ಚೇಳೂರು: ಹಿಂಗಾರು ಉತ್ತಮ ಮಳೆಯಾದರೂ ಬಿತ್ತನೆ ಮಾಡಲು ರೈತರು ಹಿಂದೇಟು
ಚೇಳೂರು: ತಾಲ್ಲೂಕಿನಲ್ಲಿ ಹಿಂಗಾರು ಹಂಗಾಮಿನ ಆರಂಭದಲ್ಲಿ ಬಿತ್ತನೆಗೆ ಪೂರಕವಾಗಿ ಉತ್ತಮ ಮಳೆಯಾಗಿದೆ. ಆದರೆ, ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗದೆ ಬಿತ್ತನೆ ಮಾಡಿ ಕೈಸುಟ್ಟುಕೊಂಡಿದ್ದ ರೈತರು, ಈಗಲೂ ಬಿತ್ತನೆ ಮಾಡಲು ಹಿಂಜರಿಯುತ್ತಿದ್ದಾರೆ.ತಾಲ್ಲೂಕಿನಾದ್ಯಂತ ಮುಂಗಾರು ಆರಂಭದಲ್ಲಿ ಬಿದ್ದ ಮೊದಲ ಮಳೆಯನ್ನು ನೆಚ್ಚಿಕೊಂಡು ರೈತರು ನೆಲಗಡಲೆ ಹಾಗೂ ತೊಗರಿ ಬಿತ್ತನೆ ಮ

ಚೇಳೂರು: ತಾಲ್ಲೂಕಿನಲ್ಲಿ ಹಿಂಗಾರು ಹಂಗಾಮಿನ ಆರಂಭದಲ್ಲಿ ಬಿತ್ತನೆಗೆ ಪೂರಕವಾಗಿ ಉತ್ತಮ ಮಳೆಯಾಗಿದೆ. ಆದರೆ, ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗದೆ ಬಿತ್ತನೆ ಮಾಡಿ ಕೈಸುಟ್ಟುಕೊಂಡಿದ್ದ ರೈತರು, ಈಗಲೂ ಬಿತ್ತನೆ ಮಾಡಲು ಹಿಂಜರಿಯುತ್ತಿದ್ದಾರೆ.ತಾಲ್ಲೂಕಿನಾದ್ಯಂತ ಮುಂಗಾರು ಆರಂಭದಲ್ಲಿ ಬಿದ್ದ ಮೊದಲ ಮಳೆಯನ್ನು ನೆಚ್ಚಿಕೊಂಡು ರೈತರು ನೆಲಗಡಲೆ ಹಾಗೂ ತೊಗರಿ ಬಿತ್ತನೆ ಮಾಡಿದ್ದರು. ಆದರೆ, ಆನಂತರ ಸರಿಯಾಗಿ ಮಳೆಯಾಗದ ಕಾರಣ ಅಪಾರ ನಷ್ಟ ಅನುಭವಿಸಿದ್ದರು. ಮುಂಗಾರು ಕೊನೆಗೊಳ್ಳುವ ಹಂತ ಬಂದರೂ ಹನಿ ಮಳೆಯಾಗದೆ, ನೆಲದಲ್ಲಿ ಮೊಳಕೆಯೊಡೆದಿದ್ದ ಬೆಳೆಗಳು ಸುಡುವ ಬಿಸಿಲಿನ ತಾಪಕ್ಕೆ ಒಣಗಿ ಸಾಯುವ ಸ್ಥಿತಿಗೆ ತಲುಪಿದ್ದವು. ಬೆಳೆದು ನಿಲ್ಲಬೇಕಾದ ಪೈರುಗಳು ಕಣ್ಣೆದುರು ಒಣಗುತ್ತಿದ್ದುದ್ದನ್ನು ಕಂಡು ರೈತರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿತ್ತು.ಪ್ರಕೃತಿ ವಿಕೋಪಕ್ಕೆ ಸಿಲುಕಿ ಕಂಗಾಲಾಗಿದ್ದ ರೈತರಿಗೆ, ಹಿಂಗಾರು ಹಂಗಾಮು ಶುರುವಾಗುತ್ತಿದ್ದಂತೆ ಸುರಿದ ಉತ್ತಮ ಮಳೆ ಕೊಂಚ ಸಮಾಧಾನ ತರಿಸಿದೆ. ಮುಂಗಾರಿನಲ್ಲಿ ಬಿತ್ತಿ ಒಣಗುತ್ತಿದ್ದ ಬೆಳೆಗಳಿಗೆ ಈ ಮಳೆ ಮರುಜೀವ ನೀಡಿದಂತಾಗಿದೆ. ಒಣಗುತ್ತಿದ್ದ ಪೈರುಗಳು ಮತ್ತೆ ಚೇತರಿಸಿಕೊಳ್ಳುತ್ತಿವೆ. ಆದರೆ, ಹೊಸದಾಗಿ ಬಿತ್ತನೆ ಮಾಡಲು ರೈತರು ಹಿಂಜರಿಕೆ ಅನುಭವಿಸುತ್ತಿದ್ದಾರೆ.