ರಷ್ಯಾಗೆ ಶೀಘ್ರವೇ ಪಾಕ್ ಪ್ರಧಾನಿ ಭೇಟಿ
ಇಸ್ಲಾಮಾಬಾದ್ : ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಚರ್ಚೆ ನಡೆಸಲು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಮುಂದಿನ ವಾರದಲ್ಲಿ ರಷ್ಯಾಗೆ ಭೇಟಿ ನೀಡಲಿದ್ದಾರೆ ಎಂದು ಮಾಧ್ಯಮಗಳು ಸೋಮವಾರ ವರದಿ ಮಾಡಿವೆ. ಷರೀಫ್ ಅವರು ಮಾರ್ಚ್ನಲ್ಲಿಯೇ ರಷ್ಯಾಗೆ ಭೇಟಿ ನೀಡಬೇಕಿತ್ತು. ಆದರೆ, ಸ್ಥಳೀಯ ಭದ್ರತಾ ಪರಿಸ್ಥಿತಿಯಿಂದಾಗಿ ಆ ಭೇಟಿಯನ್ನು ಮುಂದೂಡ

ಇಸ್ಲಾಮಾಬಾದ್ : ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಚರ್ಚೆ ನಡೆಸಲು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಮುಂದಿನ ವಾರದಲ್ಲಿ ರಷ್ಯಾಗೆ ಭೇಟಿ ನೀಡಲಿದ್ದಾರೆ ಎಂದು ಮಾಧ್ಯಮಗಳು ಸೋಮವಾರ ವರದಿ ಮಾಡಿವೆ. ಷರೀಫ್ ಅವರು ಮಾರ್ಚ್ನಲ್ಲಿಯೇ ರಷ್ಯಾಗೆ ಭೇಟಿ ನೀಡಬೇಕಿತ್ತು. ಆದರೆ, ಸ್ಥಳೀಯ ಭದ್ರತಾ ಪರಿಸ್ಥಿತಿಯಿಂದಾಗಿ ಆ ಭೇಟಿಯನ್ನು ಮುಂದೂಡಲಾಗಿತ್ತು. ಇದೀಗ ಎರಡೂ ರಾಷ್ಟ್ರಗಳು ಪರಸ್ಪರ ಸಮಾಲೋಚಿಸಿ ಷರೀಫ್ ಮತ್ತು ಪುಟಿನ್ ಅವರ ಭೇಟಿಗೆ ದಿನಾಂಕವನ್ನು ದೃಢಪಡಿಸಿಕೊಂಡಿವೆ ಎಂದು ರಾಯಭಾರ ಕಚೇರಿ ಮೂಲಗಳು ತಿಳಿಸಿವೆ ಎಂದು ದಿ ‘ಎಕ್ಸ್ಪ್ರೆಸ್ ಟ್ರಿಬ್ಯೂನ್’ ಪತ್ರಿಕೆ ವರದಿ ಮಾಡಿದೆ. ಅಮೆರಿಕ–ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ನಡೆಸುತ್ತಿರುವ ಸಂಘರ್ಷವು ಪ್ರಾದೇಶಿಕ ಬಿಕ್ಕಟ್ಟನ್ನು ಸೃಜಿಸಿದ್ದು, ಪಾಕಿಸ್ತಾನವು ಇರಾನ್ನಿಂದ ತನ್ನ ಪ್ರಜೆಗಳನ್ನು ಕರೆಸಿಕೊಳ್ಳುವ ಹಾಗೂ ಭದ್ರತೆ ಕುರಿತು ಗಮನಹರಿಸುವಂತೆ ಮಾಡಿದೆ. ಇತ್ತ ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದ ನಡುವಿನ ಸಂಘರ್ಷವೂ ತೀವ್ರಗೊಳ್ಳುತ್ತಿದ್ದು, ಪಾಕ್ ಉಭಯ ಸಂಕಟಕ್ಕೆ ಸಿಲುಕಿದಂತಾಗಿದೆ.ಈ ನಡುವೆಯೇ ಪಾಕ್ ಪ್ರಧಾನಿ ರಷ್ಯಾ ಭೇಟಿ ಕೈಗೊಳ್ಳುತ್ತಿರುವುದು ಮಹತ್ವ ಪಡೆದಿದೆ.ವ್ಯಾಪಾರ, ಹೂಡಿಕೆ, ಇಂಧನ ವಿಚಾರ ಸೇರಿದಂತೆ ದ್ವಿಪಕ್ಷೀಯ ಆರ್ಥಿಕ ಸಹಕಾರವನ್ನು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಷರೀಫ್ ಮತ್ತು ಪುಟಿನ್ ಮಾತುಕತೆ ನಡೆಸುವ ನಿರೀಕ್ಷೆ ಇದೆ ಎಂದೂ ಹೇಳಲಾಗಿದೆ.