ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ: ಶಾಸಕ ಕೆ. ವೆಂಕಟೇಶ್
ಪಿರಿಯಾಪಟ್ಟಣ: ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತಾಗಬೇಕಾದರೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಶಾಸಕ ಕೆ. ವೆಂಕಟೇಶ್ ತಿಳಿಸಿದರು.ತಾಲ್ಲೂಕಿನ ಸುಂಡವಾಳು ಗ್ರಾಮದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಸಿಎಸ್ಆರ್ ನಿಧಿಯಡಿ ₹2 ಕೋಟಿ ವೆಚ್ಚದಲ್ಲಿ ಸರ್ಕಾರಿ ಪ್ರೌಢಶಾಲೆಯ ಕೊಠಡಿಗಳು, ಶೌಚಾಲಯ ಹಾಗೂ ಅಡುಗೆಮನೆ ನಿರ್ಮಾಣ ಕಾಮಗಾ

ಪಿರಿಯಾಪಟ್ಟಣ: ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತಾಗಬೇಕಾದರೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಶಾಸಕ ಕೆ. ವೆಂಕಟೇಶ್ ತಿಳಿಸಿದರು.ತಾಲ್ಲೂಕಿನ ಸುಂಡವಾಳು ಗ್ರಾಮದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಸಿಎಸ್ಆರ್ ನಿಧಿಯಡಿ ₹2 ಕೋಟಿ ವೆಚ್ಚದಲ್ಲಿ ಸರ್ಕಾರಿ ಪ್ರೌಢಶಾಲೆಯ ಕೊಠಡಿಗಳು, ಶೌಚಾಲಯ ಹಾಗೂ ಅಡುಗೆಮನೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವುದರ ಜೊತೆಗೆ ಶಿಕ್ಷಕರು ಗುಣಾತ್ಮಕ ಶಿಕ್ಷಣ ನೀಡಿದಾಗ ಮಾತ್ರ ಸರ್ಕಾರಿ ಶಾಲೆಗಳ ಉಳಿವು ಸಾಧ್ಯ ಎಂದು ಹೇಳಿದರು.ಟೊಯೋಟಾದಂತಹ ದೊಡ್ಡ ಕಂಪನಿಗಳು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ನೆರವು ನೀಡುತ್ತಿರುವುದು ಶ್ಲಾಘನೀಯ. ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುವವರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಕೇವಲ ಶಾಲೆಗಳನ್ನು ಆರಂಭಿಸಿದರೆ ಸಾಲದು, ಅಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಈ ಹಿಂದೆ ಹಾರನಹಳ್ಳಿಯಲ್ಲಿ ಪಿಯು ಕಾಲೇಜು ಆರಂಭಿಸಲು ಅನುದಾನ ನೀಡಲಾಗಿತ್ತು. ಆದರೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಕಾಲೇಜನ್ನು ತಾಲ್ಲೂಕಿನ ದೊಡ್ಡ ಗ್ರಾಮವಾದ ಕಂಪಲಾಪುರಕ್ಕೆ ಸ್ಥಳಾಂತರಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸಹಾಯಕರಾಗಿದ್ದ ಪಿಡಿಒ ಪ್ರದೀಪ್ ಕುಮಾರ್ ಅವರು ತಮ್ಮ ಸ್ವಂತ ಗ್ರಾಮವಾದ್ದರಿಂದ ವಿಶೇಷ ಪ್ರಯತ್ನದಿಂದ, ಸಿದ್ದರಾಮಯ್ಯ, ಯತೀಂದ್ರ ಸಿದ್ದರಾಮಯ್ಯ ಹಾಗೂ ತಮ್ಮ ಸಹಕಾರದೊಂದಿಗೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಸಿಎಸ್ಆರ್ ನಿಧಿ ದೊರೆತಿದೆ. ಇದರಿಂದ ಸುಂಡವಾಳು ಗ್ರಾಮದಲ್ಲಿ ಹತ್ತು ಕೊಠಡಿಗಳು, ಶೌಚಾಲಯ ಮತ್ತು ಅಡುಗೆಮನೆ ಸೇರಿದಂತೆ ಅಗತ್ಯ ಸೌಲಭ್ಯಗಳ ನಿರ್ಮಾಣಕ್ಕೆ ನೆರವಾಗಿರುವುದು ಸಂತಸದ ವಿಷಯ ಎಂದರು.ಪ್ರದೀಪ್ ಕುಮಾರ್ ಮಾತನಾಡಿ, ತಮ್ಮ ಹುಟ್ಟೂರಿನ ಮಕ್ಕಳಿಗೆ ಸ್ಥಳೀಯವಾಗಿಯೇ ಪ್ರೌಢಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಈ ಯೋಜನೆಗೆ ಪ್ರಯತ್ನಿಸಲಾಯಿತು. ಗ್ರಾಮದಿಂದ ಮಕ್ಕಳು ಪ್ರೌಢಶಿಕ್ಷಣಕ್ಕಾಗಿ ದೂರದ ಊರುಗಳಿಗೆ ತೆರಳಬೇಕಾಗಿದ್ದ ಸಮಸ್ಯೆಯನ್ನು ಮನಗಂಡು, ಯತೀಂದ್ರ ಸಿದ್ದರಾಮಯ್ಯ ಅವರ ಸಹಕಾರದೊಂದಿಗೆ ಟೊಯೋಟಾ ಕಂಪನಿಯ ಸಿಎಸ್ಆರ್ ಅನುದಾನ ಪಡೆಯಲು ಶ್ರಮಿಸಲಾಯಿತು. ಗ್ರಾಮದ ಅಭಿವೃದ್ಧಿಗೆ ಸಹಕರಿಸಿದ ಹಿರಿಯರು, ಗ್ರಾಮಸ್ಥರು ಹಾಗೂ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.ತಾಲ್ಲೂಕು ಪಂಚಾಯಿತಿ ಇಒ ಸುನಿಲ್ ಕುಮಾರ್, ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆ ಸಹಕಾರ ಮಹಾಮಂಡಳದ ನಿರ್ದೇಶಕ ಎಸ್.ಬಿ. ಮಹದೇವ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕ ಅರುಣ್ ಕುಮಾರ್, ಐಟಿಸಿ ಕಂಪನಿಯ ವ್ಯವಸ್ಥಾಪಕ ಪ್ರವೀಣ್ ಕುಮಾರ್, ಮಾರಾಟ ವ್ಯವಸ್ಥಾಪಕ ಚೆನ್ನವೀರೇಶ್, ತಾ. ಪಂ. ಮಾಜಿ ಸದಸ್ಯ ಆರ್.ಎಸ್. ಮಹದೇವ್, ಯಜಮಾನ್ ಮಹದೇವ, ಆರ್.ಟಿ. ರೇವಣ್ಣ, ಡಿ.ಟಿ. ಸ್ವಾಮಿ, ಎಸ್ಡಿಎಂಸಿ ಅಧ್ಯಕ್ಷ ಸುರೇಶ್, ಮುಖ್ಯ ಶಿಕ್ಷಕಿ ಪುಷ್ಪಾವತಿ, ಸತ್ಯನಾರಾಯಣ, ಕುಮಾರ್, ಎಸ್ಡಿಎಂಸಿ ಸದಸ್ಯರು, ಶಿಕ್ಷಕರು ಹಾಗೂ ಗ್ರಾಮಸ್ಥರು ಇದ್ದರು.261027-38-847415651