ದರ್ಶನ್ಗೆ ಮತ್ತೆ ಬೆನ್ನು ನೋವು: ಚಿಕಿತ್ಸೆ ಕೊಡಿಸುವಂತೆ ನ್ಯಾಯಾಲಯಕ್ಕೆ ಮನವಿ
ಬೆಂಗಳೂರು: ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಫಿಸಿಯೋಥೆರಪಿ ಚಿಕಿತ್ಸೆ ಕೊಡಿಸುವಂತೆ ನಟ ದರ್ಶನ್ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಬುಧವಾರ

ಬೆಂಗಳೂರು: ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಫಿಸಿಯೋಥೆರಪಿ ಚಿಕಿತ್ಸೆ ಕೊಡಿಸುವಂತೆ ನಟ ದರ್ಶನ್ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಬುಧವಾರ ವಿಚಾರಣೆ ನಡೆಯಿತು. ವಿಡಿಯೊ ಕಾನ್ಪರೆನ್ಸ್ ಮೂಲಕ ಜೈಲಿನಿಂದಲೇ ವಿಚಾರಣೆಗೆ ಹಾಜರಾದ ದರ್ಶನ್ ಅವರು, ಆರೋಗ್ಯ ಸಮಸ್ಯೆಯ ಬಗ್ಗೆ ನ್ಯಾಯಾಧೀಶರಿಗೆ ತಿಳಿಸಿ, ಚಿಕಿತ್ಸೆ ಕೊಡಿಸುವಂತೆ ಕೋರಿದರು.‘ಜೈಲಿನಲ್ಲಿ ವಿಪರೀತ ಚಳಿಯ ವಾತಾವರಣ ಇರುವುದರಿಂದ ಬೆನ್ನು ನೋವು ಮತ್ತೆ ಉಲ್ಬಣವಾಗಿದೆ. ನೋವು ತೀವ್ರ ಆಗಿರುವುದರಿಂದ ಫಿಸಿಯೋಥೆರಪಿ ಅಗತ್ಯ ಇದೆ. ಚಿಕಿತ್ಸೆಗೆ ಅವಕಾಶ ಮಾಡಿಕೊಡಬೇಕು’ ಎಂದು ದರ್ಶನ್ ಮನವಿ ಮಾಡಿಕೊಂಡರು.ಆರೋಪಿಯ ಕೋರಿಕೆಯನ್ನು ಆಲಿಸಿದ ನ್ಯಾಯಾಧೀಶರು, ಫಿಸಿಯೋಥೆರಪಿ ಚಿಕಿತ್ಸೆ ಒದಗಿಸುವ ಕುರಿತು ಜೈಲು ನಿಯಮಗಳ ಪ್ರಕಾರವೇ ಅರ್ಜಿ ಸಲ್ಲಿಸುವಂತೆ ಸೂಚಿಸಿದರು.2024ರ ಜೂನ್ 8ರಂದು ರೇಣುಕಸ್ವಾಮಿ ಕೊಲೆ ನಡೆದಿತ್ತು. ಕೊಲೆ ಪ್ರಕರಣದಲ್ಲಿ ದರ್ಶನ್ ಅವರನ್ನು ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಬಂಧಿಸಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ಪಡೆದ ಆರೋಪದ ಮೇರೆಗೆ ದರ್ಶನ್ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿತ್ತು. ಬಳ್ಳಾರಿ ಜೈಲಿನಲ್ಲಿ ಇರುವಾಗ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಶಸ್ತ್ರಚಿಕಿತ್ಸೆ ಪಡೆದುಕೊಳ್ಳಬೇಕೆಂಬ ಕಾರಣ ನೀಡಿ ದರ್ಶನ್ ಹೈಕೋರ್ಟ್ನಿಂದ ಆರು ವಾರ ಷರತ್ತುಬದ್ಧ ಮಧ್ಯಂತರ ಜಾಮೀನು ಪಡೆದುಕೊಂಡಿದ್ದರು. ಈ ಜಾಮೀನು ಆದೇಶ ಪ್ರಶ್ನಿಸಿ, ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು.