ದಾವಣಗೆರೆ ವ್ಯಕ್ತಿಯ ಅಂಗಾಂಗ ದಾನ: 6 ಜನರ ಬದುಕಿಗೆ ಬೆಳಕು
ದಾವಣಗೆರೆ: ಮಿದುಳು ನಿಷ್ಕ್ರಿಯಗೊಂಡಿದ್ದ (ಬ್ರೇನ್ ಡೆಡ್) ವ್ಯಕ್ತಿಯೊಬ್ಬರ ಅಂಗಾಂಗಗಳನ್ನು ಅವರ ಕುಟುಂಬದವರು ದಾನ ಮಾಡುವ ಮೂಲಕ 6 ಜನರ ಬದುಕಿಗೆ ‘ಬೆಳಕು’ ನೀಡಿದ್ದಾರೆ. ನಗರದ ಆಂಜನೇಯ ಬಡಾವಣೆಯ ನಿವಾಸಿಯಾಗಿದ್ದ ನರೇಶ್ ಎಚ್.ವಿ. (48) ಅವರು ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.ಕೆಲವು ತಿಂಗಳ ಹಿಂದೆ ಪಾರ್ಶ್ವವಾಯುವಿಗೆ ಒಳಗಾಗಿದ್ದ ನರೇಶ್ ಅವರನ್ನು ನಿಮ್

ದಾವಣಗೆರೆ: ಮಿದುಳು ನಿಷ್ಕ್ರಿಯಗೊಂಡಿದ್ದ (ಬ್ರೇನ್ ಡೆಡ್) ವ್ಯಕ್ತಿಯೊಬ್ಬರ ಅಂಗಾಂಗಗಳನ್ನು ಅವರ ಕುಟುಂಬದವರು ದಾನ ಮಾಡುವ ಮೂಲಕ 6 ಜನರ ಬದುಕಿಗೆ ‘ಬೆಳಕು’ ನೀಡಿದ್ದಾರೆ. ನಗರದ ಆಂಜನೇಯ ಬಡಾವಣೆಯ ನಿವಾಸಿಯಾಗಿದ್ದ ನರೇಶ್ ಎಚ್.ವಿ. (48) ಅವರು ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.ಕೆಲವು ತಿಂಗಳ ಹಿಂದೆ ಪಾರ್ಶ್ವವಾಯುವಿಗೆ ಒಳಗಾಗಿದ್ದ ನರೇಶ್ ಅವರನ್ನು ನಿಮ್ಹಾನ್ಸ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚೇತರಿಸಿಕೊಂಡ ಬಳಿಕ ಮನೆಗೆ ಕರೆದುಕೊಂಡು ಬರಲಾಗಿತ್ತು. ಕೆಲ ದಿನಗಳ ಬಳಿಕ ಮತ್ತೊಮ್ಮೆ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಅವರನ್ನು ಮತ್ತೆ ನಿಮ್ಹಾನ್ಸ್ಗೆ ದಾಖಲಿಸಲಾಗಿತ್ತು.ಮಿದುಳಿನ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವ ಜೊತೆಗೆ ಮಿದುಳಿನೊಳಗೆ ರಕ್ತಸ್ರಾವವಾಗಿದ್ದರಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಶಸ್ತ್ರಚಿಕಿತ್ಸೆ ಸೇರಿದಂತೆ ಹಲವು ಪ್ರಯತ್ನಗಳ ಹೊರತಾಗಿಯೂ ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿತ್ತು.ಅಕ್ಟೋಬರ್ 23ರಂದು ಮಿದುಳು ನಿಷ್ಕ್ರಿಯಗೊಂಡು ಅವರು ಮೃತಪಟ್ಟರು. ಆಸ್ಪತ್ರೆಯ ವೈದ್ಯರು ಕುಟುಂಬದವರಿಗೆ ಅಂಗಾಂಗ ದಾನದ ಮಹತ್ವದ ಬಗ್ಗೆ ವಿವರಿಸಿದ್ದರು. ಅದಕ್ಕೆ ಅವರು ಒಪ್ಪಿದ ಬಳಿಕ ಅ. 25ರಂದು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಅಂಗಾಂಗಗಳನ್ನು ಪಡೆದಿದ್ದಾರೆ.ಬೆಂಗಳೂರಿನ ಐಎನ್ಯು ಆಸ್ಪತ್ರೆಗೆ ಎರಡು ಮೂತ್ರಪಿಂಡ (ಕಿಡ್ನಿ), ಆಸ್ಟರ್ ಆಸ್ಪತ್ರೆಗೆ ಯಕೃತ್ (ಲಿವರ್), ಆಸ್ಟರ್ ಸಿಎಂಐ ಆಸ್ಪತ್ರೆಗೆ ಹೃದಯ, ಮಿಂಟೋ ಆಸ್ಪತ್ರೆಗೆ ಕಣ್ಣುಗಳನ್ನು ದಾನ ಮಾಡಲಾಗಿದ್ದು, ಅಂಗಾಂಗಗಳನ್ನು ಕಸಿ ಮಾಡಿಸಿಕೊಳ್ಳಲು ಕಾಯುತ್ತಿದ್ದ ರೋಗಿಗಳಿಗೆ ಹಂಚಿಕೆ ಮಾಡಲಾಗಿದೆ.ಹುಟ್ಟೂರು ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ರಾಗಿಮಸಲವಾಡ ಗ್ರಾಮದಲ್ಲಿ ನರೇಶ್ ಅಂತ್ಯಕ್ರಿಯೆ ಸೋಮವಾರ ನಡೆಯಿತು. ಇವರಿಗೆ ಪತ್ನಿ, 12 ವರ್ಷದ ಮಗ ಇದ್ದಾರೆ.261027-43-2090265123