಹೂಡಿಕೆ, ವಿಶ್ವಮಟ್ಟದ ಮೂಲಸೌಕರ್ಯ, ಅತ್ಯಾಧುನಿಕ ನಗರ ಎಂದು ಅಂಗೈಯಲ್ಲಿ ಅರಮನೆ ತೋರಿಸುತ್ತೀರಿ. ಆದರೆ, ಇಂದು ರಾಜಧಾನಿಯ ತ್ಯಾಜ್ಯ ವಿಲೇವಾರಿಯನ್ನೇ ಸಮರ್ಪಕವಾಗಿ ನಿರ್ವಹಿಸಲಾಗದ ಸ್ಥಿತಿ ತಂದಿಟ್ಟಿದ್ದೀರಿ. ರಸ್ತೆಗಳಲ್ಲಿ ಕಸದ ಬೆಟ್ಟ, ಆಡಳಿತದಲ್ಲಿ ಹೊಣೆಗಾರಿಕೆಯ ಕೊರತೆ, ಪ್ರಚಾರದಲ್ಲಿ ಮಾತ್ರ ವಿಶ್ವದರ್ಜೆ, ಇದೇನಾ ನಿಮ್ಮ ಬ್ರ್ಯಾಂಡ್ ಬೆಂಗಳೂರು’ ಎಂದು ವ್ಯಂಗ್ಯವಾಡಿದ್ದಾರೆ.ಅಕ್ಟೋಬರ್ 26ರಿಂದ ಗುತ್ತಿಗೆದಾರರು ವಾಹನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿರುವುದರಿಂದ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳುವ ಆತಂಕವಿದೆ. ಪರಿಸ್ಥಿತಿ ಕೈಮೀರುವವರೆಗೆ ಕಾಯದೆ, ಕಾಂಗ್ರೆಸ್ ಸರ್ಕಾರ ತಕ್ಷಣವೇ ಮಾತುಕತೆ ನಡೆಸಿ, ಬಾಕಿ ಸಮಸ್ಯೆಗಳನ್ನು ಬಗೆಹರಿಸಿ, ತ್ಯಾಜ್ಯ ವಿಲೇವಾರಿಯನ್ನು ಸುಗಮಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.ಡಿ.ಕೆ.ಶಿವಕುಮಾರ್ ಅವರೇ, ಕೃಷ್ಣ ಬೈರೇಗೌಡ ಅವರೇ, ಬೆಂಗಳೂರು ನಿಮ್ಮ ಪ್ರಚಾರದ ಪ್ರಯೋಗ ಶಾಲೆಯಲ್ಲ! ಇದು ಲಕ್ಷಾಂತರ ಜನರ ಬದುಕು, ಆರೋಗ್ಯ ಮತ್ತು ಘನತೆಯ ಪ್ರಶ್ನೆ. ನಗರವನ್ನು ಸ್ವಚ್ಛವಾಗಿಡಲು ಸಾಧ್ಯವಾಗದವರು ಅಭಿವೃದ್ಧಿಯ ಬಗ್ಗೆ ಉಪದೇಶ ನೀಡುವುದನ್ನು ನಿಲ್ಲಿಸಲಿ. ಜನರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಪ್ರಚಾರಕ್ಕೆ ಆದ್ಯತೆ ನೀಡುವ ಸರ್ಕಾರಕ್ಕೆ ಬೆಂಗಳೂರಿನ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ.