ಸ್ಟಿಂಗ್ ಅಂದ್ರೆ ಎಲ್ರಿಗೂ ಇಷ್ಟ!
‘ಇಂಗು ತಿಂದು ಮಂಗನಂತಾದ’ ಎನ್ನುವುದು ಕನ್ನಡದ ಒಂದು ಗಾದೆ. ಆದರೆ, ಈಗ ಕರ್ನಾಟಕದ ಮತದಾರರು ಸ್ಟಿಂಗ್ ತಿಳಿದು ಮಂಗನಂತಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ಕಾರ್ಯಾಚರಣೆ ನಡೆಸಲಾಗಿದೆಎನ್ನುವ ವಿಷಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದರೆ ಮತದಾರರ ವಲಯದಲ್ಲಿ ನಿರಾಸೆಯ ಕಂಪನವನ್ನು ಮೂಡಿಸಿದೆ. ನೈತಿಕತೆಗೆ, ಪ್ರಾಮಾಣಿಕತೆಗೆ, ಸರಳತೆಗೆ

‘ಇಂಗು ತಿಂದು ಮಂಗನಂತಾದ’ ಎನ್ನುವುದು ಕನ್ನಡದ ಒಂದು ಗಾದೆ. ಆದರೆ, ಈಗ ಕರ್ನಾಟಕದ ಮತದಾರರು ಸ್ಟಿಂಗ್ ತಿಳಿದು ಮಂಗನಂತಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ಕಾರ್ಯಾಚರಣೆ ನಡೆಸಲಾಗಿದೆಎನ್ನುವ ವಿಷಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದರೆ ಮತದಾರರ ವಲಯದಲ್ಲಿ ನಿರಾಸೆಯ ಕಂಪನವನ್ನು ಮೂಡಿಸಿದೆ. ನೈತಿಕತೆಗೆ, ಪ್ರಾಮಾಣಿಕತೆಗೆ, ಸರಳತೆಗೆ ಹಾಗೂ ಜನಪರತೆಗೆ ಹೆಸರಾಗಿದ್ದ ಕರ್ನಾಟಕದ ರಾಜಕೀಯ ಈ ಹಂತಕ್ಕೆ ಬಂದು ತಲಪಿದೆಯಲ್ಲ ಎಂಬ ಕೊರಗು ಒಂದೆಡೆಯಾದರೆ, ನಾವೇ ಮತ ಒತ್ತಿಆರಿಸಿ ಕಳಿಸಿದ ನೇತಾರರು ‘ಇಂಥವರಾ’ ಎಂಬ ಹತಾಶೆಯ ಭಾವ ಅವರನ್ನು ಕಾಡತೊಡಗಿದೆ.ಸ್ಟಿಂಗ್ ಕಾರ್ಯಾಚರಣೆಯ ಬಗ್ಗೆ ಕಾಂಗ್ರೆಸ್ ಪಕ್ಷವನ್ನು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಟೀಕಿಸುತ್ತವೆ. ವಿರೋಧ ಪಕ್ಷಗಳನ್ನು ಆಡಳಿತ ಪಕ್ಷವೂ ಟೀಕೆ ಮಾಡುತ್ತದೆ. ಮಜಾ ಎಂದರೆ ಒಳಗೊಳಗೇ ಎಲ್ಲ ಪಕ್ಷದವರಿಗೂ ಸ್ಟಿಂಗ್ ಅಂದರೆ ಇಷ್ಟ. ಇಂತಹ ಕಾರ್ಯಾಚರಣೆಯನ್ನು ಕಾಲ ಕಾಲಕ್ಕೆ ಎಲ್ಲ ಪಕ್ಷದವರೂ ಮಾಡಿದ್ದಾರೆ ಅಥವಾಬೇರೆ ಯಾರೋ ಮಾಡಿದ್ದನ್ನು ತಮ್ಮ ಹಿತಾಸಕ್ತಿಗೆ ಬಳಸಿಕೊಂಡಿದ್ದಾರೆ. ಕೆಲವರನ್ನು ಅಧಿಕಾರದಿಂದ ಇಳಿಸಿದ್ದಾರೆ. ಕೆಲವರು ಅಧಿಕಾರದ ಗದ್ದುಗೆಗೆ ಏರಿದ್ದಾರೆ. ಇನ್ನು ಕೆಲವರು ಅಧಿಕಾರ ಉಳಿಸಿಕೊಂಡಿದ್ದಾರೆ.ಸ್ಟಿಂಗ್ ಅಥವಾ ಮಾರುವೇಷದ ಕಾರ್ಯಾಚರಣೆ ಎನ್ನುವುದು ಸಕಾರಾತ್ಮಕ ಶಬ್ದ. ಆಡಳಿತಗಾರರ ಭ್ರಷ್ಟಾಚಾರವನ್ನು, ಅವ್ಯವಹಾರವನ್ನು ಬಯಲಿಗೆಳೆಯಲು ಬಳಸುವ ಕಾರ್ಯತಂತ್ರ. ಆದರೆ, ಇದು ಕರ್ನಾಟಕದಲ್ಲಿ ಬಳಕೆಯಾಗುತ್ತಿರುವುದು ಆಡಳಿತಗಾರರ ಲಂಪಟತನವನ್ನು ಬಯಲು ಮಾಡಲು. ಅದಕ್ಕಿಂತ ಹೆಚ್ಚಾಗಿ ಬ್ಲ್ಯಾಕ್ಮೇಲ್ ಮಾಡಲು ಬಳಕೆಯಾಗಿದೆ. ಅಧಿಕಾರದಿಂದ ಇಳಿಸಲು ಅಥವಾ ಅಧಿಕಾರವನ್ನು ಪಡೆಯಲು ಇದನ್ನು ಬಳಸಲಾಗುತ್ತಿದೆ. ರಘುಪತಿ ಭಟ್ಟರ ಪ್ರಕರಣವಾಗಲಿ, ಎಚ್.ವೈ. ಮೇಟಿ, ರಮೇಶ ಜಾರಕಿಹೊಳಿ ಪ್ರಕರಣವಾಗಲಿ, ಎಲ್ಲವೂ ರಾಜಕೀಯ ಸೇಡಿನಿಂದಲೇ ಹೊರಕ್ಕೆ ಬಂದಿವೆ. ಇವೆಲ್ಲವೂ ಲಂಪಟತನದ ಪ್ರಕರಣಗಳೇ ಆಗಿವೆ. ಕೆಲಸಕೇಳಿಕೊಂಡು ಬಂದ ಮಹಿಳೆಯನ್ನು ದುರುಪಯೋಗ ಪಡಿಸಿಕೊಂಡಿದ್ದು ಒಂದು ಕಡೆಯಾದರೆ, ವರ್ಗಾವಣೆ ಕೇಳಿಕೊಂಡು ಬಂದ ಮಹಿಳೆಯ ಜೊತೆಗೆ ಅನುಚಿತ ವರ್ತನೆ ಇನ್ನೊಂದು. ಪ್ರಜ್ವಲ್ ರೇವಣ್ಣ ಪ್ರಕರಣ ಮಾತ್ರ ಡಿಫರೆಂಟು. ಅದರ ಕತೆ ಬೇರೆಯೇ ಇದೆ. ಅದು ಕತೆಯಲ್ಲ. ಕಾದಂಬರಿ. ಅಲ್ಲೂ ಇದ್ದಿದ್ದು ಸೂಪರ್ ಲಂಪಟತನವೆ. ಅಧಿಕಾರದ ದುರುಪಯೋಗವೆ. ನೈತಿಕ ಲಕ್ಷ್ಮಣರೇಖೆಯ ಉಲ್ಲಂಘನೆಯೆ.ಸ್ಟಿಂಗ್ ಕಾರ್ಯಾಚರಣೆಗೆ ಗುರಿಯಾಗಿದ್ದಾರೆ ಎನ್ನಲಾದ ಸಿದ್ದರಾಮಯ್ಯ ಅವರ ಪರವಾಗಿ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ಹಿರಿಯ ಮುಖಂಡ ಬಿ.ಎಸ್. ಯಡಿಯೂರಪ್ಪ ಮುಂತಾದವರು ಅನುಕಂಪ ವ್ಯಕ್ತಪಡಿಸಿದ್ದಾರೆ. ಇದೊಂದು ತರಹ ಅಜ್ಜಿಗೆ ಅರಿವೆ ಚಿಂತೆ, ಮೊಮ್ಮಗಳಿಗೆ ಇನ್ನೇನೋ ಚಿಂತೆ ಎನ್ನುವ ಹಾಗಿದೆ.ಭಾರತೀಯ ಪತ್ರಿಕೋದ್ಯಮ ಮತ್ತು ರಾಜಕೀಯದಲ್ಲಿ ಭಾರೀ ಸಂಚಲನ ಉಂಟು ಮಾಡಿದ ಪ್ರಮುಖ ಮಾರುವೇಷದ ಕಾರ್ಯಾಚರಣೆ ಎಂದರೆ 2001ರಲ್ಲಿ ನಡೆದ ‘ಆಪರೇಷನ್ ವೆಸ್ಟ್ ಎಂಡ್’. ‘ತೆಹಲ್ಕಾ’ ತನಿಖಾ ವೆಬ್ಸೈಟ್ನ ಪತ್ರಕರ್ತರು ಇದನ್ನು ನಡೆಸಿದ್ದರು. ಪತ್ರಕರ್ತರು ಕಾಲ್ಪನಿಕ ಬ್ರಿಟಿಷ್ ರಕ್ಷಣಾ ಕಂಪನಿಯೊಂದರ ಪ್ರತಿನಿಧಿಗಳಂತೆ ಮಾರುವೇಷ ಧರಿಸಿ, ಭಾರತೀಯ ಸೇನೆಗೆ ರಾತ್ರಿ ವೇಳೆ ನೋಡುವ ರೇಡಾರ್ ಉಪಕರಣಗಳನ್ನು ಪೂರೈಸುವ ನಕಲಿ ಪ್ರಸ್ತಾಪವನ್ನು ಹೊತ್ತು ಹೋದರು. ಕಳಪೆ ಗುಣಮಟ್ಟದ, ಅಸ್ತಿತ್ವದಲ್ಲೇ ಇಲ್ಲದ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಲು ದೇಶದ ಪ್ರಭಾವಿ ರಾಜಕಾರಣಿಗಳು, ಉನ್ನತ ಸೇನಾ ಅಧಿಕಾರಿಗಳು ಮತ್ತು ರಕ್ಷಣಾ ಸಚಿವಾಲಯದ ಸಿಬ್ಬಂದಿ ಲಂಚ ಪಡೆಯುತ್ತಿರುವುದು ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಯಿತು. ಇದು ಭಾರೀ ಗದ್ದಲವನ್ನುಂಟು ಮಾಡಿತು. ರಾಜಕೀಯ ಒತ್ತಡದಿಂದಾಗಿ ಅಂದಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.ಇನ್ನೊಂದು ಇಂತಹುದೇ ಮಾರುವೇಷದ ಕಾರ್ಯಾಚರಣೆ ನಡೆದಿದ್ದು 2005ರಲ್ಲಿ. ‘ಆಜ್ ತಕ್’ ವಾಹಿನಿ ಮತ್ತು ‘ಕೋಬ್ರಾಪೋಸ್ಟ್’ ಸಂಸ್ಥೆಗಳು ಜಂಟಿಯಾಗಿ ‘ಆಪರೇಷನ್ ಚಕ್ರವ್ಯೂಹ’ ಎಂಬ ಕಾರ್ಯಾಚರಣೆ ನಡೆಸಿದವು. ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನಾ ನಿಧಿಯಿಂದ ನಕಲಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲು ಕೆಲವು ಸಂಸದರು ಲಂಚ ಕೇಳುವುದು ರಹಸ್ಯ ಕ್ಯಾಮೆರಾದಲ್ಲಿ ದಾಖಲಾಯಿತು. ಇದೂ ಕೂಡಾ ರಾಜಕೀಯ ವಲಯದಲ್ಲಿ ಭಾರೀ ಕೋಲಾಹಲವನ್ನೇ ಸೃಷ್ಟಿಸಿತು. ಕಾರ್ಯಾಚರಣೆಯ ವಿಡಿಯೊಗಳು ಬಹಿರಂಗವಾದಾಗ ಇಡೀ ಸಂಸತ್ತು ತಲ್ಲಣಿಸಿತು. ಇದರಿಂದಾಗಿ 11 ಸಂಸದರು ತಮ್ಮ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು.2005ರಲ್ಲಿಯೇ ಇನ್ನೊಂದು ಪ್ರಕರಣ ಕೂಡ ಭಾರತದ ರಾಜಕೀಯ ಇತಿಹಾಸದಲ್ಲಿ ನಾಚಿಕೆಗೇಡಿನ ವಿದ್ಯಮಾನವಾಗಿ ದಾಖಲಾಗಿದೆ. ಅದು ಪ್ರಶ್ನೆಗಾಗಿ ಕಾಸು ಪ್ರಕರಣ. ಆಜ್ ತಕ್ ವಾಹಿನಿ ಮತ್ತು ಕೋಬ್ರಾ ಪೋಸ್ಟ್ನವರೇ ಇದನ್ನೂ ನಡೆಸಿದರು. ಪತ್ರಕರ್ತರು ಕೆಲವು ನಕಲಿ ಕಂಪನಿಗಳ ಪ್ರತಿನಿಧಿಗಳಂತೆ ಮಾರುವೇಷ ಧರಿಸಿ ಸಂಸದರನ್ನು ಭೇಟಿಯಾದರು. ಸಂಸತ್ತಿನಲ್ಲಿ ತಮ್ಮ ಕಂಪನಿಗಳಿಗೆ ಅನುಕೂಲವಾಗುವಂತಹ ಪ್ರಶ್ನೆಗಳನ್ನು ಕೇಳಲು ಸಂಸದರಿಗೆ ಲಂಚದ ಆಮಿಷ ಒಡ್ಡಿದರು. ಲಕ್ಷಾಂತರ ರೂಪಾಯಿಗಳ ಲಂಚ ಪಡೆದು ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಒಪ್ಪಿಕೊಂಡ ವಿವಿಧ ಪಕ್ಷಗಳ 11 ಸಂಸದರ ಅಸಲಿ ಮುಖವಾಡ ರಹಸ್ಯ ಕ್ಯಾಮೆರಾದಲ್ಲಿ ಬಯಲಾಯಿತು. ಸುಪ್ರೀಂ ಕೋರ್ಟ್ ಹಸ್ತಕ್ಷೇಪದ ನಂತರ ಈ ಎಲ್ಲ ಸಂಸದರನ್ನು ಸಂಸತ್ತಿನಿಂದ ಶಾಶ್ವತವಾಗಿ ವಜಾಗೊಳಿಸಲಾಯಿತು.ಕೋಬ್ರಾಪೋಸ್ಟ್ 2013ರಲ್ಲಿ ಇನ್ನೊಂದು ಕಾರ್ಯಾಚರಣೆ ನಡೆಸಿತು. ಅದರ ಹೆಸರು ‘ಆಪರೇಷನ್ ರೆಡ್ ಸ್ಪೈಡರ್’. ಬ್ಯಾಂಕಿಂಗ್ ವಲಯದಲ್ಲಿ ನಡೆಯುತ್ತಿದ್ದ ಕಪ್ಪು ಹಣದ ದಂಧೆಯನ್ನು ಇದು ಜಗತ್ತಿಗೆ ಬಹಿರಂಗಗೊಳಿಸಿತು. ಪತ್ರಕರ್ತರು ರಹಸ್ಯವಾಗಿ ದೇಶದ ಪ್ರಮುಖ ಖಾಸಗಿ ಬ್ಯಾಂಕುಗಳಿಗೆ ಭೇಟಿ ನೀಡಿ ತಮ್ಮ ಬಳಿ ಕೋಟ್ಯಂತರ ರೂಪಾಯಿಕಪ್ಪುಹಣವಿದ್ದು ಅದನ್ನು ಬಿಳಿಯಾಗಿ ಪರಿವರ್ತಿಸಿ ಕೊಡುವಂತೆ ಕೇಳಿಕೊಂಡರು. ಬ್ಯಾಂಕ್ ಅಧಿಕಾರಿಗಳು, ಆರ್ಬಿಐ ನಿಯಮಾವಳಿಯನ್ನು ಮೀರಿ, ವಿಮೆ ಹಾಗೂ ನಕಲಿ ಖಾತೆಗಳ ಮೂಲಕ ಕಪ್ಪುಹಣವನ್ನು ಬಿಳಿಯಾಗಿ ಪರಿವರ್ತಿಸಬಹುದು ಎನ್ನುವುದನ್ನು ರಹಸ್ಯ ಕ್ಯಾಮೆರಾ ಮುಂದೆ ಬಿಚ್ಚಿಟ್ಟರು. ಇದೂ ಕೂಡ ಭಾರತೀಯ ಬ್ಯಾಂಕಿಂಗ್ ವಲಯದಲ್ಲಿ ಭಾರೀ ಸಂಚಲನ ಉಂಟು ಮಾಡಿತು. ಕಪ್ಪು ಹಣದ ದಂಧೆಯಲ್ಲಿ ಭಾಗಿಯಾದ ಎಲ್ಲ ಬ್ಯಾಂಕ್ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಭಾರೀ ದಂಡ ವಿಧಿಸಿತು.ಇವೆಲ್ಲಕ್ಕಿಂತ ಮೊದಲೇ ಅಂದರೆ 2000 ಇಸವಿಯಲ್ಲಿ ‘ತೆಹಲ್ಕಾ’ ಸಂಸ್ಥೆ ಮಾಜಿ ಕ್ರಿಕೆಟಿಗ ಮನೋಜ್ ಪ್ರಭಾಕರ್ ಅವರ ಜೊತೆ ಸೇರಿ ಮ್ಯಾಚ್ ಫಿಕ್ಸಿಂಗ್ ಹಗರಣವನ್ನು ಬಯಲು ಮಾಡಿತ್ತು. ಕ್ರಿಕೆಟಿಗರು ತಾವೇ ರಹಸ್ಯ ಕ್ಯಾಮೆರಾಗಳನ್ನು ಧರಿಸಿ ತಮ್ಮ ಸಹಆಟಗಾರರು ಮತ್ತು ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳ ಜೊತೆ ಮ್ಯಾಚ್ ಫಿಕ್ಸಿಂಗ್ ಕುರಿತು ಮಾತನಾಡಿದ್ದನ್ನು ರೆಕಾರ್ಡ್ ಮಾಡಿಕೊಂಡರು. ಇದರ ವಿವರಗಳು ಬಹಿರಂಗವಾದಾಗ ‘ಸಂಭಾವಿತರ ಆಟ’ ಎಂದು ಖ್ಯಾತಿ ಪಡೆದಿದ್ದ ಕ್ರಿಕೆಟ್ಗೆ ಕಳಂಕ ಬಂತು. ಹಲವಾರು ಆಟಗಾರರು ನಿಷೇಧಕ್ಕೆ ಒಳಗಾದರು.ಹೀಗೆ ಮಾಧ್ಯಮ ಸಂಸ್ಥೆಗಳು ಭ್ರಷ್ಟಾಚಾರ, ಅವ್ಯವಹಾರಗಳನ್ನು ಬಯಲು ಮಾಡಲು ಅತ್ಯಂತ ಯಶಸ್ವಿ ಮಾರುವೇಷದ ಕಾರ್ಯಾಚರಣೆ ನಡೆಸಿದ ಉದಾಹರಣೆಗಳು ನಮ್ಮ ಮುಂದೆ ಇವೆ. ಬೇರೆ ಬೇರೆ ರಾಜ್ಯಗಳಲ್ಲಿಯೂ ಇಂತಹ ಪ್ರಯತ್ನಗಳು ನಡೆದಿವೆ. ಇದರಿಂದ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು ಅಧಿಕಾರ ಕಳೆದುಕೊಂಡಿದ್ದಾರೆ. ವ್ಯವಸ್ಥೆಯಲ್ಲಿ ಸುಧಾರಣೆಯೂ ಕಂಡು ಬಂದಿದೆ. ಆದರೆ, ಕರ್ನಾಟಕದ ಚಿತ್ರಣ ಮಾತ್ರ ವಿಚಿತ್ರ. ಇಲ್ಲಿ ನಡೆದ ಸ್ಟಿಂಗ್ ಕಾರ್ಯಾಚರಣೆಯಿಂದ ಮಾಧ್ಯಮಗಳಿಗೂ ಗೌರವ ಬಂದಿಲ್ಲ. ರಾಜಕಾರಣಿಗಳ ಘನತೆಯೂ ಉಳಿದಿಲ್ಲ. ಈ ಸ್ಟಿಂಗ್ ಜೂಟಾಟದಲ್ಲಿ ಕೌರವರ ಸಭೆಯಲ್ಲಿ ವಸ್ತ್ರಾಪಹರಣಕ್ಕೆ ಒಳಗಾದ ದ್ರೌಪದಿಯಂತೆ ದೇಶದ ಕಣ್ಣಿಗೆ ಕರ್ನಾಟಕ ಕಾಣಿಸುತ್ತಿದೆ.ಕರ್ನಾಟಕದಲ್ಲಿ ಸ್ಟಿಂಗ್ ಕ್ಯಾಮೆರಾಗಳು ರಾಜಕಾರಣಿಗಳ ಭ್ರಷ್ಟಾಚಾರವನ್ನು ಬಯಲಿಗೆಳೆಯಲಿಲ್ಲ. ವ್ಯವಸ್ಥೆಯ ದೌರ್ಬಲ್ಯಗಳನ್ನು ಬಯಲು ಮಾಡಲಿಲ್ಲ. ಸುಧಾರಣೆಯ ಕ್ರಮವಾಗಿ ಹೊರಬಂದಿಲ್ಲ. ಇಲ್ಲಿ ಬರೀ ರಾಜಕೀಯ ವಿರೋಧಿಗಳನ್ನು ಹಣಿಯುವ ಮತ್ತು ಬ್ಲ್ಯಾಕ್ಮೇಲ್ ಮಾಡುವ ಅಸ್ತ್ರವಾಗಿ ಬಳಕೆಯಾಗಿದ್ದೇ ಹೆಚ್ಚು. ಅದಕ್ಕೆ ಆ ಪಕ್ಷ, ಈ ಪಕ್ಷ ಎಂದಿಲ್ಲ. ಆ ಪಕ್ಷದಲ್ಲಿ ಸ್ಟಿಂಗ್ ಫ್ಯಾಕ್ಟರಿ ಇದೆ ಎಂದು ಈ ಪಕ್ಷದವರು, ಈ ಪಕ್ಷದಲ್ಲಿ ಕಾರ್ಖಾನೆ ಇದೆ ಎಂದು ಆ ಪಕ್ಷದವರು ಆರೋಪ ಮಾಡಿದ್ದೇ ಬಂತು. ಒಳಗೊಳಗೆ ಎಲ್ಲರೂ ಕಾರ್ಖಾನೆ ಇಟ್ಟುಕೊಂಡವರೆ. ಸಂದರ್ಭ ಬಂದಾಗ ಎಲ್ಲ ಪಕ್ಷಗಳಿಗೂ ಈ ರೀತಿಯ ಕಾರ್ಯಾಚರಣೆ ಬೇಕು. ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್ ಆರೋಪದಿಂದ ರಾಜಕಾರಣಿಗಳ ಮಾನ ಅಷ್ಟೇ ಹರಾಜಾಗಿಲ್ಲ. ಮಾಧ್ಯಮದ ಮಾನವೂ ಹರಾಜಾಗಿದೆ. ಸ್ಟಿಂಗ್ ಅಂದ್ರೆ ಇಷ್ಟ ನಿಜ. ಜನೋಪಕಾರಕ್ಕೆ, ಭ್ರಷ್ಟಾಚಾರ ಬಯಲಿಗೆಳೆಯಲು ಇದನ್ನು ಬಳಸಲು ಇಲ್ಲೇನು ಕಷ್ಟ ಎಂದು ಕರ್ನಾಟಕದ ಮತದಾರರು ಕೇಳುವಂತಾಗಿದೆ.ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವುದು ಕನ್ನಡದ ಇನ್ನೊಂದು ಗಾದೆ. ಹಾಸಿಗೆ ಇದ್ದಲೆಲ್ಲ ಕಾಲು ಚಾಚಿದರೆ ಸ್ಟಿಂಗ್ ಅಪಾಯ ಜಾಸ್ತಿ.ರವೀಂದ್ರ ಭಟ್ಟ