ಭಾರತ ವನಿತೆಯರಿಗೆ ಸರಣಿ ಕಿರೀಟ: ವೈಷ್ಣವಿ ಮೋಡಿಗೆ ಉರುಳಿದ ಜಿಂಬಾಬ್ವೆ
ವಡೋದರ : ವೈಷ್ಣವಿ ಶರ್ಮಾ ಅವರ ಸ್ಪಿನ್ ಮೋಡಿ ಮತ್ತು ಪ್ರತೀಕಾ ರಾವಲ್ ಅವರ ಭರ್ಜರಿ ಅರ್ಧಶತಕದ ಆಟದ ಮುಂದೆ ಜಿಂಬಾಬ್ವೆ ತಂಡವು ಶರಣಾಯಿತು. ಬುಧವಾರ ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಎಂಟು ವಿಕೆಟ್ಗಳಿಂದ ಗೆದ್ದ ಭಾರತ ತಂಡವು 3–0ಯಿಂದ ಸರಣಿ ಕ್ಲೀನ್ ಸ್ವೀಪ್ ಮಾಡಿತು.ಟಾಸ್ ಗೆದ್ದ ಜಿಂಬಾಬ್ವೆ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ವ

ವಡೋದರ : ವೈಷ್ಣವಿ ಶರ್ಮಾ ಅವರ ಸ್ಪಿನ್ ಮೋಡಿ ಮತ್ತು ಪ್ರತೀಕಾ ರಾವಲ್ ಅವರ ಭರ್ಜರಿ ಅರ್ಧಶತಕದ ಆಟದ ಮುಂದೆ ಜಿಂಬಾಬ್ವೆ ತಂಡವು ಶರಣಾಯಿತು. ಬುಧವಾರ ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಎಂಟು ವಿಕೆಟ್ಗಳಿಂದ ಗೆದ್ದ ಭಾರತ ತಂಡವು 3–0ಯಿಂದ ಸರಣಿ ಕ್ಲೀನ್ ಸ್ವೀಪ್ ಮಾಡಿತು.ಟಾಸ್ ಗೆದ್ದ ಜಿಂಬಾಬ್ವೆ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ವೈಷ್ನವಿ (39ಕ್ಕೆ5) ಅವರ ದಾಳಿಯಿಂದಾಗಿ 39.5 ಓವರ್ಗಳಲ್ಲಿ 131 ರನ್ ಗಳ ಅಲ್ಪ ಮೊತ್ತ ಗಳಿಸಿತು. ಪ್ರವಾಸಿ ಬಳಗದ ಆರಂಭಿಕ ಬ್ಯಾಟರ್ ಮಾಡೆಸ್ಟರ್ ಮುಪಾಚಿಕ್ವಾ (37; 48ಎ, 4X7) ಮತ್ತು ನಾಯಕಿ ಜೋಸೆಫೈನ್ ಎನ್ಕೊಮೊ (35; 67ಎ, 4X4) ಅವರಿಬ್ಬರು ಸ್ವಲ್ಪಮಟ್ಟಿಗೆ ಪ್ರತಿರೋಧ ತೋರಿದರು. ಆದರೆ ಉಳಿದ ಬ್ಯಾಟರ್ಗಳು ದೊಡ್ಡ ಮೊತ್ತ ಗಳಿಸಲಿಲ್ಲ. ವೈಷ್ಣವಿ ಅವರೊಂದಿಗೆ ಮಧ್ಯಮವೇಗಿ ಕ್ರಾಂತಿ ಗೌಡ್ (23ಕ್ಕೆ2) ಹಾಗೂ ಸಯಾಲಿ ಸಾತ್ಘರೆ (11ಕ್ಕೆ2) ಅವರು ಉತ್ತಮ ಬೌಲಿಂಗ್ ಮಾಡಿದರು. ಗುರಿ ಬೆನ್ನಟ್ಟಿದ ಆತಿಥೇಯ ತಂಡಕ್ಕೆ ಯಾಸ್ಟಿಕಾ ಭಾಟಿಯಾ ಮತ್ತು ಪ್ರತೀಕಾ ರಾವಲ್ ಅವರು ಇನಿಂಗ್ಸ್ ಆರಂಭಿಸಿದರು. ಆದರೆ ಇನಿಂಗ್ಸ್ನ ಮೊದಲ ಎಸೆತದಲ್ಲಿಯೇ ಯಾಸ್ಟಿಕಾ ಅವರು ಔಟಾದರು. ಆದರೆ ಅಮೋಘ ಫಾರ್ಮ್ನಲ್ಲಿರುವ ಪ್ರತೀಕಾ (ಅಜೇಯ 59; 56ಎ, 4X4, 6X3) ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಶಫಾಲಿ ವರ್ಮಾ (51; 26ಎ, 4X6, 6X3) ಬೀಸಾಟವಾಡಿದರು. ಅದರಿಂದಾಗಿ 17 ಓವರ್ಗಳಲ್ಲಿ 2 ವಿಕೆಟ್ಗಳಿಗೆ 133 ರನ್ ಗಳಿಸಿ ಗೆದ್ದಿತು. ಹರ್ಲೀನ್ ಡಿಯೊಲ್ (19 ರನ್) ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಅವಕಾಶ ಪಡೆದರು. ನಾಯಕಿ ಸ್ಮೃತಿ ಮಂದಾನ ಮತ್ತು ನಿಕಟಪೂರ್ವ ನಾಯಕಿ ಹರ್ಮನ್ಪ್ರೀತ್ ಕೌರ್ ಅವರು ಕ್ರಮವಾಗಿ ಐದು ಮತ್ತು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಯೋಜನೆ ಇತ್ತು. ಆದರೆ ಪ್ರತೀಕಾ ಮತ್ತು ಶಫಾಲಿ ಅವರು ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲಿ 74 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಸಂಕ್ಷಿಪ್ತ ಸ್ಕೋರು: ಜಿಂಬಾಬ್ವೆ: 39.5 ಓವರ್ಗಳಲ್ಲಿ 131 (ಮಾಡೆಸ್ಟರ್ ಮುಪಾಚಿಕ್ವಾ 37 ಜೊಸೆಫೈನ್ ಎನ್ಕೊಮೊ 35, ಚಿನ್ದೇಜ್ ಧುರುರು 20, ಕ್ರಾಂತಿ ಗೌಡ್ 23ಕ್ಕೆ2 , ಸಯಾಲಿ ಸತ್ಘರೆ 11ಕ್ಕೆ2, ವೈಷ್ಣವಿ ಶರ್ಮಾ 39ಕ್ಕೆ5) ಭಾರತ: 17 ಓವರ್ 2ಕ್ಕೆ133 (ಪ್ರತೀಕಾ ರಾವಲ್ ಅಜೇಯ 59, ಹರ್ಲೀನ್ ಡಿಯೊಲ್ 19, ಶಫಾಲಿ ವರ್ಮಾ ಅಜೇಯ 51, ನಾಮವೆಲೊ ಸಿಬಾಂದಾ 18ಕ್ಕೆ1, ಲಾರಿನ್ ಫಿರ್ಲ್ 28ಕ್ಕೆ1) ಫಲಿತಾಂಶ: ಭಾರತ ಮಹಿಳಾ ತಂಡಕ್ಕೆ 8 ವಿಕೆಟ್ ಜಯ. ಪಂದ್ಯಶ್ರೇಷ್ಠ: ವೈಷ್ಣವಿ ಶರ್ಮಾ ಸರಣಿಶ್ರೇಷ್ಠ: ಪ್ರತೀಕಾ ರಾವಲ್.