ರಾಗಿ ಬಿತ್ತನೆ ನಿಗದಿತ ಕಾಲಾವಧಿ ಮುಕ್ತಾಯಗೊಂಡಿದೆ. ಪ್ರಸ್ತುತ ವಾತಾವರಣವು ಹಿಂಗಾರಿನ ಪ್ರಮುಖ ಬೆಳೆಗಳಾದ ಕಡಲೆ, ಹಿಂಗಾರು ಜೋಳ ಹಾಗೂ ಹುರುಳಿ ಬಿತ್ತನೆ ಮಾಡಬಹುದು. ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿದ್ದರೂ, ರೈತರು ಬಿತ್ತನೆ ಮಾಡಲು ಮನಸ್ಸು ಮಾಡುತ್ತಿಲ್ಲ.ಆರಂಭದಲ್ಲಿ ಆರ್ಭಟಿಸಿ ನಂತರ ಕೈಕೊಡುವ ಮುಂಗಾರಿನ ಹಾದಿಯನ್ನೇ ಹಿಂಗಾರು ಮಳೆಯೂ ಹಿಡಿಯಬಹುದು ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ. ಬಿತ್ತನೆ ಬೀಜ, ಗೊಬ್ಬರ, ಉಳುಮೆ ಮತ್ತು ಆಳು-ಕಾಳುಗಳ ವೆಚ್ಚವನ್ನು ಮತ್ತೆ ಭರಿಸಿ, ಕೊನೆಗೆ ಮಳೆಯಾಗದೆ ನಷ್ಟ ಅನುಭವಿಸುವ ಸ್ಥಿತಿ ಬರಬಾರದೆಂಬ ಮುನ್ನೆಚ್ಚರಿಕೆಯಲ್ಲಿದ್ದಾರೆ.ಈ ಹಿಂದಿನ ನಷ್ಟದಿಂದ ಪಾಠ ಕಲಿತಿರುವ ತಾಲ್ಲೂಕಿನ ರೈತರು ಈ ಬಾರಿ ಯಾವುದೇ ಕಾರಣಕ್ಕೂ ದುಡುಕಿ ನಿರ್ಧಾರ ಕೈಗೊಳ್ಳಬಾರದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆಗಾಗಿ ಉಳುಮೆ ಮಾಡಿ ಹದಗೊಳಿಸಿ ಇಟ್ಟುಕೊಂಡಿದ್ದ ಭೂಮಿಯಲ್ಲಿ, ಕನಿಷ್ಠ ವೆಚ್ಚ ಹಾಗೂ ಕಡಿಮೆ ನಿರ್ವಹಣೆ ಬೇಡುವ ಹುರಳಿ ಬೆಳೆ ಮಾತ್ರ ಬಿತ್ತನೆ ಮಾಡುತ್ತಿದ್ದಾರೆ.ಹುರುಳಿಯು ಕಡಿಮೆ ವೆಚ್ಚ, ಕಡಿಮೆ ನೀರು ಮತ್ತು ಅತ್ಯಲ್ಪ ನಿರ್ವಹಣೆಯಲ್ಲಿ ಬೆಳೆಯುವ ತಳಿಯಾಗಿದೆ. ಒಂದು ವೇಳೆ ಹಿಂಗಾರು ಮಳೆ ಮುಂದಿನ ದಿನಗಳಲ್ಲಿ ಕೈಕೊಟ್ಟರೂ ಸಹ ಕನಿಷ್ಠ ನಷ್ಟವಾಗುತ್ತದೆ ಎಂಬ ತರ್ಕ ರೈತರದ್ದು. ಹೀಗಾಗಿ ಕಡಲೆ ಅಥವಾ ಜೋಳದಂತಹ ಹೆಚ್ಚು ಹೂಡಿಕೆ ಬೇಡುವ ಬೆಳೆಗಳ ಸಹವಾಸಕ್ಕೆ ಹೋಗದೆ, ಹುರುಳಿ ಬಿತ್ತನೆಗೆ ಸೀಮಿತಗೊಂಡಿದ್ದಾರೆ.ಸದ್ಯ ಚೇಳೂರು ತಾಲ್ಲೂಕಿನ ಕೃಷಿ ಭೂಮಿಗಳಲ್ಲಿ ಹಸಿರು ಕಂಗೊಳಿಸುತ್ತಿದ್ದರೂ, ರೈತರ ಮನಸ್ಸಿನಲ್ಲಿ ಮುಂಗಾರಿನ ಬರ ತಂದಿತ್ತ ಆತಂಕದ ಕಪ್ಪು ಮೋಡಗಳು ಇನ್ನೂ ಸರಿದಿಲ್ಲ. ಕೃಷಿ ಇಲಾಖೆಯು ತಕ್ಷಣವೇ ಮುನ್ನೆಚ್ಚರಿಕೆ ವಹಿಸಿ, ರೈತರಿಗೆ ಸೂಕ್ತ ತಾಂತ್ರಿಕ ಸಲಹೆ ಹಾಗೂ ಹಿಂಗಾರು ಬೆಳೆಗಳ ಬಗೆಗಿನ ಭರವಸೆ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ ಎಂಬುದು ಸ್ಥಳೀಯರ ಆಗ್ರಹ.ದಾಖಲೆ ಪ್ರಮಾಣದಲ್ಲಿ ಹುರಳಿ ಬಿತ್ತನೆಹಿಂದೆಂದೂ ಇಲ್ಲದ ರೀತಿ ಈ ಬಾರಿ ಮುಂಗಾರಿನಲ್ಲಿ ಬಿತ್ತನೆಗಾಗಿ ಹದ ಮಾಡಿ ಇಟ್ಟುಕೊಂಡಿದ್ದ ಭೂಮಿಯಲ್ಲಿ ರೈತರು ಕೇವಲ ಹುರುಳಿ ಮಾತ್ರ ಬಿತ್ತನೆ ಮಾಡುತ್ತಿದ್ದಾರೆ. ಈ ಹಿಂದೆ ರೈತರು ತಮ್ಮ ಗೃಹಬಳಕೆ ಅಥವಾ ಜಾನುವಾರುಗಳ ಮೇವಿಗಾಗಿ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ಹುರುಳಿ ಬಿತ್ತನೆ ಮಾಡುತ್ತಿದ್ದರು. ಆದರೆ, ಈ ಬಾರಿ ಪರಿಸ್ಥಿತಿ ತದ್ವಿರುದ್ಧವಾಗಿದೆ. ಹೆಚ್ಚು ಖರ್ಚು–ವೆಚ್ಚ ಬೇಡುವ ಹಾಗೂ ಅಪಾಯಕಾರಿ ಬೆಳೆಗಳ ತಂಟೆಗೆ ಹೋಗದ ರೈತರು, ಸುರಕ್ಷಿತ ಬೆಳೆಯಾಗಿ ಹುರುಳಿಯನ್ನೇ ನೆಚ್ಚಿಕೊಂಡಿದ್ದಾರೆ. ಚೇಳೂರು ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ ಹುರಳಿ ಬಿತ್ತನೆಯಾಗಿದ್ದು, ಇಡೀ ತಾಲ್ಲೂಕಿನ ಜಮೀನುಗಳು ಹುರಳಿ ಪೈರಿನಿಂದ ಕಂಗೊಳಿಸುತ್ತಿವೆ.ನಾರಾಯಣಪ್ಪ, ರೈತಮುಂಗಾರು ಮಳೆ ನಂಬಿ ಬೀಜ, ಗೊಬ್ಬರಕ್ಕೆ ಸಾವಿರಾರು ರೂಪಾಯಿ ಸುರಿದು ನಷ್ಟ ಅನುಭವಿಸಿದ್ದೇವೆ. ಈಗ ಹಿಂಗಾರಿನಲ್ಲಿ ಮಳೆಯಾಗುತ್ತಿದ್ದರೂ ಮತ್ತೆ ನಂಬಿ ಕಡಲೆ ಅಥವಾ ಜೋಳ ಬಿತ್ತಿ ನಷ್ಟ ಮಾಡಿಕೊಳ್ಳಲು ಧೈರ್ಯ ಸಾಲುತ್ತಿಲ್ಲ. ಚಿನ್ನಪರೆಡ್ಡಿ, ಸ್ಥಳೀಯ ರೈತಹಿಂಗಾರಿನಲ್ಲಿ ಆರಂಭದಲ್ಲಿ ಮಳೆಯಾಗಿರುವುದು ಹೌದು. ಆದರೆ ಮುಂದೆ ಮಳೆ ಮುಂದುವರಿಯುತ್ತದೆ ಎಂಬ ನಂಬಿಕೆ ಇಲ್ಲ. ಮತ್ತೆ ಸಾಲ ಮಾಡಿ ಕಡಲೆ ಅಥವಾ ಜೋಳ ಬಿತ್ತಿ ನಷ್ಟ ಮಾಡಿಕೊಳ್ಳುವ ಧೈರ್ಯ ನಮಗಿಲ್ಲ.261026-16-1416301504