ಔಷಧ ಬೆಲೆ: ಲೂಟಿಗೆ ಸಮರ್ಥನೆಯಿದೆಯೇ– ‘ಸುಪ್ರೀಂ’ ಪ್ರಶ್ನೆ
ನವದೆಹಲಿ: ಔಷಧಗಳ ಗರಿಷ್ಠ ಮಾರಾಟ ದರ (ಎಂಆರ್ಪಿ) ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ನಿಗದಿಪಡಿಸುವ ದರದ (ಪಿಟಿಆರ್) ನಡುವೆ ಭಾರಿ ಅಂತರ ಏಕಿದೆ ಎಂದು ಮಂಗಳವಾರ ಪ್ರಶ್ನಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ‘ಈ ಲೂಟಿಗೆ ಸಮರ್ಥನೆ ಏನಾದರೂ ಇದೆಯೇ? ಔಷಧ ತಯಾರಕರು ಹೀಗೆಲ್ಲ ಅನಿಯಂತ್ರಿತವಾಗಿ ವರ್ತಿಸಲು ಅವಕಾಶ ನ

ನವದೆಹಲಿ: ಔಷಧಗಳ ಗರಿಷ್ಠ ಮಾರಾಟ ದರ (ಎಂಆರ್ಪಿ) ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ನಿಗದಿಪಡಿಸುವ ದರದ (ಪಿಟಿಆರ್) ನಡುವೆ ಭಾರಿ ಅಂತರ ಏಕಿದೆ ಎಂದು ಮಂಗಳವಾರ ಪ್ರಶ್ನಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ‘ಈ ಲೂಟಿಗೆ ಸಮರ್ಥನೆ ಏನಾದರೂ ಇದೆಯೇ? ಔಷಧ ತಯಾರಕರು ಹೀಗೆಲ್ಲ ಅನಿಯಂತ್ರಿತವಾಗಿ ವರ್ತಿಸಲು ಅವಕಾಶ ನೀಡಬಹುದೇ’ ಎಂದು ಪ್ರಶ್ನಿಸಿತು.ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು, ರಾಷ್ಟ್ರೀಯ ಔಷಧ ದರ ನಿಗದಿ ಪ್ರಾಧಿಕಾರವು (ಎನ್ಪಿಪಿಎ) ಸಂಪೂರ್ಣವಾಗಿ ನಿಷ್ಕ್ರಿಯಗೊಂಡ ಸಂಸ್ಥೆಯಂತೆ ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿತು.‘ಅಲ್ಲದೆ, ಇಡೀ ವ್ಯವಸ್ಥೆ ಔಷಧ ತಯಾರಕರಿಗೆ ಅನುಕೂಲ ಮಾಡಿಕೊಡುವ ರೀತಿಯಲ್ಲಿಯೇ ಏಕೆ ಕೆಲಸ ಮಾಡುತ್ತಿದೆ’ ಎಂದು ಪೀಠ ಕೇಂದ್ರವನ್ನು ಪ್ರಶ್ನಿಸಿತು.ಔಷಧಗಳ ಬೆಲೆಗಳ ಮೇಲೆ ಕಠಿಣ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ ಔಷಧಗಳಿಗೆ ಸಂಬಂಧಿಸಿದ ಇತರ ಎರಡು ಅರ್ಜಿಗಳ ಮೇಲಿನ ತೀರ್ಪನ್ನು ಪೀಠ ಕಾಯ್ದಿರಿಸಿತು. ಶೇ 16ಕ್ಕೆ ಏಕೆ ನಿಗದಿ ಮಾಡಬಾರದು ಕ್ಯಾನ್ಸರ್ ಚಿಕಿತ್ಸಾ ಔಷಧಗಳ ಮೇಲಿನ ವ್ಯಾಪಾರದ ಲಾಭಾಂಶವನ್ನು ಗರಿಷ್ಠ ಮಾರಾಟ ದರದ (ಎಂಆರ್ಪಿ) ಶೇ 30ಕ್ಕೆ ಮಿತಿಗೊಳಿಸಲು ನಿರ್ಧರಿಸಿರುವುದಾಗಿ ಕೇಂದ್ರ ಸರ್ಕಾರವು ನ್ಯಾಯಪೀಠಕ್ಕೆ ತಿಳಿಸಿತು. ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಎಲ್ಲ ಔಷಧಿಗಳಿಗೆ ಏಕರೂಪವಾಗಿ ಶೇ 16ರಷ್ಟು ಲಾಭಾಂಶವನ್ನು ಏಕೆ ನಿಗದಿ ಮಾಡಬಾರದು’ ಎಂದು ಪ್ರಶ್ನಿಸಿತು.ಕೇಂದ್ರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು, ‘ಇಡೀ ವ್ಯವಸ್ಥೆಯನ್ನು ನಿಯಂತ್ರಿಸುವುದು ಸೂಕ್ತವಲ್ಲ ಎಂಬುದು ಸರ್ಕಾರದ ಚಿಂತನೆಯಾಗಿದೆ’ ಎಂದು ಪೀಠಕ್ಕೆ ತಿಳಿಸಿದರು. ಆಗ ಮಧ್ಯ ಪ್ರವೇಶಿಸಿದ ಪೀಠ, ‘ಚಿಲ್ಲರೆ ವ್ಯಾಪಾರಿಗೆ ₹15ಕ್ಕೆ ದೊರೆಯುವ ಔಷಧವೊಂದರ ಎಂಆರ್ಪಿ ₹250 ಆಗಿದೆ ಎಂದರೆ ಏನರ್ಥ. ಈ ಲೂಟಿಗೆ ನೀವು ಯಾವ ಸಮರ್ಥನೆ ನೀಡುತ್ತೀರಿ? ಸರ್ಕಾರವೇ ಇದಕ್ಕೆಲ್ಲ ಅವಕಾಶ ನೀಡುತ್ತಿದೆ, ಸರ್ಕಾರದ ಕಣ್ಣೆದುರೇ ಇವೆಲ್ಲವೂ ನಡೆಯುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ ಪೀಠ, ‘ಈ ಔಷಧ ಮಾರುಕಟ್ಟೆಗೆ ಮಿತಿಮೀರಿ ವರ್ತಿಸಲು ಅವಕಾಶ ನೀಡಬೇಕೇ’ ಎಂದು ಕೇಳಿತು. ಆಗ ಭಾಟಿ ಅವರು, ಭಾರತದಲ್ಲಿ ಔಷಧಗಳ ಬೆಲೆಗಳು ವಿಶ್ವದಲ್ಲಿಯೇ ಅತ್ಯಂತ ಕಡಿಮೆಯಿವೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ಒಬ್ಬ ಔಷಧ ವಿತರಕರ ಪತ್ನಿ ಕ್ಯಾನ್ಸರ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಇತ್ತೀಚಿನ ಪ್ರಕರಣವೊಂದನ್ನು ಪ್ರಸ್ತಾಪಿಸಿ, ‘ಆ ಔಷಧ ವಿತರಕರಿಗೆ ₹11,000ಕ್ಕೆ ಲಭ್ಯವಿದ್ದ ಇಂಜೆಕ್ಷನ್ಗೆ ಆಸ್ಪತ್ರೆ ₹1.30 ಲಕ್ಷ ಶುಲ್ಕ ವಿಧಿಸಿತು’ ಎಂದು ಆಶ್ಚರ್ಯ ವ್ಯಕ್ತಪಡಿಸಿತು. ‘ಎಲ್ಲವೂ ಜೆನೆರಿಕ್ ಆಗಲಿ’ ‘ಔಷಧ ಬೆಲೆಯಲ್ಲಿ ಇಷ್ಟೊಂದು ವ್ಯತ್ಯಾಸ ಏಕೆ? ಈ ವ್ಯತ್ಯಾಸದ ಮೊತ್ತ ಎಲ್ಲಿಗೆ ಹೋಗುತ್ತದೆ’ ಎಂದು ಕೇಳಿದ ಪೀಠವು ‘ಪ್ರತಿ ಔಷಧವನ್ನೂ ಜೆನೆರಿಕ್ ಔಷಧ ಎಂದೇ ಪರಿಗಣಿಸಬೇಕು ಎಂದು ನಾವು ಬಯಸುತ್ತೇವೆ’ ಎಂದು ಹೇಳಿತು. ‘ಸಾರ್ವಜನಿಕರು ರಾಷ್ಟ್ರೀಯ ಔಷಧ ದರ ನಿಗದಿ ಪ್ರಾಧಿಕಾರದ ಮೂಲಕ ಎಂದಾದರೂ ತಮಗೆ ಅನುಕೂಲವಾಗುತ್ತದೆ ಎಂಬ ಹಗಲುಗನಸಿನಲ್ಲಿ ಜೀವನ ಸಾಗಿಸುತ್ತಿದ್ದಾರೆ’ ಎಂದು ಪೀಠ ಬೇಸರ ವ್ಯಕ್ತಪಡಿಸಿತು.ಇಷ್ಟು ಸಮಯ ಏಕೆ ಬೇಕಾಯಿತು? ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದ ಔಷಧಗಳ ಮೇಲಿನ ವ್ಯಾಪಾರದ ಲಾಭಾಂಶವನ್ನು ಗರಿಷ್ಠ ಮಾರಾಟ ದರದ (ಎಂಆರ್ಪಿ) ಶೇ 30ಕ್ಕೆ ಮಿತಿಗೊಳಿಸುವ ನಿರ್ಧಾರ ತೆಗೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಇಷ್ಟು ದೀರ್ಘ ಸಮಯ ಏಕೆ ಬೇಕಾಯಿತು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು. ‘ಈ ಕುರಿತು ನ್ಯಾಯಾಲಯ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ ಬಳಿಕವಷ್ಟೇ ನೀವು ಎಚ್ಚೆತ್ತುಕೊಂಡು ಈ ನಿರ್ಧಾರಕ್ಕೆ ಬಂದಿದ್ದೀರಿ’ ಎಂದು ಹೇಳಿತು. ಔಷಧ ಉದ್ಯಮದ ಬೆಳವಣಿಗೆ ಕುರಿತು ಭಾಟಿ ಅವರು ಪ್ರಸ್ತಾಪಿಸಿದಾಗ ‘ನೀವು ವಾಣಿಜ್ಯ ಮತ್ತು ಆರ್ಥಿಕ ನೀತಿ ಬಗ್ಗೆ ಹೇಳುತ್ತಿದ್ದೀರಿ. ರೋಗಿಗಳನ್ನು ವಾಣಿಜ್ಯದೊಂದಿಗೆ ತೂಗಬೇಡಿ’ ಎಂದು ಪೀಠ ಹೇಳಿತು.