‘ಗ್ಯಾರಂಟಿ’ ಅಪಪ್ರಚಾರಕ್ಕೆ ಕಡಿವಾಣ: ಸಿಎಂ ಶಿವಕುಮಾರ್
ಬೆಂಗಳೂರು: ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ಪಂಚಾಯಿತಿ ಮಟ್ಟದಲ್ಲಿಯೂ ರಚಿಸಲಾಗುತ್ತಿದ್ದು, ಈ ಸಮಿತಿಗಳ ಸದಸ್ಯರು ಫಲಾನುಭವಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಈ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಹಕಾರಿಯಾಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೂಚಿಸಿದರು.ಮುಖ್ಯಮಂತ್ರಿಯವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಡ್ಯಾ

ಬೆಂಗಳೂರು: ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ಪಂಚಾಯಿತಿ ಮಟ್ಟದಲ್ಲಿಯೂ ರಚಿಸಲಾಗುತ್ತಿದ್ದು, ಈ ಸಮಿತಿಗಳ ಸದಸ್ಯರು ಫಲಾನುಭವಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಈ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಹಕಾರಿಯಾಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೂಚಿಸಿದರು.ಮುಖ್ಯಮಂತ್ರಿಯವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಡ್ಯಾಷ್ಬೋರ್ಡ್ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಗ್ಯಾರಂಟಿ ಯೋಜನೆಗಳ ಸಾಮಾಜಿಕ ಜಾಲತಾಣಗಳಲ್ಲಿ ಕಾಲ ಕಾಲಕ್ಕೆ ಮಾಹಿತಿಗಳು, ಫಲಾನುಭವಿಗಳ ಅಭಿಪ್ರಾಯ ಹಂಚಿಕೊಳ್ಳುವ ಮೂಲಕ ಈ ಯೋಜನೆಗಳ ಕುರಿತ ಅಪಪ್ರಚಾರಕ್ಕೆ ಕಡಿವಾಣ ಹಾಕಬೇಕು. ಅನುಷ್ಠಾನ ಸಮಿತಿಯ ಸದಸ್ಯರು ಪ್ರತಿ ಫಲಾನುಭವಿಯ ಮನೆಗೆ ಭೇಟಿ ನೀಡಿ, ‘ಗ್ಯಾರಂಟಿ’ ಮನೆ ಸ್ಟಿಕರ್ ಅಂಟಿಸಬೇಕು. ಫಲಾನುಭವಿಗಳಿಗೆ ಸರ್ಕಾರ ನೀಡುವ ಅನುಕೂಲಗಳ ಕುರಿತು ಮನವರಿಕೆ ಮಾಡಬೇಕು ಎಂದು ಸಲಹೆ ನೀಡಿದರು.ಗ್ಯಾರಂಟಿ ಅನುಷ್ಠಾನ ಡ್ಯಾಷ್ಬೋರ್ಡ್ https://gsdashboard.karnataka.gov.in/ ನಲ್ಲಿ ಈ ಯೋಜನೆಗಳಿಗೆ ಸರ್ಕಾರ ಮಾಡಿರುವ ವೆಚ್ಚದ ಬಗ್ಗೆ ಜಿಲ್ಲಾವಾರು ಹಾಗೂ ತಾಲ್ಲೂಕುವಾರು ಮಾಹಿತಿ ಲಭ್ಯವಿದೆ. ಇದರೊಂದಿಗೆ ಯೋಜನೆಗಳ ಕುರಿತ ಸರ್ಕಾರಿ ಆದೇಶಗಳು, ಅಧಿಕಾರಿಗಳ ಸಂಪರ್ಕ ಮಾಹಿತಿ ಮೊದಲಾದವುಗಳು ಲಭ್ಯವಿದೆ. ಅಲ್ಲದೆ, ಯಶೋಗಾಥೆಗಳ ಭಂಡಾರವೂ ಲಭ್ಯವಿದೆ. ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಫಲಾನುಭವಿಗಳೊಂದಿಗೆ ಸಂವಾದ ನಡೆಸಿ, ಅಭಿಪ್ರಾಯ ಹಂಚಿಕೊಳ್ಳುವ ಗ್ಯಾರಂಟಿ ಕಟ್ಟೆ ಎಂಬ ವೇದಿಕೆಯನ್ನೂ ಸೃಜಿಸಲಾಗುವುದು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್. ಎಂ. ರೇವಣ್ಣ ಅವರು ತಿಳಿಸಿದರು.ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ. ರೇವಣ್ಣ, ಉಪಾಧ್ಯಕ್ಷರಾದ ಪಿ. ಟಿ. ಪರಮೇಶ್ವರ ನಾಯ್ಕ, ದಿನೇಶ್ ಗೂಳಿಗೌಡ, ಮೆಹರೋಜ್ ಖಾನ್, ಜಿಬಿಎ ವ್ಯಾಪ್ತಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಜಿ.ಕೃಷ್ಣಪ್ಪ, ಸಿಎಂ ಸಂವಹನ ಸಲಹೆಗಾರ ದೀಪಕ್ ತಿಮ್ಮಯ, ಇ- ಆಡಳಿತ ಕೇಂದ್ರದ ಸಿಇಒ ಭೂ ಬಾಲನ್ ಮತ್ತಿತರರು ಇದ್ದರು.