ಇಸ್ರೇಲ್ ಚುನಾವಣೆ: ದಾಖಲೆ ಮತದಾನ, ನವೆಂಬರ್ 4ರಂದು ಫಲಿತಾಂಶ ಪ್ರಕಟ
ಜೆರುಸಲೇಂ: ಇಸ್ರೇಲ್ನಲ್ಲಿ ಸಾರ್ವತ್ರಿಕ ಚುನಾವಣೆಯು ಮಂಗಳವಾರ ನಡೆದಿದ್ದು, ಮಧ್ಯಾಹ್ನ 2 ಗಂಟೆಯ ವೇಳೆಗೆ ಶೇ 45ರಷ್ಟು ಮತದಾನವಾಗಿದೆ. ಇದು 1973ರ ಚುನಾವಣೆಯ ನಂತರ ದಾಖಲಾದ ಅತಿ ಹೆಚ್ಚು ಮತದಾನವಾಗಿದೆ.ಇದೇ ವೇಳೆ, ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಪ್ರತಿಸ್ಪರ್ಧಿ, ಮಾಜಿ ಸೇನಾ ಮುಖ್ಯಸ್ಥ ಗಡಿ ಐಸೆನ್ಕೋಟ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎಂದು ಸಮೀಕ್ಷ

ಜೆರುಸಲೇಂ: ಇಸ್ರೇಲ್ನಲ್ಲಿ ಸಾರ್ವತ್ರಿಕ ಚುನಾವಣೆಯು ಮಂಗಳವಾರ ನಡೆದಿದ್ದು, ಮಧ್ಯಾಹ್ನ 2 ಗಂಟೆಯ ವೇಳೆಗೆ ಶೇ 45ರಷ್ಟು ಮತದಾನವಾಗಿದೆ. ಇದು 1973ರ ಚುನಾವಣೆಯ ನಂತರ ದಾಖಲಾದ ಅತಿ ಹೆಚ್ಚು ಮತದಾನವಾಗಿದೆ.ಇದೇ ವೇಳೆ, ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಪ್ರತಿಸ್ಪರ್ಧಿ, ಮಾಜಿ ಸೇನಾ ಮುಖ್ಯಸ್ಥ ಗಡಿ ಐಸೆನ್ಕೋಟ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎಂದು ಸಮೀಕ್ಷೆಗಳು ಹೇಳಿವೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ರಾತ್ರಿ 10 ಗಂಟೆವರೆಗೆ ನಡೆದಿದೆ. ದೇಶದಾದ್ಯಂತ 12,018 ಮತದಾನ ಕೇಂದ್ರಗಳನ್ನು ಸ್ಥಾಪಿಸಿದ್ದು, 73.32 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹತೆ ಪಡೆದಿದ್ದಾರೆ.ಇಸ್ರೇಲ್ನಲ್ಲಿ ಅತಿ ದೀರ್ಘಾವಧಿಗೆ ಪ್ರಧಾನಿಯಾಗಿ ಕಾರ್ಯನಿರ್ವಹಿಸಿರುವ ನೆತನ್ಯಾಹು ಮತ್ತು ಅವರ ಪತ್ನಿ ಸಾರಾ ಅವರು ಜೆರುಸಲೇಂನ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಿದ್ದಾರೆ.ಅಧಿಕೃತ ಫಲಿತಾಂಶ ನವೆಂಬರ್ 4ರಂದು ಪ್ರಕಟವಾಗಲಿದೆ. ಆದರೆ, ಚುನಾವಣೆಯ ಫಲಿತಾಂಶದ ಸ್ಥೂಲ ಚಿತ್ರಣವು ಬುಧವಾರದ ವೇಳೆಗೆ ಹೊರಹೊಮ್ಮುವ ನಿರೀಕ್ಷೆಯಿದೆ.‘ಅರಬ್ ಪಕ್ಷಗಳ ಸರ್ಕಾರವನ್ನು ತಪ್ಪಿಸಿ’: ‘ದಕ್ಷಿಣದ ಅರಬ್ ಮತದಾರರು ಮತಗಟ್ಟೆಗಳತ್ತ ಧಾವಿಸುತ್ತಿದ್ದಾರೆ. ಹೀಗಾಗಿ, ನೀವು ಹೊರಬಂದು ಮತ ಚಲಾಯಿಸಲೇಬೇಕು. ಅರಬ್ ಪಕ್ಷಗಳ ಸರ್ಕಾರ ರಚನೆಯಾಗುವುದನ್ನು ತಪ್ಪಿಸಬೇಕು’ ಎಂದು ನೆತನ್ಯಾಹು ಅವರು ವಿಡಿಯೊ ಸಂದೇಶದಲ್ಲಿ ತಮ್ಮ ‘ಲಿಕುಡ್’ ಪಕ್ಷದ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ. ಇದು 2015ರ ಚುನಾವಣೆಯಲ್ಲಿ ಅವರು ಯಶಸ್ವಿಯಾಗಿ ಬಳಸಿದ್ದ ತಂತ್ರದ ಪುನರಾವರ್ತನೆಯಂತೆ ಕಾಣುತ್ತಿದೆ.