ಇ–20 ಇಂಧನ ಬಳಕೆಗೆ ವಿರೋಧ: ಹಣ ನೀಡಿ ನಡೆಸಿದ ಅಪ್ರಚಾರ ಎಂದ ನಿತಿನ್ ಗಡ್ಕರಿ
ನವದೆಹಲಿ: ಶೇ 20ರಷ್ಟು ಎಥೆನಾಲ್ ಮಿಶ್ರಿತ (ಇ–20) ಪೆಟ್ರೋಲ್ ಬಳಕೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವ್ಯಕ್ತವಾಗಿದ್ದ ಸಾರ್ವಜನಿಕ ಆಕ್ರೋಶವು ವಿರೋಧ ಪಕ್ಷಗಳು ಹಣ ನೀಡಿ ನಡೆಸಿದ ಅಪ್ರಚಾರ ಆಗಿತ್ತು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಆಕ್ರೋಶ ಹೊರಹಾಕಿದ್ದಾರೆ.ಭಾರತೀಯ ಉದ್ಯಮ ಒಕ್ಕೂಟ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ

ನವದೆಹಲಿ: ಶೇ 20ರಷ್ಟು ಎಥೆನಾಲ್ ಮಿಶ್ರಿತ (ಇ–20) ಪೆಟ್ರೋಲ್ ಬಳಕೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವ್ಯಕ್ತವಾಗಿದ್ದ ಸಾರ್ವಜನಿಕ ಆಕ್ರೋಶವು ವಿರೋಧ ಪಕ್ಷಗಳು ಹಣ ನೀಡಿ ನಡೆಸಿದ ಅಪ್ರಚಾರ ಆಗಿತ್ತು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಆಕ್ರೋಶ ಹೊರಹಾಕಿದ್ದಾರೆ.ಭಾರತೀಯ ಉದ್ಯಮ ಒಕ್ಕೂಟ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಚೆಗೆ ಕೇಂದ್ರ ಸರ್ಕಾರವು ಶೇಕಡ 100ರಷ್ಟು ಎಥೆನಾಲ್ನಲ್ಲಿ (E100) ಚಲಿಸಬಲ್ಲ ‘ಫ್ಲೆಕ್ಸ್-ಫ್ಯುಯೆಲ್’ ವಾಹನಗಳಿಗೆ ಅನುಮತಿ ನೀಡಲು ‘ಕೇಂದ್ರ ಮೋಟಾರು ವಾಹನಗಳ ನಿಯಮಾವಳಿ 1989’ಕ್ಕೆ ತಿದ್ದುಪಡಿ ತಂದಿದೆ ಎಂದು ಹೇಳಿದ್ದಾರೆ.‘ಪಳೆಯುಳಿಕೆ ಇಂಧನಗಳ ಆಮದನ್ನು ಕಡಿಮೆ ಮಾಡುವ ಮೂಲಕ ಭಾರತವು ವಿದೇಶಿ ವಿನಿಮಯ ಉಳಿಸಬಹುದು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.‘ಮೂರು ತಿಂಗಳ ಹಿಂದೆ ಇ–20 ಇಂಧನದ ವಿರುದ್ಧ ಭಾರಿ ಕೋಲಾಹಲ ಎಬ್ಬಿಸಲಾಯಿತು. ಆದರೆ, ಈಗ ಇ–20 ಇಂಧನದ ವಿರುದ್ಧದ ಆಕ್ರೋಶ ತಣ್ಣಗಾಗಿದೆ... ಇದು ಸಂಪೂರ್ಣವಾಗಿ ಹಣ ನೀಡಿ ನಡೆಸಲಾದ ಪ್ರಚಾರವಾಗಿತ್ತು’ ಎಂದು ಗಡ್ಕರಿ ಆರೋಪಿಸಿದ್ದಾರೆ.ಕಳೆದ ಮೂರು ವರ್ಷಗಳಿಂದ 20 ಕೋಟಿಗೂ ಹೆಚ್ಚು ದ್ವಿಚಕ್ರ ವಾಹನಗಳು ಮತ್ತು 3 ಕೋಟಿಗೂ ಹೆಚ್ಚು ಪೆಟ್ರೋಲ್ ಕಾರುಗಳು ಎಥೆನಾಲ್ ಮಿಶ್ರಿತ (E19-20) ಇಂಧನದಲ್ಲಿ ಚಲಿಸುತ್ತಿವೆ. ಆದರೆ, ಎಥೆನಾಲ್ ಮಿಶ್ರಣದಿಂದಾಗಿ ಎಂಜಿನ್ ವಿಫಲವಾಗಿದೆ ಅಥವಾ ವಾಹನಗಳು ಕೆಟ್ಟುಹೋಗಿವೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ ಎಂದೂ ಅವರು ಪ್ರತಿಪಾದಿಸಿದ್ದಾರೆ.ಇ–20 ಪೆಟ್ರೋಲ್ ಬಳಕೆ ಕುರಿತು ವಿರೋಧ ಪಕ್ಷಗಳು ಮತ್ತು ಕೆಲವು ಗ್ರಾಹಕ ಸಂಘಟನೆಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. 20 ಪ್ರತಿಶತ ಎಥೆನಾಲ್ ಮಿಶ್ರಣಕ್ಕೆ ವಿನ್ಯಾಸಗೊಳಿಸದ ಹಳೆಯ ವಾಹನಗಳ ಎಂಜಿನ್ಗಳ ಮೇಲೆ ಇದು ದುಷ್ಪರಿಣಾಮ ಬೀರುತ್ತದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದರು.2001ರಲ್ಲಿ ಭಾರತದಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಆರಂಭವಾಗಿ, 2006ರಲ್ಲಿ E5 ಪರಿಚಯಿಸಲ್ಪಟ್ಟಿತು. 2013-14ರವರೆಗೆ ಮಿಶ್ರಣದ ಪ್ರಮಾಣವು ಶೇಕಡ 1.53ರಷ್ಟಿತ್ತು. ಆದರೆ, ಅಗತ್ಯ ಉತ್ಪಾದನಾ ಸಾಮರ್ಥ್ಯ, ಮೂಲಸೌಕರ್ಯ ಮತ್ತು ನಿಯಂತ್ರಣ ಚೌಕಟ್ಟನ್ನು ಸೃಷ್ಟಿಸಿದ ನಂತರ ಅದನ್ನು ಹಂತ ಹಂತವಾಗಿ ಹೆಚ್ಚಿಸಲಾಗಿದೆ.ಹೆದ್ದಾರಿ ಗುಣಮಟ್ಟದಲ್ಲಿ ರಾಜಿ ಇಲ್ಲ: ಸಾಮಾಜಿಕ ಮಾಧ್ಯಮಗಳಲ್ಲಿ ಕಳಪೆ ಹೆದ್ದಾರಿಗಳ ಕುರಿತು ಬಂದ ದೂರುಗಳನ್ನು ಗಮನಿಸಿ, ಇತ್ತೀಚೆಗೆ 700-800 ಯೋಜನೆಗಳ ಪರಿಶೀಲನೆ ನಡೆಸಿದ್ದೇನೆ. ಹೆದ್ದಾರಿಗಳ ಗುಣಮಟ್ಟದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ಹೆದ್ದಾರಿ ಬಳಕೆದಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಗಡ್ಕರಿ ಭರವಸೆ ನೀಡಿದ್ದಾರೆ.ಪ್ರಯಾಣದ ಸಮಯ ಕಡಿತ: ಮುಂದಿನ ಎರಡು ತಿಂಗಳಲ್ಲಿ ಪ್ರಸ್ತುತ ಹೆದ್ದಾರಿ ಯೋಜನೆ ಉದ್ಘಾಟನೆಗೊಂಡ ನಂತರ ದೆಹಲಿಯಿಂದ ಹರಿದ್ವಾರಕ್ಕೆ ಪ್ರಯಾಣಿಸಲು ಕೇವಲ 90 ನಿಮಿಷಗಳು ಸಾಕು. ಚಾರ್ ಧಾಮ್ ಯೋಜನೆಯ ಶೇಕಡ 80-85ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಉತ್ತರಾಖಂಡದ ಧಾರ್ಮಿಕ ಸ್ಥಳಗಳಿಗೆ ಸಾಗುವ ವಾಹನ ಸಂಚಾರ ಮೂರು ಪಟ್ಟು ಹೆಚ್ಚಾಗಿದೆ. ಇದು ಪ್ರವಾಸೋದ್ಯಮ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತಿದೆ ಎಂದಿದ್ದಾರೆ.ಮೂಲಸೌಕರ್ಯ ಅಭಿವೃದ್ಧಿಯು ಭಾರತೀಯ ಆರ್ಥಿಕತೆಯ ಬೆನ್ನೆಲುಬು. ನಾವು ಮೂಲಸೌಕರ್ಯಕ್ಕಾಗಿ ₹100 ವೆಚ್ಚ ಮಾಡಿದರೆ, ಆರ್ಥಿಕತೆಯ ಮೇಲಿನ ಅದರ ಒಟ್ಟು ಪ್ರಭಾವವು ₹325 ಆಗಿರುತ್ತದೆ ಮತ್ತು ಜಿಡಿಪಿ ಹೆಚ್ಚಾಗುತ್ತದೆ ಎಂದು ವಿವರಿಸಿದ್ದಾರೆ.ಹೆದ್ದಾರಿ ಜಾಲದ ಪ್ರಗತಿ: 2014ರಲ್ಲಿ 91,287 ಕಿ.ಮೀ ಇದ್ದ ಭಾರತದ ಒಟ್ಟು ರಾಷ್ಟ್ರೀಯ ಹೆದ್ದಾರಿ ಜಾಲವು 2026ರ ವೇಳೆಗೆ ಶೇಕಡ 1.6 ಪಟ್ಟು ಹೆಚ್ಚಾಗಿ 1.46 ಲಕ್ಷ ಕಿ.ಮೀಗೆ ತಲುಪಿದೆ. 4-ಲೇನ್ ಮತ್ತು ಅದಕ್ಕಿಂತ ಹೆಚ್ಚಿನ ರಸ್ತೆ ಜಾಲವು 18,278 ಕಿ.ಮೀನಿಂದ ಶೇ 2.6 ಪಟ್ಟು ಹೆಚ್ಚಾಗಿ 49,160 ಕಿ.ಮೀಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಹೈ-ಸ್ಪೀಡ್ ಕಾರಿಡಾರ್ ಜಾಲವು ಶೇ 12 ಪಟ್ಟು ಹೆಚ್ಚಾಗಿ 6,788 ಕಿ.ಮೀಗೆ ತಲುಪಿದೆ ಎಂದು ಗಡ್ಕರಿ ಮಾಹಿತಿ ನೀಡಿದ್ದಾರೆ.‘ಇ100’ ವಾಹನಕ್ಕೆ ಅವಕಾಶಕೇಂದ್ರ ಮೋಟಾರು ವಾಹನಗಳ ನಿಯಮದಲ್ಲಿ ತಂದಿರುವ ಬದಲಾವಣೆಗಳನ್ನು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಸೋಮವಾರ ಅಧಿಸೂಚನೆಯಲ್ಲಿ ಪ್ರಕಟಿಸಿದ್ದು, ‘ಇ100’ವರೆಗಿನ ಇಂಧನವನ್ನು (ಸಂಪೂರ್ಣವಾಗಿ ಎಥೆನಾಲ್) ಬಳಸುವ ವಾಹನಗಳಿಗೆ ಅವಕಾಶ ಕಲ್ಪಿಸಿದೆ.ಪೆಟ್ರೋಲ್ನಲ್ಲಿ ಶೇ 20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಇರುವ ಅಥವಾ ಶೇ 100ರಷ್ಟು ಎಥೆನಾಲ್ ಇರುವ ಇಂಧನದ ಬಳಕೆಯು ಅಂತಹ ಇಂಧನಕ್ಕಾಗಿ ವಿನ್ಯಾಸಗೊಂಡಿರುವ ವಾಹನಗಳಿಗೆ ಸೀಮಿತ, ಇತರ ವಾಹನಗಳಿಗೆ ಅದು ಅನ್ವಯವಾಗುವುದಿಲ್ಲ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಇ20 (ಶೇ 20ರಷ್ಟು ಎಥೆನಾಲ್ ಮಿಶ್ರಣ ಇರುವ ಪೆಟ್ರೋಲ್) ಇಂಧನ ಬಳಸುವ ವಾಹನಗಳು ಇ85 ಅಥವಾ ಇ100 ಇಂಧನ ಬಳಸಲು ಆಗುವುದಿಲ್ಲ.ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಸಂಪೂರ್ಣವಾಗಿ ಎಥೆನಾಲ್ ಬಳಸಿ ಚಲಿಸುವ (ಫ್ಲೆಕ್ಸ್ ಫ್ಯುಯೆಲ್) ವ್ಯಾಗನ್–ಆರ್ ಮಾದರಿಯನ್ನು ಜೂನ್ ತಿಂಗಳಲ್ಲಿ ಬಿಡುಗಡೆ ಮಾಡಿದೆ. ಈ ಕಾರು ಇ20 ಹಾಗೂ ಅದಕ್ಕಿಂತ ಹೆಚ್ಚಿನ ಯಾವುದೇ ಪ್ರಮಾಣದ ಎಥೆನಾಲ್ ಮಿಶ್ರಣದ ಪೆಟ್ರೋಲ್ ಬಳಸಿ ಚಲಿಸಬಲ್ಲದು.ಟೊಯೊಟ, ಟಾಟಾ ಮೋಟಾರ್ಸ್, ಹುಂಡೈ ಸೇರಿದಂತೆ ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿಗಳು ಫ್ಲೆಕ್ಸ್ ಫ್ಯುಯೆಲ್ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿವೆ.