ಮೂಡಲಗಿ | ಎಂಎಸ್ಪಿ ನಿಗದಿಗೆ ಆಗ್ರಹ: ಸಕ್ಕರೆ ಗೋದಾಮಿಗೆ ಬೀಗ ಹಾಕಿದ ರೈತರು
ಮೂಡಲಗಿ (ಬೆಳಗಾವಿ ಜಿಲ್ಲೆ): ಸಕ್ಕರೆಗೆ ಕನಿಷ್ಠ ಮಾರಾಟ ದರ (ಎಂಎಸ್ಪಿ) ನಿಗದಿ ಆಗುವವರೆಗೆ ಸಕ್ಕರೆ ಮಾರಾಟ ಮಾಡಬಾರದು ಎಂದು ಆಗ್ರಹಿಸಿ, ರಾಜ್ಯ ರೈತ ಸಂಘದ ಮುಖಂಡರು ಬುಧವಾರ ವಿವಿಧ ಗೋದಾಮುಗಳಿಗೆ ಬೀಗ ಹಾಕಿಸಿದರು.ಸಚಿವ ಸತೀಶ ಜಾರಕಿಹೊಳಿ ಒಡೆತನದ ಮೂಡಲಗಿ ತಾಲ್ಲೂಕಿನ ಸತೀಶ್ ಶುಗರ್ಸ್, ಅಳಗವಾಡಿ ಬೀರೇಶ್ವರ ಸಕ್ಕರೆ ಕಾರ್ಖಾನೆ, ಬೆಲ್ಲದ ಬಾಗೇವಾಡಿಯ ವಿಶ್ವನಾಥ ಸಕ್

ಮೂಡಲಗಿ (ಬೆಳಗಾವಿ ಜಿಲ್ಲೆ): ಸಕ್ಕರೆಗೆ ಕನಿಷ್ಠ ಮಾರಾಟ ದರ (ಎಂಎಸ್ಪಿ) ನಿಗದಿ ಆಗುವವರೆಗೆ ಸಕ್ಕರೆ ಮಾರಾಟ ಮಾಡಬಾರದು ಎಂದು ಆಗ್ರಹಿಸಿ, ರಾಜ್ಯ ರೈತ ಸಂಘದ ಮುಖಂಡರು ಬುಧವಾರ ವಿವಿಧ ಗೋದಾಮುಗಳಿಗೆ ಬೀಗ ಹಾಕಿಸಿದರು.ಸಚಿವ ಸತೀಶ ಜಾರಕಿಹೊಳಿ ಒಡೆತನದ ಮೂಡಲಗಿ ತಾಲ್ಲೂಕಿನ ಸತೀಶ್ ಶುಗರ್ಸ್, ಅಳಗವಾಡಿ ಬೀರೇಶ್ವರ ಸಕ್ಕರೆ ಕಾರ್ಖಾನೆ, ಬೆಲ್ಲದ ಬಾಗೇವಾಡಿಯ ವಿಶ್ವನಾಥ ಸಕ್ಕರೆ ಕಾರ್ಖಾನೆ, ಸಮೀರವಾಡಿ ಸೋಮಯ್ಯ ಸಕ್ಕರೆ ಕಾರ್ಖಾನೆ, ಸೇರಿದಂತೆ ಹಲವು ಕಾರ್ಖಾನೆಗಳಿಗೆ ಭೇಟಿ ನೀಡಿದ ರೈತರ ಮುಖಂಡರು, ಕಾರ್ಖಾನೆಯವರಿಂದಲೇ ಗೋದಾಮುಗಳಿಗೆ ಬೀಗ ಹಾಕಿಸಿದರು.‘ಟನ್ ಕಬ್ಬಿಗೆ ₹5,500 ದರ ಪಡೆದೇ ತೀರಬೇಕು ಎಂಬುದು ನಮ್ಮ ಶಪಥವಾಗಿದೆ. ಇದು ಕೈಗೂಡಬೇಕೆಂದರೆ ಸಕ್ಕರೆಯ ಎಂಎಸ್ಪಿಯನ್ನು ₹31ರಿಂದ ₹60ಕ್ಕೆ ಏರಿಸಬೇಕು. ಕಳೆದ 10 ವರ್ಷಗಳಿಂದ ಸಕ್ಕರೆ ಮಾರಾಟ ದರ ಹೆಚ್ಚಾಗಿಲ್ಲ. ಅದನ್ನು ಹೆಚ್ಚಿಸಿದರೆ ಪರೋಕ್ಷವಾಗಿ ಕಬ್ಬಿಗೆ ದರ ಹೆಚ್ಚು ಸಿಗುತ್ತದೆ. ಈ ಹಿನ್ನೆಲೆಯಲ್ಲಿ ರೈತರು ತಿಂಗಳಿಂದ ಹೋರಾಟ ಮಾಡುತ್ತಿದ್ದು, ಯಾವುದೇ ಕಾರಣಕ್ಕೂ ಸಕ್ಕರೆಯನ್ನು ಗೋದಾಮಿನಿಂದ ಹೊರತೆಗೆಯಬಾರದು’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಆಗ್ರಹಿಸಿದರು.‘ಸಕ್ಕರೆ ಮಾರಾಟ ದರ ಕನಿಷ್ಠ ₹50 ಆದರೂ ಏರಿಕೆ ಆಗಬೇಕಿದೆ. ನಾವು ಪ್ರಯತ್ನ ಮಾಡುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಕಬ್ಬು ಬೆಳೆಗಾರರ ಸಮಸ್ಯೆ ಆಲಿಸಲು ಕೇಂದ್ರ ಜಂಟಿ ಸಮಿತಿ ಗುರುವಾರ (ಅ.29) ಬೆಂಗಳೂರಿಗೆ ಬರಲಿದೆ. ಈ ಸಮಿತಿ ಏನು ಮಾಡುತ್ತದೆ ಎಂಬುದು ನಮಗೆ ಬೇಕಿಲ್ಲ. ಬೇಡಿಕೆ ಈಡೇರದಿದ್ದಲ್ಲಿ ಕಾರ್ಖಾನೆಗಳೂ ಆರಂಭವಾಗುವುದಿಲ್ಲ, ಸಕ್ಕರೆ ಮಾರಾಟಕ್ಕೂ ಅವಕಾಶ ಕೊಡುವುದಿಲ್ಲ’ ಎಂದು ಅವರು ಹೇಳಿದರು.ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ, ಪ್ರಧಾನ ಕಾರ್ಯದರ್ಶಿಗಳಾದ ಕಿಶನ್ ನಂದಿ, ಪ್ರೇಮ್ ಚೌಗಲಾ, ಕಾರ್ಯಾಧ್ಯಕ್ಷ ರಾಜು ಪೋವಾಲ, ಉಪಾಧ್ಯಕ್ಷ ಸತ್ಯಪ್ಪ ಮಲ್ಲಾಪೂರಿ, ಸಂಚಾಲಕ ಪಾಂಡುರಂಗ ಬೀರನಗಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ಕುಮಾರ ಮರ್ದಿ, ಮುಖಂಡ ಶ್ರೀಶೈಲ್ ಅಂಗಡಿ ನೇತೃತ್ವ ವಹಿಸಿದ್ದರು.ಇನ್ನೊಂದೆಡೆ, ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಕ್ರಾಸ್ನಲ್ಲಿ ರೈತರು ನಡೆಸುತ್ತಿರುವ ಧರಣಿ ಬುಧವಾರವೂ ಮುಂದುವರಿಯಿತು. ವಿವಿಧ ಮಠಾಧೀಶರು ಸಹ ಬಂಬಲ ಸೂಚಿಸಿದರು.