ಜೆರುಸಲೇಂನ ಮತಗಟ್ಟೆಯಲ್ಲಿ ಚುನಾವಣಾ ಅಧಿಕಾರಿಯೊಬ್ಬರು ಮತದಾರರ ಪಟ್ಟಿಯನ್ನು ಪರಿಶೀಲಿಸಿದರು –ಎಎಫ್ಪಿ ಚಿತ್ರ ನೆತನ್ಯಾಹು ಐಸೆನ್ಕೋಟ್ ನಡುವೆ ತೀವ್ರ ಪೈಪೋಟಿ ನೆತನ್ಯಾಹು ಅವರ ‘ಲಿಕುಡ್’ ಪಕ್ಷ ಮತ್ತು ಐಸೆನ್ಕೋಟ್ ನೇತೃತ್ವದ ‘ಯಾಶರ್’ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. 120 ಸದಸ್ಯ ಸ್ಥಾನಗಳನ್ನು ಹೊಂದಿರುವ ಇಸ್ರೇಲ್ ಸಂಸತ್ನಲ್ಲಿ ಯಾವುದೇ ಪಕ್ಷಕ್ಕೂ ಬಹುಮತದ ಖಾತರಿ ಇಲ್ಲ. 77 ವರ್ಷದ ನೆತನ್ಯಾಹು ಅವರು ಮೂರು ವರ್ಷಗಳ ಯುದ್ಧ ಮತ್ತು 2023ರ ಅಕ್ಟೋಬರ್ 7ರ ದಾಳಿಯ ಹೊಣೆಗಾರಿಕೆಗೆ ಹೆಚ್ಚುತ್ತಿರುವ ಒತ್ತಡಗಳ ನಂತರವೂ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಮೊರಾಕನ್ ಯಹೂದಿ ಮೂಲದ ಕುಟುಂಬಕ್ಕೆ ಸೇರಿದ ಐಸೆನ್ಕೋಟ್ ಪ್ರಬಲ ಪ್ರತಿಸ್ಪರ್ಧಿಯಾಗಿದ್ದಾರೆ. ಇನ್ನೊಂದೆಡೆ ಮಾಜಿ ಪ್ರಧಾನಿ ನಫ್ತಾಲಿ ಬೆನೆಟ್ ಅವರು ಯಾಯಿರ್ ಲ್ಯಾಪಿಡ್ ಅವರೊಂದಿಗೆ ಪ್ರತ್ಯೇಕ ವಿರೋಧ ಪಕ್ಷದ ಮೈತ್ರಿಯ ನೇತೃತ್ವ ವಹಿಸಿದ್ದಾರೆ. 66 ವರ್ಷದ ಐಸನ್ಕೋಟ್ ಯುದ್ಧದ ಸಮಯದಲ್ಲಿ ಅನುಭವಿಸಿದ ವೈಯಕ್ತಿಕ ನಷ್ಟಗಳಿಗಾಗಿ ಜನರ ಸಹಾನುಭೂತಿ ಗಳಿಸಿದ್ದಾರೆ. ಗಾಜಾದಲ್ಲಿ ನಡೆದ ಸಂಘರ್ಷದ ವೇಳೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಅವರ ಮಗ ಮತ್ತು ಇಬ್ಬರು ಸೋದರಸಂಬಂಧಿಗಳು ಮೃತಪಟ್ಟಿದ್ದರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚುನಾವಣೆಗೂ ಮುನ್ನ ನೆತನ್ಯಾಹು ಅವರನ್ನು ಸಾರ್ವಜನಿಕವಾಗಿ ಬೆಂಬಲಿಸಿದ್ದರು. ನೆತನ್ಯಾಹು ಅವರಿಗೆ ಮತ ಹಾಕುವಂತೆ ಭಾನುವಾರವೂ ಮನವಿ ಮಾಡಿದ್ದರು. ಚುನಾವಣಾ ಅಕ್ರಮ: ಆರೋಪ ‘ಮತಪತ್ರಗಳ ನಾಪತ್ತೆ ವಿರೂಪಗೊಳಿಸುವಿಕೆ ಮತದಾನದಲ್ಲಿ ಹಸ್ತಕ್ಷೇಪ ಮಾಡಲು ಯತ್ನ ಸೇರಿದಂತೆ ಹಲವು ಅಕ್ರಮಗಳು ನಡೆದಿವೆ’ ಎಂದು ಐಸನ್ಕೋಟ್ ನೇತೃತ್ವದ ‘ಯಾಶರ್’ ಮತ್ತು ಮಾಜಿ ಪ್ರಧಾನಿ ನಫ್ತಾಲಿ ಬೆನೆಟ್ ನೇತೃತ್ವದ ‘ಬಿಯಾಚಾದ್’ ಸೇರಿದಂತೆ ಹಲವು ಪಕ್ಷಗಳು ಆರೋಪಿಸಿವೆ ಎಂದು ‘ದಿ ಟೈಮ್ಸ್ ಆಫ್ ಇಸ್ರೇಲ್’ ವರದಿ ಮಾಡಿದೆ. ಆದರೆ ಈ ಆರೋಪವನ್ನು ಕೇಂದ್ರ ಚುನಾವಣಾ ಸಮಿತಿ ನಿರಾಕರಿಸಿದೆ.