ಸೈರಣೆ ಆಗದಿರಲಿ ಕನ್ನಡಿಗರ ದೌರ್ಬಲ್ಯ
‘ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳು ಸೇರಿದಂತೆ ಯಾವುದೇ ಖಾಸಗಿ ಸಂಸ್ಥೆಯು ಕನ್ನಡಿಗರನ್ನು ಉದ್ದೇಶ ಪೂರ್ವಕವಾಗಿ ಕಡೆಗಣಿಸಿರುವುದು ಕಂಡುಬಂದರೆ ಸುಮ್ಮನಿರುವುದಿಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ ಎಂಬ ವರದಿ (ಪ್ರ.ವಾ., ಅ.26) ಓದಿ ಒಂದು ಕ್ಷಣ ಖುಷಿಯಾದರೂ, ಮರುಕ್ಷಣದಲ್ಲೇ ಆ ಸಂತಸ ಮಾಯವಾಯಿತು. ಏಕೆಂದರೆ, ಇಂತಹ ಮಾತುಗಳನ್ನು ಕ

‘ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳು ಸೇರಿದಂತೆ ಯಾವುದೇ ಖಾಸಗಿ ಸಂಸ್ಥೆಯು ಕನ್ನಡಿಗರನ್ನು ಉದ್ದೇಶ ಪೂರ್ವಕವಾಗಿ ಕಡೆಗಣಿಸಿರುವುದು ಕಂಡುಬಂದರೆ ಸುಮ್ಮನಿರುವುದಿಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ ಎಂಬ ವರದಿ (ಪ್ರ.ವಾ., ಅ.26) ಓದಿ ಒಂದು ಕ್ಷಣ ಖುಷಿಯಾದರೂ, ಮರುಕ್ಷಣದಲ್ಲೇ ಆ ಸಂತಸ ಮಾಯವಾಯಿತು. ಏಕೆಂದರೆ, ಇಂತಹ ಮಾತುಗಳನ್ನು ಕೇಳಿ ಕೇಳಿ ಸಾಕಾಗಿದೆ. ಕನ್ನಡಿಗರಿಗೆ ಉದ್ಯೋಗಾವಕಾಶಗಳಿರಲಿ, ಬೆಂಗಳೂರೆಂಬ ಕನ್ನಡಿಗರ ಅರಸೊತ್ತಿಗೆಯ ಕೇಂದ್ರಸ್ಥಾನದಲ್ಲಿ ಕನ್ನಡ ಭಾಷೆಗೆ ಸ್ಥಾನಮಾನವೂ ಇಲ್ಲವಾಗಿದೆ.ಇತ್ತೀಚೆಗೆ ಎಂಜಿನಿಯರ್ ಮಹಿಳೆಯೊಬ್ಬರು ಮಗುವಿ ನೊಂದಿಗೆ ಮಾಲ್ ಒಂದಕ್ಕೆ ಹೋದಾಗ, ಅಲ್ಲಿದ್ದವರು ಹಿಂದಿಯಲ್ಲಿ ಮಾತನಾಡುತ್ತಾ ಈಕೆಯ ಕಡೆ ನೋಡಿದ್ದಾರೆ. ಕನ್ನಡತಿ ಆಂಗ್ಲ ಭಾಷೆಯಲ್ಲಿ ಪ್ರತಿಕ್ರಿಯಿಸಿದಾಗ, ಆತ ‘ನಿಮ್ಮ ಭಾಷೆ ಯಾವುದು?’ ಎಂದು ಪ್ರಶ್ನಿಸಿದನಂತೆ. ಈಕೆ ‘ಕನ್ನಡ’ ಎಂದಾಗ ಆತ, ಕನ್ನಡವನ್ನು ಹೀಗಳೆವಂತೆ ಪ್ರತಿಕ್ರಿಯಿಸಿದನಂತೆ. ಆತನ ದುರಹಂಕಾರದ ಮಾತಿಗೆ ಅವಾಕ್ಕಾದ ಮಹಿಳೆಗೆ ಏನು ಮಾಡಬೇಕೆಂದು ತೋಚದಾಗಿದೆ.ತನ್ನ ನೋವನ್ನು ಆ ಮಹಿಳೆಯು ನನ್ನೊಂದಿಗೆ ಹಂಚಿಕೊಂಡಾಗ, ‘ಯಾವ ಭಾಷೆಯೂ ಕೀಳಲ್ಲ. ಕನ್ನಡ ಎರಡು ಸಾವಿರ ವರ್ಷಗಳ ಇತಿಹಾಸವುಳ್ಳದ್ದು. ಆದರೆ, ಹಿಂದಿಗೆ ಬರೀ ಐದು ನೂರು ವರ್ಷಗಳ ಇತಿಹಾಸ ಇದೆ ಅಷ್ಟೇ’ ಎಂದು ಹೇಳಬೇಕಾಗಿತ್ತು ಎಂದೆ. ಅದನ್ನು ಒಪ್ಪದ ಅವರು, ‘ಹಾಗೆ ಹೇಳಿದರೆ ನನಗೂ ಆತನಿಗೂ ಏನು ವ್ಯತ್ಯಾಸ? ನಾನೂ ಹಿಂದಿಯನ್ನು ಕಡೆಗಣಿಸಿದ ಹಾಗೆ ಆಗುವುದಿಲ್ಲವೆ?’ ಎಂದರು. ಅವರ ಅನಿಸಿಕೆ ನನಗೆ ಒಪ್ಪಿಗೆಯಾಗಲಿಲ್ಲ. ಏಕೆಂದರೆ, ಕನ್ನಡಿಗರ ಈ ಅತಿ ಸೌಜನ್ಯವೇ ಕನ್ನಡೇತರರು ಕನ್ನಡ ಹಾಗೂ ಕನ್ನಡಿಗರನ್ನು ಕೀಳಾಗಿ ನೋಡುತ್ತಿರುವುದಕ್ಕೆ ಕಾರಣವಾಗಿದೆ.ಕೇರಳದಲ್ಲಿ ಯಾರಾದರೂ ಮಲಯಾಳ ಅಲ್ಲದ ಭಾಷೆಯಲ್ಲಿ ಮಾತನಾಡಿದರೆ, ಅವರು ಪ್ರತಿಕ್ರಿಯೆ ನೀಡುವುದಿಲ್ಲ.ತಮಿಳುನಾಡಿನಲ್ಲಿ ಹೋಗಿ ಅಲ್ಲಿನವರೊಂದಿಗೆ, ಇಂತಹ ಸ್ಥಳ ಎಲ್ಲಿ ಬರುತ್ತದೆ ಎಂದು ತಮಿಳೇತರ ಭಾಷೆಯಲ್ಲಿ ಪ್ರಶ್ನಿಸಿದರೆ ಅವರೂ ಉತ್ತರಿಸುವುದಿಲ್ಲ. ಆದರೆ, ಬೆಂಗಳೂರಿನ ಕನ್ನಡಿಗರೊಂದಿಗೆ ಯಾವುದೇ ಭಾಷೆಯಲ್ಲಿ, ‘ಮೆಜಿಸ್ಟಿಕ್ಗೆ ಯಾವ ಬಸ್ ಬರುತ್ತೆ?’ ಅಂತ ಕೇಳಿದರೆ ಸಾಕು, ಇಂತಹ ಬಸ್ ಎಂದು ಹೇಳುವುದಲ್ಲದೆ, ಆ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಹೋಗಿ, ಬಸ್ ಹತ್ತಿಸಿ ಹೋಗುವವರೂ ಇದ್ದಾರೆ.ಮತ್ತೊಂದು ವಿಡಿಯೊ ನೋಡಿದೆ. ಸಣ್ಣ ಕಾರ್ಖಾನೆಯೊಂದರ ಮಾಲೀಕ, ‘ಇಲ್ಲಿ ಯಾರೂ ಕನ್ನಡದಲ್ಲಿ ಮಾತನಾಡಬಾರದು’ ಎಂದು ಗಟ್ಟಿಯಾದ ಧ್ವನಿಯಲ್ಲಿ ಎಲ್ಲರಿಗೂ ಆದೇಶಿಸುತ್ತಿದ್ದಾನೆ. ಅಲ್ಲಿ ಕೆಲಸ ಮಾಡುವ ಕಾರ್ಮಿಕ, ‘ಸರ್, ಇದು ಕರ್ನಾಟಕ’ ಎಂದು ಪಿಸುಗುಟ್ಟಿದರೂ, ‘ಕನ್ನಡ, ಗಿನ್ನಡ ಇಲ್ಲ, ಹಿಂದಿ ಬಾರದೇ ಇದ್ದರೆ ಕೆಲಸ ಬಿಟ್ಟು ಹೊರಟುಹೋಗಿ’ ಎಂದು ಬೆದರಿಕೆ ಹಾಕುತ್ತಿದ್ದಾನೆ.ಕವಿರಾಜಮಾರ್ಗಕಾರ, ‘ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರಧರ್ಮಮುಮಂ, ಪರ ವಿಚಾರ ಮುಮಂ’ (ಬೇರೆ ಧರ್ಮ ಮತ್ತು ವಿಚಾರಗಳನ್ನು ಸಹಿಸಿಕೊಳ್ಳುವುದೇ ‘ಬಂಗಾರ’) ಎಂದಿದ್ದಾನೆ. ಆದರೆ, ಅದೇ ಕವಿರಾಜಮಾರ್ಗಕಾರ ಕನ್ನಡಿಗರನ್ನು ಕುರಿತು, ‘ಸುಭಟರ್ಕಳ್, ಚೆಲ್ವರ್ಕಳ್, ಅಭಿಜನರ್ಕಳ್, ಗುಣಿಗಳ್, ಅಭಿಮಾನಿಗಳ್, ಅತ್ಯುಗ್ರರ್, ಗಂಭೀರ ಚಿತ್ತರ್...’ ಎಂದೂ ಹೇಳಿದ್ದಾನೆ. ಹತ್ತನೆಯ ಶತಮಾನದ ಪಂಪ ಮಹಾಕವಿ, ‘ಕುಲಂ ಕುಲಮಲ್ತು, ಚಲಂ ಕುಲಂ, ಗುಣಂ ಕುಲಂ...’ ಎಂದು ಹೇಳುವ ಪದ್ಯದಲ್ಲಿ ‘ಅಭಿಮಾನಮೊಂದೆ ಕುಲಂ’ ಎಂದೂ ಕರ್ಣನ ಪಾತ್ರದ ಮೂಲಕ ಹೇಳಿಸಿದ್ದಾನೆ. ಆದ್ದರಿಂದ ನಾವು ಇಲ್ಲಿಂದಾಚೆಗೆ ಈ ‘ಸ್ವಾಭಿಮಾನ’ದ ಕೈಯನ್ನು ಹಿಡಿಯೋಣ. ಯಾರನ್ನೂ ಕೀಳಾಗಿ ನೋಡುವುದು ಬೇಡ ಮತ್ತು ನಮ್ಮನ್ನು ಕೀಳಾಗಿ ನೋಡುವುದಕ್ಕೆ ಯಾರನ್ನೂ ಬಿಡುವುದೂ ಬೇಡ.ಕನ್ನಡಿಗರ ಔದಾರ್ಯ, ಸೈರಣೆ, ಸೌಹಾರ್ದ, ಸ್ನೇಹಮಯ ಗುಣಗಳನ್ನು ಬಿಡದೆ ಅವುಗಳ ಜೊತೆಗೆ ಸ್ವಾಭಿಮಾನ, ಗಾಂಭೀರ್ಯ, ಘನತೆಗಳನ್ನೂ ರೂಢಿಸಿಕೊಳ್ಳಬೇಕಾಗಿದೆ; ಕೀಳರಿಮೆಯನ್ನು ಸಂಪೂರ್ಣವಾಗಿ ತೊರೆಯಬೇಕಾಗಿದೆ. ಕನ್ನಡದಲ್ಲಿ ಮಾತನಾಡಿದರೆ ಅವಮಾನ ಎಂಬ ತಪ್ಪು ತಿಳಿವಳಿಕೆಯನ್ನು ಬಿಟ್ಟು ತುಂಬು ಆತ್ಮವಿಶ್ವಾಸದಿಂದ ಕನ್ನಡದಲ್ಲಿ ಮಾತನಾಡುವುದಷ್ಟೇ ಅಲ್ಲದೆ, ಎಲ್ಲ ವ್ಯವಹಾರಗಳನ್ನೂ ನಾವು ಕನ್ನಡದಲ್ಲೇ ಮಾಡಬೇಕಾಗಿದೆ ಹಾಗೂ ಮಾಡಲು ಸಾಧ್ಯವಿದೆ. ಉದಾಹರಣೆಗೆ: ಬ್ಯಾಂಕುಗಳಲ್ಲಿನ ಆರ್.ಟಿ.ಜಿ.ಎಸ್. ಮುಂತಾದ ಯಾವುದೇ ಅರ್ಜಿಗಳು ಇಂಗ್ಲಿಷ್ ಭಾಷೆಯಲ್ಲಿ ಇದ್ದರೂ ನಾನು ಕನ್ನಡದಲ್ಲಿಯೇ ತುಂಬುತ್ತೇನೆ. ಇಂಥ ಅಭ್ಯಾಸವನ್ನು ಎಲ್ಲರೂ ರೂಢಿಸಿಕೊಳ್ಳಬೇಕಾಗಿದೆ. ಏಕೆಂದರೆ, ಕರ್ನಾಟಕದಲ್ಲಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಕಾನೂನು ಮಾಡಲಾಗಿದೆ.ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವಧಿಯಲ್ಲಿ ಸರ್ಕಾರ ರೂಪಿಸಿದ, ‘ಕರ್ನಾಟಕ ರಾಜ್ಯ ಕೈಗಾರಿಕೆ, ಕಾರ್ಖಾನೆ ಮತ್ತು ಇತರ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಮಸೂದೆ– 2024’ ಅನ್ನು ಆದಷ್ಟು ಬೇಗೆ ಕಾಯ್ದೆಯಾಗಿಸುವ ಮೂಲಕ, ಕನ್ನಡಿಗರಿಗೆ ಉದ್ಯೋಗ ನೀಡದ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಲೇಬೇಕಾಗಿದೆ. ಹಾಗೆ ಮಾಡಿದರೆ ಅವರು ಕರ್ನಾಟಕವನ್ನು ಬಿಟ್ಟು ಬೇರೆ ರಾಜ್ಯಗಳಿಗೆ ಹೋಗಿಬಿಡುತ್ತಾರೆ ಎಂಬ ಭಯ ಅನಗತ್ಯ. ಯಾವ ರಾಜ್ಯವೂ ತನ್ನ ಹಿತಾಸಕ್ತಿಯನ್ನು ಬಲಿಕೊಟ್ಟು ಇತರರನ್ನು ಪೋಷಿಸುವುದಿಲ್ಲ. ಕನ್ನಡವನ್ನು ಉಳಿಸಿಕೊಳ್ಳುವುದು ಕನ್ನಡಕ್ಕೆ ಮಾಡುವ ಉಪಕಾರವಲ್ಲ; ಬದಲಿಗೆ ನಮ್ಮ ಬದುಕನ್ನು ನಾವು ಕಾಪಾಡಿಕೊಂಡಂತೆ.