ಖಾಯಂ ಸದಸ್ಯರಿಗೆ ವೀಟೊ ಅಧಿಕಾರವಿಲ್ಲದಿದ್ದರೆ 'ಎರಡನೇ ದರ್ಜೆಯವರಾಗುತ್ತಾರೆ': ಭಾರತ
ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ(ಯುಎನ್ಎಸ್ಸಿ) ವೀಟೊ ಅಧಿಕಾರವಿಲ್ಲದೆ ಹೊಸ ಖಾಯಂ ಸದಸ್ಯರನ್ನು ಮಾಡುವುದು, ಅವರನ್ನು 'ಎರಡನೇ ದರ್ಜೆಯ' ಸ್ಥಾನಕ್ಕೆ ತಳ್ಳುತ್ತದೆ. ಪ್ರಸ್ತುತ ಇರುವ ಐದು ಖಾಯಂ ಸದಸ್ಯ ರಾಷ್ಟ್ರಗಳ ಕೈಯಲ್ಲೇ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಉಳಿಸುತ್ತದೆ ಎಂದು ಭಾರತ ಪ್ರತಿಪಾದಿಸಿದೆ.ಚೀನಾ, ಫ್ರಾನ್ಸ್, ರಷ್ಯಾ, ಯುಕೆ ಮ

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ(ಯುಎನ್ಎಸ್ಸಿ) ವೀಟೊ ಅಧಿಕಾರವಿಲ್ಲದೆ ಹೊಸ ಖಾಯಂ ಸದಸ್ಯರನ್ನು ಮಾಡುವುದು, ಅವರನ್ನು 'ಎರಡನೇ ದರ್ಜೆಯ' ಸ್ಥಾನಕ್ಕೆ ತಳ್ಳುತ್ತದೆ. ಪ್ರಸ್ತುತ ಇರುವ ಐದು ಖಾಯಂ ಸದಸ್ಯ ರಾಷ್ಟ್ರಗಳ ಕೈಯಲ್ಲೇ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಉಳಿಸುತ್ತದೆ ಎಂದು ಭಾರತ ಪ್ರತಿಪಾದಿಸಿದೆ.ಚೀನಾ, ಫ್ರಾನ್ಸ್, ರಷ್ಯಾ, ಯುಕೆ ಮತ್ತು ಅಮೆರಿಕವು 15 ದೇಶಗಳ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಿದ್ದು, ವೀಟೊ ಅಧಿಕಾರವನ್ನು ಹೊಂದಿವೆ. ಎರಡು ವರ್ಷಗಳ ಅವಧಿಗೆ ಆಯ್ಕೆಯಾಗುವ 10 ತಾತ್ಕಾಲಿಕ ಸದಸ್ಯರನ್ನು ಸಹ ಹೊಂದಿದೆ.ಈ ಕುರಿತು ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಹರೀಶ್ ಪರ್ವತನೇನಿ, ‘ವೀಟೊ ವ್ಯವಸ್ಥೆಯು ಅಸ್ತಿತ್ವದಲ್ಲಿರುವವರೆಗೆ, ಎಲ್ಲಾ ಖಾಯಂ ಸದಸ್ಯರೂ ಅದನ್ನು ಹೊಂದಿರಬೇಕು. ನ್ಯಾಯ ಮತ್ತು ಸಮ್ಮತಿಯು ಎಲ್ಲಾ ಖಾಯಂ ಸದಸ್ಯರಿಗೂ ಸಮಾನ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಬಯಸುತ್ತದೆ’ ಎಂದು ಪ್ರತಿಪಾದಿಸಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ 'ವೀಟೊ ಕುರಿತ ಚರ್ಚೆ'ಯನ್ನು ಉದ್ದೇಶಿಸಿ ಮಾತನಾಡಿದ ಪರ್ವತನೇನಿ, ‘‘ವೀಟೊ ಅಧಿಕಾರವಿಲ್ಲದೆ ದೀರ್ಘಕಾಲೀನ ಸದಸ್ಯರ ಮತ್ತೊಂದು ವರ್ಗವನ್ನು ಸೃಷ್ಟಿಸುವ ಮೂಲಕ ಭದ್ರತಾ ಮಂಡಳಿಯನ್ನು ವಿಸ್ತರಿಸುವುದು, ಅವರನ್ನು 'ಎರಡನೇ ದರ್ಜೆಯ' ಸದಸ್ಯರನ್ನಾಗಿ ಮಾಡುತ್ತದೆ. ಇದು ಖಾಯಂ ಸದಸ್ಯ ರಾಷ್ಟ್ರಗಳ ನಿರ್ಧಾರ ತೆಗೆದುಕೊಳ್ಳುವ ಸ್ವರೂಪವನ್ನು ಬದಲಾಯಿಸುವುದಿಲ್ಲ’’ ಎಂದು ಹೇಳಿದ್ದಾರೆ.ಹಲವು ವರ್ಷಗಳಿಂದ ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವಕ್ಕಾಗಿ ಒತ್ತಾಯಿಸುತ್ತಿದೆ.